ಕಾಮನ ಬಿಲ್ಲಿನ ಬಣ್ಣಗಳ ಗುಲಾಬಿ

– .

rainbow flower

ಕಾಮನ ಬಿಲ್ಲನ್ನು ನೋಡಿ ಮರುಳಾಗದವರು ಯಾರಿದ್ದಾರೆ ಈ ಪ್ರಪಂಚದಲ್ಲಿ? ಅದರಲ್ಲಿನ ಬಣ್ಣಗಳು ಮನುಶ್ಯನಿಗೆ ಕೊಡುವಶ್ಟು ಮುದ ಬೇರಾವ ಬಣ್ಣಗಳ ಸಮೂಹವು ಕೊಡಲಾರದು. ಇದೇ ರೀತಿಯಲ್ಲಿ ಗುಲಾಬಿ ಹೂವಿನ ಮೂಲ ಬಣ್ಣ ಗುಲಾಬಿಯಾದರೂ, ಇನ್ನೂ ಅನೇಕಾನೇಕ ಬಣ್ಣಗಳಲ್ಲಿ ಇದು ಬೆಳೆಯುವುದನ್ನು ಕಾಣಬಹುದು. ಕಾಮನ ಬಿಲ್ಲಿನ ಏಳು ಬಣ್ಣಗಳ ಜೊತೆಗೆ ಅವುಗಳ ಸಂಯೋಜನೆಯಿಂದ ಸ್ರುಶ್ಟಿಯಾದ ಬಗೆಬಗೆಯ ನೂರಾರು ಬಣ್ಣಗಳಲ್ಲೂ ಗುಲಾಬಿ ಹೂವನ್ನು ನೋಡಿ ಕಣ್ತುಂಬಿಸಿಕೊಳ್ಳಬಹುದು. ಗುಲಾಬಿ ಅನೇಕ ಬಣ್ಣಗಳಲ್ಲಿ ದೊರೆಯುವುದರಿಂದ, ‘ಗುಲಾಬಿ’ ಎನ್ನುವ ಹೆಸರು ಸರಿಯೇ ಎಂಬ ಜಿಜ್ನಾಸೆ ಮೂಡುತ್ತದೆ ಅಲ್ಲವೆ?

ಕಾಮನ ಬಿಲ್ಲಿಗೂ, ಗುಲಾಬಿ ಹೂವಿಗೂ ಎಣ್ಣೆ ಸೀಗೆಕಾಯಿ ಸಂಬಂದ ಇರಬೇಕು. ಏಕೆಂದರೆ ಕಾಮನ ಬಿಲ್ಲಿನಲ್ಲಿರುವ ಅಶ್ಟೂ ಬಣ್ಣಗಳ ಬಿಡಿ ಬಣ್ಣಗಳು, ಬೇರೆ ಬೇರೆ ಗುಲಾಬಿ ಹೂವಿನಲ್ಲಿ ಕಾಣ ಸಿಕ್ಕರೂ, ಕಾಮನ ಬಿಲ್ಲಿನ ಎಲ್ಲಾ ಬಣ್ಣಗಳೂ ಒಂದೇ ಗುಲಾಬಿ ಹೂವಿನಲ್ಲಿ ಕಂಡು ಬಂದಿಲ್ಲದೇ ಇರುವುದು.  ತಾಳಿ, ತಾಳಿ! ಇಲ್ಲೊಂದು ಉಲ್ಲೇಕವಿದೆ. ಅದರಲ್ಲಿನ ಗುಲಾಬಿ, ಮೂಲ ಕಾಮನ ಬಿಲ್ಲಿನ ಎಲ್ಲಾ ಬಣ್ಣಗಳನ್ನೂ ಹೊಂದಿದೆಯಂತೆ ಹಾಗೂ ಇದು ಅತ್ಯಂತ ಜನಪ್ರಿಯವಂತೆ. ನಿಜವೇ ಅಲ್ಲವೇ? ಕಾಮನ ಬಿಲ್ಲಿನ ಅಶ್ಟೂ ಬಣ್ಣ ಒಂದೇ ಗುಲಾಬಿ ಹೂವಿನಲ್ಲಿ ಅಡಕವಾಗಿದ್ದರೆ, ಅದರ ಸೊಬಗನ್ನು ಯಾವ ಕವಿಗೆ ವರ‍್ಣಿಸಲು ಸಾದ್ಯ! ನೀವೇ ಹೇಳಿ? ಆದರಿಲ್ಲೊಂದು ಟ್ವಿಸ್ಟ್ ಇದೆ. ಈ ಕಾಮನ ಬಿಲ್ಲಿನ ಗುಲಾಬಿ ಹೂವು ಗುಲಾಬಿಯೇ ಆದರೂ, ಅದನ್ನು ಪ್ರದರ‍್ಶನಕ್ಕಾಗಿ ಹೂವಿನ ಕುಂಡದಲ್ಲಿ ಇಟ್ಟರೆ, ಸಾಮಾನ್ಯ ಗುಲಾಬಿ ಹೂವಿನಶ್ಟು ಹೆಚ್ಚು ಹೊತ್ತು ತಾಜಾತನದಿಂದ ಕೂಡಿರುವುದಿಲ್ಲ. ಇದಕ್ಕೆ ಕಾರಣವೇನೆಂದರೆ, ಅದರ ದಳಗಳಿಗೆ ಕ್ರುತಕವಾಗಿ ಬಣ್ಣ ಮಾಡಲಾಗಿರುವುದು.

ಕಾಮನ ಬಿಲ್ಲಿನ ಬಣ್ಣದ ಗುಲಾಬಿ ಬೆಳೆಯುವ ಪರಿ

ಕಾಮನ ಬಿಲ್ಲಿನ ಬಣ್ಣದ ಗುಲಾಬಿ ಹೂವನ್ನು ನೈಸರ‍್ಗಿಕವಾಗಿ ಬೀಜಗಳಿಂದ ಅತವಾ ಕಡ್ಡಿಗಳಿಂದ ಬೆಳೆಯಲು ಸಾದ್ಯವಿಲ್ಲ. ಆದರೆ ಕೆಲವೊಂದು ಬಣ್ಣಗಳ ಸಂಯೋಜನೆಯ ಗುಲಾಬಿ ಹೂವನ್ನು ನೈಸರ‍್ಗಿಕವಾಗಿ ಕೂಡ ಬೆಳೆಯಬಹುದು. ಕೆಂಪು-ಗುಲಾಬಿ, ಹಳದಿ-ಹಸಿರು ಮತ್ತು ನೀಲಿ ಬಣ್ಣಗಳ ಸಂಯೋಜನೆ ಸಾದ್ಯವಿದೆ. ಇದರೊಂದಿಗೆ ಇನ್ನೂ ಅನೇಕ ಬಣ್ಣಗಳ ಸಂಯೋಜನೆಯನ್ನೂ ಸಹ ಬೆಳೆಯಲು ಪ್ರಯತ್ನಿಸಿ, ಯಶಸ್ಸನ್ನು ಕಂಡಿದ್ದಾರೆ. ಹಾಗೆಯೇ ಕಪ್ಪು ಮತ್ತು ಬಿಳಿ ಬಣ್ಣದ ಸಂಯೋಜನೆ ಅಸಾದ್ಯ ಎಂಬ ಅರಿವು ಸಂಶೋದಕರಿಗೆ ಲಬಿಸಿದೆ.

ಕಾಮನ ಬಿಲ್ಲು/ಮಳೆಬಿಲ್ಲಿನ ಗುಲಾಬಿಯನ್ನು ಮನೆಯಲ್ಲಿಯೇ ತಯಾರಿಸಲು ಸಾದ್ಯವಿದೆ. ಹೀಗೆ ಬೆಳೆಯಲು, ಅದರದೇ ಆದ ವಿದಾನವಿದೆ. ಗುಲಾಬಿ ಹೂವಿಗೆ ಕಾಮನ ಬಿಲ್ಲಿನ ಬಣ್ಣವನ್ನು ಹಾಕುವ ವೈಜ್ನಾನಿಕ ವಿದಾನದಲ್ಲಿ ನೈಸರ‍್ಗಿಕ ಪ್ರಕ್ರಿಯೆಯನ್ನು ಬಳಸಿಕೊಳ್ಳಲಾಗುತ್ತದೆ. ಗುಲಾಬಿ ಗಿಡದ ಕಾಂಡವನ್ನು ವಿಬಜಿಸಿ, ಅದರಲ್ಲಿ ದೊರಕುವ ನೀರಿಗೆ ಯಾವ ಬಣ್ಣ ಬೇಕೋ ಆ ಬಣ್ಣವನ್ನು ಬೆರೆಸಿ, ಅದನ್ನು ಒಂದೇ ಗುಲಾಬಿಯಲ್ಲಿನ ದಳಕ್ಕೆ ಹಚ್ಚಲಾಗುತ್ತದೆ. ಇದೇ ರೀತಿ ಕಾಮನ ಬಿಲ್ಲಿನ ಅಶ್ಟೂ ಬಣ್ಣವನ್ನು ದಳಗಳಿಗೆ ಹಚ್ಚಬೇಕು. ದಳಗಳು ಆ ನೈಸರ‍್ಗಿಕ ನೀರಿನಲ್ಲಿ ಬೆರೆತಿರುವ ಬಣ್ಣವನ್ನು ಸುಲಬವಾಗಿ ಹೀರಿಕೊಂಡು, ಅದೇ ಬಣ್ಣಕ್ಕೆ ತಿರುಗುತ್ತವೆ. ಮಳೆಬಿಲ್ಲಿನ ಗುಲಾಬಿ ಪ್ರಯೋಗಕ್ಕೆ ತೆಳು ಗುಲಾಬಿ ಅತವಾ ಬಿಳಿ ಬಣ್ಣದ ಗುಲಾಬಿ ಹೂವು ಅತ್ಯಂತ ಸೂಕ್ತವಾಗಿದೆ. ಇದೇ ರೀತಿಯಲ್ಲಿ ಇಶ್ಟವಾದ ಯಾವುದೇ ಬಣ್ಣದ ಗುಲಾಬಿಯನ್ನು ಸ್ರುಶ್ಟಿಸಲು ಸಾದ್ಯವಿದ್ದು, ಈಗಾಗಲೇ ಇದರ ಬಗ್ಗೆ ನಡೆದ ಅನೇಕ ಪ್ರಯೋಗಗಳು ಯಶಸ್ವಿಯಾಗಿದೆ. ಕೊನೆಯಲ್ಲಿ ಎಶ್ಟೇ ಆದರೂ ಕ್ರುತಕ ಕ್ರುತಕವೇ! ಮೂಲ ಮೂಲವೇ. ಮೂಲಕ್ಕೆ ಕ್ರುತಕವು ಯಾವುದೇ ರೀತಿಯಲ್ಲೂ ಸಾಟಿಯಿಲ್ಲ ಅಲ್ಲವೇ?

(ಮಾಹಿತಿ ಮತ್ತು ಚಿತ್ರ ಸೆಲೆ: thunderscloud.blogspot.com, amazingsearth.blogspot.com, flickr.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications