“ಪ್ರತ್ಯಕ್ಶವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು”

ಶ್ಯಾಮಲಶ್ರೀ.ಕೆ.ಎಸ್.

ಒಂಟಿತನ, Loneliness

“ದೇವಮ್ಮ ನೀನು ಮಾಡೋ ಮಜ್ಜಿಗೆ ಹುಳಿ ನಾಲಿಗೆಗೆ ಅದು ಏನು ಮಜಾನೇ..ನಿನ್ ಕೈ ರುಚಿಯೇ ರುಚಿ” ಎಂದು ಕೆಲಸದಾಕೆನ ಹೊಗಳುತ್ತಾ ಮನೆ ಯಜಮಾನಿ ಸುಲೋಚನ ಆಗ ತಾನೆ ಕಚೇರಿ ಮುಗಿಸಿ ಬಂದು ಕೈಕಾಲು ಮುಕ ತೊಳೆದು ಅನ್ನ-ಮಜ್ಜಿಗೆ ಹುಳಿ ಜೊತೆ ಉಪ್ಪಿನಕಾಯಿ ಚಪ್ಪರಿಸಿ, ಗರಿ ಗರಿ ಅಕ್ಕಿ ಹಪ್ಪಳ ತಿಂದು ದೇವಮ್ಮನ ಕೈಗೆ ಎಲೆ ಅಡಿಕೆ, ಅವಳ ಡಬ್ಬಿಗೂ ಊಟ ತುಂಬಿ ಕೊಟ್ಟು ನಿನ್ ಕೆಲಸ ಮುಗಿದಿದ್ರೆ ಮನೆಗೆ ಹೋಗು ಅಂತ ಕಳುಹಿಸಿಕೊಟ್ಟಳು.

15 ವರ‍್ಶದ ಹಿಂದೆ ವಿದವೆಯಾಗಿದ್ದಳು ಸುಲೋಚನ. ಗಂಡನನ್ನುಅಕಾಲಿಕವಾಗಿ ಕಳೆದುಕೊಂಡ ಮೇಲೆ ಆತನ ಉದ್ಯೋಗ ಇವಳ ಪಾಲಾಗಿ ಮಗಳ ಜೊತೆ ಇದ್ದಳು. ಬಳಿಕ ಮಗಳು ಸೌಜನ್ಯಗೂ ಒಳ್ಳೆ ವರ ಹುಡುಕಿ ಮದುವೆ ಮಾಡಿ ಜವಾಬ್ದಾರಿ ಮುಗಿಸಿದ್ದಳು. 10 ವರ‍್ಶದಿಂದ ಮನೆ ಕೆಲಸಕ್ಕೆ ಬರುತ್ತಿದ್ದ ನಂಬಿಕಸ್ತೆ ದೇವಮ್ಮ ಅಂದರೆ ತಂಗಿಗಿಂತಲೂ ಹೆಚ್ಚು. ಒಂದು ದಿನ ದೇವಮ್ಮ ಬರಲಿಲ್ಲ ಅಂದರೆ ಏನೋ ತಳಮಳ. ದೇವಮ್ಮ ತುಂಬಾ ಪ್ರಾಮಾಣಿಕಳು. ಅವಳಿಗೋ ಮನೆ ತುಂಬ ಮಕ್ಕಳು, ಜೊತೆಗೆ ಗಂಡ ಕುಡುಕ. ಅವಳಿಗೆ ಎಂತಹ ಕಶ್ಟ ಬಂದರೂ ಸುಲೋಚನ ನೆರವಾಗುತ್ತಿದ್ದಳು.

ಸುಲೋಚನಳ ಮನೆಯಲ್ಲಿ ಬೆಳಗ್ಗೆಯ ಉಪಹಾರದಿಂದ ಹಿಡಿದು ಎಲ್ಲಾ ಕೆಲಸನೂ ದೇವಮ್ಮ ಮಾಡುತ್ತಿದ್ದಳು. ಸುಲೋಚನ ಬಂದ ಕೂಡಲೇ ಊರಿನ ಸುದ್ದಿಯೆಲ್ಲಾ ಅವಳ ಕಿವಿಗೆ ಬೀಳಿಸದೇ ಇದ್ದರೆ ಅವಳಿಗೆ ಸಮಾದಾನನೇ ಆಗುತ್ತಿರಲಿಲ್ಲ. ಅವಳು ವಿಶಯ ಹೇಳುವ ಪರಿ ಅಂದರೆ ಸುಲೋಚನಗೆ ಹೊಟ್ಟೆ ಹುಣ್ಣಾಗುವಶ್ಟು ನಗು. ಕಚೇರಿಯಲ್ಲಾದ ಬೇಸರ ಎಲ್ಲಾ ಮರೆತು ಬಿಡುತ್ತಿದ್ದಳು. ಆಗೊಮ್ಮೆ ಈಗೊಮ್ಮೆ ಗಂಡನ ನೆನಪು ಬಂದು ಕಣ್ಣೀರು ಹಾಕುವಾಗ ದೇವಮ್ಮ ಸಂತೈಸುವ ರೀತಿ ಅವಳಲ್ಲಿ ಹೊಸ ಹುರುಪು ತುಂಬುತ್ತಿತ್ತು. ಅಕ್ಕಪಕ್ಕದ ಮನೆಯವರೂ ಇವರಿಬ್ಬರ ಬಾಂದವ್ಯ ನೋಡಿ ಬೆರಗಾಗಿದ್ದರು ಮತ್ತು ಸಹಿಸಲಾಗದವರಾಗಿದ್ದರು ಕೂಡ!

ಆ ದಿನ ಸೋಮವಾರ ದೇವಮ್ಮ ಕೆಲಸ ಮುಗಿಸಿ ಮನೆಗೆ ಹೋದವಳು, ಜ್ವರ ಬಂದಿದೆ ಎಂದು ಎರಡು ದಿನವಾದರೂ ಸುಲೋಚನಳ ಮನೆಗೆ ಕೆಲಸಕ್ಕೆ ಹೋಗಲಿಲ್ಲ. ಅದೇ ಸಮಯದಲ್ಲಿ ಸುಲೋಚನಳ ವಜ್ರದ ಓಲೆಗಳು ನಾಪತ್ತೆಯಾಗಿದ್ದವು. ಮನೆಯೆಲ್ಲಾಎಶ್ಟು ಹುಡುಕಿದರೂ ಸಿಗಲಿಲ್ಲ. ಅಕ್ಕಪಕ್ಕದವರೆಲ್ಲಾ ದೇವಮ್ಮನ ಮೇಲೆ ಅನುಮಾನ ಬರುವ ರೀತಿ ಮಾತುಗಳನ್ನಾಡಿದರು. ಸುಲೋಚನಗೂ ಅನುಮಾನದ ಹುಳ ಹೊಕ್ಕಿಬಿಟ್ಟಿತು. ಅನಾರೋಗ್ಯದಲ್ಲಿದ್ದ ದೇವಮ್ಮನನ್ನು ಬಗೆಬಗೆಯಾಗಿ ವಿಚಾರಿಸಿದಳು. ದೇವಮ್ಮ ತಾನು ತೆಗೆದುಕೊಂಡಿಲ್ಲವೆಂದು ಹೇಳಿದಳು. ಅವಳ ಮಾತಿನಲ್ಲಿ ನಂಬಿಕೆ ಬರದೇ ಸುಲೋಚನ, ಕೆಲಸಕ್ಕೆ ಬರದಂತೆ ದೇವಮ್ಮಳಿಗೆ ಹೇಳಿದಳು.

ಕೆಲವು ದಿನಗಳ ನಂತರ ಅಡಿಗೆ ಮನೆಯಲ್ಲಿದ್ದ ಚಿಕ್ಕ ಡಬ್ಬಿಯು ಕಿಟಕಿಯಿಂದ ಬಂದ ಗಾಳಿಯ ರಬಸಕ್ಕೆ ನೆಲಕ್ಕೆ ಬಿದ್ದು ಲೊಳ ಲೊಳ ಎಂದು ಶಬ್ದ ಮಾಡಿತು. ಸುಲೋಚನ ಹೋಗಿ ನೋಡಿದಾಗ ಅಚ್ಚರಿ ಕಾದಿತ್ತು. ಅವಳ ವಜ್ರದ ಓಲೆ ಆ ಡಬ್ಬಿಯಲ್ಲಿತ್ತು. ಆಗ ಸುಮಾರು ದಿನಗಳ ಹಿಂದೆ ಕಚೇರಿಗೆ ಹೋಗುವ ಅವಸರದಲ್ಲಿ ತನ್ನ ಓಲೆಗಳನ್ನು ಆ ಡಬ್ಬಿಯಲ್ಲಿಟ್ಟಿದ್ದು ನೆನಪಿಗೆ ಬಂದಿತು. ಆಕೆಗೆ ಗರ ಬಡಿದಂತಾಗಿ ನಂಬಿಕಸ್ತೆ ದೇವಮ್ಮನನ್ನು ಅವಮಾನಿಸಿದುದರ ಬಗ್ಗೆ ತನ್ನ ಬಗ್ಗೆ ತಾನೇ ಬೇಸರಿಸಿಕೊಂಡಳು. ದೇವಮ್ಮಳ ಬಳಿ ಕ್ಶಮೆ ಕೇಳುವುದೇ ಸರಿ ಎಂದೆನಿಸಿತು ಸುಲೋಚನಳಿಗೆ.

ಕ್ಶಮೆ ಕೇಳಲು ದೇವಮ್ಮನ ಮನೆಗೆ ಹೋದರೆ, ಅವಳಿಗೆ ಅಚ್ಚರಿ ಕಾದಿತ್ತು. ಅವಮಾನಗೊಂಡಿದ್ದ ಸ್ವಾಬಿಮಾನಿ ದೇವಮ್ಮ ತಾನಿದ್ದ ಮನೆ ಕಾಲಿ ಮಾಡಿ ಸಂಸಾರ ಸಮೇತ ಊರು ತೊರೆದುಬಿಟ್ಟಿದ್ದಳು. ದಶಕಗಳಿಂದ ತನ್ನ ಮನೆಯಲ್ಲಿ ಒಬ್ಬಳಾಗಿದ್ದ ದೇವಮ್ಮನನ್ನು ನೆನೆಸಿ ಮಮ್ಮಲಮರುಗಿ ಮನೆಗೆ ವಾಪಾಸ್ಸಾದಳು. ಪ್ರತ್ಯಕ್ಶ ಕಂಡರೂ ಪ್ರಮಾಣಿಸಿ ನೋಡಬೇಕು ಎಂಬ ಮಾತು ಆಕೆಗೆ ಸ್ಪಶ್ಪವಾಯಿತು.

( ಚಿತ್ರ ಸೆಲೆ: freegreatpicture.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.