ಆಯ್ದಕ್ಕಿ ಲಕ್ಕಮ್ಮನ ವಚನದಿಂದ ಆಯ್ದ ಸಾಲುಗಳ ಓದು – 1ನೆಯ ಕಂತು

ಸಿ.ಪಿ.ನಾಗರಾಜ.

ಆಯ್ದಕ್ಕಿ ಲಕ್ಕಮ್ಮ ಮಾರಯ್ಯ,Aayadakki Lakkamma Marayya

ಕೂಟಕ್ಕೆ ಸತಿಪತಿ ಎಂಬ ನಾಮವಲ್ಲದೆ
ಅರಿವಿಂಗೆ ಬೇರೊಂದೊಡಲುಂಟೆ. (708/866)

ಕೂಟ=ಸಂಗ/ಜೊತೆ/ಸೇರುವುದು/ಕೂಡುವುದು; ಕೂಟಕ್ಕೆ=ಕಾಮದ ನಂಟಿಗೆ; ಸತಿ=ಮಡದಿ/ಹೆಣ್ಣು; ಪತಿ=ಗಂಡ/ಗಂಡು ; ಎಂಬ=ಎನ್ನುವ/ಎಂದು ಹೇಳುವ; ನಾಮ+ಅಲ್ಲದೆ; ನಾಮ=ಹೆಸರು; ಅಲ್ಲದೆ=ಹೊರತು; ಅರಿವು=ಯಾವುದು ಒಳ್ಳೆಯದು-ಯಾವುದು ಕೆಟ್ಟದ್ದು;ಯಾವುದು ವಾಸ್ತವ- ಯಾವುದು ಕಟ್ಟುಕತೆ ಎಂಬುದನ್ನು ತಿಳಿದುಕೊಳ್ಳುವುದು; ಅರಿವಿಂಗೆ=ಅರಿವಿಗೆ/ತಿಳುವಳಿಕೆಗೆ; ಬೇರೆ+ಒಂದು+ಒಡಲ್+ಉಂಟೆ; ಬೇರೆ=ಪ್ರತ್ಯೇಕವಾದ; ಒಡಲ್=ದೇಹ/ಶರೀರ/ಮಯ್; ಉಂಟೆ=ಇದೆಯೇ/ಇರುವುದೇ;

ಕಾಮದ ನಂಟನ್ನು ಪಡೆಯುವಾಗ ಜತೆಗೂಡುವ ಎರಡು ದೇಹಗಳಲ್ಲಿ ಒಂದನ್ನು ‘ ಹೆಣ್ಣು ‘ ಎಂದು, ಮತ್ತೊಂದನ್ನು ‘ ಗಂಡು ‘ ಎಂದು ತಿಳಿಯಬಹುದಲ್ಲದೆ, ಅರಿವನ್ನು ಪಡೆಯುವಲ್ಲಿ ಅಂದರೆ ಓದು ಬರಹದ ಕಲಿಯುವಿಕೆಯಲ್ಲಿ ‘ ಇದು ಹೆಣ್ಣು ‘  ‘ ಇದು ಗಂಡು ‘ ಎಂಬ ಎರಡು ಬಗೆಗಳನ್ನು ಕಾಣಬಾರದು. ಏಕೆಂದರೆ ವ್ಯಕ್ತಿಯು ಪಡೆದುಕೊಳ್ಳುವ ಅರಿವಿಗೆ ಮತ್ತು ಕಲಿಯುವ ವಿದ್ಯೆಗೆ ಲಿಂಗ ತಾರತಮ್ಯವಿಲ್ಲ. ವಿದ್ಯೆ ಎಂಬುದು ಗಂಡಿಗೆ ಅಗತ್ಯವಾಗಿರುವಂತೆಯೇ ಹೆಣ್ಣಿಗೂ ಅತ್ಯಗತ್ಯವಾಗಿದೆ.

ಆಯ್ದಕ್ಕಿ ಲಕ್ಕಮ್ಮನು ಮೇಲ್ಕಂಡ ನುಡಿಯನ್ನಾಡಲು ಹನ್ನೆರಡನೆಯ ಶತಮಾನದಲ್ಲಿದ್ದ ಸಾಮಾಜಿಕ ಕಟ್ಟಲೆಯು ಕಾರಣವಾಗಿದೆ. ಇಂಡಿಯಾ ದೇಶದ ಪ್ರಾಚೀನ ಕಾಲದ ಸಮಾಜದಲ್ಲಿ ಜನಸಮುದಾಯವನ್ನು ಬಹುಬಗೆಗಳಲ್ಲಿ ವಿಂಗಡಿಸಲಾಗಿತ್ತು. “ ಬ್ರಾಹ್ಮಣ-ಕ್ಶತ್ರಿಯ-ವೈಶ್ಯ-ಶೂದ್ರ “ ಎಂಬ ನಾಲ್ಕು ಬಗೆಯ ವರ‍್ಣ ವಿಂಗಡಣೆ ಮತ್ತು ‘ ಗಂಡು-ಹೆಣ್ಣು ‘ ಎಂಬ ಲಿಂಗ ವಿಂಗಡಣೆಯ ಜೊತೆಗೆ ಶೂದ್ರರು ಮತ್ತು ಎಲ್ಲಾ ವರ‍್ಣಕ್ಕೆ ಸೇರಿದ ಹೆಂಗಸರು ವೇದಗಳನ್ನು ಓದಬಾರದೆಂಬ ಅಂದರೆ ವಿದ್ಯೆಯನ್ನು ಕಲಿಯಬಾರದೆಂಬ ಸಾಮಾಜಿಕ ಕಟ್ಟಲೆಯು ಜಾರಿಯಲ್ಲಿತ್ತು.

ಇದರಿಂದಾಗಿ ಹೆಂಗಸರನ್ನು ಒಳಗೊಂಡಂತೆ ಇಡೀ ಜನಸಮುದಾಯದಲ್ಲಿ ಶೇ.80 ಕ್ಕಿಂತಲೂ ಹೆಚ್ಚು ಜನರು ವಿದ್ಯೆ, ಆಡಳಿತದ ಗದ್ದುಗೆ ಮತ್ತು ಸಂಪತ್ತಿನಿಂದ ವಂಚಿತರಾಗಿ ಹಸಿವು, ಬಡತನ ಮತ್ತು ಅಪಮಾನದಿಂದ ನರಳುತ್ತಿದ್ದರು. ಇಂತಹ ಕ್ರೂರವಾದ ಸಾಮಾಜಿಕ ಕಟ್ಟಲೆಯನ್ನು ಆಯ್ದಕ್ಕಿ ಲಕ್ಕಮ್ಮನು ನಿರಾಕರಿಸುತ್ತ, ವಿದ್ಯೆಯನ್ನು ಪಡೆದು ಎಲ್ಲರೂ ತಲೆಯೆತ್ತಿ ಬಾಳುವಂತಾಗಲು ಯಾವುದೇ ಬಗೆಯ ವರ‍್ಣ ತಾರತಮ್ಯ ಇಲ್ಲವೇ ಲಿಂಗ ತಾರತಮ್ಯ ಇರಬಾರದೆಂಬ ನಿಲುವನ್ನು ವ್ಯಕ್ತಪಡಿಸಿದ್ದಾಳೆ.

ಕೈದ ಕೊಡುವರಲ್ಲದೆ
ಕಲಿತನವ ಕೊಡುವರುಂಟೆ. (714/866)

ಕೈದು=ಹತಾರ/ಶಸ್ತ್ರ; ಕೊಡುವರ‍್+ಅಲ್ಲದೆ; ಕೊಡು=ನೀಡು; ಅಲ್ಲದೆ=ಹೊರತು; ಕಲಿತನ=ಪರಾಕ್ರಮ/ಕೆಚ್ಚು; ಕೊಡುವರ‍್+ಉಂಟೆ; ಉಂಟೇ=ಇದ್ದಾರೆಯೇ/ಇರುವರೇ ;

ಯಾವುದೇ ವ್ಯಕ್ತಿಗೆ ಈಟಿ, ಕತ್ತಿ, ಗದೆ, ಬಿಲ್ಲು ಬಾಣಗಳನ್ನು ನೀಡಿ ಹೋರಾಡುವ ತರಬೇತಿಯನ್ನು ನೀಡಬಹುದೇ ಹೊರತು, ಕಾಳಗದಲ್ಲಿ ಹೋರಾಡಲು ಅಗತ್ಯವಾದ ಮಾನಸಿಕ ಕೆಚ್ಚನ್ನು ಮತ್ತೊಬ್ಬರು ನೀಡಲು ಆಗುವುದಿಲ್ಲ. ಈ ಸಂಗತಿಯು ಒಂದು ರೂಪಕದ ತಿರುಳಿನಲ್ಲಿ ಬಳಕೆಯಾಗಿದೆ.

ವ್ಯಕ್ತಿಯು ಇತರರಿಂದ ವಿದ್ಯೆ, ಸಂಪತ್ತು, ಆಡಳಿತದ ಹುದ್ದೆಯನ್ನು ಪಡೆಬಹುದು. ಆದರೆ ಒಳ್ಳೆಯ ರೀತಿಯಲ್ಲಿ ತನ್ನ ಜೀವನವನ್ನು ರೂಪಿಸಿಕೊಂಡು ಬಾಳುವ ಹೊಣೆಗಾರಿಕೆಯು ಅವನ ಮೇಲೆಯೇ ಇರುತ್ತದೆ.

ಕಳುವ ಚೋರಂಗೆ
ಬಡವರೆಂದು ದಯವುಂಟೆ. (714/866)

ಕಳ್=ಎಗರಿಸು/ಅಪಹರಿಸು; ಕಳುವ=ಪರರ ಒಡವೆ ವಸ್ತುಗಳನ್ನು ದೋಚುವ/ಕದಿಯುವ; ಚೋರ=ಕಳ್ಳ; ಚೋರಂಗೆ=ಚೋರನಿಗೆ ; ಬಡವರ‍್+ಎಂದು; ಬಡವ=ಹಣ ಒಡವೆ ವಸ್ತುಗಳು ಇಲ್ಲದವನು/ತಿನ್ನಲು ತೊಡಲು ಗತಿಯಿಲ್ಲದವನು; ದಯ+ಉಂಟೇ; ದಯ=ಕರುಣೆ/ಕನಿಕರ; ಉಂಟೇ=ಇರುವುದೇ;

ಜನರ ಒಡವೆ ವಸ್ತುಗಳನ್ನು ದೋಚುವ ಕಳ್ಳನಿಗೆ, ಲಂಚಕೋರನಿಗೆ, ಅಕ್ರಮವಾಗಿ ಹಣ ಸಂಪಾದನೆ ಮಾಡುವ ವ್ಯಕ್ತಿಗೆ ತನ್ನ ಮತ್ತು ತನ್ನ ಕುಟುಂಬದ ಹಿತ ದೊಡ್ಡದೇ ಹೊರತು, ಅನ್ನ,ಬಟ್ಟೆ,ವಸತಿಯಿಂದ ವಂಚಿತರಾಗಿ ಹಸಿವು ಮತ್ತು ಬಡತನದ ಬೇಗೆಯಲ್ಲಿ ಬೇಯುತ್ತಿರುವ ಜನರ ಬಗ್ಗೆ ಕಿಂಚಿತ್ತಾದರೂ ಕರುಣೆಯಿರುವುದಿಲ್ಲ.

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: