ಬದಲಾವಣೆ ಜಗದ ನಿಯಮ

ಸಂಜೀವ್ ಹೆಚ್. ಎಸ್.

ಬದಲಾವಣೆ, change

ಬದುಕೇ ಹಾಗೆ ಎಲ್ಲವನ್ನು ಬದಲಿಸಿಬಿಡುತ್ತದೆ. ನಿನ್ನೆ ಇದ್ದದ್ದು ಇವತ್ತು ಇಲ್ಲ, ಇವತ್ತು ಇದ್ದದು ನಾಳೆ ಇರಲ್ಲ, ನಾಳೆ ಬರುವಂತದ್ದು ಮುಂದೊಂದು ದಿನಕ್ಕೆ ಇರುವುದಿಲ್ಲ, ಮತ್ತೆ ಬದಲಾಗಿರುತ್ತದೆ. ನಿನ್ನೆಯ ವಿಚಾರ ಮಾಯವಾಗಿ ಇಂದಿನ ವಿಚಾರ ಪ್ರತಿದ್ವನಿಸುತ್ತಿರುತ್ತದೆ. ಎಲ್ಲವೂ ನಮ್ಮ ಅವಶ್ಯಕತೆ-ಅನಿವಾರ‍್ಯಕ್ಕೆ ತಕ್ಕಹಾಗೆ. ಜೀವನ ಶೈಲಿ ಬದಲಾಗಿದೆ, ನೋಡುವ ನೋಟ ಬದಲಾಗಿದೆ, ನಮ್ಮ ಯೋಚನಾ ಲಹರಿ ಬದಲಾಗಿದೆ, ಊಟ ಆಟ ಪಾಟ ಎಲ್ಲವೂ ಬದಲಾಗಿದೆ, ಅಡುಗೆ ಬದಲಾಗಿದೆ, ಅಡುಗೆಯಲ್ಲಿನ ವೈವಿದ್ಯತೆ ಬದಲಾಗಿದೆ, ಅಡುಗೆಗೆ ಬಳಸುವ ಪದಾರ‍್ತಗಳು ಬದಲಾಗಿದೆ. ಅಶ್ಟೆಲ್ಲ ಯಾಕೆ, ಕುಡಿಯುವ ನೀರು ಕೂಡ ಬದಲಾಗಿದೆ, ಇಶ್ಟೆಲ್ಲ ಬದಲಾವಣೆಗೆ ಕಾರಣ ಕಣ್ಣಿಗೆ ಕಾಣದ ಕೊರೋನಾ ವೈರಾಣು.

ಅಬ್ಬಾ ಎಶ್ಟೆಲ್ಲಾ ಬದಲಾವಣೆ. ಕೆಲವರ ಜೀವನ ಶೈಲಿ ಬದಲಾದರೆ ಇನ್ನೂ ಕೆಲವರ ಜೀವನದ ದಿಕ್ಕೇ ಬದಲಾಗಿದೆ, ಇದರಿಂದಾಗಿ ಹಲವು ವರ‍್ಗಗಳು ಹುಟ್ಟಿಕೊಂಡಿವೆ. ಮೊದಲನೆಯದು – ಯಾವುದೇ ಕೊರೋನಾ ಬರಲಿ ಬಿಡಲಿ ತಮ್ಮ ಕೆಲಸ ಮಾಡಿಕೊಂಡು (ಆನ್ಲೈನ್) ಆದಾಯ ಗಳಿಸಿಕೊಂಡು ಇರುವುದನ್ನೇ ಅನುಸರಿಸಿಕೊಂಡು ಬದುಕುತ್ತಿರುವವರು. ಎರಡನೆಯ ವರ‍್ಗ – ಇರುವ ವ್ಯವಹಾರ ಅತವಾ ಕೆಲಸ ಕಳೆದುಕೊಂಡು ಉಳಿತಾಯ ಕರಗಿಸಿಕೊಳ್ಳುತ್ತಿರುವವರು. ಮೂರನೇ ವರ‍್ಗ –  ಯಾವುದೇ ಬೇರೆ ದಾರಿಯಿಲ್ಲದೆ ತಮ್ಮನ್ನು ತಾವು ಅಪಾಯಕ್ಕೆ (risk) ಮೈಯೊಡ್ಡಿಕೊಂಡು ಜೀವನದ ಬಂಡಿ ಸಾಗಿಸಲು ಹೊರಗಡೆ ಬಂದು ದುಡಿಯುತ್ತಿರುವವರು.

ಆದರೆ ಈ ಎಲ್ಲಾ ವರ‍್ಗದವರಲ್ಲೂ ಸಮಾನವಾಗಿ ಕಂಡಿರುವ ಬದಲಾವಣೆಯೆಂದರೆ ಆಹಾರ, ಆಹಾರ ಕ್ರಮ. ಒಂದು ಕಾಲದಲ್ಲಿ ನಿಂಬೆಯ ರಸ ಕುಡಿಯುತ್ತಿದ್ದ ನಾವು, ಕ್ರಮೇಣ ನಿಂಬೆರಸದಲ್ಲಿ ಹೋಟೆಲ್ಗಳಲ್ಲಿ ಊಟದ ನಂತರ ಕೈ ತೊಳೆಯುತ್ತಿದ್ದೆವು (finger bowl). ಆದರೆ ಕಾಲಚಕ್ರ ಮತ್ತೆ ಉರುಳಿ ಮತ್ತದೇ ನಿಂಬೆಯ ರಸವನ್ನು ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಕುಡಿಯುತ್ತಿದ್ದೇವೆ. ಅದರ ಉಪಯೋಗ ಎಲ್ಲಿ ಎಂಬುದನ್ನು ಅರಿತುಕೊಳ್ಳುವತ್ತ ಹೆಜ್ಜೆ ಇಡುತ್ತಿದ್ದೇವೆ. ಇದಲ್ಲವೇ ಬದಲಾವಣೆಯೆಂದರೆ. ಹೋಟೆಲ್ ಗಳಿಗೆ ಮೊದಲಿನಶ್ಟು ವ್ಯಾಪಾರವಿಲ್ಲ. ಮನೆಯಲ್ಲೇ ಮಾಡಿದ ಅಡುಗೆ ಶ್ರೇಶ್ಟ ಮತ್ತು ಸುರಕ್ಶಿತ ಎಂಬ ಸತ್ಯವನ್ನು ಜನರು ಅರಿತಿದ್ದಾರೆ. ಮನೆಯಲ್ಲೇ ಸಮಯಕ್ಕೆ ಸರಿಯಾಗಿ ಬಿಸಿಬಿಸಿಯಾದ ಆಹಾರವನ್ನು ತಯಾರಿಸಿ ಸೇವಿಸುತ್ತಿದ್ದಾರೆ. ಇವೆಲ್ಲ ಕೆಲವು ಉದಾಹರಣೆಯಶ್ಟೇ. ಇಂತಹ ಹಲವಾರು ಸಂಗತಿಗಳಿವೆ.

ಆರೋಗ್ಯಕ್ಕೆ ಉತ್ತಮವಾದ  ಯಾಂಟಿ-ಆಕ್ಸಿಡೆಂಟ್ಗಳ ಮತ್ತು ರೋಗನಿರೋದಕ ಶಕ್ತಿಯ ಬಂಡಾರವಾಗಿರುವ ಮಸಾಲಾ ಪದಾರ‍್ತಗಳ ಕಶಾಯವನ್ನು ಮೂಸಿ ಕೂಡ ನೋಡದ ನಾವು ಇಂದು, ಬೆಳಿಗ್ಗೆ ಸಂಜೆ ಕಶಾಯದ ಮೊರೆ ಹೋಗಿದ್ದೇವೆ. ಮಸಾಲ ಪದಾರ‍್ತಗಳ ಮಾರಾಟ ಮತ್ತು ಬಳಕೆ ಹೆಚ್ಚಾಗಿದೆ. ಮಸಾಲ ಪದಾರ‍್ತಗಳ ರಪ್ತು ಮಾರಾಟ ಹೆಚ್ಚಾಗಿದೆ. ಬಾರತದಲ್ಲಿ ಮಸಾಲ ಪದಾರ‍್ತಗಳ ಬಳಕೆ ಮೊದಲಿನಿಂದಲೂ ಹೆಚ್ಚಾಗಿದ್ದರೂ ಕೂಡ ಈಗ ಅದರ ಬಳಕೆ ದ್ವಿಗುಣಗೊಂಡಿದೆ. ಎಂತಹ ಚಳಿಗಾಲದಲ್ಲೂ ಕೂಡ ಬಿಸಿನೀರು ಬಳಸದ ಜನ ಈಗ ಬಿಸಿ ನೀರಿನ ಮಹತ್ವ ಅರಿಯುತ್ತಿದ್ದಾರೆ. ಹಣ್ಣು ತರಕಾರಿ ಸೊಪ್ಪುಗಳ‌ ಸೇವನೆ ಜನರಲ್ಲಿ ಹೆಚ್ಚಾಗಿದೆ. ವಿಟಮಿನ್ ಮತ್ತು ಕನಿಜಾಂಶಗಳ ಮಹತ್ವ ನಿದಾನವಾಗಿ ಎಲ್ಲರ ಮನಮುಟ್ಟುತ್ತದೆ. ಇಂತಹ ಬದಲಾವಣೆಗಳು ನಿಜಕ್ಕೂ ಸ್ವಾಗತಾರ‍್ಹ. ಆದರೆ ವೈರಾಣು ಇದಕ್ಕೆಲ್ಲಾ ಕಾರಣವಾಗಿರುವುದು ಬೇಸರದ ಸಂಗತಿ.

ನಮ್ಮದೇ ಪ್ರಾಚೀನ ಕಾಲದ ಆಯುರ‍್ವೇದ ಮತ್ತು ಆಯುರ‍್ವೇದ ಉತ್ಪನ್ನಗಳನ್ನು ಕಡೆಗಣಿಸಿದ ನಾವುಗಳು ಇಂದು ಆಯುರ‍್ವೇದ ಉತ್ಪನ್ನಗಳನ್ನು ಉಪಯೋಗಿಸುತ್ತಿದ್ದೇವೆ. ಚವನಪ್ರಾಶ್ ಜೇನುತುಪ್ಪದ ಮಾರಾಟ ಹೆಚ್ಚಾಗಿದೆ. ರೋಗನಿರೋದಕ ಶಕ್ತಿ ಹೆಚ್ಚು ಮಾಡುವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೊರಗಿನ ಶತ್ರುವಿಗೆ ಹೊರಗಿನ ಔಶದಿಗಿಂತ ಹೆಚ್ಚಾಗಿ ಒಳಗಿನ ಔಶದಿ ಕೆಲಸ ಚೆನ್ನಾಗಿ ಮಾಡುತ್ತದೆ ಎಂಬುದನ್ನು ಎಲ್ಲರೂ ಅರಿತುಕೊಳ್ಳುತ್ತಿದ್ದಾರೆ. ಕಾಲಕ್ಕೆ ತಕ್ಕ ಹಾಗೆ ಪರಿಸ್ತಿತಿಗೆ ಹೊಂದಿಕೊಳ್ಳುವ ಬದಲಾವಣೆ ಅವಶ್ಯಕವೇ. ಆದರೆ ಅದರಿಂದ ಬಂಡವಾಳ ಗಿಟ್ಟಿಸಿಕೊಳ್ಳುವವರು ಯಾರು ಎಂಬುದು ಪ್ರಶ್ನೆಯಶ್ಟೇ!  ಜನರು ಎಲ್ಲಾ ಆಹಾರದಲ್ಲೂ ರೋಗನಿರೋದಕ ಶಕ್ತಿ ಹುಡುಕುವ ಪ್ರಯತ್ನದಲ್ಲಿದ್ದಾರೆ. ಇದನ್ನು ಬಹಳ ಚೆನ್ನಾಗಿ ಬಳಸಿಕೊಳ್ಳುತ್ತಿರುವವರು ಕೆಲವು ಕಂಪನಿಗಳು. ನಿನ್ನೆ ಮೊನ್ನೆಯ ತನಕ ಹೇಳದ ಅತವಾ ಇಲ್ಲದ ರೋಗನಿರೋದಕ ಶಕ್ತಿ ಹೆಸರನ್ನು ತಮ್ಮ ಉತ್ಪನ್ನಗಳ ಜೊತೆ ಸೇರಿಸಿಕೊಂಡು ಜಾಹೀರಾತು ನೀಡುತ್ತಿದ್ದಾರೆ!

ಒಟ್ಟಿನಲ್ಲಿ, ಬದಲಾವಣೆ ಜಗದ ನಿಯಮ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಬದಲಾವಣೆಯೊಂದೇ ಶಾಶ್ವತ. ಈ ಬದಲಾವಣೆ ಬದುಕಿನ ಬೇರನ್ನು ಗಟ್ಟಿಗೊಳಿಸಲಿ ಎಂದು ಆಶಿಸೋಣ.

( ಚಿತ್ರಸೆಲೆ : enlightened-consciousness.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: