ಸಣ್ಣಕತೆ: ಯಾರಿಗೆ ಬಂತು ಸ್ವಾತಂತ್ರ್ಯ?

–  .

ದೋ… ಎಂದು ದರೆಯೇ ನುಂಗುವಂತೆ ರಾತ್ರಿ ಹಗಲು ಎಡಬಿಡದೆ ಮಳೆ ಸುರಿಯುತ್ತಿದೆ. ಮೂಲೆಯಲ್ಲಿ ಹಾವಿನಂತೆ ಸುತ್ತಿ ಮಲಗಿದ ಬೈರ ಚಳಿಗೆ ಕುಂಯ್‌ಗುಡುತಿದ್ದಾನೆ. ರಾಯಣ್ಣ ಬೈರನ ಬಳಿಗೆ ಹೋಗಿ “ಯಾಕ್ಲ ಚಳಿನಾ…? ತಡಿ ಗೋಣಿ ಚೀಲ ಹೊಚ್ತೀನಿ” ಎಂದು, ಗುಡಿಸಲಿನ ಮೂಲೆಯಲ್ಲಿ ಬಿದ್ದಿದ್ದ ಹರಕು ಗೋಣಿ ತಾಟು ತಂದು ಹೊಚ್ಚಿದ. ಅದು ಮತ್ತಶ್ಟು ಮುಲುಕುತ್ತ ಸುತ್ತಿಕೊಂಡು ಮಲಗಿತು. ರಾಯಣ್ಣ ಆಗ ತಾನೆ ಶಾಲೆಯಿಂದ ಬಂದು ಅವ್ವ ತಿನ್ನಲು ಏನಾದ್ರೂ ಇಟ್ಟಿದ್ದಾಳ ಎಂದು ತಡಕಾಡಿದ, ಊಹೂಂ… ಏನೇನು ಇಲ್ಲ, ಒಲೆಯ ಬದಿಯ ಮೂಲೆಯಲ್ಲಿ ಇಟ್ಟ ಮಣ್ಣಿನ ಮಡಿಕೆಯೊಳಗಿನ ತಣ್ಣನೆ ನೀರು ಬಿಟ್ಟರೆ. ಅವ್ವ ಗೌಡರ ಗದ್ದೆಗೆ ಕೂಲಿಗೆ ಹೋಗವಳೆ. ಆಕೆ ಏನಾದರೂ ತಿನ್ನಲು ತಂದ್ರೆ ರಾಯಣ್ಣನ ಮತ್ತು ತಂಗಿ ಮಂಜಿಯ ಹೊಟ್ಟೆ ತುಂಬೀತು. ಹೊಟ್ಟೆಯ ಹಸಿವಿನಿಂದಲೇ ಮಕ್ಕಳು ಅವ್ವನ ಬರುವಿಕೆಯನ್ನು ಎದುರು ನೋಡುತಿದ್ದರು.

ನಾಗವ್ವನ ಗಂಡ ಇದೇ ಗೌಡರ ಗದ್ದೆಯಲ್ಲಿ ಹೂಟಿ ಮಾಡುವಾಗ ನಾಗರ ಕಡಿದು ಮರಣ ಹೊಂದಿದ್ದ. ಬಡತನದ ಕಶ್ಟದಲ್ಲಿ ಮಕ್ಕಳನ್ನು ಸಾಕಲು ನಾಗವ್ವ ಹೆಣಗಾಡತೊಡಗಿದ್ದಳು. ಅವ್ವ ಗೌಡರ ಗದ್ದೆ ಕೂಲಿ ಮುಗಿಸಿಕೊಂಡು, ಶೆಟ್ಟರ ಅಂಗಡೀಲಿ ಅರ‍್ದ ಕೇಜಿ ಅಕ್ಕಿ, ಬೆಲ್ಲ, ಕಾಪಿಪುಡಿ ತಗೊಂಡು ಮನೆಗೆ ಬಂದಾಗ ಸಂಜೆ ಏಳು ಗಂಟೆ. ಮಗ ಮೂಲೆಯಲ್ಲಿ ಚಿಮಣಿ ಬೆಳಕಲ್ಲಿ ಕುಳಿತು ಏನೋ ಬರೆದುಕೊಂಡಿದ್ದನ್ನು ಉರು ಹೊಡೆಯುತಿದ್ದ. “ಏನ್ಲಾ ಅದು ಮಣ ಮಣ ಅಂತಿದೀ?” ಎಂದು ನಾಗವ್ವ ಕೇಳಿದಳು “ಅದಾ ಅವ್ವಾ… ನಾಳೆ ಸ್ವತಂತ್ರ ದಿನಾಚರಣೆ. ಅದಕ್ಕೆ ಗಂಗಾದರಪ್ಪ ಮೇಸ್ಟ್ರು ಬಾಶಣ ಮಾಡು ಅಂತ ಅಂದವ್ವರೇ. ಅದಕ್ಕೆ ಕಲಿತೀದಿನಿ, ಅವ್ವಾ… ತಿನ್ನಕ್ಕೆ ಏನಾದ್ರು ತಂದಿಯಾ?” ಅಂದ್ರೆ, ಹಾಂ… ಅಕ್ಕಿ ತಂದೀನಿ ಈಗ ಗಂಜಿ ಬೇಯ್ಸಿ ಕೊಡ್ತೀನಿ ತಡಿ ಎಂದು ನಾಗವ್ವ ಕೈ ಕಾಲು ತೊಳೆದುಕೊಳ್ಳಲು ಹಿತ್ತಲಿಗೆ ನಡೆದಳು.

“ನಮ್ಮ ದೇಶಕ್ಕೆ ಸ್ವತಂತ್ರ ಬಂದು ಎಪ್ಪತ್ತ್ಮೂರು ವರ‍್ಶವಾಯ್ತು. ನಮ್ಮ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಗಾಂದಿಜೀ, ನೆಹರೂ, ಸರ‍್ದಾರ್ ವಲ್ಲಬಬಾಯಿ ಪಟೇಲ್, ಸುಬಾಶ್ ಚಂದ್ರ ಬೋಸ್ ಮುಂತಾದ ಮಹನೀಯರು ತಮ್ಮನ್ನು ತಾವು ದೇಶಕ್ಕೆ ಸಮರ‍್ಪಿಸಿಕೊಂಡು ಬ್ರಿಟೀಶರ ವಿರುದ್ದ ಹೋರಾಡಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟರು. ಸರ‍್ವರಿಗೂ ಸಮ ಪಾಲು, ಸರ‍್ವರಿಗೂ ಸಮ ಬಾಳು ಎಂಬ ಉಕ್ತಿಯಂತೆ ಗಾಂದಿಜೀಯವರು ದೇಶದ ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ, ಆರ‍್ತಿಕ ಸ್ವಾತಂತ್ರ್ಯ ಪಡೆಯುವುದರೊಂದಿಗೆ ನಮ್ಮ ದೇಶದ ಪ್ರತಿ ಹಳ್ಳಿ ಹಳ್ಳಿಗಳೂ ಉದ್ದಾರವಾಗಬೇಕು, ಸಂಪದ್ಬರಿತವಾಗ ಬೇಕು, ಈ ದೇಶ ರಾಮ ರಾಜ್ಯವಾಗಬೇಕು ಎಂದು ಕನಸು ಕಂಡಿದ್ದರು” ಎಂದು ರಾಯಣ್ಣ ಜೋರಾಗಿ ಉರು ಹೊಡೆಯುತ್ತ ಬಾಶಣದ ತಯಾರಿ ಮಾಡಿಕೊಳ್ಳುತಿದ್ದ. ಇತ್ತ ಹೊಟ್ಟೆಯ ಹಸಿವಿಗೆ ಮೂಲೆಯಲ್ಲಿ ಮಲಗಿದ್ದ ನಾಯಿಯೂ ಕುಂಯ್‌ಗುಡುತ್ತ ಆಗಾಗ ರಾಯಣ್ಣನನ್ನು ತಲೆ ಎತ್ತಿ ನೋಡುತಿತ್ತು.

ಹೊರಗೆ ದೋ…! ಎಂದು ಒಂದೇ ಸಮನೆ ಸುರಿಯುತ್ತಿರುವ ಆಶ್ಲೇಶ ಮಳೆಯ ಅಬ್ಬರ. ಜೊತೆಗೆ ಬರ‍್ರನೆ ಬೀಸುವ ಗಾಳಿ. ನಾಗವ್ವನ ಗುಡಿಸಲು ಮಳೆಯ ಇರಚಲು ಹೊಡೆತಕ್ಕೆ ಹಸಿ ಹಸಿ ಎಲ್ಲೆಲ್ಲೂ ತಂಪು. ಸ್ವಾತಂತ್ರ್ಯ ಬಂದು ಎಪ್ಪತ್ತ್ಮೂರು ವರ‍್ಶ ಆದರೂ ನಾಗವ್ವನ ಮನೆಗೆ ಸರಿಯಾಗಿ ರಸ್ತೆ ಇಲ್ಲ, ವಿದ್ಯುತ್ ಸಂಪರ‍್ಕ ಇಲ್ಲ, ಕುಡಿಯುವ ನೀರಿಗೆ ಪರ‍್ಲಾಂಗುಗಟ್ಟಲೆ ನಡೆದು ಹೋಗಿ ನೀರು ಹೊತ್ತು ತರಬೇಕು. ನಾಗವ್ವಳಿಗೆ ಯಾರಿಗೆ ಬಂತು ಸ್ವಾತಂತ್ರ್ಯ? ಯಾತಕೆ ಬಂತು ಸ್ವಾತಂತ್ರ್ಯ? ಎಂಬಂತಾಗಿತ್ತು‌. ನಾಗವ್ವ ಎಲ್ಲರಿಗೂ ಗಂಜಿ ಬಡಿಸಿ, ನಾಯಿಗೂ ಬಟ್ಟಲಿಗೆ ಗಂಜಿ ಹಾಕಿಟ್ಟು,ತಾನೂ ಸಲ್ಪ ಗಂಜಿ ಬಡಿಸಿಕೊಂಡು ಉಂಡಳು. “ಏಯ್ ರಾಯಣ್ಣ ಚಿಮಿಣಿ ಎಣ್ಣಿ ಆಗಿ ಹೋಗದೆ, ಓದೋದು ಬಿಟ್ಟು ದೀಪ ಆರ‍್ಸಿ ಮಲಕ್ಕೋ. ಅದೇನು ಬಾಶಣ ಕಿಸಿತೀಯಾ? ಅದರಿಂದ ನಮ್ಮ ಬದುಕೇನಾದ್ರೂ ಬದಲಾದೀತೇ?” ಎಂದು ಹುಸಿ ಮುನಿಸಿನಲಿ ಗದರಿದಳು.

ರಾಯಣ್ಣ ಕಂಬಳಿ ಹೊದ್ದು ಮಲಗಿದ್ದರು ಮನದಲ್ಲಿ “ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತ್ಮೂರು ವರ‍್ಶ ಆಯ್ತು…” ಎಂಬ ಬಾಶಣದ ಸಾಲುಗಳು ಮನನ ಮಾಡುತ್ತಲೆ ಇದ್ದ. ಅವನಿಗೆ ನಿದ್ದೆಯ ಜೊಂಪು ಹತ್ತಿದ್ದು ತಿಳಿಯಲೇ ಇಲ್ಲ. ಮೈ ಮುರಿದು ದುಡಿದು ಬಂದ ನಾಗವ್ವಳಿಗೂ ಗಾಡ ನಿದ್ರೆ, ಮಗಳು ಮಂಜಿ ಮಲಗಿ ಆಗಲೆ ಎಶ್ಟೊ ಹೊತ್ತಾಯ್ತು. ಆದರೆ ನಾಯಿ ಮಾತ್ರ ಆ ಚಳಿ ಮಳೆಗೆ ಸುತ್ತಿ ಮಲಗದೆ ಅಂಗಳದಲ್ಲಿ ನಿಂತು ಒಂದೇ ಸಮನೆ ಬೊಗಳುತಿತ್ತು.

ಮಾರನೇಯ ದಿನ ಟಿ ವಿ ವಾರ‍್ತೆಯಲ್ಲಿ ಮೊಳಗುತಿತ್ತು. “ಕುಂಬದ್ರೋಣ ಮಳೆಯಿಂದಾಗಿ ಬೈರಾಪುರ ಜಲಾವ್ರುತ, ಚನ್ನ ಹಡ್ಲುವಿನ ನಾಗವ್ವನ ಗುಡಿಸಲಿನ ಮೇಲೆ ಬಾರಿ ಗುಡ್ಡ ಕುಸಿದು ಮನೆಯ ಮೂವರು ಸದಸ್ಯರು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ. ಜಿಲ್ಲಾಡಳಿತ ಜೆಸಿಬಿ ತಂದು ಕಾರ‍್ಯಚರಣೆಗಿಳಿಸಿ ಮಣ್ಣಿನ ಗುಡ್ಡೆ ಸರಿಸಿದಾಗ ಮನೆಯ ಮೂವರು ಸದಸ್ಯರು ಮ್ರುತಪಟ್ಟಿದ್ದರು” ಎಂದು. ರಾಯಣ್ಣನ ಬಲಗೈ ಮುಶ್ಟಿಯಲ್ಲಿ ತಾನು ಬರೆದುಕೊಂಡಿದ್ದ ಬಾಶಣದ ಕಾಗದದ ತುಂಡು ಹಾಗೆಯೇ ಇತ್ತು. ಆ ಕಾಗದ ಎಲ್ಲರನ್ನು ನೋಡಿ ಅಣಕಿಸುತಿತ್ತು “ಈ ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತ್ಮೂರು ವರ‍್ಶಗಳಾಯ್ತು…!” ಅವರ ಮನೆಯ ನಾಯಿ ಹೆಣಗಳನ್ನು ಮೂಸುತ್ತ, ಕುಂಯ್‌ಗುಡುತ್ತ ಸುತ್ತ ಸುತ್ತುತಿತ್ತು. ಈ ದ್ರುಶ್ಯ ನೋಡಿ ಎಂತಹವರಿಗಾದರೂ ಮನ ಕಲಕುವಂತಿತ್ತು.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: