ಕವಿತೆ : ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ

– ನಿತಿನ್ ಗೌಡ.

Shivamogga, ಶಿವಮೊಗ್ಗ

ಮಲೆನಾಡ ಹೆಬ್ಬಾಗಿಲು ನೀ
ಹರಿವ ತುಂಗೆಯ ನಿನಾದ ನಿನ್ನ ದನಿ
ಶರಾವತಿಯ ಬಳುಕುವ ನಡು ನೀ
ತುಂಗ-ಬದ್ರಾ ಕೂಡುವ ನೆಲೆ ನೀ

ಪಿಸುಗುಡುವ ಗುಡವಿ, ಮಂಡಗದ್ದೆಯ ಚಿಲಿಪಿಲಿಯ ಕಲರವ ನೀ
ಕೊಡಚಾದ್ರಿಯ ಕಣ್ಗಳ ಸೆಳೆವ ನೋಟ ನೀ
ಪಡುವಣ ಗಟ್ಟಗಳ ಸಾಲುಗಳು, ನಿನ್ನ ಕೊರಳ ಮಾಲೆಯು
ಸಹ್ಯಾದ್ರಿಯ ಮಡಿಲು, ಅದುವೆ ನಿನ್ನ ಒಡಲು

ಜೋಗದ ಜಲಸಿರಿಯ ಬೋರ‍್ಗರೆತದ ಸೆಳೆತ ನೀ
ತೇಗ ಬನ ಸಿರಿಗಂದದ ಬೀಡು ನೀ
ಅಡಿಕೆಯ ಆಗರ ನೀ

ಕದಂಬರ ಮುನ್ನುಡಿ ನೀ
ಶಿವಪ್ಪನಾಯಕನ ಶಿಸ್ತಿನ ನಾಡು ನೀ
ಕೆಳದಿಯ ಕೆಚ್ಚು ನೀ
ಕದಂಬ-ಹೊಯ್ಸಳ-ದ್ರಾವಿಡ ವಾಸ್ತುಶಿಲ್ಪದ ತಿರುಳು ನೀ

ಶಿವಶರಣ-ಶರಣೆಯರ ನಾಡು ನೀ
ಪುರಂದರ ದಾಸರ ತವರು ನೀ
ಕವಿವರೇಣ್ಯರ ನೆಲೆಯು ನೀ
ವಿಶ್ವಮಾನವತೆ ಸಾರಿದ ನೆಲ ನೀ

ಹೆಜ್ಜೇನ ಸವಿ ನಿನ್ನುಡಿ, ಕಣ್ಗಳಿಗೆ ಹಬ್ಬ ನೀ
ಕರುನಾಡ ಸೊಬಗಿಗೆ ಗರಿಯು ನೀ
ಮಲೆನಾಡ ಹೆಬ್ಬಾಗಿಲೆ, ಎನ್ನ ತವರು ನೀ

(ಚಿತ್ರ ಸೆಲೆ: shimoga.nic.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: