ಕವಿತೆ: ಯುಗದ ಆದಿಯ ಸಂಬ್ರಮ

– ಶಿವಮೂರ‍್ತಿ. ಹೆಚ್. ದಾವಣಗೆರೆ.

ಬೇವುಬೆಲ್ಲ, ಯುಗಾದಿ, Ugadi

ಬೂರಮೆಯು ಹಸಿರುಡುಗೆಯ ತೊಟ್ಟು
ಬಾಸ್ಕರನ ರಶ್ಮಿಗೆ ನಾಚಿ ನಿಂತಿಹಳು
ಮರಗಿಡಗಳೆಲ್ಲ ದರಿಸಿ ಅರಿಶಿನ ಬೊಟ್ಟು
ದರಿತ್ರಿ ನವ ಸಂವತ್ಸರಕೆ ಸ್ವಾಗತಿಸಿಹಳು

ಸೂರ‍್ಯನ ಗತಿಯಾದರಿಸಿ ಸೌರಮಾನವು
ಚಂದ್ರನ ಗತಿ ಪರಿಗಣಿಸಿ ಚಾಂದ್ರಮಾನವು
ಉತ್ತರ ದಕ್ಶಿಣದಿ ಬಿನ್ನ ಯುಗಾದಿ ಆಚರಣೆಯು
ಸಡಗರ ತುಂಬಿ ವರ‍್ಶಾರಂಬಕ್ಕೆ ಪ್ರೇರಣೆಯು

ದಾಶರತಿಯು ಮಹಾಬಲಿಯ ವಾಲಿ ಸಂಹರಿಸಿ
ಸುಗ್ರೀವನಿಗೆ ಕಿಶ್ಕಿಂದ ರಾಜ್ಯ ನೀಡಿದ ದಿನವು
ಶ್ರೀರಾಮನು ದಶಕಂಟನ ದರ‍್ಪದ ಸೊಲ್ಲಡಗಿಸಿ
ಸೀತಾಮಾತೆಯ ಶೋಕ ವಿಮೋಚಿಸಿದ ದಿನವು

ಶಕರು ಹೂಣರನು ಗೌತಮೀಪುತ್ರ ಸೋಲಿಸಿ
ಶಾಲಿವಾಹನ ಶಕೆಯ ಆರಂಬಿಸಿದ ಗಳಿಗೆಯು
ಶಶಾಂಕನ ದರ‍್ಶನ ಪಡೆದು ಮನೆಮಂದಿಯೆಲ್ಲ
ಶಶಿದರನ ಪೂಜಿಸಿ ಸವಿಯುವ ಹೋಳಿಗೆಯು

ರಾಶಿಗಳ ಪಲಾಪಲಗಳ ಕೇಳುವ‌ ಕಾಲವು
ನಕ್ಶತ್ರಗಳ ಪಲ್ಲಟ ನೋಡುವ ಸಮಯವು
ನವ ಸಂವತ್ಸರದಿ ಹೊಸ ಸಂಕಲ್ಪದ ಕ್ಶಣವು
ನವ ಸಂಬ್ರಮದಿ ಹೊಸ ಬಾಳಿನ ಆರಂಬವು

ಜೀವನ ಕಹಿ ಸಿಹಿಗಳ ಸಮರಸ ಪಾಕವು
ಬೇವು ಬೆಲ್ಲವ ಹಂಚಿ ತಿಳಿಯುವ ನಾವು
ಬಡವ ಬಲ್ಲಿದ ಬೇದವ ಅಳಿಸ ಬನ್ನಿರಿ
ಬಾಳ ಚದುರಂಗದಾಟ ಆಡಿ ಕಲಿಯಿರಿ

(ಚಿತ್ರ ಸೆಲೆ: folomojo.com)

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.