ಮರೆತುಬಿಡು ನನ್ನನ್ನು

– ವೆಂಕಟೇಶ ಚಾಗಿ.

ಒಲವು, ವಿದಾಯ, Love,

“ಮರೆತುಬಿಡು ನನ್ನನ್ನು” ಎಂದು ಸುಲಬವಾಗಿ ನೀನು ಹೇಳಿ ಬಿಡಬಹುದು, ಅದನ್ನು ಹೇಳಲು ನಿನಗೆ ಸುಲಬವೆಂದು ಅನಿಸಿರಬಹುದು. ಆದರೆ ನಿನ್ನನ್ನು ಮರೆಯುವುದು ಅಶ್ಟು ಸುಲಬವೇ? ನಿನ್ನೊಂದಿಗೆ ಕಳೆದ ಕ್ಶಣಗಳನ್ನು ಅಳಿಸಲು ಸಾದ್ಯವೇ? ನಿನ್ನ ಆ ನಗು, ತುಂಟಾಟ ಮರೆತರೆ ಹೇಗೆ? ಕಂಡಿತ ಸಾದ್ಯವಿಲ್ಲ. ನಾನು ನೆನಪಿಟ್ಟುಕೊಳ್ಳಲೇಬೇಕು ಎಂದು ಬಯಸುವ ಎಶ್ಟೋ ವಿಶಯಗಳನ್ನು ಮರೆತುಬಿಟ್ಟಿದ್ದೇನೆ. ಆದರೆ, ನಿನ್ನನ್ನು ಮರೆತು ಬಿಡಲೇಬೇಕು ಎಂದು ಅಂದುಕೊಂಡರೂ ಮರೆಯಲು ಸಾದ್ಯವಾಗುತ್ತಿಲ್ಲ. ಮರೆತು ಬಿಡಬೇಕು ಎಂದಾಗಲೆಲ್ಲ ಮತ್ತೆ ನೀನು ನೆನಪಾಗುತ್ತೀಯಾ! ಮತ್ತೆ ಅದೇ ತುಡಿತ, ನವಿರಾದ ವಿರಹವೇದನೆ.

ಮರೆಯಲು ಹೇಳಿದ ನೀನು, ಮರೆತು ಬಿಡುವ ಬಗೆಯನ್ನು ಹೇಳಿಕೊಡಲೇ ಇಲ್ಲವಲ್ಲ? ನಿನ್ನ ನೆನಪುಗಳನ್ನು ನೀನೇ ಅಳಿಸಿ ಹೋಗಲಿಲ್ಲವಲ್ಲ. ನಿನ್ನ ನೆನಪಿನೊಂದಿಗೆ ಹಲವಾರು ಪ್ರಶ್ನೆಗಳು ಈಗಲೂ ನನ್ನನ್ನು ಕಾಡುತ್ತಿವೆ. ನನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಹೇಳಬೇಕಾದವಳು ನೀನೆ. “ಹಾರುತ ದೂರಾ ದೂರಾ, ನಾವಾಗುವ ಚಂದಿರ ತಾರಾ…” ಎಂದು ಹೇಳುತ್ತಿದ್ದವಳು, ನೀನೊಬ್ಬಳೇ ಹಾರಿ ಹೋದದ್ದು ಎಶ್ಟು ಸರಿ? ನೀನಿಲ್ಲದಿರಬಹುದು, ಆದರೆ ನೀನು ಹಾಡುತ್ತಿದ್ದ ಹಾಡು ಈಗಲೂ ಕಿವಿಯೊಳಗೆ ಗುನುಗುತ್ತಾ ಇದೆ. ನಿನ್ನನ್ನು ಮರೆತಿರುವೆನೆಂದು ನಾಟಕವಾಡಿದರೆ ಒಳಮನಸ್ಸಿಗೆ ತಿಳಿಯದೇ? ನಾಟಕ ಬಾಹ್ಯ ಪ್ರದರ‍್ಶನಕ್ಕಶ್ಟೇ ಸೀಮಿತ ಒಳಮನಸ್ಸಿಗಲ್ಲ.

ಏನೇ ಆದರೂ ಇರಲಿ ಬಿಡು, ನಿನ್ನ ನೆನಪುಗಳು. ನಿನ್ನ ಮರೆಯುವ ಮಾತನ್ನೇ ಮರೆತುಬಿಡುತ್ತೇನೆ. ನೀನು ಮರೆತಿರಬಹುದು ಆದರೆ ನಾನಲ್ಲ. ನನ್ನ ಕೊನೆಯ ಉಸಿರು ಇರುವವರೆಗೂ ನಿನ್ನ ನೆನಪುಗಳು ಸದಾ ಹಸಿರು. ಈ ಬಣ್ಣದ ಲೋಕದಲ್ಲಿ ನಾವಿಬ್ಬರೂ ಕಳೆದ ಕ್ಶಣಗಳು ಸುಂದರ, ಅತೀ ಸುಂದರ. ಆದರೆ ನೀನು ದೂರಾದ ಕ್ಶಣದಿಂದ ಈ ಬಣ್ಣದ ಲೋಕ ನನ್ನ ಪಾಲಿಕೆ ಕಪ್ಪು ಬಿಳುಪಾಗಿದೆ. ನಿನ್ನ ಬಾಳಿಗೆ ಬಣ್ಣದ ಲೋಕವಾಗಿಯೇ ಉಳಿಯಲಿ ಎಂದು ಆಶಿಸುವೆ. ಮುಂದೆ ಎಂದಾದರೂ ಬೇಟಿ ಆದರೆ ಕಂಡಿತ ನನ್ನನ್ನು ಗುರುತಿಸು. ನನ್ನೊಂದಿಗೆ ಮಾತನಾಡು, ಅಪರಿಚಿತರಂತೆ ಎಂದಿಗೂ ಕಾಣಬೇಡ. ಅಗಲಿಕೆ ಆಗಿರಬಗುವುದು, ಆದರೆ ನೆನಪು ಸದಾ ಶಾಶ್ವತ.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sanjeev Hs says:

    ಉತ್ತಮ ಬರವಣಿಗೆ

ಅನಿಸಿಕೆ ಬರೆಯಿರಿ: