ಸುಳ್ಳು ಮತ್ತು ಸತ್ಯ

– ಪ್ರಕಾಶ್ ಮಲೆಬೆಟ್ಟು.

ಸತ್ಯವೇ ನಮ್ಮ ತಾಯಿ-ತಂದೆ
ಸತ್ಯವೇ ನಮ್ಮ  ಬಂದು-ಬಳಗ
ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು

ಪುಣ್ಯಕೋಟಿಯ ಕತೆ ಯಾರಿಗೆ ತಾನೇ ಗೊತ್ತಿಲ್ಲ ಅಲ್ವೇ? ಬಾಲ್ಯದಲ್ಲಿ ಓದಿದ ಆ ಸತ್ಯಸಂದ  ಗೋವು ಮತ್ತು ಅರ‍್ಬುತನೆಂಬ ಹುಲಿಯ ಕತೆ ಮನಸಿನ ಅದ್ಯಾವುದೋ ಒಂದು ಮೂಲೆಯಲ್ಲಿ ಬದ್ರವಾಗಿ ಉಳಿದುಕೊಂಡುಬಿಟ್ಟಿದೆ. ಸತ್ಯ ಎಶ್ಟೊಂದು ಪ್ರಬಲ ಅಲ್ವ?  ಸತ್ಯ ಆ ಕ್ರೂರಿ ಹುಲಿಯ ಮನ ಪರಿವರ‍್ತನೆ ಮಾಡಿಬಿಟ್ಟಿತು. ನಿಜ, ಬಾಲ್ಯದಿಂದಲೇ ನಾವು ಸತ್ಯದ ಪಾಟವನ್ನು ಕಲಿಯುತ್ತ ಬೆಳೆಯುತ್ತೇವೆ. ಸತ್ಯ ಹರಿಶ್ಚಂದ್ರ ರಾಜನ ಕತೆಯನ್ನೇ ತೆಗೆದುಕೊಳ್ಳಿ, ಸತ್ಯಕ್ಕೋಸ್ಕರ ತನ್ನ ಸಾಮ್ರಾಜ್ಯ, ಪ್ರೀತಿಯ ಮಡದಿಯನ್ನು ತ್ಯಾಗಮಾಡಬೇಕಾಗಿ ಬಂದರೂ ಆತ ಸತ್ಯವನ್ನು ಬಿಡುವುದಿಲ್ಲ. ಕೊನೆಗೆ ಸತ್ಯಕ್ಕಾಗಿ, ಕರ‍್ತವ್ಯ ನಿಶ್ಟೆಗೋಸ್ಕರ ಸತ್ತು ಹೋದ ತನ್ನ ಮಗನ ಶವಸಂಸ್ಕಾರ ಕೂಡ ಮಾಡಲು ತನ್ನ ಮಡದಿಗೆ ಅವಕಾಶ ನೀಡೋದಿಲ್ಲ, ಹರಿಶ್ಚಂದ್ರ. ಆತ ಸತ್ಯ, ಪ್ರಾಮಾಣಿಕತೆಗಾಗಿ ತನ್ನ ಪ್ರಾಣವನ್ನೇ ಬಿಡಲು ಕೂಡ ಸಿದ್ದನಿರುತ್ತಾನೆ. ಕೊನೆಗೆ ಏನಾಗುವುದು? ಆತನ ಸತ್ಯನಿಶ್ಟೆ ಪ್ರಾಮಾಣಿಕತೆಯನ್ನು ಮೆಚ್ಚಿ ಆ ದೇವರೇ ಪ್ರತ್ಯಕ್ಶನಾಗಿ ಅವನ ಮಗನನ್ನು ಬದುಕಿಸಿ ಕೊಡುತ್ತಾನೆ. ಹೀಗೆ ಸತ್ಯಕ್ಕೆ ಎಂದೂ ಸೋಲಿಲ್ಲ ಎನ್ನುವುದು ಹಲವಾರು ಬರಿ ಸಾಬೀತಾಗಿದೆ.

“ಯುದ್ದ ಮಾಡಿ ಗೆಲ್ಲಲು ಬೇಕಾಗಿರುವ ಪ್ರಮುಕ ಅಸ್ತ್ರ ಸತ್ಯ ಮತ್ತು ಅಹಿಂಸೆ” – ಇದು ರಾಶ್ಟ್ರಪಿತ ಮಹಾತ್ಮಾ ಗಾಂದೀಜಿಯವರ ನಂಬಿಕೆಯಾಗಿತ್ತು ಮತ್ತು ಅದನ್ನು ಅವರು ಸಾಬೀತು ಪಡಿಸಿದರೂ ಕೂಡ. ಮುಂಡಕ ಉಪನಿಶತ್ತಿನಲ್ಲಿ ಒಂದು ಅದ್ಬುತವಾದ ಮಂತ್ರ ಇದೆ.

ಸತ್ಯಮೇವ ಜಯತೆ ನಾನೃತಂ, ಸತ್ಯೇನ ಪಂಥಾ ವಿತತೋ ದೇವಯಾನಃ
ಯೇನಾಕ್ರಮಂತಿ ಋಷಯೋ ಹ್ಯಾಪ್ತಕಾಮಾ, ಯತ್ರ ತತ್ ಸತ್ಯಸ್ಯ ಪರಮಂ ನಿಧಾನಂ.

ಅಂದರೆ ಸತ್ಯ ಮಾತ್ರ ಗೆಲ್ಲುವುದು, ಸುಳ್ಳುತನ ಅಲ್ಲ. ಯಾವುದರ ಮೂಲಕ ಆಸೆಗಳನ್ನು ಸಂಪೂರ‍್ಣವಾಗಿ ಗೆದ್ದ ರುಶಿಗಳು ನಡೆದು ಸತ್ಯದ ಪರಮ ನಿದಿಯನ್ನು ಹೊಂದುವರೋ, ಆ ದೈವಿಕ ಪತವು ಸತ್ಯದ ಮೂಲಕವೇ ಸಾಗುವುದು. ಸತ್ಯದಲ್ಲಿ ಪರಮಾತ್ಮನ ನಿದಿ ವಾಸಿಸುತ್ತದೆ. ಹೌದಲ್ವಾ! ಬಾಲ್ಯದಲ್ಲೇ, ನಾವು ಆಸ್ತಿಕರಾಗಿದ್ದರೆ ನಮಗೆ ಕಂಡಿತವಾಗಿಯೂ ಹೇಳಿಕೊಟ್ಟಿರುತ್ತಾರೆ, ಮೋಕ್ಶದ ದಾರಿ “ಸತ್ಯದ ದಾರಿ” ಎಂದು. ಮನುಕುಲದ ಅಸ್ತಿತ್ವ ನಿಂತಿರೋದೇ ಪರಸ್ಪರ ವಿಶ್ವಾಸದ ಮೇಲೆ. ಕಂಪನಿಗಳ ನಡುವೆ, ದೇಶ-ವಿದೇಶಗಳ ನಡುವೆ ಎಶ್ಟೆಶ್ಟೋ ದೊಡ್ಡ ದೊಡ್ಡ ವ್ಯವಹಾರಗಳು ನಡೆಯುವುದು, ಒಂದು ವಿಶ್ವಾಸದ ಮೇಲೆ. ಸತ್ಯ ಹಾಗೂ ವಿಶ್ವಾಸ ಒಂದೇ ನಾಣ್ಯದ ಎರಡು ಮುಕಗಳು. ಒಬ್ಬ ಮನುಶ್ಯ ಸತ್ಯ ಹೇಳುತ್ತಿದ್ದಾನೆ ಎನ್ನುವ ವಿಶ್ವಾಸದಲ್ಲೇ ನಾವು ಅವನೊಂದಿಗೆ ವ್ಯವಹರಿಸುತ್ತೇವೆ ಮತ್ತು ಸಂಬಂದಗಳು ಸತ್ಯ ವಿಶ್ವಾಸದ ತಳಹದಿಯ ಮೇಲೆ ಬೆಸೆದುಕೊಳ್ಳುತ್ತವೆ.

ಸುಳ್ಳಿನ ಚಟ – ಸಂಬಂದಗಳಿಗೆ ದಕ್ಕೆ

ಮಾನವರು ಸರ‍್ವ ಗುಣ ಸಂಪನ್ನರು. ಹಾಗೆಯೇ ದುರ‍್ಗುಣಗಳ ಅಸುರರು ಕೂಡ ಮನುಜರೇ! ಕೆಲವರು ಸುಳ್ಳಿನ ಪ್ರಪಂಚದ ಮೇಲೇ ತಮ್ಮ ಕನಸಿನ ಮಹಲನ್ನು ಕಟ್ಟಲು ಪ್ರಯತ್ನಿಸುತ್ತಾರೆ ಹಾಗು ಅದರಲ್ಲಿ ಯಶಸ್ಸು ಗಳಿಸುತ್ತಾರೆ ಕೂಡ. ಹೌದು, ಕಪಟತನಕ್ಕೆ ಹ್ರುದಯ ಗೆಲ್ಲುವ ಸಾಮರ‍್ತ್ಯವಿರುವಾಗ ಒಳ್ಳೆಯತನ ಮುಸುಕಾಗಿ ಮಲಗುವುದಲ್ಲದೆ ಇನ್ನೇನು ತಾನೆ ಮಾಡಲು ಸಾದ್ಯ? ಆದರೆ ಹಿರಿಯರ ಮಾತಿನಂತೆ, ಕೊನೆಗೆ ಗೆಲ್ಲುವುದು ಸತ್ಯವೇ.

ನಮ್ಮ ನಮ್ಮ ಮನೆಗಳಲ್ಲೇ, ನಮ್ಮ ಸುತ್ತ ಮುತ್ತ ಕೆಲವೊಮ್ಮೆ ನಾವು ಸುಳ್ಳಿನ ಕೋಟೆ ಕಟ್ಟಿಕೊಂಡು ಬಿಡುತ್ತೇವೆ. ಆದರೆ ಒಂದಲ್ಲ ಒಂದು ದಿನ ನಮ್ಮ ಸುಳ್ಳಿನ ಕೋಟೆ ಕುಸಿದಾಗ ನಂಬಿದವರಿಗೆ ಆಗುವ ದುಕ್ಕವನ್ನು ಅರಿಯುವಲ್ಲಿ ಸೋಲುತ್ತೇವೆ. ನಮ್ಮವರ ವಿಶ್ವಾಸ, ನಂಬಿಕೆಯನ್ನೇ ನಾವು ಕಳೆದುಕೊಂಡು ಬಿಡುತ್ತೇವೆ. ಆದರೆ ಸುಳ್ಳೇ ಚಟವಾಗಿ ಬಿಟ್ಟಾಗ, ಪರಿಹಾರ ಸುಲಬವಾಗಿ ದಕ್ಕುವುದಿಲ್ಲ. ಹುಲಿ ಬಂತು ಹುಲಿ ಎಂಬ ಕತೆ ನಮಗೆಲ್ಲ ಗೊತ್ತಿದೆ. ಒಬ್ಬ ಹುಡುಗ ಕಾಡಿಗೆ ಹೋಗಿ ಸುಮ್ಮನೆ ಹುಲಿ ಬಂತು ಕಾಪಾಡಿ ಅಂತ ಅಂತ ಬೊಬ್ಬೆ ಹೊಡೆಯುತ್ತಾನೆ. ಎರಡು ಬಾರಿ ಅವನು ಕಿರುಚಿಕೊಂಡಾಗ ಊರಿನವರೆಲ್ಲ ಓಡೋಡಿ ಬರುತ್ತಾರೆ. ಕೊನೆಗೆ ಮೂರನೇ ಬಾರಿ ನಿಜವಾಗಿಯೂ ಹುಲಿ ಬಂದಿರುತ್ತದೆ. ಆದರೆ, ಅವನು ಎಶ್ಟು ಅರಚಾಡಿದರೂ ಸುಳ್ಳು ಹೇಳುತ್ತಿದ್ದಾನೆ ಅಂದುಕೊಂಡು ಅವನನ್ನು ಕಾಪಾಡಲು ಯಾರು ಕೂಡ ಓಡಿ ಬರುವುದಿಲ್ಲ. ಸುಳ್ಳನ್ನೇ ನಂಬಿಕೊಂಡಿದ್ದರೆ ನಮ್ಮ ಬದುಕು ಕೂಡ ಈ ಕತೆಯ ಹಾಗೇ ಆಗುವುದು.

ಎಶ್ಟೋ ಜನ ಮಕ್ಕಳು ತಂದೆ-ತಾಯಿಯ ಬಳಿ, ಗುರು ಹಿರಿಯರ ಬಳಿ, ಕೆಲಸಗಾರರು ಮಾಲೀಕರ ಹತ್ತಿರ, ಮಾಲೀಕರು ಕೆಲಸಗಾರರ ಹತ್ತಿರ, ನೆರೆಹೊರೆಯವರ ಬಳಿ, ಕಡೆಗೆ ಅಪರಿಚಿತರ ಬಳಿ ಸುಳ್ಳು ಹೇಳಿ ನಂಬಿಕೆ ದ್ರೋಹ ಬಗೆಯುತ್ತಾರೆ. ಆದರೂ ಅವರು ಪಶ್ಚತ್ತಾಪ ಪಡುವುದಿಲ್ಲ. ಕೇಳಿದರೆ ‘ನೀನೇನು ಸತ್ಯ ಹರಿಶಂದ್ರನ ಮೊಮ್ಮಗನ’ ಎಂದು ಪ್ರಶ್ನೆ ಕೇಳಿದವರನ್ನೇ ದಬಾಯಿಸಿ ಬಿಡುತ್ತಾರೆ.

ಒಂದು ಉದಾಹರಣೆ ಕೊಡೋದಾದ್ರೆ ಒಬ್ಬರು ದೂರದೂರಿನಲ್ಲಿದ್ದ ತನ್ನ ಮಗನ ಬಳಿ ಸುಳ್ಳನ್ನೇ ಹೇಳಿಕೊಂಡು ಜೀವನ ಸಾಗಿತ್ತಿದ್ದರು. ಮಗನಿಗೋ ಅಪ್ಪನೆಂದ್ರೆ ಪಂಚಪ್ರಾಣ . ಹಾಗಾಗಿ ಸುಳ್ಳುಗಳಿಗೆ ಅಶ್ಟೊಂದು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಪರಿಸ್ತಿತಿ ಎಲ್ಲಿಗೆ ಬಂತು ಅಂದ್ರೆ, ಮಗನ ಸ್ನೇಹಿತರ ಬಳಿ ಕೂಡ ಮಗನ ಬಗ್ಗೆ ಸುಳ್ಳು ಹೇಳಲು ಆರಂಬಿಸಿಬಿಟ್ಟರು. ಅವರಿಗೊಂದು ಬ್ರಮೆ, ಮಗನ ಮೂಲಕ ಪರಿಚಯವಾದವರು ಕೂಡ ಮಗನಿಗಿಂತ ತನ್ನನ್ನೇ ಹೆಚ್ಚು ನಂಬುತ್ತಾರೆ ಎಂದು. ಆದರೆ ಅವರಿಗೆ ಒಂದಂತೂ ಅರಿವಿಗೆ ಬರುತ್ತಿರಲಿಲ್ಲ . ಮಗನ ಬಗ್ಗೆ ಇಲ್ಲವೇ ಯಾವುದೇ ವಿಶಯದ ಬಗ್ಗೆ ಸುಳ್ಳು ಮಾತನಾಡಿದರೆ ತಾನೇ ನಗೆಪಾಟಲಿಗೆ ಗುರಿಯಾಗುವೆ ಎಂದು. ತನ್ನ ಮನೆಯ ಹೆಸರನ್ನು ತಾನೇ ಕೆಡಿಸಿಕೊಳ್ಳುವುದಲ್ಲದೆ, ಇತರರ ಎದುರಿಗೆ ತನ್ನ ನಾಲಗೆ ಹಗುರವಾಗಿಸಿಕೊಂಡು ತಾನು ಮರ‍್ಯಾದೆ ಕಳೆದುಕೊಳ್ಳುವುದು ಮಾತ್ರವಲ್ಲ , ಮಗನ ಮರ‍್ಯಾದೆ ಕೂಡ ಆತನ ಸ್ನೇಹಿತರ ಮುಂದೆ, ಸಂಬಂದಿಕರ ಮುಂದೆ, ನೆರೆಹೊರೆಯವರ ಮುಂದೆ ಕಳೆಯುತ್ತಿರುವುದು ಅವರ ಬುದ್ದಿ ಶಕ್ತಿಗೆ ಹೊಳೆಯುತಿರಲಿಲ್ಲ. ಅಶ್ಟೇ ಅಲ್ಲ ತನಗೆ ಅವರ ಪರಿಚಯವಾದದ್ದು ತನ್ನ ಮಗನಿಂದ. ಅವರಿಗೆಲ್ಲ ತನಗಿಂತ ತನ್ನ ಮಗ ಮುಕ್ಯ. ಅವನಿಗಾಗಿ ತನ್ನನ್ನು ಸಹಿಸಿಕೊಂಡಿದ್ದಾರೆ ಎನ್ನುವುದು ಅವರಿಗೆ ಅರ‍್ತವಾಗುತ್ತಿರಲಿಲ್ಲ. ತಾನು ಏನು ಮಾತನಾಡಿದರು ಹೇಳಬೇಡಿ ಅಂದ್ರು ಅದು ಮಗನ ಕಿವಿಗೆ ಬಿದ್ದೆ ಬೀಳುತ್ತೆ, ಅವನಿಗೆ ದುಕ್ಕವಾಗುತ್ತೆ, ಇತರರ ಮುಂದೆ ಅವನು ತಲೆಯೆತ್ತಿ ಮಾತನಾಡಲು ಸಾದ್ಯವಾಗುವುದಿಲ್ಲ ಎನ್ನುವುದೇ ಅವರಿಗೆ ಹೊಳೆಯುತ್ತಿರಲಿಲ್ಲ. ಇದು ಎಶ್ಟರಮಟ್ಟಿಗೆ ಅಂದರೆ; ಮಗನ ಗೆಳೆಯರು, ‘ಅಲ್ಲಾ ಮಾರಾಯ, ನಿನ್ನ ಅಪ್ಪನ ಕಂಡ್ರೆ ಸಾಕು ನಾವು ದೂರ ಓಡಿ ಹೋಗಿಬಿಡುತ್ತೇವೆ’ ಎನ್ನುವ ಮಟ್ಟಕ್ಕೆ ತಲುಪಿತು. ಅಶ್ಟೇ ಅಲ್ಲ ಮತೊಬ್ಬ ಪರಿಚಯಸ್ತರು ಅವನಿಗೆ ಹೇಳ್ತಾರೆ ‘ಅಲ್ಲಾ ಮಾರಾಯ, ನಾನು ನನ್ನ ಮನೆಯಲ್ಲೇ ಸುಳ್ಳು ಹೇಳಲ್ಲ, ತುಂಬಾ ನೇರವಾದ ಮನುಶ್ಯ. ಆದ್ರೆ ನಿನ್ನ ಅಪ್ಪ ನಿನ್ನ ಬಳಿ ಸುಳ್ಳು ಹೇಳಲು ನನ್ನಲ್ಲಿ ಹೇಳುತ್ತಾರೆ. ಅವರು ಬೇಕಾದರೆ ಎಶ್ಟಾದ್ರೂ ಸುಳ್ಳು ಹೇಳಲಿ, ನಾನೇಕೆ ಸುಳ್ಳು ಹೇಳಬೇಕು?’ ಎಂದು ಪ್ರಶ್ನಿಸುತ್ತಾರೆ. ಇದರಿಂದ ಮಗ ನಾಚಿಕೆಯಿಂದ ತಲೆತಗ್ಗಿಸಿ ಕ್ಶಮೆ ಕೇಳಬೇಕಾಗುತ್ತದೆ. ಇನ್ನೊಮ್ಮೆ ಮಗನ ಗೆಳೆಯನ ಬಳಿ ಯಾವುದೋ ಸಹಾಯ ಕೇಳಿ ಅದನ್ನು ಮಗನಿಗೆ ಹೇಳಬೇಡ ಅಂದಾಗ, ಆ ಸ್ನೇಹಿತ ನೇರವಾಗಿ ಅವರಿಗೆ ಹೇಳುತ್ತಾನೆ, ‘ನಾನು ನಿಮ್ಮ ಮಗನಿಗೆ ಅರಿವಾಗದಂತೆ ಯಾವುದೇ ಕೆಲಸ ಮಾಡಿ ಅವನ ಸ್ನೇಹಕ್ಕೆ ದ್ರೋಹ ಬಗೆಯುವುದಿಲ್ಲ’ ಎಂದು.  ಆತನಿಗೆ ಅವರ ಸ್ವಬಾವ ಗೊತ್ತು. ಒಂದು ವೇಳೆ ಗೊತ್ತಿಲ್ಲದವರು ಏನೆಂದು ಕೊಳ್ಳುತ್ತಾರೆ?  ಅಪ್ಪ ಮತ್ತು ಮಗನ ಸಂಬಂದ ಚೆನ್ನಾಗಿಲ್ಲವೆಂದು ತಾನೇ. ಇದು ಕೇವಲ ಒಂದು ಉದಾಹರಣೆ ಮಾತ್ರ. ಆದ್ರೆ ನಮ್ಮ ಸುತ್ತ ಮುತ್ತ ಇಂತಹ ಗಟನೆಗಳು ಬಹಳಶ್ಟು ನಡೆಯುತ್ತವೆ. ನಾವು  ಕೆಲವೊಮ್ಮೆ ಯೋಚಿಸುತ್ತೇವೆ, ಎಂತಹ ಮಕ್ಕಳು ಇವರು! ಅಪ್ಪ ಅಮ್ಮನನ್ನು ನೋಡಿಕೊಳ್ಳುವುದಿಲ್ಲ ಎಂದು. ಆದರೆ ಪ್ರತಿ ಗಟನೆಗೂ ಎರಡು ಮುಕ ಇರುತ್ತದೆ ಎನ್ನುವುದನ್ನು ಮರೆತು ಬಿಡುತ್ತೇವೆ.

ಈ ಮೇಲಿನ ಉದಾಹರಣೆಯನ್ನೇ ತೆಗೆದುಕೊಂಡರೂ, ಆ ಅಪ್ಪನಿಗೆ ಗೊತ್ತು ಮಗನಿಗೆ ತನ್ನ ಸುಳ್ಳು ಗೊತ್ತಾಗುವುದು ಎಂದು. ಆದರೆ ಸುಳ್ಳು ಚಟವಾಗಿಬಿಟ್ಟಿದೆ. ಆ ಚಟವನ್ನು ಯಾವುದೇ ಕಾರಣಕ್ಕೂ ಬಿಡಲು ಸಾದ್ಯವಾಗದಂತೆ ಮನಸ್ಸನ್ನು ಆವರಿಸಿಕೊಂಡುಬಿಟ್ಟಿದೆ. ಮಗನಿಗೆ ಸುಳ್ಳಿನ ಬಗ್ಗೆ ಗೊತ್ತಾಗಿ ಅವನು ವಿಚಾರಿಸಿದಾಗ ಕಣ್ಣೀರು ಸುರಿಸಿ , ಮಾತು ಬಿಟ್ಟು ಹೇಗೋ ಸಂಬಾಳಿಸಿ ಬಿಡಬಹುದು ಎನ್ನುವ ಬ್ರಮೆ.  ಆದರೆ ಬೇರೆ ದಿಕ್ಕಿನಲ್ಲಿ ಯೋಚನೆ ಮಾಡುವುದೇ ಇಲ್ಲ. ಮಗನಿಗೆ ಎಲ್ಲ ಅರಿವಿದೆ. ಆದರೂ ತಂದೆಯ ಮನ ನೋಯಿಸಬಾರದು ಎನ್ನುವ ಕಾರಣಕ್ಕೆ ಸಹಿಸಿಕೊಂಡಿದ್ದಾನೆ ಎಂದು ಹೊಳೆಯುವುದೇ ಇಲ್ಲ. ಪರಿಸ್ತಿತಿ ಹೀಗೆ ಮುಂದುವರೆದಾಗ ಏನಾಗುವುದು? ಪ್ರೀತಿ ಕಡಿಮೆಯಾಗುತ್ತ ಸಾಗಿ ಕರ‍್ತವ್ಯ ಪ್ರಗ್ನೆ ಮಾತ್ರ ಉಳಿದುಬಿಡುವುದು . ಕ್ರಮೇಣ ಮನಸು ಕಟಿಣವಾಗುತ್ತ ಕರ‍್ತವ್ಯ ಪ್ರಗ್ನೆ ಕೂಡ ಮರೆಯಾಗಿ ಬಿಡುವುದು. ಕೆಲವರು ಹೇಳುತ್ತಾರೆ, ಸೊಸೆ ಬಂದಾಗ ಮಗ ತಂದೆ-ತಾಯಿಗಳನ್ನು ಮರೆತು ಬಿಡುತ್ತಾನೆ ಎಂದು. ಎಶ್ಟೋ ಸಂದರ‍್ಬದಲ್ಲಿ ಇದು ನಿಜ ಕೂಡ. ಆದ್ರೆ ತಂದೆ-ತಾಯಿ ಮಕ್ಕಳ ಸಂಬಂದ ಪರಸ್ಪರ ಪ್ರೀತಿ, ವಿಶ್ವಾಸ, ತ್ಯಾಗ, ತಿಳಿವಳಿಕೆಯಿಂದ ತುಂಬಿದ್ದರೆ ಮನೆಗ ಬರುವ ಹುಡುಗಿಯನ್ನು ಮಗಳಾಗಿ ಸ್ವೀಕರಿಸುತ್ತಾರೆ ವಿನಾ ಸೊಸೆಯಾಗಿ ಅಲ್ಲ. ಅಂತಹ ಮದುರ ಬಾಂದವ್ಯ ಇರುವ ಕುಟುಂಬಕ್ಕೆ ಕಾಲಿಡುವ ಹುಡುಗಿ ಕೂಡ ತಾನು ಈ ಮನೆಯ ಸೊಸೆಯಲ್ಲ ಮಗಳು ಎನ್ನುವುದನ್ನು ಬಹು ಬೇಗನೆ ಅರ‍್ತಮಾಡಿಕೊಳ್ಳುತ್ತಾಳೆ ಎನ್ನುವುದು ಕೂಡ ನಿಜ .

ಸುಳ್ಳನ್ನು ಪ್ರೀತಿಸುವವನು ಮನುಶ್ಯ ಸಂಬಂದಗಳಿಗೆ ಬೆಲೆ ಕೊಡುವುದಿಲ್ಲ

ನಿಜ, ಸುಳ್ಳಿನ ಪ್ರಪಂಚದಲ್ಲೇ ಜೀವಿಸುವವರಿಗೆ ಸಂಬಂದಗಳು ಬೇಕಾಗಿರುವುದು ಕೇವಲ ತಮ್ಮ ಅಗತ್ಯಕ್ಕೆ ಮಾತ್ರ. ಅವರು ಸಂಬಂದಗಳಿಗೆ ಯಾವ ಬೆಲೆಯನ್ನೂ ಕೊಡುವುದಿಲ್ಲ. ಆ ತಂದೆಗೆ ತನ್ನ ಮಗನ ಮೇಲೆ ನಿಜವಾದ ಮಮಕಾರ ಇದ್ದಿದ್ದರೆ ಸುಳ್ಳಿನ ಪ್ರಪಂಚವನ್ನು ಅವನ ಸುತ್ತ ಸ್ರುಶ್ಟಿಸುತ್ತಿರಲಿಲ್ಲ. ಕೆಲವರು ತಮ್ಮ ಸುಳ್ಳನ್ನು ಸಮರ‍್ತಿಸಿಕೊಳ್ಳುವ ಸಲುವಾಗಿ, ಬಯದ ಸಮಜಾಯಿಶಿ ಕೊಡುವರು. ಆದರೆ ಒಂದು ನೆನಪಿಡಬೇಕು. ತಪ್ಪು ಮಾಡಿದಾಗ ಬಯಕ್ಕಿಂತ ಜಾಸ್ತಿ ನಾವು ಪಶ್ಚಾತ್ತಾಪ ಪಡಬೇಕು. ಆ ಕ್ಶಣಕ್ಕೆ ನಾವು ಸುಳ್ಳು ಹೇಳಿ ಬಯದಿಂದ ತಾತ್ಕಾಲಿಕ ಮುಕ್ತಿ ಪಡೆಯಬಹುದು. ಆದರೆ ಮುಂದೊಮ್ಮೆ ಆ ಸುಳ್ಳು ಬಟಾ ಬಯಲಾದಾಗ ಮುಕ ಮುಚ್ಚಿಕೊಡು ಓಡಾಡಬೇಕಾಗುತ್ತದೆ. ಬಯಪಟ್ಟು ಹೇಳಿದ ಸುಳ್ಳು, ಆ ಬಯವನ್ನು ನಮ್ಮ ಮನಸಿನಿಂದ ಕಂಡಿತವಾಗಿಯೂ ದೂರ ಮಾಡುವುದಿಲ್ಲ. ಬದಲಾಗಿ, ಸಿಕ್ಕಿ ಬೀಳುವ ಬಯ ನಮ್ಮನ್ನು ಕಾಡುತ್ತಲೇ ಇರುವುದು. ನಿಜ ಗೊತ್ತಾದಾಗ ನಮ್ಮ ಬಾಂದವ್ಯ ಹಾಳುಗೆಡುವುತ್ತದೆ. ಹಾಗಾಗಿ ಸುಳ್ಳಿನ ಚಟ ನಮ್ಮಲಿದ್ದರೆ ಮೊದಲು ಆ ಸುಳಿಯಿಂದ ಹೊರಬರುವ ಪ್ರಯತ್ನ ಪಡೋಣ. ಸತ್ಯದ ಪರಿಣಾಮ ಏನೇ ಇರಲಿ, ಸತ್ಯವನ್ನೇ ನುಡಿಯೋಣ.

(ಚಿತ್ರ ಸೆಲೆ:mindfulmuscle.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: