‘ಸೂಯೆಜ್ ಕಾಲುವೆ’ – ಕುತೂಹಲಕಾರಿ ಸಂಗತಿಗಳು

– ವಿಜಯಮಹಾಂತೇಶ ಮುಜಗೊಂಡ.

ಸೂಯೆಜ್ ಕಾಲುವೆ, Suez Canal

ಕಳೆದ ಕೆಲವು ದಿನಗಳಿಂದ ಸೂಯೆಜ್ ಕಾಲುವೆ ಸುದ್ದಿಯಲ್ಲಿದೆ. ಈ ಕಾಲುವೆಯ ಮೂಲಕ ಹೋಗುತ್ತಿದ್ದ ಹಡಗು ಸುಮಾರು ಒಂದು ವಾರದ ವರೆಗೆ ಸಿಕ್ಕಿಹಾಕಿಕೊಂಡಿತ್ತು. ಮಲೇಶಿಯಾದಿಂದ ನೆದರ‍್ಲೆಂಡ್ಸ್‌ಗೆ ಸರಕು ಹೊತ್ತು ಹೊರಟಿದ್ದ ಎವರಗ್ರೀನ್ ಕಂಪನಿಗೆ ಸೇರಿದ್ದ ಹಡಗು ಬಾರೀ ಬಿರುಗಾಳಿಯಿಂದಾಗಿ ತಿರುಗಿ, ಕಾಲುವೆಯ ಎರಡೂ ಬದಿಗಳಿಗೆ ತಾಗಿ ಹಿಂದೆಯೂ ಮುಂದೆಯೂ ಸರಿಯದೆ ನಿಂತುಹೋಗಿತ್ತು. ಇದರಿಂದಾಗಿ ಕಾಲುವೆ ಸಂಪೂರ‍್ಣವಾಗಿ ಬಂದ್ ಆಗಿ ಬೇರೆ ಹಡಗುಗಳ ಓಡಾಟ ನಿಂತುಹೋಗಿತ್ತು. ಇಂತಹ ಸೂಯೆಜ್ ಕಾಲುವೆ ಕುರಿತ ಕೆಲವು ವಿಶಯಗಳು ಇಲ್ಲಿವೆ.

ಸೂಯೆಜ್ ಕಾಲುವೆಯ ಉದ್ದಗಲ ನಿಜಕ್ಕೂ ಅಗಾದ

1869 ರಲ್ಲಿ ಪೂರ‍್ಣಗೊಂಡ ಈ ಕಾಲುವೆಯ ನಿರ‍್ಮಾಣ ಸುಮಾರು 10 ವರುಶ ನಡೆದಿತ್ತು. ಈ ಕೆಲಸದಲ್ಲಿ ಸುಮಾರು 30,000 ಕೆಲಸಗಾರರು ತೊಡಗಿಕೊಂಡಿದ್ದರು. ಬಡಗಣ ಯುರೋಪ್‌ನಿಂದ ಆಪ್ರಿಕಾ ಮತ್ತು ಏಶಿಯಾದ ನಡುವಿನ ದೂರವನ್ನು ಕಡಿಮೆ ಮಾಡುವ ಉದ್ದೇಶದಿಂದ ಶುರುವಾದ ಈ ಕಾಲುವೆ ಹಲವು ಬಾರಿ ವಿಸ್ತರಣೆಗೆ ಒಳಗಾಗಿದೆ. ಇಂದು ಸೂಯೆಜ್ ಕಾಲುವೆ 193 ಕಿಲೋಮೀಟರ್ ಉದ್ದವಿದ್ದು, ಇದರಿಂದಾಗಿಯೇ ಸುಮಾರು 9,600 ಕಿಲೋಮೀಟರ್ ಪ್ರಯಾಣ ಕಡಿಮೆ ಆಗಿದೆ.

ಅಮೆರಿಕಾದ ಸ್ಟ್ಯಾಚ್ಯೂ ಆಪ್ ಲಿಬರ‍್ಟಿ ಗೆ ಸ್ಪೂರ‍್ತಿ ಸೂಯೆಜ್ ಕಾಲುವೆ

ಸೂಯೆಜ್ ಕಾಲುವೆ ಕೆಲಸ ಮುಗಿದ ಸಂಬ್ರಮವನ್ನು ಆಚರಿಸಲೆಂದು ಪ್ರೆಂಚ್ ಶಿಲ್ಪಿ ಪ್ರೆಡೆರಿಕ್-ಆಗಸ್ಟೆ ಬಾರ‍್ತೋಲ್ಡಿ, ಈಜಿಪ್ತ್ ಸರಕಾರ ಮತ್ತು ಸುಯೆಜ್‌ ಕಾಲುವೆ ಕಟ್ಟುವ ಯೋಜನೆಯನ್ನು ವಹಿಸಿಕೊಂಡಿದ್ದ ಪರ‍್ಡಿನಾಂಡ್‌ ಡಿ ಲೆಸೆಪ್ಸ್ ಅವರ ಮನವೊಲಿಸಲು ಪ್ರಯತ್ನಿಸಿದ್ದರು.  ಈಜಿಪ್ತಿನ ಸಾಂಪ್ರದಾಯಿಕ ಉಡುಗೆ ತೊಟ್ಟ ಹೆಂಗಸು ಕೈಯಲ್ಲಿ ಪಂಜು ಹಿಡಿದಿರುವಂತೆ ತೋರಿಸುವುದು ಅವರ ಹೊಳಹಾಗಿತ್ತು. ಏಶಿಯಾಗೆ ಬೆಳಕು ತರುತ್ತಿರುವ ಈಜಿಪ್ತ್ (“Egypt Bringing Light to Asia”) ಎನ್ನುವ ಸಾಲುಗಳನ್ನು ಮೂಡಿಸಲು ಯೋಜಿಸಿದ್ದರು. ಕಾರಣಾಂತರಗಳಿಂದ ಈ ಯೋಜನೆ ಮುಂದುವರೆಯದಿದ್ದರಿಂದ ಅವರು ಇದೇ ಹೊಳಹನ್ನು ಮುಂದೆ ಇಟ್ಟುಕೊಂಡು ನ್ಯೂಯಾರ‍್ಕ್‌ನಲ್ಲಿ ಸ್ಟ್ಯಾಚ್ಯೂ ಆಪ್ ಲಿಬರ‍್ಟಿ ಯನ್ನು ನಿರ‍್ಮಿಸಿದರು.

ಸೂಯೆಜ್ ಕಾಲುವೆಯ ನಿರ‍್ಮಾಣವನ್ನು ವಿರೋದಿಸಿದ್ದ ಬ್ರಿಟಿಶ್ ಸರಕಾರ

ಅಂತಾರಾಶ್ಟ್ರೀಯ ಸರಕು ಸಾಗಾಣಿಕೆಯಲ್ಲಿ ಮೇಲುಗೈ ಹೊಂದಿದ್ದ ಬ್ರಿಟಿಶ್ ಸರಕಾರ ಮೊದಮೊದಲು ಸೂಯೆಜ್ ಕಾಲುವೆಗೆ ಪ್ರತಿರೋದ ಒಡ್ಡಿತ್ತು. ಯೋಜನೆ ಮುಂದುವರೆಸಲು ದುಡ್ಡಿನ ಅವಶ್ಯಕತೆ ಇದ್ದಾಗ ಈಜಿಪ್ತಿನ ಸರಕಾರ ಶೇರುಗಳನ್ನು ಮಾರಾಟಕ್ಕೆ ಇಟ್ಟಾಗ ಬ್ರಿಟಿಶ್ ಸರಕಾರವೇ 44% ಶೇರುಗಳನ್ನು ಕೊಂಡಿತು. ಇಂದಿಗೂ ಬ್ರಿಟಿಶ್ ಸರಕಾರವೇ ದೊಡ್ಡ ಪಾಲುದಾರನಾಗಿದೆ.

ನೆಪೋಲಿಯನ್ ಬೋನಾಪಾರ‍್ಟೆ ಈ ಯೋಜನೆಯ ಬಗ್ಗೆ ಕನಸು ಕಂಡಿದ್ದ

1789ರಲ್ಲಿ ಈಜಿಪ್ತ್ಅನ್ನು ತನ್ನ ಆಳ್ವಿಕೆಗೆ ಪಡೆದಿದ್ದ ನೆಪೋಲಿಯನ್ ಬೋನಾಪಾರ‍್ಟೆ ಕಾಲುವೆ ನಿರ‍್ಮಾಣದ ಯೋಜನೆ ತಯಾರಿಸಲು ಪರಿಣಿತರನ್ನು ಕಳಿಸಿದ್ದ. ಅವರು ನೀಡಿದ ತಪ್ಪು ವರದಿಯಿಂದ ಯೋಜನೆಯನ್ನು ಕೈಬಿಡಲಾಯಿತು. ಕೆಲ ವರುಶಗಳ ನಂತರ ಬಂದ ಮತ್ತೊಂದು ವರದಿಯಂತೆ ಸಮುದ್ರಮಟ್ಟದ ವ್ಯತ್ಯಾಸ ಕಾಲುವೆ ಕಟ್ಟಲು ತೊಂದರೆಯಾಗದು ಎಂದು ನಿಕ್ಕಿಯಾದ ಬಳಿಕವೇ ಈ ಯೋಜನೆ ಮುಂದುವರೆಯಿತು.

ಕಾಲುವೆಯಲ್ಲಿ 8 ವರುಶ ನಿಂತುಹೋದ ಹಡಗುಗಳು

1967ರಲ್ಲಿ ಇಸ್ರೇಲ್ ಮತ್ತು ಈಜಿಪ್ತ್ ನಡುವೆ ನಡೆದ ಯುದ್ದದಿಂದಾಗಿ ಸೂಯೆಜ್ ಕಾಲುವೆಯನ್ನು ಮುಚ್ಚಲಾಗಿತ್ತು. ಈ ಹೊತ್ತಿನಲ್ಲಿ ಪ್ರಯಾಣದಲ್ಲಿದ್ದ 15 ಹಡಗುಗಳನ್ನು ಕಾಲುವೆಯ ನಡುವೆಯೇ ತಡೆ ಹಿಡಿಯಲಾಗಿತ್ತು. ಅಲ್ಲಿದ್ದ ಕೆಲಸಗಾರರು ತಮ್ಮಲ್ಲಿಯೇ ಗುಂಪುಗಳನ್ನು ಮಾಡಿಕೊಂಡು ಆಟೋಟದ ಸ್ಪರ‍್ದೆಗಳನ್ನು ನಡೆಸುತ್ತಿದ್ದರು. 1975ರಲ್ಲಿ ಹಡಗುಗಳ ಮೇಲಿದ್ದ ತಡೆಯನ್ನು ತೆಗೆದುಹಾಕಿದಾಗ ಬರೀ 2 ಹಡಗುಗಳು ಮಾತ್ರ ಸಮುದ್ರದಲ್ಲಿ ಬಳಕೆಗೆ ಯೋಗ್ಯವಾಗಿದ್ದವು!

(ಮಾಹಿತಿ ಮತ್ತು ಚಿತ್ರ ಸೆಲೆ: history.com, maritimeprofessional.com, wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: