ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಿಕೊಳ್ಳೋಣ

– ಸಂಜೀವ್ ಹೆಚ್. ಎಸ್.

 ನಿಂಬೆ ಹಣ್ಣು

ಅಬ್ಬಾ! ಎಶ್ಟು ಬಿಸಿಲು ಮಾರಾಯ, ಬೇಸಿಗೆಕಾಲ ಅಂತೂ ಬಹಳ ಕಶ್ಟ. ಬೇಸಿಗೆ ಕಾಲದಲ್ಲಿ ಇಂತಹ ಮಾತುಗಳು ನಮಗೆ ಹೆಚ್ಚು ಕೇಳಿಬರುತ್ತವೆ. ವಿಶ್ವದಾದ್ಯಂತ ಹವಾಮಾನ ವೈಪರೀತ್ಯದಿಂದಾಗಿ ಪ್ರತೀ ವರ‍್ಶದಂತೆ ಈ ವರ‍್ಶವು ಬಿಸಿಲಿನ ತಾಪವು ಹೆಚ್ಚಾಗಿಯೇ ಇದೆ. ಬೇಸಿಗೆ ಸಮಯದಲ್ಲಿ ಬಿಸಿಲಿನಿಂದಾಗಿ ನಮ್ಮ ಆರೋಗ್ಯದ ಮೇಲೆ ಅಡ್ಡ‌ ಪರಿಣಾಮ ಬೀರುವುದು ಸಹಜ. ಅತಿಯಾದ ಉಶ್ಣತೆಯನ್ನು ಸಹಿಸಿಕೊಳ್ಳಲು ನಮ್ಮ ದೇಹಕ್ಕೆ ತುಂಬಾ ಕಶ್ಟ ಆಗುವುದು. ಬೇಸಿಗೆಕಾಲ ಬಂದಾಗ ನಮ್ಮ ದೇಹದ ಪ್ರಕ್ರುತಿ ಹೇಗಿರುತ್ತದೆ ಎಂದು ತಿಳಿಯುವುದು ಮುಕ್ಯ. ನಮ್ಮ ಪರಿಸರದ ಉಶ್ಣತೆ ನಮ್ಮ ದೇಹದ ಉಶ್ಣತೆಗಿಂತ ಹೆಚ್ಚಾದಾಗ, ನಮ್ಮ ದೇಹ ತನ್ನ ರಕ್ಶಣೆಗಾಗಿ ತನ್ನ ದೇಹವನ್ನು ತಂಪಾಗಿರಿಸಲು ತನ್ನೊಳಗಿರುವ ನೀರನ್ನು ಬೆವರಿನ ರೂಪದಲ್ಲಿ ಹೊರಹಾಕುತ್ತದೆ. ದೇಹ ಇಂತಹ ರಕ್ಶಣೆಯ ವಿದಾನವನ್ನು ಅನುಸರಿಸುವಾಗ ನಮ್ಮ ದೇಹಕ್ಕೆ ಪೂರಕವಾದಂತಹ ಆಹಾರವನ್ನು ಒದಗಿಸುವುದು ನಮ್ಮ ಕರ‍್ತವ್ಯವಾಗಿದೆ.

ಬೇಸಿಗೆ ಕಾಲ ಬಂತೆಂದರೆ ಎಲ್ಲರೂ ತಮ್ಮ ಉಡುಗೆ ತೊಡುಗೆಯನ್ನು ಬದಲಾಯಿಸಿಕೊಳ್ಳುತ್ತಾರೆ, ತಮ್ಮ ಜೀವನಶೈಲಿಯನ್ನು ತಕ್ಕಮಟ್ಟಿಗೆ ಬದಲಾಯಿಸಿಕೊಳ್ಳುತ್ತಾರೆ. ಕೇವಲ ಇಶ್ಟು ಮಾಡಿದರೆ ಸಾಕೆ? ಕಂಡಿತ ಇಲ್ಲ, ಜೀವನಶೈಲಿಯ ಜೊತೆಗೆ ಆಹಾರ ಶೈಲಿಯನ್ನು ಕೂಡ ಬದಲಾಯಿಸಿಕೊಳ್ಳಬೇಕಾಗುತ್ತದೆ. ರುತುಚಕ್ರಕ್ಕೆ ಅನುಗುಣವಾಗಿ ಜೀವನಶೈಲಿ ಮತ್ತು ಆಹಾರ ಪದ್ದತಿಗಳನ್ನು ಅಳವಡಿಸಿಕೊಂಡರೆ, ಹುಡುಕಿಕೊಂಡು ಬರುವ ಆಪತ್ತುಗಳನ್ನು ಪಕ್ಕಕ್ಕೆ ಸರಿಸಬಹುದು.

ಬಿಸಿಲಿನಿಂದ ಆರೋಗ್ಯದ ಮೇಲೆ ಆಗುವ ತೊಂದರೆಗಳು

ಬೇಸಿಗೆ ಕಾಲದ ತೀಕ್ಶ್ಣವಾದ ಬಿಸಿಲಿನಿಂದಾಗಿ ಶರೀರದಲ್ಲಿ ವಾತ ಹೆಚ್ಚಾಗುತ್ತದೆ. ಜೀರ‍್ಣಶಕ್ತಿ ದುರ‍್ಬಲವಾಗುತ್ತದೆ. ಹಾಗಾಗಿ ಜೀರ‍್ಣಶಕ್ತಿಯನ್ನು ಹೆಚ್ಚಿಸುವ, ಶರೀರಕ್ಕೆ ತಂಪನ್ನು ಮತ್ತು ಬಲವನ್ನು ಕೊಡುವ ಆಹಾರ ಪಾನೀಯಗಳನ್ನು ಸೇವಿಸುವುದು ಕಡ್ಡಾಯ ಎಂದು ಆಯುರ‍್ವೇದ ಹೇಳುತ್ತದೆ. ಬೇಸಿಗೆಯ ಬೆನ್ನಿಗೆ ರೋಗಗಳು ಕೂಡ ಬರುತ್ತವೆ! ಹಲವು ಸಲ ನಾವು ಸೇವಿಸುವಂತಹ ಆಹಾರದಿಂದಾಗಿ ನಮಗೆ ಕೆಲವೊಂದು ರೋಗಗಳು ಬರುತ್ತವೆ. ಆಹಾರ ಗುಣಮಟ್ಟದ್ದಾಗಿದ್ದರೂ ಕೂಡ ನಮ್ಮ ದೇಹ ಮತ್ತು ಪ್ರಕ್ರುತಿ ಅದಕ್ಕೆ ಪೂರಕವಾದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿದ್ದರೆ ಆಹಾರವೂ ಕೂಡ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ಆಹಾರ ಕ್ರಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ ಬೇಸಿಗೆಯಲ್ಲೂ ಕೂಡ ನಾವು ಆರೋಗ್ಯದಿಂದಿರಲು ಸಾದ್ಯವಾಗುತ್ತದೆ. ಕೆಲವೊಂದು ಆಹಾರ ಸೇವನೆಯಿಂದ ದೇಹವು ತುಂಬಾ ಉತ್ತಮ ಎನ್ನುವಂತಹ ಬಾವನೆ ಹೊಂದುವುದು. ಉತ್ತಮ ಆಹಾರವನ್ನು ಒದಗಿಸಿದಾಗಶ್ಟೇ ನಮ್ಮ ದೇಹ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದು. ಬಿಸಿಲಿನ ಬೇಗೆಗೆ ದೇಹದಲ್ಲಿ ಆಗುವ ನಿರ‍್ಜಲೀಕರಣನಿಂದಾಗಿ (dehydration) ದೇಹದಲ್ಲಿರುವ ನೀರಿನಂಶ ಹೊರ ಹೋಗುವುದರ ಜೊತೆಗೆ ವಿಟಮಿನ್, ಸೋಡಿಯಂ ಪೊಟ್ಯಾಶಿಯಂ ಮತ್ತು ಹಲವು ಕನಿಜಾಂಶಗಳು ದೇಹದಿಂದ ನಶ್ಟವಾಗುತ್ತದೆ. ಬೇಸಿಗೆಯಲ್ಲಿ ನಾವು ಆದಶ್ಟು ಶುದ್ದವಾಗಿರುವ ನೀರು ಹಾಗೂ ಆಹಾರ ಸೇವನೆ ಮಾಡಬೇಕು. ಅದಕ್ಕಾಗಿ ನೈಸರ‍್ಗಿಕವಾಗಿ ಸಿಗುವ ಹಣ್ಣು, ತರಕಾರಿ, ಕಲ್ಲಂಗಡಿ, ಸೌತೆಕಾಯಿ ಮೂಲಂಗಿ ಇಂತವುಗಳನ್ನು ಹೆಚ್ಚಾಗಿ ಸೇವಿಸಬೇಕು. ಹಣ್ಣಿನ ರಸ/ ಪಾನಕಗಳನ್ನು ಕುಡಿಯುವುದು ಉತ್ತಮ. ಬೆಚ್ಚಗಿನ ಮಸಾಲೆ ರಹಿತ ಶುದ್ದ ಸಾತ್ವಿಕ ಆಹಾರ ಸೇವನೆ ದೇಹವನ್ನು ಕಾಪಾಡುತ್ತದೆ.

ಬೇಸಿಗೆಯಲ್ಲಿ ಬಳಸಬಹುದಾದ ಅಹಾರ ಪದಾರ‍್ತಗಳು

ಇದೇ ವೇಳೆ ಬೇಸಿಗೆಯಲ್ಲಿ ನಾವು ಸೇವಿಸುವಂತಹ ಕೆಲವೊಂದು ಆಹಾರಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಇದರಿಂದ ನಾವು ಅಂತಹ ಆಹಾರದಿಂದ ದೂರವಿದ್ದು, ಬೇಸಿಗೆಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇಲ್ಲವಾದರಲ್ಲಿ ಕಾಯಿಲೆಗಳು ಬರುವುದು ಕಚಿತ. ಹೊರಗಡೆ ಹೋಗಿ ಕೆಲಸ ಮಾಡುವಾಗ ಹೆಚ್ಚಾಗಿ ಬೆವರುವ ಕಾರಣದಿಂದ ಕೆಲವೊಂದು ಸಲ ನಿರ‍್ಜಲೀಕರಣ ಉಂಟಾಗುವುದು ಇದೆ. ಎಶ್ಟು ನೀರು ಕುಡಿದರೂ ಕೂಡ ದೇಹಕ್ಕೆ ತಂಪೆನಿಸುವುದಿಲ್ಲ. ಇಂತಹ ಸಂದರ‍್ಬದಲ್ಲಿ ಹಲವಾರು ಜನ, ತಂಪೆಟ್ಟಿಗೆಯಲ್ಲಿ(Fridge) ಇಟ್ಟಿರುವ ತಂಪು ನೀರನ್ನು ಬಹಳವಾಗಿ ಸೇವಿಸುತ್ತಾರೆ, ಆದರೆ ಇದು ಒಳ್ಳೆಯ ಅಬ್ಯಾಸ ಅಲ್ಲ. ತಂಪು ನೀರು ಗಂಟಲಿನ ಸಮಸ್ಯೆಗಳನ್ನು ತಂದೊಡ್ಡುವುದರ ಜೊತೆಗೆ ದೇಹದಲ್ಲಿ ಉಶ್ಣತೆಯನ್ನು ಹೆಚ್ಚು ಮಾಡುತ್ತದೆ. ಇದರ ಬಗ್ಗೆ ದಯವಿಟ್ಟು ಗಮನವಿಡಬೇಕು.

ಬೇಸಿಗೆಯಲ್ಲಿ ದೇಹದಲ್ಲಿ ಹೆಚ್ಚಿನ ನೀರಿನಾಂಶ ಇಟ್ಟುಕೊಳ್ಳುವುದು ಅತೀ ಅಗತ್ಯವಾಗಿರುವುದು. ಬೇಸಿಗೆಯಲ್ಲಿ ತರಕಾರಿ ಹಾಗೂ ಹಣ್ಣುಗಳ ಸೇವನೆ ಮಾಡಿದರೆ ಅದರಿಂದ ದೇಹಕ್ಕೆ ಬೇಕಾಗುವ ನೀರಿನಾಂಶ ಸಿಗುವುದು. ಇದರಿಂದ ದೇಹವು ನಿರ‍್ಜಲೀಕರಣ ಹೊಂದುವುದು ತಪ್ಪುತ್ತದೆ. ಕಿತ್ತಳೆ ಹಾಗೂ ಇತರ ಕೆಲವೊಂದು ಕೆಂಪು ಬಣ್ಣದ ಹಣ್ಣುಗಳಲ್ಲಿ ಬೀಟಾ ಕ್ಯಾರೋಟಿನ್ ಅಂಶವಿರುವುದು. ಇದು ಬಿಸಿಲಿನಿಂದ ನಮ್ಮನ್ನು ರಕ್ಶಿಸುವುದು. ತುಂಬಾ ಕಡುಬಣ್ಣದ ತರಕಾರಿಗಳ ಸೇವನೆ ಮಾಡಬೇಕು ಏಕೆಂದರೆ ಇವುಗಳಲ್ಲಿ ಹೆಚ್ಚಿನ ಮಟ್ಟದ ಆ್ಯಂಟಿ ಆಕ್ಸಿಡೆಂಟ್‌ಗಳಿರುತ್ತವೆ. ಬಳಸುವ ಪದಾರ‍್ತಗಳು ಜೀರ‍್ಣಕ್ಕೆ ಹಗುರವಾಗಿದ್ದು ಜೀರ‍್ಣಕ್ರಿಯೆಯನ್ನು ಹೆಚ್ಚಿಸುವಂತಿರಬೇಕು. ಹಳೆಯ ಅಕ್ಕಿ, ಗೋದಿಯ ಪದಾರ‍್ತಗಳು, ಮೆಂತ್ಯ, ಬೇಳೆ-ಕಾಳುಗಳ ಬಳಕೆ ಮಿತವಾಗಿರಬೇಕು, ಜೊತೆಗೆ ಇವುಗಳನ್ನು ಬಳಸುವಾಗ ಸ್ವಲ್ಪ ತುಪ್ಪವನ್ನು ಸೇರಿಸಿ ಸಂಸ್ಕರಿಸಿ ಬಳಸಬೇಕು. ಕೊತ್ತಂಬರಿ, ಕರಿಬೇವು, ಗಣಿಕೆ, ಕೀರೆ-ಕಿಲಕೀರೆ-ಮುಳ್ಳುಕೀರೆ, ದಂಟು (ಹರಿವೆ) ಇತ್ಯಾದಿ ಸೊಪ್ಪುಗಳು, ಹಾಲು, ಕಡೆದ ಮಜ್ಜಿಗೆ (ಬೆಣ್ಣೆ ತೆಗೆದಿರಬಾರದು, ಹುಳಿಯಾಗಿರಬಾರದು), ಬೆಣ್ಣೆ, ತುಪ್ಪ, ಮಾವು, ಹಲಸು, ತಂಪನ್ನುಂಟುಮಾಡುವ ಹಣ್ಣುಗಳು, ಎಳನೀರು ಅತವಾ ಶರೀರಕ್ಕೆ ತಂಪನ್ನುಂಟುಮಾಡುವ ಇನ್ನಿತರ ಪದಾರ‍್ತಗಳನ್ನು ಬಳಸಿ.

ಪಾನೀಯಗಳಲ್ಲಿ ಎಳನೀರು, ಮಜ್ಜಿಗೆ ಹಾಗೂ ಗಂಜಿ ಪದಾರ‍್ತಗಳು ಸುಲಬವಾಗಿ ಜೀರ‍್ಣವಾಗುವುದಲ್ಲದೆ ದೇಹಕ್ಕೆ ಅಗತ್ಯವಿರುವ ದ್ರವಾಂಶವನ್ನು, ಪೊಟ್ಯಾಶಿಯಂ ಹಾಗೂ ವಿಟಮಿನ್ ಬಿ-12 ಜಿವಸತ್ವವನ್ನು ನೀಡುತ್ತದೆ. ನಿಂಬೆಹಣ್ಣು, ಕಲ್ಲಂಗಡಿ, ಮೂಸಂಬಿ, ದ್ರಾಕ್ಶಿ ಇತ್ಯಾದಿ ಹಣ್ಣಿನ ರಸಗಳು ದೇಹಕ್ಕೆ ತಕ್ಶಣ ಶಕ್ತಿಯನ್ನು ನೀಡುತ್ತವೆ ಹಾಗೂ ದೇಹದಲ್ಲಿನ ದ್ರವಾಂಶವನ್ನು ಸಮತೋಲನದಲ್ಲಿಡಲು ಸಹಕಾರಿಯಾಗುತ್ತವೆ. ರಾಗಿಪಾನಕ, ಬಾಳೆಹಣ್ಣಿನ, ಮಾವಿನಹಣ್ಣಿನ ರಸಾಯನ, ಮೊಸರಿನೊಂದಿಗೆ ಕಲ್ಲುಸಕ್ಕರೆ ಹಾಗೂ ಕಬ್ಬಿನಹಾಲು ದೇಹಕ್ಕೆ ಅಗತ್ಯ ಗ್ಲುಕೋಸ್ ನೀಡುತ್ತವೆ. ಇನ್ನು, ಹಣ್ಣು ತರಕಾರಿಗಳ ವಿಶಯಕ್ಕೆ ಬಂದರೆ ಸೌತೆಕಾಯಿ, ಕುಂಬಳಕಾಯಿ, ಬೂದಗುಂಬಳ, ಸೀಮೆಬದನೆಕಾಯಿ, ಸೋರೆಕಾಯಿ, ಟೊಮಟೊ, ಕ್ಯಾರೆಟ್, ದಾಳಿಂಬೆ ಹೆಚ್ಚಿನ ನೀರಿನಂಶವಿರುವ ಮತ್ತು ದೇಹಕ್ಕೆ ತಂಪು ನೀಡುವ ಆಹಾರವಾಗಿವೆ. ಇದಶ್ಟೇ ಅಲ್ಲ ಆಯಾ ಜಾಗಕ್ಕೆ ಅನುಗುಣವಾಗುವಂತೆ ದೇಹವನ್ನು ತಂಪಾಗಿಸುವ ನೀರಿನಂಶ ಹೆಚ್ಚಿರುವ ಆಹಾರಗಳನ್ನು ನಾವೇ ಹುಡುಕಿಕೊಂಡು ಸೇವಿಸುವುದು ಒಳ್ಳೆಯದು.

ಅತಿ ಉಪ್ಪು,ಹುಳಿ, ಕಾರ ಪದಾರ‍್ತ ಸೇವನೆ ಕಡಿಮೆ ಮಾಡುವುದು ಒಳ್ಳೆಯದು. ಡಿ-ಹೈಡ್ರೇಶನ್ಗೆ ಕಾರಣವಾಗುವ ಕೆಪೆನ್ ಸೇವನೆ ಮಿತಿ ಆಗಿರಬೇಕು. ಬೇಸಿಗೆ ಕಾಲದಲ್ಲಿ ಹೆಚ್ಚಿನ ತಿಂಡಿತಿನಿಸುಗಳು ಸಿಗುವುದು ಸಾಮಾನ್ಯ. ಆದರೆ ಬೇಸಿಗೆಯಲ್ಲಿ ಕರಿದಿರುವಂತಹ ತಿಂಡಿತಿನಿಸುಗಳನ್ನು ಕಡೆಗಣಿಸಬೇಕು. ಇಲ್ಲವಾದಲ್ಲಿ, ಇದರಿಂದಾಗಿ ಹೊಟ್ಟೆ ಉಬ್ಬರ, ಅಜೀರ‍್ಣ ಮತ್ತು ಇತರ ಕೆಲವೊಂದು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಒಟ್ಟಾರೆ ಆಹಾರದ ಬಗೆಗಿನ ಅರಿವು ಮತ್ತು ಚಾಣಾಕ್ಶತನ ಇದ್ದರೆ ಬೇಸಿಗೆಯನ್ನು ಕೂಡ ತಂಪಾಗಿಸಬಹುದು.

(ಚಿತ್ರಸೆಲೆ:  unsplash.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: