ಮಂಗಗಳಿಗೊಂದು ಔತಣಕೂಟ

– .

ಮದುವೆ, ಹಬ್ಬ ಹರಿದಿನಗಳಂತಹ ವಿಶೇಶ ಸಂದರ‍್ಬಗಳಲ್ಲಿ ನೆಂಟರಿಶ್ಟರು ಒಂದುಗೂಡಿ ಔತಣಕೂಟ ಮಾಡುವುದು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ನಗರಗಳಲ್ಲಿ ಬಪೆ(buffet) ವ್ಯವಸ್ತೆ ಹೆಸರುವಾಸಿಯಾಗುತ್ತಿರುವುದು ಕಾಣುತ್ತದ್ದೇವೆ. ಇದೇ ತೆರದ ಬಪೆ ವ್ಯವಸ್ತೆಯೊಂದು ಮಂಗಗಳಿಗಾಗಿ ನಡೆಯುತ್ತಿದೆ ಎಂದರೆ ವಿಚಿತ್ರವೆನಿಸುತ್ತದೆ ಅಲ್ಲವೆ? “ಮಂಗಗಳಿಗೆ ಔತಣಕೂಟ” ಇದೇನಿದು? ಎಲ್ಲಾದರೂ ಉಂಟೇ? ಎಂಬ ಸಂಶಯ ಏಳಬಹುದು. ಎಲ್ಲಪ್ಪಾ ಇದು? ಎಂದು ಆ ಸ್ತಳವನ್ನು ಹುಡುಕಾಡಬಹುದು. ಹೌದು ನಿಜ. ತೈಲ್ಯಾಂಡಿನ ಲೋಪ್ಬರಿಯಲ್ಲಿ ‘ಮಂಕಿ ಬಪೆ ಪೆಸ್ಟಿವಲ್’(Monkey Buffet Festival) ಅಸ್ತಿತ್ವದಲ್ಲಿದೆ. ಹೆಸರೇ ಹೇಳುವಂತೆ ಇದು ಮಂಗಗಳಿಗಾಗಿ ಏರ‍್ಪಡಿಸಿರುವ ಒಂದು ಉತ್ಸವ. ವಿಲಕ್ಶಣ ಉತ್ಸವ ಅನಿಸುತ್ತದೆ ಅಲ್ಲವೆ?

ಮಂಗಗಳ ಔಣಕೂಟದ ಆಚರಣೆಯ ಹಿಂದಿರುವ ನಂಬಿಕೆ

ತೈಲ್ಯಾಂಡಿನ ಸಂಪ್ರದಾಯದಲ್ಲಿ ಉಲ್ಲೇಕಿಸಿರುವಂತೆ, ಶ್ರೀರಾಮ, ತನ್ನ ಅಪ್ರತಿಮ ಬಕ್ತ ಹನುಮಾನನಿಗೆ ಲೋಪ್ಬರಿ ಪ್ರದೇಶದಲ್ಲಿ ಒಂದಶ್ಟು ಬೂಮಿಯನ್ನು ಬಳುವಳಿಯಾಗಿ ನೀಡಿದ್ದನಂತೆ. ಸ್ತಳೀಯರ ನಂಬಿಕೆಯಂತೆ ಮಂಗಗಳು ಉತ್ತಮ ಅದ್ರುಶ್ಟ ತರುತ್ತವೆ. ಹಾಗಾಗಿ ಅವಕ್ಕೆ ಮೀಸಲಿರುವ ಈ ಬಪೆ ಉತ್ಸವವನ್ನು ತೈಲ್ಯಾಂಡಿನಲ್ಲಿ ಪ್ರತಿ ವರ‍್ಶ ನವೆಂಬರ‍್ ತಿಂಗಳ 25ರಂದು ಆಚರಿಸುತ್ತಾರೆ. ಅಲ್ಲಿನ ಪ್ರಕ್ಯಾತ ಉದ್ದ ಬಾಲದ ಮಂಗಗಳಿಗೆ, ಅಂದು ಲೋಪ್ಬರಿಯಲ್ಲಿರುವ ‘ಪ್ರ ಪ್ರಂಗ್ ಸ್ಯಾಮ್ ಯೋಟ್’ ದೇವಸ್ತಾನದ ಆವರಣದಲ್ಲಿ ಬರ‍್ಜರಿ ಔತಣಕೂಟ ನಡೆಯುತ್ತದೆ. ಅಲ್ಲಿ ಸರಿ ಸುಮಾರು ನಾಲ್ಕು ಸಾವಿರ ಕೆ.ಜಿ. ಗಳಶ್ಟು ಆಹಾರ ಮತ್ತು ಪಾನೀಯಗಳನ್ನು ಮಂಗಗಳಿಗೆ ಮೀಸಲಿಡಲಾಗುತ್ತದೆ. ಇದು ತೈಲ್ಯಾಂಡಿನ ಪ್ರವಾಸಿ ಆಕರ‍್ಶಣೆಯಲ್ಲಿ ಒಂದು.

ಈ ಆಚರಣೆ ಶುರುವಾಗಿದ್ದು 1989ರಲ್ಲಿ

ಈ ಕುತೂಹಲಕಾರಿ ಮಂಗಗಳ ಔಣಕೂಟದ ಆಚರಣೆಯ ಮೂಲ ಹುಡುಕುತ್ತಾ ಹೋದರೆ ಇದರ ಕಲ್ಪನೆಯು, 1989ರಲ್ಲಿ ಯಾಂಗ್ಯುತ್ ಕಿಟ್ವಾಟಾನನುಸ್ಯೂಂಟ್ ಎಂಬ ವ್ಯಾಪಾರಿಯಿಂದ ಜನ್ಮತಾಳಿದಂತೆ ಕಂಡು ಬರುತ್ತದೆ. ಅಂದಿನಿಂದಲೂ ಅವ್ಯಾಹತವಾಗಿ ಇದು ನಡೆದು ಬಂದಿದೆ. ಪ್ರಸ್ತುತ ಈ ಉತ್ಸವವನ್ನು ತೈಲ್ಯಾಂಡಿನ ಪ್ರವಾಸೋದ್ಯಮ ಪ್ರಾದಿಕಾರವು ಪ್ರಾಯೋಜಿಸುತ್ತದೆ. ಈ ಉತ್ಸವ ಪ್ರತಿವರ‍್ಶವೂ ಸಾವಿರಾರು ವಿದೇಶಿ ಪ್ರವಾಸಿಗರನ್ನು ಆಕರ‍್ಶಿಸುತ್ತದೆ. ಇದರಿಂದ ಪ್ರವಾಸೋದ್ಯಮವು ಹೆಚ್ಚು ಉತ್ತೇಜಿಸಲ್ಪಟ್ಟಿದೆ. ಮಂಗಗಳಿಗೆ ಬರ‍್ಜರಿ ಊಟ ನೀಡುವುದು ಅಶ್ಟೇ ಅಲ್ಲದೆ, ಮಂಗಗಳ ರೀತಿ ವೇಶಬೂಶಣ ದರಿಸಿದ ಯುವಕ ಯುವತಿಯರು ಸಂಗೀತ, ನ್ರುತ್ಯ ಪ್ರದರ‍್ಶನಗಳಲ್ಲಿ ತೊಡಗಿಸಿಕೊಳ್ಳುವುದು ಅಂದಿನ ದಿನದ ಇತರೆ ವಿಶೇಶ ಚಟುವಟಿಕೆಯಾಗಿದೆ.

ಈ ಆಚರಣೆಯಲ್ಲಿ ಪ್ರವಾಸಿಗರೂ ಪಾಲ್ಗೊಳ್ಳಬಹುದು

ಮಂಗಗಳ ಉತ್ಸವ ವೀಕ್ಶಿಸಲು ಬರುವ ಪ್ರವಾಸಿಗರು ಅಲ್ಲೇ ಲಬ್ಯವಿರುವ ತಿಂಡಿ ತಿನಿಸುಗಳನ್ನು ಕರೀದಿಸಿ ಮಂಗಗಳಿಗೆ ಆಹಾರವಾಗಿ ಉಣಬಡಿಸಬಹುದು. ಮಂಗಗಳಿಗಾಗಿ ನೀಡಲು ಕ್ಯಾರೆಟ್, ಎಲೆಕೋಸು, ಅನಾನಸ್, ಬಾಳೇ ಹಣ್ಣು, ಸೀಬೆ ಹಣ್ಣು, ಕಲ್ಲಂಗಡಿ ಇವೇ ಮುಂತಾದವುಗಳು ಕರೀದಿಗೆ ಲಬ್ಯವಿರುತ್ತದೆ. ಇವುಗಳೊಂದಿಗೆ ಗೋಡಂಬಿ, ಬಾದಾಮಿ ಬೀಜಗಳನ್ನೂ ಮಂಗಗಳಿಗೆ ಆಹಾರವಾಗಿ ನೀಡುವವರು ಇದ್ದಾರೆ. ಕೆಲವು ಮಂಗಗಳು ಚೇಶ್ಟೆ ಮಾಡುವ ಸಾದ್ಯತೆಯಿರುವುದರಿಂದ, ಅವುಗಳನ್ನು ಬೆದರಿಸಿ ದೂರ ಓಡಿಸಲು ಅವಶ್ಯವಿರುವ ಕೋಲು ಸಹ ಬಾಡಿಗೆಗೆ ಸಿಗುತ್ತದೆ. ಇದರಿಂದ ಮಂಗಗಳ ಆಕ್ರಮಣದಿಂದ ಬಚಾವಾಗಬಹುದು.

ಸುತ್ತಾಡುಗರಿಗೆ ಒಂದಶ್ಟು ಮಾಹಿತಿ

‘ಮಂಗಗಳ ಬಪೆ ಉತ್ಸವ’ ನಡೆಯುವ ಲೋಪ್ಬರಿ, ತೈಲ್ಯಾಂಡಿನ ರಾಜದಾನಿ ಬ್ಯಾಂಕಾಕಿನಿಂದ 153 ಕಿಲೋಮೀಟರ‍್ ದೂರದಲ್ಲಿದೆ. ಬ್ಯಾಂಕಾಕ್‌ಗೆ ವಿದೇಶಗಳಿಂದ ನೇರ ವಿಮಾನಯಾನ ಸಂಪರ‍್ಕ ಇರುವುದರಿಂದ, ಮೊದಲು ಇಲ್ಲಿಗೆ ಬಂದು, ನಂತರ ಹವಾ ನಿಯಂತ್ರಿತ ಬಸ್ಸುಗಳ ಮೂಲಕ ಲೋಪ್ಬರಿ ತಲುಪಬಹುದು. ಪ್ರತಿ ಇಪ್ಪತ್ತು ನಿಮಿಶಗಳಿಗೆ ಒಂದರಂತೆ ಬಸ್ಸಿನ ಸೌಕರ‍್ಯ ಕೂಡ ಇದೆ. ಬಸ್ಸನ್ನು ಹೊರತು ಪಡಿಸಿ, ಅಲ್ಲಿಗೆ ತಲುಪಲು ರೈಲು ಮತ್ತು ಕಾಸಗಿ ಕ್ಯಾಬ್‌ಗಳ ಆಯ್ಕೆ ಸಹ ಲಬ್ಯವಿದೆ. ನವೆಂಬರ‍್ ತಿಂಗಳಲ್ಲಿ ಲೋಪ್ಬರಿಯಲ್ಲಿ ಬಹಳ ಆಹ್ಲಾದಕರ ಹವಾಮಾನ ಇರುತ್ತದೆ, ಆ ದಿನಗಳಲ್ಲೇ ಮಂಗಗಳ ಬಪೆ ಉತ್ಸವ ನಡೆಯುತ್ತದೆ. ಬೆಳಗಿನ ಸಮಯದಲ್ಲಿ ಬಿಸಿಲು ಇದ್ದು, ಸಂಜೆಯ ವಾತಾವರಣ ಮುದ ನೀಡುತ್ತದೆ. ಉಶ್ಣತೆ ಮತ್ತೂ ಕಡಿಮೆಯಾದರೆ ಬೆಚ್ಚನೆಯ ಬಟ್ಟೆಯ ಅವಶ್ಯಕತೆ ಇದೆ.

ಮಾನವನಿಗೆ ಬಪೆ ಊಟ ಮಾಮೂಲು. ಅದೇ ನೂರಾರು ಮಂಗಗಳಿಗೆ, ವರ‍್ಶಕ್ಕೊಮ್ಮೆ, ಅವುಗಳ ಇಶ್ಟ ಆಹಾರ ಪದಾರ‍್ತಗಳನ್ನು ಎಶ್ಟೇ ಸಹಕಾರಿಯಾಗಿ ನೀಡಿದರೂ, ಮಂಗಗಳು ಕೆನ್ನೆಯ ತುಂಬ ತುಂಬಿಕೊಳ್ಳುವುದನ್ನು ಮರೆಯುವುದಿಲ್ಲ. ಅವುಗಳನ್ನು ಬೆದರಿಸಿದೆ, ಅವಕ್ಕಾಗಿಯೇ ಬಪೆ ಊಟದಲ್ಲಿ ವಿವಿದ ಹಣ್ಣು, ತರಕಾರಿಗಳನ್ನು ನೀಡಿದಾಗ ನೋಡಲು ಸಂತೋಶವಾಗುತ್ತದೆ. ಈ ಉತ್ಸವವು ಸಮ್ರುದ್ದಿ ಮತ್ತು ಅದ್ರುಶ್ಟದ ಸಂಕೇತ ಎಂದು ಸ್ತಳೀಯರು ಬಾವಿಸಿದ್ದಾರೆ.

(ಮಾಹಿತಿ ಮತ್ತು ಚಿತ್ರ ಸೆಲೆ: ripleys.com, holidaybays.com, travelplanet.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: