ಸಣ್ಣಕತೆ: ಅನಾತ ಪ್ರಗ್ನೆ

– .

 

ಮಡಿಚಿಟ್ಟಿದ್ದ ತನ್ನ ವೈಯುಕ್ತಿಕ ಲ್ಯಾಪ್ ಟಾಪ್ ಕೈಗೆತ್ತಿಕೊಂಡ ಅರವಿಂದನಿಗೆ ನೆನಪಾಗಿದ್ದು ಕಚೇರಿಯ ಲ್ಯಾಪ್ ಟಾಪ್. ಅದನ್ನು ಅವನ ಜಾಗಕ್ಕೆ ಹೊಸದಾಗಿ ಬಂದು ಅದಿಕಾರ ಸ್ವೀಕರಿಸಿದವರಿಗೆ ಹಸ್ತಾಂತರಿಸಿ ಬಂದಿದ್ದು ನೆನೆಪಾಯಿತು. ಅಶ್ಟರ ಮಟ್ಟಿಗೆ ಜವಾಬ್ದಾರಿ ಕಡಿಮೆಯಾಗಿತ್ತು. ಇಂದು ಆಪೀಸಿನ ಕಾರಿನಲ್ಲಿ ಕೊನೆಯ ಪಯಣ. ಮನೆಯ ಬಳಿ ಡ್ರಾಪ್ ಪಡೆಯಲಶ್ಟೇ ಅರವಿಂದನಿಗೆ ಅನುಮತಿಯಿತ್ತು.

ಜನಜಂಗುಳಿಯಿಂದ ದೂರ, ಪ್ರಶಾಂತ ವಾತಾವರಣವನ್ನು ಅರಸಿ, ಸಿಟಿಯ ಹೊರಬಾಗದಲ್ಲಿ ಕಟ್ಟಿಸಿಕೊಂಡಿದ್ದ ಮನೆ. ಸಿಟಿಯ ಮದ್ಯಬಾಗದಿಂದ ಹತ್ತು ಕಿಲೋಮೀಟರ್ ದೂರ. ಕಾರಿನಲ್ಲಿ ಕನಿಶ್ಟ ಐವತ್ತು ನಿಮಿಶದ ಪ್ರಯಾಣ, ಅದೂ ಟ್ರಾಪಿಕ್ ಇಲ್ಲದಿದ್ದಾಗ. ಟ್ರಾಪಿಕ್ ಇದ್ದರಂತೂ ಮುಗಿಯಿತು. ಸೇರಿದಾಗಲಶ್ಟೇ ಗ್ಯಾರಂಟಿ. ಕೈಯಲ್ಲಿದ್ದ ಲ್ಯಾಪ್ ಟಾಪ್ ಹಾಗೆಯೇ ಇತ್ತು. ಕಾರು ಮಾಮೂಲಿ ವೇಗದಲ್ಲಿ ಚಲಿಸುತ್ತಿತ್ತು. ಅರವಿಂದನ ಕಣ್ಣೋಟವೆಲ್ಲಾ ಸುತ್ತಮುತ್ತ ಜಗಮಗಿಸುತ್ತಿರುವ ಸಿಟಿಯ ದೀಪಗಳತ್ತ ನೆಟ್ಟಿತ್ತು. ತದೇಕ ಚಿತ್ತದಿಂದ ನೋಡುತ್ತಿದ್ದ. ತಾನು ಎಲ್ಲಿದ್ದೇನೆ? ಯಾವ ರಸ್ತೆಯಲ್ಲಿ ಕಾರು ಚಲಿಸುತ್ತಿದೆ? ಇವಾವುದರ ಪರಿವೆಯೂ ಅರವಿಂದನಿಗೆ ಇರಲಿಲ್ಲ.

ಅರವಿಂದನ ಜೀವನದಲ್ಲಿ ಅತ್ಯಂತ ಮಹತ್ವದ ದಿನ ಇಂದು. ಮರೆಯಲಾಗದ ದಿನ. ಮೂವತ್ತೈದು ವರ‍್ಶಗಳ ಕಾಲ ತನ್ನದೆಲ್ಲವನ್ನೂ ಮರೆತು, ಮನೆ-ಮಟ, ಹೆಂಡತಿ-ಮಕ್ಕಳ ಪರಿವೆಯೇ ಇಲ್ಲದೆ, ಹಗಲು-ರಾತ್ರಿ ದುಡಿದ ದುಡಿತದ ಅಂತಿಮ ದಿನ. ಅಂದಿನ ಸಂಜೆಯಿಂದಲೇ ಅರವಿಂದನಿಗೆ ‘ಮಾಜಿ’ಯಾಗುವ ಸೌಬಾಗ್ಯ. ಅದಿಕಾರದಲ್ಲಿದ್ದಶ್ಟು ದಿನವೂ ಮಾಡಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ ತ್ರುಪ್ತಿ ಅವನಲ್ಲಿ ಮನೆಮಾಡಿತ್ತು. ಯಾರಿಗೂ ಸೊಪ್ಪು ಹಾಕದೆ, ಯಾವುದೇ ಪ್ರಬಾವಕ್ಕೆ ಒಳಗಾಗದೆ, ಕಾನೂನಿನ ಚೌಕಟ್ಟಿನಲ್ಲೇ, ಪಕ್ಶಪಾತ ಮಾಡದೆ, ಆತ್ಮವಂಚನೆಯಿಲ್ಲದೆ, ರಾಜಕೀಯ ಬೆದರಿಕೆಗೆ ಬಗ್ಗದೆ, ಸಂಬಂದಿಕರನ್ನು ಹತ್ತಿರಕ್ಕೆ ಬಿಟ್ಟುಕೊಡದೆ, ನಿಶ್ಪಕ್ಶಪಾತವಾಗಿ ನ್ಯಾಯಯುತವಾಗಿ ನೇರವಾಗಿ, ನಿಶ್ಟೂರವಾಗಿ, ದುಡಿದ ಹೆಮ್ಮೆ ಅರವಿಂದನಲ್ಲಿತ್ತು. ಇಂದಿನ ಬೀಳ್ಕೊಡುಗೆ ಸಮಾರಂಬದ ಮುಕ್ಯ ಅತಿತಿಗಳು ಅದನ್ನೇ ಪುನರುಚ್ಚರಿಸಿದಾಗ ಎದೆ ಉಬ್ಬಿ ಬಂದಿತ್ತು. ನೆರದಿದ್ದವರ ಕರತಾಡನದ ಸಪ್ಪಳ ಕಿವಿಗೆ ಅಪ್ಪಳಿಸಿದಾಗಲಂತೂ ಮನಸ್ಸು ಮೂಕವಾಗಿತ್ತು. ಹೆಪ್ಪುಗಟ್ಟಿದ್ದ ಬಾವನೆಗಳು ಮನದಲ್ಲಿ ಕರಗಿ ನೀರಾಗಿ ಕಣ್ಣನ್ನು ತೇವವಾಗಿಸಿತ್ತು.

ಆದರೂ ಯಾವುದೋ ಹೇಳಲಾಗದ ತಪ್ಪಿತಸ್ತ ಬಾವನೆ ಕೊರೆಯುತ್ತಿದ್ದ ಕಾರಣ ಅರವಿಂದನ ಮನಸ್ಸು ಸ್ತಿಮಿತ ಕಳೆದುಕೊಂಡಿತ್ತು. ಯಾಕೆ? ಏನು? ಯಾವುದದು? ತಾನೆಲ್ಲಿ ತಪ್ಪು ಎಸಗಿದ್ದೆ? ಬಿಟ್ಟೂ ಬಿಡದೆ ಕೊರೆಯುವಂತಹ ತಪ್ಪೇನ್ನೇನು ಮಾಡಿದ್ದೆ? ತೊಡೆಯ ಮೇಲಿದ್ದ ಲ್ಯಾಪ್ ಟಾಪ್ ಬದಿಗಿಟ್ಟು, ಕಣ್ಣು ಮುಚ್ಚಿ, ಹಿಂದಿನ ಎಲ್ಲಾ ಆಗುಹೋಗುಗಳನ್ನೆಲ್ಲಾ ಒಂದಾದ ನಂತರ ಒಂದನ್ನು ಮೆಲುಕು ಹಾಕಲು ಶುರುಮಾಡಿದ. ಊಹುಂ. ಯಾವುದೂ ಗಮನಕ್ಕೆ ಬರಲಿಲ್ಲ. ಹೊಳೆಯಲಿಲ್ಲ.

ನೆನಪಿಗೆ ಬಂದಾಗ ಅಮೂಲಾಗ್ರವಾಗಿ ಚಿಂತಿಸಿದರೆ ಒಳ್ಳೆಯದು ಎಂದುಕೊಂಡು ಆ ಗುಂಗಿನಿಂದ ಹೊರ ಬರಲು ಪ್ರಯತ್ನಿಸಿದ. ಪ್ರಯತ್ನಕ್ಕೆ ಇಂಬುಕೊಡುವಂತೆ ಮತ್ತೆ ತನ್ನ ಬೀಳ್ಕೊಡುಗೆ ಸಮಾರಂಬದತ್ತ ಚಿತ್ತ ಹರಿಸಿದ.

ಇಂದಿನ ಸಮಾರಂಬದಲ್ಲಿ ‘ತಾನು ಒಂಟಿ’ ಎನಿಸಿತ್ತು ತೊಡಗಿತ್ತು ಅರವಿಂದನಿಗೆ. ಎಲ್ಲಾ ಇದ್ದು ಏನೂ ಇಲ್ಲದಂತೆ. ಅರೆ ಹೌದಲ್ಲಾ? ಅವನಿಗೇ ಆಶ್ಚರ‍್ಯವಾಯಿತು. ನೆರೆದಿದ್ದ ಜನರಲ್ಲಿ ತನ್ನವರನ್ನು ಹುಡುಕಲು ಸುತ್ತಲೂ ದ್ರುಶ್ಟಿ ಹಾಯಿಸಿದ. ‘ನನ್ನವರು’ ಎನ್ನುವರು ಯಾರೂ ಕಾಣಲೇ ಇಲ್ಲ!! ನಾನೊಬ್ಬನೆ. ಒಂಟಿ ಗೂಬೆ. ಅನಾತಪ್ರಗ್ನೆ ಕಾಡ ಹತ್ತಿತು. ನನ್ನವರು ಯಾರು ಇಲ್ಲದಿದ್ದರೂ, ಬಾರಿ ಪ್ರಮಾಣದಲ್ಲಿ ಜನ ಸೇರಿದ್ದಾರೆ. ಇವರೆಲ್ಲಾ ಹಾಯ್  ಬಾಯ್ ಜನ. ಮುಕ ಕಂಡಾಗ ಮುಗುಳ್ನಕ್ಕು, ಕೈ ಕುಲಕುವುದಕ್ಕಶ್ಟೇ ಸೀಮಿತ ಇವರ ನನ್ನ ಬಾಂದವ್ಯ. ನಂತರ ಯಾರಿಗೆ ಯಾರೂ ಸಂಬಂದವಿಲ್ಲ. ‘ಮನೆಯತ್ತ ಮುಕ ಮಾಡಿದಾಗ ನಾನೊಬ್ಬನೇ, ಒಂಟಿ. ಸಾವಿನಲ್ಲೂ ಅಶ್ಟೇ, ಯಾರೂ ಬರುವುದಿಲ್ಲವಂತೆ. ನಿರ‍್ಲಿಪ್ತತೆಯ ಒಂಟಿ ಪಯಣ. ತನ್ನ ಇಂದಿನ, ಈ ಸಮಯದ ಪಯಣವನ್ನು ಅದಕ್ಕೆ ಹೋಲಿಕೆ ಮಾಡಿಕೊಂಡ. ಕೊಂಚ ಬೇಸರವಾಯಿತು.

ಅರವಿಂದನ ಮನಸ್ಸಿನಲ್ಲಿ ಯಾವುದೋ ಅವ್ಯಕ್ತ ದುಗುಡ ಇಂದು ಕಾಡಹತ್ತಿತ್ತು. ಕಟ್ಟಿಕೊಂಡ ಮಡದಿ ತನ್ನದೇ ಕೆಲಸದ ನಿಮಿತ್ತ ದೆಹಲಿಯಲ್ಲಿ, ಮಗಳು ಐಎಎಸ್ ಮುಗಿಸಿ ಈಗ ತರಬೇತಿಯಲ್ಲಿ ದೂರದ ಡೆಹ್ರಾಡೂನಿನಲ್ಲಿ. ತನ್ನವರೆಂದಿದ್ದ ಇಬ್ಬರೂ ದೂರದೂರಲ್ಲಿ. ಬಹಳ ಬೇಸರವಾಯಿತು. ಇಶ್ಟು ದಿನ ಕೆಲಸದ ಒತ್ತಡದಲ್ಲಿ ಇವು ಯಾವುವೂ ಅವನ ಗಮನಕ್ಕೆ ಬಂದಿರಲಿಲ್ಲ. ಆದರೆ ಇಂದಿನ ಒಂಟಿತನ ಅರವಿಂದನಿಗೆ ಸಹ್ಯವಾಗಲಿಲ್ಲ.

ಲ್ಯಾಪ್ ಟಾಪ್ ತೆಗೆದು ಬಂದಿದ್ದ ಮೇಲ್‍ಗಳತ್ತ ತನ್ನ ಗಮನ ಹರಿಸಿದ. ಅರೆ! ಇದೇನಾಶ್ಚರ‍್ಯ? ಇರುವ ಹತ್ತಾರು ಮೇಲ್‌ಗಳ ನಡುವೆ ಮಗಳಿಂದ ಬಂದ ಮೇಲ್. ದಿನಾಂಕ ಗಮನಿಸಿದ. ಎರಡು ದಿನ ಹಿಂದಿನದ್ದು. ಕುತೂಹಲ ಕೆರಳಿತು. ಕೂಡಲೇ ಅದನ್ನು ತೆರೆದು ಪೂರ‍್ಣ ಗಮನವನ್ನು ಅದರ ಮೇಲೆ ಕೇಂದ್ರೀಕರಿಸಿದ.

ಪಪ್ಪಾ,

‘ನಾಲ್ಕು ದಿನದಿಂದ ನಾನು ನಿನ್ನ ಮೊಬೈಲ್‍ಗೆ ಎಶ್ಟು ಟ್ರೈ ಮಾಡ್ದೆ ಗೊತ್ತಾ?? ನಿನ್ನ ಪೋನು ನಾಟ್ ರೀಚಬಲ್ ಆಗಿತ್ತು. ನಿನ್ನ ಆಪೀಸಿಗೆ ಕೂಡ ಪೋನ್ ಮಾಡ್ದೆ. ನಿನಗೆ ತಿಳಿಸ್ತೀನಿ ಅಂದ್ರು. ನಿನ್ನನ್ನು ನೇರವಾಗಿ ಕಾಂಟಾಕ್ಟ್ ಮಾಡಲು ಮನಸ್ಸು ಹಾತೊರೆಯುತ್ತಿತ್ತು. ಕೆಲವೊಂದು ವಿಶಯವನ್ನು ನೇರ ಮಾತಾಡಿ ತನ್ನವರೊಡನೆ ಹಂಚಿಕೊಂಡರೆ ಆಗುವ ಕುಶಿಗೆ ಸಾಟಿಯುಂಟೆ? ನೀನು ಪೋನಿಗೂ ಸಿಗಲಿಲ್ಲ. ಬಹಳ ಬೇಸರವಾಯ್ತು”

“ಅಯ್ಯೋ… ಹೌದಾ ಪುಟ್ಟಾ, ಗಮನಿಸಲಿಲ್ಲ ಮಗಳೆ. ನನ್ನ ನಿವ್ರುತ್ತಿ ಇತ್ತಲ್ವಾ, ಅದಕ್ಕೆ ಬಹಳ ಬಿಜಿ ಆಗ್ಬಿಟ್ಟಿದ್ದೆ. ಬರೋ ಪೋನ್ಗಳನ್ನು ಸ್ವೀಕರಿಸಲಾಗದೆ ಕೆಲವೊಮ್ಮೆ ಪೋನ್ ಆಪ್ ಮಾಡಿದ್ದೆ ಕೂಡ”

“ಅದಕ್ಕೆ ಮೇಲ್ ಮಾಡಿದ್ದು ಪಪ್ಪಾ. ನಿನ್ನತ್ರ ಮಾತಾಡ್ಬೇಕು ಅಂತ ಬಾಳಾ ಆಸೆ ಇತ್ತು. ನನ್ನ ಅಂತಹಕರಣದ ಬಾವನೆಯನ್ನೆಲ್ಲಾ ನಿನ್ನಲ್ಲಿ ಹಂಚಿಕೊಳ್ಳಬೇಕು ಅನಿಸ್ತು. ಅದಕ್ಕೆ ಕಾಲ್ ಮಾಡಲು ಟ್ರೈ ಮಾಡಿದ್ದು. ನೇರವಾಗಿ ನಿನ್ನೊಡನೆ ಮಾತಾಡುವ ಅಂತ. ಎಶ್ಟೇ ಬರೆದರೂ, ಮುಕತಹ ಮಾತನಾಡಿದ ಸುಕ ಅದರಲ್ಲಿ ಸಿಗಲ್ಲ. ನನ್ನ ಮನಸಿನಲ್ಲಿದ್ದ ಬಾವನೆಗಳನ್ನು ಕೇಳುವ ಸಹನೆ ನಿನ್ನಲ್ಲಲ್ಲದೆ ಬೇರಾರಲ್ಲಿ ತಾನೆ ಇದೆ ಹೇಳು? ಯಾರು ತಾನೆ ನೀನು ಸ್ಪಂದಿಸಿದಂತೆ ನನ್ನ ಮಾತಿಗೆ ಸ್ಪಂದಿಸುತ್ತಾರೆ ಹೇಳು?”

”ಸಾರಿ ಪುಟ್ಟ ನನ್ನ ಬಿಜಿಲಿ ನಾನಿದ್ದ ಕಾರಣ, ನೀನು ಕಾಲ್ ಮಾಡಿದ್ದು ಗೊತ್ತಾಗಲಿಲ್ಲ. ದಿನ ಬೆಳಗಾದರೆ ನನಗೆ ತುರಿಸಿಕೊಳ್ಳಲು ಪುರುಸೊತ್ತಿಲ್ಲ. ರಾಜಕಾರಣಿಗಳು ಹೇಳಿದ್ದೆಲ್ಲವನ್ನೂ ಮಾಡಲೇ ಬೇಕಲ್ಲವೆ? ಹಾಗಾಗಿ ಅವರ ಜೊತೆಯಲ್ಲೇ ಇದ್ದು ಬಿಟ್ಟಿದ್ದೆ. ಸಾವಿರಾರು ಕಡತಗಳ ವಿಲೇವಾರಿ ಬಾಕಿ ಇತ್ತು. ಯಾವ ಕಡತವನ್ನೂ ಓದದೆ ಸಹಿ ಮಾಡುವಂತಿಲ್ಲ. ಯಾವುದರಲ್ಲಿ ಏನು ಅಡಗಿದೆಯೋ? ಬಲ್ಲವರಾರು. ನೋಡದೆ ಸಹಿ ಹಾಕಿದರೆ, ಮುಂದಾಗಬಹುದಾದ ಅನಾಹುತವನ್ನು ಅನುಬವಿಸುವರಾರು? ಏನಾದರೂ ಹೆಚ್ಚು ಕಡಿಮೆಯಾದರೆ ನಮ್ಮಂತಹ ಎಡಬಿಡಂಗಿಗಳಿಗೆ ಯಾರು ದಿಕ್ಕು? ಈ ರಾಜಕಾರಣಿಗಳೆಲ್ಲಾ ಕಬ್ಬಿನಲ್ಲಿ ರಸ ಹೀರಿ ಬಿಸಾಕುವ ಜನ. ನಂಬಿಕೆಗೆ ಕೊಂಚವೂ ಅರ‍್ಹರಲ್ಲ. ಎಶ್ಟು ಕೆಲಸ ಮಾಡಿದರೂ ಸಾಲದು. ಸಮಯದ ಜೊತೆ ರೇಸ್. ಮುಗಿಯದ ಕಡತಗಳು. ದಿನಕ್ಕೆ ಇನ್ನೂ ನಾಲ್ಕೈದು ಗಂಟೆ ಹೆಚ್ಚಿರಬಾರದಿತ್ತೇ ಅನಿಸಿತ್ತು. ಅಶ್ಟು ಒತ್ತಡ ಪುಟ್ಟಾ”

‘ನೀನು ಪೋನ್ ತೆಗೆಯದ ಕಾರಣ ಬೇರೆ ದಾರಿಯಿಲ್ಲದೆ, ಬೇಸರದಿಂದ ಸುಮ್ಮನಾದೆ. ನನ್ನ ಕೈಲಿ ಇನ್ನೇನು ತಾನೆ ಮಾಡಲು ಸಾದ್ಯವಿತ್ತು? ನೀನು ಕಾಲ್ ರಸೀವ್ ಮಾಡ್ದೆ ಹೋದಾಗ ಹೇಳತೀರದ ದುಕ್ಕ ಒತ್ತರಿಸಿಕೊಂಡು ಬಂತು. ಮೊಬೈಲ್‍ನ ನೆಲಕ್ಕೆ ಹಾಕಿ ಕುಟ್ಟಿ ಪುಡಿ ಪುಡಿ ಮಾಡಲೇ ಅನ್ನಿಸಿತ್ತು. ಕಣ್ಣೀರ ಕೋಡಿ ಹರಿದಿತ್ತು. ಮುಕವನ್ನು ಗಟ್ಟಿಯಾಗಿ ಮೊಣಕಾಲುಗಳಲ್ಲಿ ಒತ್ತಿ ಹಿಡಿದು ಅತ್ತೆ. ಮನಸ್ಸು ಸಮಾದಾನ ಆಗೋವರೆಗೂ ಅತ್ತೆ.

ಅಮ್ಮನಿಗಾದ್ರು ಪೋನ್ ಮಾಡುವ ಅನಿಸ್ತು. ಅಮ್ಮ ಎಲ್ಲೋ, ಯಾವುದೋ ದೇಶದಲ್ಲಿ ಕೇಂದ್ರದ ಯಾವುದೋ ನಿಯೋಗದೊಂದಿಗೆ ಪೂರ‍್ವಬಾವಿ ತಯಾರಿಗೆ ಹೋಗಿದ್ದಾಳಂತೆ. ಹೋಗಿ ವಾರವಾಗಿದೆ. ನನಗೆ ತಿಳಿದದ್ದು ಮೊನ್ನೆ, ಮೂರು ದಿನದ ಹಿಂದೆ. ಪೋನ್ ಮಾಡಿ ತಿಳಿಸಲಿಕ್ಕೆ ಆಗದಿದ್ರು, ಮೇಲ್ ಆದ್ರೂ ಮಾಡ್ಬಹುದಿತ್ತಲ್ವಾ? ಅಮ್ಮ ಅದನ್ನೂ ಮಾಡ್ಲಿಲ್ಲ. ಯಾಕೋ ತಿಳಿಯಲಿಲ್ಲ”

”ಹೌದು ಪುಟ್ಟ, ಗ್ಲೋಬಿನ ಆಚೆ ಬದಿಯ ಒಂದು ಪುಟ್ಟ ರಾಶ್ಟ್ರಕ್ಕೆ ಹೋಗಿದ್ದಾಳೆ. ಇನ್ನೂ ಐದಾರು ದಿನ ಆಗುತ್ತೆ ವಾಪಸ್ಸು ಬರೋದು. ಅವಳನ್ನು ಕಾಂಟಾಕ್ಟ್ ಮಾಡಲು ನಾನೂ ಶತ ಪ್ರಯತ್ನ ಪಟ್ಟೆ. ಸಾದ್ಯವಾಗಲಿಲ್ಲ. ನನಗೇ ಆಗದ್ದು ನಿನಗೆ ಹೇಗೆ ಸಾದ್ಯಾವಾದೀತು ಹೇಳು ಮಗಳೆ”

“ಅವಳೂ ಪೋನಿಗೆ ಸಿಗಲಿಲ್ಲ. ಅವಳ ಸಮಯ ನನ್ನ ಸಮಯದ ಜೊತೆ ತಾಳೆ ಅಗೋದೇ ಇಲ್ಲ. ನನ್ನ ಈ ಅಸಹಾಯಕತೆಯನ್ನು ಯಾರ ಬಳಿ ಹೇಳಿಕೊಳ್ಳಲಿ? ಜೀವನದಲ್ಲಿ ಜಿಗುಪ್ಸೆ ಬಂದಂತಾಯಿತು. ನಿನ್ನ ಮತ್ತು ಅಮ್ಮನ ಹೆಸರನ್ನು ಉಳಿಸಲು ನಾನಿಲ್ಲಿ ಮಾಡಿದ ಪ್ರಯತ್ನ ಸಪಲವಾಗಿದ್ದನ್ನು, ಮೊದಲು ನಿಮಗಲ್ಲದೆ ಮತ್ಯಾರಿಗೆ ತಾನೆ ತಿಳಿಸಲಿ? ತನ್ನವರಲ್ಲದವರಿಂದ ಯಾವ ರೀತಿಯ ಪ್ರತಿಕ್ರಿಯೆ ನಿರೀಕ್ಶಿಸಲಿ? ಅದು ನನ್ನ ದುಕ್ಕಕ್ಕೆ ತುಪ್ಪ ಸುರಿದಂತೆಯೇ ಹೊರತು ತಣಿಸುವುದಿಲ್ಲ”

“ನನ್ನ ಸಂತೋಶದಲ್ಲಿ ಬಾಗಿ ಆಗುವವರು ಯಾರಿದ್ದಾರೆ? ದುಕ್ಕವನ್ನಾಗಲಿ, ಸಂತೋಶವನ್ನಾಗಲಿ ಹ್ರುದಯಕ್ಕೆ ಹತ್ತಿರಾದವರೊಂದಿಗೆ ಹಂಚಿಕೊಂಡಲ್ಲಿ ತಾನೆ ಮನಸ್ಸಿಗೆ ಸಮಾದಾನ. ಆ ಪುಣ್ಯ ಸದ್ಯದಲ್ಲಿ ನನ್ನಿಂದ ದೂರವಾಗಿತ್ತು. ನೋವನ್ನಾದರೂ ಮನದಲ್ಲೇ ಹುದುಗಿಸಿಕೊಳ್ಳಬಹುದು, ಇನ್ನೊಬ್ಬರಿಗೆ ತೊಂದರೆ ಯಾಕೆ ಎಂದು ನುಂಗಿಕೊಳ್ಳಬಹುದು. ಸಂತೋಶದ ವಿಚಾರಕ್ಕೆ ಬಂದಾಗ? ಇಲ್ಲ ಸಾದ್ಯವೇ ಇಲ್ಲ. ಹಂಚಿಕೊಂಡರೇನೇ ತ್ರುಪ್ತಿ. ಸಂತೋಶ ಇಮ್ಮಡಿಸುವುದು”

“ನಿನ್ನ ಮನದ ವೇದನೆ ನನಗೆ ಅರ‍್ತವಾಗುತ್ತೆ ಪುಟ್ಟಾ. ನಿನ್ನ ಮನಸ್ಸಿಗೆ ನೋವುಂಟು ಮಾಡುವ ಯಾವುದೇ ಉದ್ದೇಶ ನನಗಿರಲಿಲ್ಲ. ಕಾಲದ ಕೈಗೊಂಬೆಯಾಗಿದ್ದೆ. ಅಸಹಾಯಕನಾಗಿದ್ದೆ. ನನ್ನ ನಿವ್ರುತ್ತಿಯ ದಿನ ತೀರಾ ಹತ್ತಿರ ಬಂದ ಕಾರಣ, ಗಮನ ಕೊಡಲು ಸಾದ್ಯವಾಗಲಿಲ್ಲ, ಕ್ಶಮೆಯಿರಲಿ ಪುಟ್ಟಾ” ಅರವಿಂದ ಕಣ್ಣಾಲಿಗಳು ತುಂಬಿ ಬಂದವು

“ಪಪ್ಪಾ ನಾನು ನಿನ್ನೊಡನೆ ಹಂಚಿಕೊಳ್ಳಬೇಕೆಂದಿದ್ದು ಹೆಮ್ಮೆಯ ವಿಶಯ. ಕಂಡಿತಾ ನಿನಗೂ ಕುಶಿಯಾಗುತ್ತೆ. ನೆನ್ನೆಯ ದಿನ ಇನ್ಸಿಟಿಟ್ಯೂಟ್‍ನಲ್ಲಿ ಪದವಿ ಪ್ರದಾನ ಸಮಾರಂಬ ಇತ್ತು. ವಿಜ್ರುಂಬಣೆಯಿಂದ ನಡೆಯಿತು. ಪರೀಕ್ಶೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರು ಕೊರಳೊಡ್ಡಲು ಹತ್ತು ಚಿನ್ನದ ಪದಕಗಳಿದ್ದವು. ಪಪ್ಪ ನಿಂಗೊತ್ತಾ!!! ಅದರಲ್ಲಿ ಏಳು ಚಿನ್ನದ ಪದಕಗಳು ನನ್ನ ಕೊರಳನ್ನು ಅಲಂಕರಿಸಿದವು. ಒಂದಾದ ಮೇಲೆ ಒಂದು ಪದಕಕ್ಕೆ ಕೊರಳೊಡ್ಡುವಾಗ ಎಶ್ಟು ಕುಶಿಯಾಯ್ತು ಗೊತ್ತಾ? ಬಹಳ ಎತ್ತರಕ್ಕೆ ಬೆಳೆದು ಬಿಟ್ಟಿದ್ದೆ. ನಕ್ಶತ್ರ ಕೈಗೆಟುವಶ್ಟು ಎತ್ತರಕ್ಕೆ!!! ಬಹಳವೇ ಕುಶಿಯಾಯ್ತು. ನೀನಾಗಲಿ ಅಮ್ಮನಾಗಲಿ ಇದ್ದಿದ್ದರೇ?  ಓಹ್ ನೆನಪಿಸಿಕೊಂಡರೆನೇ ಮೈ ಜಂ ಅನ್ಸುತ್ತೆ. ನನ್ನ ಗೆಳತಿ ತಮೋಗ್ನಳಿಗೆ ಬಂದಿದ್ದು ಒಂದೇ ಒಂದು ಚಿನ್ನದ ಪದಕ. ಅವಳ ಅಪ್ಪ, ಅಮ್ಮ ಇಬ್ಬರೂ ಬಂದು ಅವಳನ್ನು ತಬ್ಬಿದಾಗ, ಅವಳ ಮುಕದಲ್ಲಿ ಕಂಡ ಆನಂದ ನನ್ನನ್ನು ಮೂಕವಿಸ್ಮಿತಳನ್ನಾಗಿಸಿತು. ಅವಳ ಪಾಲಕರ ಮುಕದಲ್ಲಿ ಇದ್ದ ಸಂತೋಶಕ್ಕೆ ಬೆಲೆ ಕಟ್ಟಲು ಸಾದ್ಯವೇ ಇರಲಿಲ್ಲ ಪಪ್ಪ. ಅಗ ನನಗೆ ಪಿಚ್ಚೆನಿಸಿತು. ಸೋತ ಬಾವನೆ”

“ನಾನೂ ಓಡಿ ಹೋಗಿ ಅವರನ್ನೇ ತಬ್ಬಿಕೊಳ್ಳಲೇ ಅನಿಸಿತ್ತು. ಹತಾಶೆಯಿಂದ, ಅವರನ್ನು ತಬ್ಬಿದ್ದರೂ, ಅವರ ಮುಕದಲ್ಲಿ ನಿಜವಾದ ಸಂತೋಶ ಹೊರಹೊಮ್ಮುತ್ತಿತ್ತೇ? ಕಂಡಿತಾ ಇಲ್ಲ. ಪಪ್ಪ, ಆ ಸಮಯದಲ್ಲಿ ಏನನ್ನೋ ಕಳೆದುಕೊಂಡಂತೆ. ಎಲ್ಲವನ್ನೂ ಕಳೆದುಕೊಂಡಂತೆ ಬಾಸವಾಯಿತು. ಮತ್ತೆ ಇನ್ನಾವಾಗಲಾದರೂ ನೀನಾಗಲಿ, ಅಮ್ಮನಾಗಲಿ ನಾನು ಗಳಿಸಿದ ಚಿನ್ನದ ಪದಕಗಳನ್ನು ಕಣ್ಣಾರೆ ನೋಡಬಹುದು. ಕಂಡಿತಾ ನೋಡುತ್ತೀರಿ. ಅಂದು ನನ್ನನ್ನು ತಬ್ಬಿ ಮುದ್ದಾಡಬಹುದು. ಮುತ್ತಿನ ಮಳೆ ಸುರಿಸಬಹುದು. ಸಂತೋಶ ಪಡಬಹುದು. ಕೇಳಿದ್ದೆಲ್ಲಾ ಕೊಡಿಸಬಹುದು. ಅದೆಲ್ಲಾ ಪ್ರಿಜ್‍ನಲ್ಲಿನ ಊಟದಂತೆ, ಹಳಸಿದ್ದು. ಅದರಿಂದ ಪೂರ‍್ಣ ಪ್ರಮಾಣದ ಸಂತೋಶ ಕಂಡಿತಾ ದೊರಕಲಾರದು. ಸತ್ತು ಹೋದ ಬಾವನೆಗಳಿಗೆ ಮತ್ತೆ ಜನ್ಮಕೊಡಲು ಸಾದ್ಯವೇ ಪಪ್ಪಾ? ಕಂಡಿತ ಇಲ್ಲ. ನನ್ನವರು ಯಾರೂ ಇಲ್ಲವೇನೋ ಎಂಬ ಬಾವನೆ ಬಹಳ ಕಾಡಿತು.”

”ಇಂದು ನನಗೂ ಸಹ ಹಾಗೇ ಆಯಿತು ಪುಟ್ಟಿ. ಬೀಳ್ಕೊಡುಗೆ ಸಮಾರಂಬದಲ್ಲಿ ಯಾರೂ ಇಲ್ಲದ ಏಕಾಂಗಿತನ ನನ್ನನ್ನು ಬಿಟ್ಟೂ ಬಿಡದೆ ಸತತವಾಗಿ ಕಾಡಿತ್ತು. ಅಯಾಚಿತ ನೋವನ್ನು ಅನುಬವಿಸಿದೆ. ಮೂಕವೇದನೆ. ಇನ್ನು ನಿನಗೆ ನೋವಿರುವುದಿಲ್ಲವೆ? ನಿನ್ನದು ಇನ್ನು ಪುಟ್ಟ ಹ್ರುದಯ. ಆ ಪುಟ್ಟ ಹ್ರುದಯಕ್ಕಾದ ನೋವು ಎಶ್ಟು ಎಂದು ಅಂದಾಜಿಸಬಲ್ಲೆ, ಪಾಪು”

“ಪಾಸಾದ ಕುಶಿಯಲ್ಲಿ ತಮೋಗ್ನ, ಅವರ ತಂದೆತಾಯಿಯರೆಲ್ಲಾ ಶಾಪಿಂಗ್ ಮಾಡಲು, ಪಿಚ್ಚರ್ ನೋಡಲು, ಪಾರ‍್ಟಿ ಮಾಡಲು, ಹೊರಗೆ ಹೊರಟಾಗ ನಾನು ಪೂರಾ ಒಂಟಿಯಾದೆ. ಬಲವಂತದಿಂದ ತುಟಿ ಅಗಲಿಸಿ ನಕ್ಕು, ಅವರನ್ನೆಲ್ಲಾ ಕೈಯಾಡಿಸುತ್ತಾ ಬೀಳ್ಕೊಟ್ಟಾಗ ಎದೆಬಿರಿಯಿತು. ಬೂಮಿ ಬಾಯ್ಬಿಡಬಾರದೆ ಅನಿಸಿತು. ನನಗಾಗಿ, ನನ್ನವರೂ ಅನಿಸಿಕೊಂಡವರು ನನ್ನ ಜೊತೆ ಯಾರೂ ಇರಲಿಲ್ಲ. ಸಾಂತ್ವನ ಮಾಡಲೂ ಸಹ. ಮನದಲ್ಲಿ ಒಂಟಿತನದ ಕಾಳ್ಗಿಚ್ಚು ಹತ್ತಿ ಉರಿಯಲಾರಂಬಿಸಿತು. ಒಡಲಲ್ಲಿನ ಜ್ವಾಲಾಮುಕಿ ನನ್ನನ್ನೇ ಸುಟ್ಟು ಬಸ್ಮ ಮಾಡುವ ಮುನ್ನ ರೂಮು ಸೇರುವುದು ಒಳಿತು ಎಂದು ನೇರ ರೂಮಿಗೆ ಓಡಿ ಬಂದು, ಬಾಗಿಲು ಜಡಿದು, ಬಂದಿದ್ದ ಪದಕಗಳೆನ್ನೆಲ್ಲಾ ಮೇಜಿನ ಮೇಲೆಸೆದು ಮಂಚದ ಮೇಲೆ ಬಿದ್ದು ಮನಸೋ ಇಚ್ಚೆ ಅತ್ತೆ. ಕಣ್ಣೀರ ಕೋಡಿ ಹರಿಯಿತು. ಎಶ್ಟು ಹೊತ್ತು ಅತ್ತೆನೋ ತಿಳಿಯೇ. ಸಮಾದಾನವಂತೂ ಮರೀಚಿಕೆಯಾಯಿತು. ಬಹುಶಹ ಇನ್ನೆಂದೂ ಸಮಾದಾವಾಗಲಾರದು ಪಪ್ಪಾ”

“ನನಗೆ ನಿನ್ನ ಮನಸ್ಸಿನ ನೋವು ಕಂಡಿತಾ ಅರ‍್ತವಾಗುತ್ತೇ ಪುಟ್ಟಾ. ನಾನೊಬ್ಬ ಹುಟ್ಟು ಅನಾತ. ಸಮಾಜದಲ್ಲಿ ಮೇಲ್ ಸ್ತರಕ್ಕೆ ಏರುವ ಉತ್ಕಟವಾದ ಆಸೆ ನನ್ನಲ್ಲಿ ಚಿಕ್ಕಂದಿನಿಂದಲೂ ಮನೆ ಮಾಡಿತ್ತು. ಅದರ ಸಾದನೆಯೇ ನನ್ನ ಜೀವನದ ಏಕೈಕ ಗುರಿಯಾಗಿತ್ತು. ಅದಕ್ಕೆ ಪೂರಕವಾಗಿ ನಾನು ಪಟ್ಟ ಪಾಡು, ತುಳಿದ ಕಲ್ಲು ಮುಳ್ಳಿನ ಹಾದಿ, ಯಾರಿಗೂ ಬೇಡ. ಹಗಲೂ ರಾತ್ರಿ ಕಶ್ಟಪಟ್ಟು ದುಡಿದೆ, ವಾರಾನ್ನ ಮಾಡಿಕೊಂಡಿದ್ದು ಓದಿದೆ. ಕರ‍್ಚಿಗೆ ಮಕ್ಕಳಿಗೆ ಮನೆಪಾಟ ಹೇಳಿಕೊಟ್ಟೆ. ರಜಾ ದಿನಗಳಲ್ಲಿ ಮನೆಮನೆಗೂ ನ್ಯೂಸ್ ಪೇಪರ್ ಹಂಚಿದೆ. ಜೊತೆ ಜೊತೆಗೆ ನನ್ನ ಓದನ್ನೂ ಮುಂದುವರೆಸಿದೆ. ಬುದ್ದಿವಂತರಿಗಾಗಿಯೇ ಇರುವ ಐಎಎಸ್ ಪರೀಕ್ಶೆಯನ್ನು, ಒಂದೇ ಬಾರಿಗೆ ಯಾವುದೇ ಕೋಚಿಂಗ್ ಇಲ್ಲದೆ, ರ‍್ಯಾಂಕ್ ಪಡೆದು ಪಾಸಾದೆ. ನಿನ್ನಂತೆ”

”ಐಎಎಸ್ ತರಬೇತಿಯಲ್ಲಿ ನಿಮ್ಮಮ್ಮನ ಪರಿಚಯ ಆಯ್ತು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗುವ ಹೊತ್ತಿಗೆ ನಾನೊಂದು ರಾಜ್ಯಕ್ಕೆ ಅವಳೊಂದು ರಾಜ್ಯಕ್ಕೆ ನಿಯೋಜಿತರಾಗಿದ್ದೆವು. ವಿದಿಯಾಟ ಎಶ್ಟು ಕ್ರೂರ ನೋಡು ಪುಟ್ಟಾ. ನೀನು ಹುಟ್ಟುತ್ತಲೇ ಅವಳು ತನ್ನ ಮಾತ್ರು ರಾಜ್ಯಕ್ಕೆ ಹೋಗಲೇಬೇಕಾದ ಪರಿಸ್ತಿತಿ ಉದ್ಬವಿಸಿತು. ಅಂದಿನಿಂದ ನಾನೂ ಒಂಟಿ. ಅಮ್ಮನೂ ಒಂಟಿ. ನೀನೂ ಸಹ. ನಾನಿಲ್ಲಿ. ಅವಳಲ್ಲಿ, ನೀನು ಆಯಾ ಜೊತೆ, ಕ್ರಮೇಣ ನಮ್ಮ ಕೆಲಸದಲ್ಲಿನ ಪದೋನ್ನತಿ ನಮ್ಮನ್ನು ಒಟ್ಟಾಗಿ ಇರಲು ಬಿಡಲೇ ಇಲ್ಲ”

”ನನ್ನ ಪ್ರಮುಕ ದ್ಯೇಯ ಇದ್ದುದು ನಾನು ಚಿಕ್ಕಂದಿನಲ್ಲಿ ಅನುಬವಿಸಿದ ಸಂಕಟ, ನೋವು, ನೀನು ನಿನ್ನ ಜೀವನದಲ್ಲಿ ಅನುಬವಿಸಬಾರದು, ನೀನು ನಡೆವ ಹಾದಿ, ಹೂವಿನದ್ದಾಗಿರಬೇಕು ಎಂಬುದಶ್ಟೇ ನನ್ನ ಬಯಕೆಯಾಗಿತ್ತು. ಅದು ತಕ್ಕಮಟ್ಟಿಗೆ ಪಲಿಸಿತಾದರೂ, ಪೂರ‍್ಣಪ್ರಮಾಣದಲ್ಲಿ ಸಾದ್ಯವಾಗಲೇ ಇಲ್ಲ. ನಾನು ವೈಪಲ್ಯ ಅನುಬವಿಸಿದೆ”.

“ನಿಜ. ನಿನ್ನನ್ನು ಬಡತನ ಕಾಡಲಿಲ್ಲ. ಬದಲಿಗೆ ಹಣದಿಂದ ಎಲ್ಲವನ್ನೂ ಪಡೆಯಲಾಗದು ಎಂಬ ಬಯಂಕರ ನಿತ್ಯ ಸತ್ಯ ನಿನಗೂ, ನನಗೂ ಇಬ್ಬರಿಗೂ ಮರೆಯಲಾರದ ಪಾಟ ಕಲಿಸಿತು. ಮೊದಮೊದಲು ಎಲ್ಲಾ ಚೆನ್ನಾಗಿತ್ತು. ಸಿಹಿಯಾಗಲಿ, ಕಹಿಯಾಗಲಿ ಯಾವುದು ಹೆಚ್ಚಾದರೂ ಸಹ್ಯವಲ್ಲ. ಎಲ್ಲದಕ್ಕೂ ಒಂದು ಮಿತಿಯಿರಬೇಕು. ಆಗಲೇ ಚೆಂದ. ಇದು ಜೀವನ ರಹಸ್ಯ”

”ಹಣ ಸಂಪಾದಿಸಿ ನಿನ್ನನ್ನು ಸುಕವಾಗಿಡುವ ಹಂಬಲದಿಂದ, ನಿನ್ನ ತೊದಲು ನುಡಿಯ ಮಾತುಗಳನ್ನು ಈ ಕಿವಿಗಳು ಕೇಳಲೇ ಇಲ್ಲ, ನೀನಿಟ್ಟ ಆ ಪುಟ್ಟ ಪುಟ್ಟ ತಪ್ಪು ಹೆಜ್ಜೆಗಳನ್ನೂ ಈ ಕಣ್ಣುಗಳು ಕಾಣಲೇ ಇಲ್ಲ. ನಿನ್ನ ಬೆಣ್ಣೆಯಂತ ಪುಟ್ಟ ಮೈಯನ್ನು ತಬ್ಬಿ ಮುದ್ದಾಡುವ ಸುಕ ಅನುಬವಿಸಲೇ ಇಲ್ಲ. ಎಲ್ಲವನ್ನೂ ಕಳೆದುಕೊಂಡೆ. ಪ್ರೀತಿ ಪ್ರೇಮವನ್ನು ಬಲಿ ಕೊಡಬೇಕಾಯ್ತು. ಯಾವ ಪುರುಶಾರ‍್ತಕ್ಕಾಗಿ ಇವೆಲ್ಲಾ ಬಲಿ ಕೊಟ್ಟೆನೋ ತಿಳಿಯೆ. ಈಗ ಎಶ್ಟು ಕೊರಗಿದರೇನು? ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಪಲವಿಲ್ಲ. ನಿಜ. ನಿನ್ನೊಡನೆ ಹಂಚಿಕೊಂಡರೆ, ನಿನ್ನ ಹಾಗೂ ನನ್ನ ಮನಸ್ಸಿಗಾದ ಅಗಾದ ನೋವು ಕೊಂಚವಾದರೂ ಶಮನವಾಗಬಹುದು ಎಂಬ ಒಂದೇ ಒಂದು ಆಸೆಯಿದೆ”

”ಆಗಿಹೋಗಿದ್ದು ಆಗಿ ಹೋಯಿತು. ಬೂತಕಾಲದಲ್ಲಿ ಲೀನವಾಯಿತು. ಪರಿತಪಿಸಿ ಪಲವಿಲ್ಲ. ನನ್ನ ಬಾಲ್ಯದ್ದು ಒಂದು ಗೋಳಾದರೆ, ಯೌವನದ್ದು ಮತ್ತೊಂದು. ಬಾಲ್ಯದಲ್ಲಿ ಏನೋ ಇಲ್ಲದ ಬಿಕಾರಿ ಸ್ತಿತಿ. ಯೌವನದಲ್ಲಿ ಎಲ್ಲಾ ಇದ್ದೂ ಏನೂ ಇಲ್ಲದ ದಿವಾಳಿತನದ ಸ್ತಿತಿ. ಈ ಸ್ತಿತಿಗಳಲ್ಲಿ ಎಶ್ಟೊಂದು ಅಂತರವಿದೆ ಅಲ್ಲವೆ? ನಿನ್ನದು ಮತ್ತೊಂದು ರೀತಿಯದು. ಪ್ರೀತಿ, ಪ್ರೇಮ ಬಾಂದವ್ಯ ಹಗಲುಗನಸಾದ ಸ್ತಿತಿ. ಅಪ್ಪ-ಮಗಳಲ್ಲಿ, ಅಮ್ಮ-ಮಗಳಲ್ಲಿ ಇರಬೇಕಾದ ಅವರ‍್ಣನೀಯ ಆತ್ಮೀಯತೆ ಎಲ್ಲೋ ಕಳೆದು ಹೋದ ಸ್ತಿತಿ”

ಮುಂದೆ ಓದಲು ಸಾದ್ಯವಾಗಲಿಲ್ಲ ಅರವಿಂದನಿಗೆ. ಕಣ್ಣು ಮಂಜಾಗಿತ್ತು. ಕಣ್ಣೀರನ್ನು ಒರೆಸಲು ಕರವಸ್ತ್ರಕ್ಕಾಗಿ ಜೇಬಿಗೆ ಕೈ ಹಾಕಿದ.

ಕಾರು ತಿರುವಿನಲ್ಲಿ ತಿರುಗಿದಂತಾಯಿತು. ಹೊರಗೆ ಇಣುಕಿ ನೋಡಿದ. ಬೀದಿ ದೀಪದ ಬೆಳಕಿನಲ್ಲಿ ಸುತ್ತಲೂ ಇದ್ದ ಮನೆಗಳು ಅಸ್ಪಶ್ಟವಾಗಿ ಕಂಡವು. ಕಣ್ಣೊರೆಸಿಕೊಂಡು ಮತ್ತೆ ದ್ರುಶ್ಟಿಸಿ ನೋಡಿದ. ಅನುಮಾನವೇ ಇಲ್ಲ. ತನ್ನದೇ ಮನೆ. ಎಂದಿನಂತೆ ಇಂದು, ಪಿ.ಎ. ಮುಕುಂದ ಆತನಗಿಂತ ಮುನ್ನ ಕೆಳಗಿಳಿದು ಕಾರಿನ ಬಾಗಿಲು ತೆರೆಯಲಿಲ್ಲ. ಇಳಿಯುವಾಗ್ಗೆ, ಪುಟಿದು ಇಳಿಯುತ್ತಿದ್ದ ಅರವಿಂದನಲ್ಲಿ ಇಂದು ಆ ಲವಲವಿಕೆ, ಹುಮ್ಮಸ್ಸು ಮಾಯವಾಗಿತ್ತು. ಅರವತ್ತರ ವಯಸ್ಸಿನ ತೂಕ ಹೆಚ್ಚಿತ್ತು. ಬಾರವಾದ ಹ್ರುದಯದಿಂದ ಕೆಳಗಿಳಿದ. ಇಶ್ಟು ದಿನ, ತನ್ನ ವಾಹನ ಚಾಲಕನಾಗಿ ಸೇವೆ ಸಲ್ಲಿಸಿದ ಡ್ರೈವರ್ ಪಾಶಾಗೆ ಜೇಬಿನಲ್ಲದ್ದಶ್ಟು ಹಣವನ್ನೂ ಬಕ್ಶೀಸ್ ಕೊಟ್ಟು, ಅವನ ಕೊನೆಯ ಸಲಾಂ ಸ್ವೀಕರಿಸಿ, ಗೇಟನ್ನು ತೆಗೆದು ಕಾಂಪೌಂಡಿನ ಒಳಗೆ ಅಡಿಯಿಟ್ಟ.

ಮನೆಯ ಮುಂಬಾಗಿಲಿನಲ್ಲಿ ಮುದ್ದು ಮಗಳು ತಮೋಗ್ನ, ತನ್ನ ಬರುವಿಕೆಗಾಗಿ ಕಾಯುತ್ತಾ ಕುಳಿತಿರುವುದನ್ನು ಕಂಡು ಮೂಕನಾದ.

(ಚಿತ್ರ ಸೆಲೆ: ninjamarketing.it)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: