ವಿಯಟ್ನಾಮಿನ ಜಾನಪದ ಕತೆ : ಬಿಂಬುಳಿ ಹಣ್ಣಿನ ಮರ ಮತ್ತು ಅಣ್ಣ-ತಮ್ಮ

ಶ್ವೇತ ಹಿರೇನಲ್ಲೂರು.

ಬಿಂಬುಳಿ ಹಣ್ಣಿನ ಮರ, Star Fruit Tree

ಒಂದಾನೊಂದು ಕಾಲದಲ್ಲಿ ವಿಯಟ್ನಾಮ್ ನಾಡಿನಲ್ಲಿ ಒಬ್ಬ ಹಣವಂತ ಉಳುಮೆಗಾರನಿದ್ದನು. ಅವನ ಸಾವಿನ ನಂತರ ತನ್ನ ಎರಡು ಗಂಡು ಮಕ್ಕಳಿಗೆ ಬಹಳ ಆಸ್ತಿಯನ್ನು ಬಿಟ್ಟು ಹೋದನು. ಅವನ ಇಬ್ಬರು ಗಂಡು ಮಕ್ಕಳು ನಡವಳಿಕೆಯಲ್ಲಿ ಒಬ್ಬರಿಗಿಂತ ಒಬ್ಬರು ಬೇರೆ ಬೇರೆಯಾಗಿದ್ದರು. ದೊಡ್ಡ ಮಗನು ಬಹಳ ಆಸೆಬುರುಕನಾಗಿದ್ದ. ಎರಡನೆಯವನು ಇದ್ದುದರಲ್ಲೇ ನಲಿಬಾಳು ಬಾಳುವಂತವನಾಗಿದ್ದ. ಅವರ ಅಪ್ಪನ ಸಾವಿನ ನಂತರ ದೊಡ್ಡ ಮಗನು ಅಪ್ಪನ ಎಲ್ಲ ಆಸ್ತಿಯನ್ನು ತಾನು ತೆಗೆದುಕೊಂಡು ತಮ್ಮನಿಗೆ ಒಂದೇ ಒಂದು ಬಿಂಬುಳಿ ಹಣ್ಣಿನ ಗಿಡವನ್ನೂ, ಅದು ಇದ್ದ ಜಾಗವನ್ನೂ ಬಿಟ್ಟು ಕೊಟ್ಟ.

ಸಣ್ಣವನು ಆ ಬಿಂಬುಳಿ ಹಣ್ಣಿನ ಗಿಡವನ್ನು ಬಹಳ ಆರಯ್ಕೆ ಮಾಡಿ ಜೋಪಾನವಾಗಿ ನೋಡಿಕೊಳ್ಳುತ್ತಿದ್ದ. ಈ ಮರ ದೊಡ್ಡದಾಗಿ ಬಹಳ ಹಣ್ಣುಗಳನ್ನು ಕೊಟ್ಟಾಗ ಅವನ್ನು ಮಾರಿ ತಾನು ಬದುಕು ನಡೆಸಬಹುದು ಎಂದು ಯೋಚಿಸುತ್ತಿದ್ದ. ದೊಡ್ಡ ಮಗನಿಗೇನೋ ಅಪ್ಪನ ಎಲ್ಲ ಆಸ್ತಿಯು ಸಿಕ್ಕಿದ್ದರಿಂದ ಅವನಿಗೆ ಯಾವುದೇ ಕೆಲಸದಲ್ಲೂ ಒಲವಿರಲಿಲ್ಲ. ಅವನು ಯಾವಾಗಲೂ ತನಗೆ ಸಿಕ್ಕಿರುವ ಆಸ್ತಿಯನ್ನು ಹೇಗೆ ಕಳೆಯುವುದು ಎನ್ನುವುದರಲ್ಲೇ ಇದ್ದ.

ಹೀಗೆ ಹಲವಾರು ಏಡುಗಳು (Years) ಕಳೆಯಲು, ಇಬ್ಬರು ಅಣ್ಣ ತಮ್ಮಂದಿರು ಮದುವೆಯಾಗಿ ತಮ್ಮ ಹೆಂಡತಿಯರ ಜೊತೆ ನಲಿಬಾಳು ಬಾಳುತ್ತಿರಲು, ಬಿಂಬುಳಿ ಹಣ್ಣಿನ ಗಿಡವೂ ಬೆಳೆದು ದೊಡ್ಡದಾಯಿತು. ಮರದ ತುಂಬಾ ಹಣ್ಣುಗಳು ಬಿಟ್ಟವು. ಅದನ್ನು ನೋಡಿ ಚಿಕ್ಕವನು ಮತ್ತವನ ಹೆಂಡತಿ ಬಹಳ ಸಂತಸಗೊಂಡರು. ‘ಇನ್ನು ನಾವು ಈ ಹಣ್ಣುಗಳನ್ನು ಮಾರಿಬಿಡೋಣ ಸ್ವಲ್ಪವಾದರೂ ಹಣ ಗಳಿಸಬಹುದು’ ಎಂದು ಮಾತನಾಡಿಕೊಂಡರು.

ಮಾರನೆಯ ದಿನ ಇಬ್ಬರು ಹೊರಗೆ ಬಂದಾಗ ದೊಡ್ಡ ಕಾಗೆಯೊಂದು ಮರದ ಮೇಲೆ ಕುಳಿತುಕೊಂಡು ಹಣ್ಣುಗಳನ್ನು ತಿನ್ನತೊಡಗಿತ್ತು. ಒಂದೇ ಹಣ್ಣನ್ನು ತಿನ್ನದೇ ಎಲ್ಲ ಹಣ್ಣುಗಳಲ್ಲೂ ಒಂದೊಂದು ಗುಕ್ಕು ತಿಂದು ಹಣ್ಣುಗಳನ್ನೆಲ್ಲ ಹಾಳು ಮಾಡತೊಡಗಿತ್ತು. ಇದನ್ನು ನೋಡಿ ತಮ್ಮನ ಹೆಂಡತಿ “ಅಯ್ಯೋ ಅಲ್ಲಿ ನೋಡಿ ಕಾಗೆಯೊಂದು ನಮ್ಮ ಹಣ್ಣುಗಳನ್ನೆಲ್ಲ ಹೇಗೆ ಹಾಳು ಮಾಡುತ್ತಿದೆ. ಮೊದಲು ಅದನ್ನು ಓಡಿಸಿ” ಎಂದಳು. ಆದರೆ ತಮ್ಮನು ಅದನ್ನು ಓಡಿಸದೆ “ಇರಲಿ ಬಿಡು ನನ್ನಕ್ಕರೆಯ ಹೆಂಡತಿ. ಅದಕ್ಕೆ ಬಹಳ ಹಸಿವಾಗಿರಬೇಕು. ಅದನ್ನು ಓಡಿಸಿದರೆ ಅದಕ್ಕೆ ಬೇರೆ ಎಲ್ಲಿಯೂ ಆಹಾರ ಸಿಗದೇ ಹೋಗಬಹುದು. ಅದಕ್ಕೆ ಇಶ್ಟ ಬಂದಶ್ಟು ತಿನ್ನಲಿ” ಎಂದನು.

ಇವರ ಮಾತುಗಳನ್ನು ಕೇಳಿಸಿಕೊಂಡ ಕಾಗೆಯು, “ನಿಮ್ಮ ಹಣ್ಣುಗಳನ್ನು ನಾನು ಬಿಟ್ಟಿಯಾಗಿ ತಿನ್ನುವುದಿಲ್ಲ. ಹಣ್ಣನ್ನು ತಿನ್ನಲು ಬಿಟ್ಟ ನಿಮಗೆ ಪ್ರತಿಯಾಗಿ ದೊಡ್ಡ ಉಡುಗೊರೆಯನ್ನೇ ಕೊಡುತ್ತೇನೆ. ನಾಳೆ ಬೆಳಗ್ಗೆ 3 ಅಡಿ ಉದ್ದದ ಚೀಲವನ್ನು ತಯಾರು ಮಾಡಿಕೊಂಡು ಬನ್ನಿ” ಎಂದು ಹೇಳಿ ಹಾರಿ ಹೋಯಿತು. ಮಾತನಾಡುವ ಕಾಗೆಯನ್ನು ನೋಡಿ ಇಬ್ಬರು ಬೆಚ್ಚಿದರು. ಸ್ವಲ್ಪ ಕಾಲದ ನಂತರ ಇಬ್ಬರು ಮನೆಯೊಳಗೆ ಹೋಗಿ ಮಾತುಕತೆ ನಡೆಸಿದರು. ‘ಈ ಕಾಗೆ ನಿಜವಾಗಿಯೂ ಮಾಯಾವಿ ಕಾಗೆಯೇ ಇರಬೇಕು. ನಮ್ಮಂತ ಬಡವರಿಗೆ ನೆರವಾಗಲು ದೇವರೇ ಕಳುಹಿಸಿರಬೇಕು. ಯಾವುದಕ್ಕೂ ಅದು ಹೇಳಿದ ಹಾಗೆ ಚೀಲವನ್ನು ತಯಾರು ಮಾಡಿಕೊಳ್ಳೋಣ’ ಎಂದುಕೊಂಡರು. ಮಾರನೆಯ ದಿನ ಬೆಳಗ್ಗೆ ಇಬ್ಬರು ಚೀಲವನ್ನು ತೆಗೆದುಕೊಂಡು ಹಣ್ಣಿನ ಮರದ ಬಳಿ ಹೋದರು. ಮಾತಿಗೆ ತಪ್ಪದೆ ಕಾಗೆಯು ಬಂದಿತು. “ಹೇ ಹುಡುಗನೇ, ಚೀಲವನ್ನು ಹಿಡಿದುಕೊಂಡು ನನ್ನ ಬೆನ್ನಿನ ಮೇಲೆ ಕುಳಿತುಕೋ. ಹೆದರಬೇಡ” ಎಂದಿತು. ಅವನು ಕಾಗೆಯ ಮೇಲೆ ಕುಳಿತ ಮೇಲೆ ಕಾಗೆಯು ಮೇಲೆ ಹಾರಿ ಬಾನಂಚಿನಲ್ಲಿ ಮರೆಯಾಯಿತು.

ಅವನನ್ನು ಹಾರಿಸಿಕೊಂಡು ಆ ಕಾಗೆಯು ಬಹು ದೂರ ಹಾರಿ, ಜನವಾಸವೇ ಇಲ್ಲದಿರುವ ಒಂದು ನಡುಗಡ್ಡೆಯಲ್ಲಿ ಇಳಿಯಿತು. ಆ ನಡುಗಡ್ಡೆಯು ಬೆಲೆಬಾಳುವ ಮುತ್ತು, ರತ್ನಗಳು ವಜ್ರ ವೈಡೂರ‍್ಯಗಳಿಂದ ತುಂಬಿತ್ತು. ಕಾಗೆಯು ಅವನಿಗೆ “ನಿನ್ನ ಚೀಲದಲ್ಲಿ ಸೇರುವಶ್ಟು ಏನನ್ನು ಬೇಕಾದರೂ ತುಂಬಿಕೊ” ಎಂದಿತು. ಬಹಳ ಸಂತೋಶದಿಂದ ಅವನು ತನ್ನ ಚೀಲದ ತುಂಬಾ ಹೊನ್ನನ್ನು ತುಂಬಿಕೊಂಡಮೇಲೆ ಕಾಗೆಯು ಅವನನ್ನು ತನ್ನ ಮೇಲೆ ಕೂರಿಸಿಕೊಂಡು ತಿರುಗಿ ಅವನ ಮನೆಗೆ ತಂದು ಬಿಟ್ಟಿತು. ಅಂದಿನಿಂದ ಅವರು ಒಳ್ಳೆಯ ಜೀವನವನ್ನು ನಡೆಸತೊಡಗಿದರು. ಹಾಗು ತಮ್ಮ ಕೈಲಾದಶ್ಟು ಬಡ ಬಗ್ಗರಿಗೂ ಸಹಾಯ ಮಾಡುತ್ತಿದ್ದರು.

ಕೆಲವು ದಿನಗಳು ಕಳೆದಂತೆ ತಮ್ಮನ ಶ್ರೀಮಂತಿಕೆಯ ಬಗ್ಗೆ ಅಣ್ಣನಿಗೆ ತಿಳಿಯಿತು. ಒಮ್ಮೆ ತಮ್ಮನನ್ನು ಎದುರುಗೊಂಡಾಗ ಅದರ ಬಗ್ಗೆ ಕೇಳಿಯೇ ಬಿಟ್ಟ. ತಮ್ಮನು ಸಹ ಯಾವುದನ್ನು ಮುಚ್ಚಿಡದೆ ಅಣ್ಣನ ಬಳಿ ನಡೆದದ್ದೆಲ್ಲವನ್ನು ಹೇಳಿದ. ಇದನ್ನೆಲ್ಲಾ ಕೇಳಿ ಅಣ್ಣನ ಮನಸ್ಸಿನಲ್ಲಿ ಕೆಟ್ಟ ಯೋಚನೆಯೊಂದು ಹೊಳೆಯಿತು. ತನ್ನೆಲ್ಲ ಆಸ್ತಿಯನ್ನು ತಮ್ಮನಿಗೆ ಕೊಟ್ಟು ಅವನಿಂದ ಆ ಬಿಂಬುಳಿ ಹಣ್ಣಿನ ಮರ ಮತ್ತು ಅವನ ಹಳೆಯ ಗುಡಿಸಲನ್ನು ಮಾತ್ರ ಅದಲು ಬದಲು ಮಾಡಿಕೊಂಡ. ತಮ್ಮ ಹೇಳಿದಂತೆ ಕಾಗೆ ಬಂದು ಹಣ್ಣನ್ನು ತಿನ್ನುವಾಗ “ಹೇ ಕಾಗೆಯೇ ನನ್ನ ಮರದ ಹಣ್ಣನ್ನು ನೀನು ಬೇಕಾದಶ್ಟು ತಿನ್ನು. ಆದರೆ ಇದಕ್ಕೆ ಬದಲಾಗಿ ನನಗೇನು ಕೊಡುವುದಿಲ್ಲವೇ” ಎಂದು ಕೇಳಿದ. 3 ಅಡಿ ಚೀಲವನ್ನು ತೆಗೆದುಕೊಂಡು ಬಾ ಎಂದಿತು ಕಾಗೆ. ಆದರೆ ಇವನು 6 ಅಡಿಯ 2 ಚೀಲಗಳನ್ನು ತೆಗೆದುಕೊಂಡು ಕಾಗೆಯ ಮೇಲೇರಿದ. ಆ ಎರಡು ಚೀಲಗಳಲ್ಲಿ ಹೊನ್ನನ್ನು ತುಂಬಿಸಿಕೊಂಡು, ತನ್ನ ಅಂಗಿಯ ಜೇಬುಗಳು, ತಲೆಯ ಮೇಲಿದ್ದ ಟೊಪ್ಪಿಯಲ್ಲೂ ಆದಶ್ಟು ತುಂಬಿಕೊಂಡ. ಅಶ್ಟು ತೂಕವನ್ನು ಹೊತ್ತುಕೊಂಡು ಕಾಗೆಯು ಮೇಲೇರಿತು. ಆದರೆ ಕಡಲಿನ ಮೇಲೆ ಹಾರುತ್ತಿರುವಾಗ, ದಾರಿಯ ನಡುವೆ ತೂಕ ಹೆಚ್ಚಾಗಿ ಕಾಗೆಗೆ ಕಶ್ಟವಾಗತೊಡಗಿತು. ಕಾಗೆಯು ಜೋರಾಗಿ ಕುಲುಕಾಡಿ ಅದರ ಮೇಲೆ ಕುಳಿತಿದ್ದ ಅಣ್ಣನು ಕಡಲಿನಲ್ಲಿ ಬಿದ್ದು ಹೋದನು.

‘ಅತಿ ಅಸೆ ಗತಿ ಕೇಡು’ ಎಂಬ ಗಾದೆಯ ಮಾತಿನಂತೆ ‘ಹೆಚ್ಚಿನದಕ್ಕಾಗಿ ಆಸೆಯನ್ನು ಪಡದೆ, ಎಲ್ಲರಿಗು ಸಹಾಯ ಮಾಡುತ್ತ, ಇರುವುದರಲ್ಲಿ ನಲಿವನ್ನು ಕಂಡುಕೊಳ್ಳಬೇಕು’ ಎಂಬುದನ್ನು ವಿಯಟ್ನಾಂ ನಾಡಿನ ಈ ಜಾನಪದ ಕತೆಯಿಂದ ತಿಳಿಯಬಹುದು.

( ಮಾಹಿತಿ ಮತ್ತು ಚಿತ್ರ ಸೆಲೆ : vietnamtourism.org.vn )

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.