ಅನಿಸಿಕೆ : ಆನ್‌ಲೈನ್ ಕಲಿಕೆ
ನಾವು ಎಂದೂ ನೋಡಿರದ ಕೊರೊನಾ ನಮ್ಮ ಬದುಕನ್ನು ದುಸ್ತರಗೊಳಿಸಿ ವಿದ್ಯಾರ‍್ತಿಗಳ ಬದುಕನ್ನು ಅತಂತ್ರಗೊಳಿಸಿದಾಗ ಆನ್‌ಲೈನ್ ಶಿಕ್ಶಣ ಹೊಸ ಬರವಸೆ ಮೂಡಿಸಿತು. ಮಕ್ಕಳ ಶಿಕ್ಶಣಕ್ಕೆ ಯಾವುದೇ ತೊಡಕಾಗಬಾರದು ಎಂದು ಸರ‍್ಕಾರ, ವಿದ್ಯಾಸಂಸ್ತೆಗಳು, ಶಿಕ್ಶಕರು ತುಸು ಕಶ್ಟವಾದರೂ ಈ ಆನ್‌ಲೈನ್ ಪದ್ದತಿಗೆ ಒಗ್ಗಿಕೊಂಡರು. ಎಶ್ಟೇ ಬೇಡಿದರೂ ಮಕ್ಕಳ ಕೈಗೆ ಮೊಬೈಲ್ ಕೊಡದ ಪೋಶಕರು ತಮ್ಮ ಮಕ್ಕಳಿಗೆ ಹೊಸ ಮೊಬೈಲ್ ಪೋನ್ ಅನ್ನೇ ಕೊಡಿಸಿದರು. ಸಮಯ ವ್ಯರ‍್ತ ಮಾಡುತ್ತಿದ್ದ ವಿದ್ಯಾರ‍್ತಿಗಳನ್ನು ಕಾರ‍್ಯತತ್ಪರತೆಯಿಂದಿಡಲು ಸಹಕರಿಸಿದ ತಂತ್ರಜ್ನಾನಕ್ಕೆ ದನ್ಯವಾದ ಹೇಳಲೇಬೇಕು. ಮುಂದಿನ ದಿನಗಳಲ್ಲಿ ಆನ್‍ಲೈನ್ ಶಿಕ್ಶಣ, ಶಿಕ್ಶಣದ ಪದ್ದತಿಯನ್ನೇ ಬದಲಾಯಿಸಿದರೆ ಅಚ್ಚರಿಪಡುವ ಅಗತ್ಯವಿಲ್ಲ.
ನಾವು ದೂರವಾಣಿ ಮೂಲಕ ನಮ್ಮ ಅಜ್ಜ-ಅಜ್ಜಿ ಜೊತೆ ಮಾತಾಡಿದರೂ ಊರಿಗೆ ಹೋಗಿ ಅವರ ಜೊತೆ ಹರಟೆ ಹೊಡೆಯುವ ಸುಕ ನೀಡುವುದಿಲ್ಲ. ಅದೇ ರೀತಿ ಆನ್‌ಲೈನ್ ನಲ್ಲಿ ಶಿಕ್ಶಕರು ಎಶ್ಟೇ ಕ್ರಿಯಾಶೀಲರಾಗಿ ಪಾಟ ಮಾಡಿದರೂ ಶಾಲೆಯ ಕ್ಲಾಸ್ ರೂಮ್‌ನಲ್ಲಿ ಕೂತು ಪಾಟ ಕೇಳುವ ತ್ರುಪ್ತಿ ನೀಡುವುದಿಲ್ಲ. ಶಾಲೆಗಳು ವಿದ್ಯಾರ‍್ತಿಯ ಸರ‍್ವತೋಮುಕ ಬೆಳವಣಿಗೆಗೆ ಪೂರಕ ವಾತಾವರಣವನ್ನು ನೀಡುತ್ತವೆ. ಶಾಲೆಗಳಲ್ಲಿ ಆಟ, ಪಾಟದೊಂದಿಗೆ ಗುರು–ಶಿಶ್ಯರ ಬಾಂದವ್ಯ ಮತ್ತು ಒಡನಾಟ ಇರುತ್ತದೆ ಆದರೆ ಆನ್‌ಲೈನ್ ಕಲಿಕೆಯಿಂದ ಆ ಸರಪಳಿಯೇ ತುಂಡಾಗುತ್ತದೆ. ಮಾಹಿತಿಯನ್ನು ಬಲವಂತವಾಗಿ ತುರುಕುವುದನ್ನು ಬಿಟ್ಟರೆ ನೈಜ ಕಲಿಕೆ ಇರುವುದಿಲ್ಲ. ಆನ್‌ಲೈನ್ ಶಿಕ್ಶಣ ಮಕ್ಕಳ ಕ್ರಿಯಾಶೀಲತೆಯನ್ನು ನಿಶ್ಕ್ರಿಯಗೊಳಿಸುತ್ತದೆ.
ಓದುವ ವಯಸ್ಸಿನಲ್ಲಿ ಮಕ್ಕಳ ಕೈಗೆ ಮೊಬೈಲ್ ಸಿಕ್ಕಿರುವುದು ಬೌದ್ದಿಕ ಮಟ್ಟ ಹೆಚ್ಚಿಸುವುದಕ್ಕಿಂತ ಅವರ ಗಮನ ಬೇರೆಡೆ ಹೋಗಲೂ ಕಾರಣವಾಗುತ್ತಿದೆ. ತರಗತಿ ಪೂರ‍್ಣಗೊಳ್ಳುವವರೆಗೆ ಪೋಶಕರು ಮಕ್ಕಳ ಮುಂದೆ ಕೂರಲು ಆಗುವುದಿಲ್ಲ. ಹೀಗಾಗಿ, ಬೋರ್ ಹೊಡೆಯುವ ಆನ್‍ಲೈನ್ ತರಗತಿಗಳನ್ನು ಬಹುತೇಕ ವಿದ್ಯಾರ‍್ತಿಗಳು ಸ್ಕಿಪ್ ಮಾಡುತ್ತಿದ್ದು, ಮೊಬೈಲ್ ಗೇಮ್‍ಗಳ ಗೀಳು ಹಚ್ಚಿಕೊಳ್ಳುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಮಾದ್ಯಮಗಳ ಬಳಕೆಯನ್ನು ಹೆಚ್ಚು ಮಾಡುತ್ತಿದ್ದು, ಓದಿನ ಕಡೆಗಿಂತ ಇನ್ನಿತರ ಚಟುವಟಿಕೆಗಳಲ್ಲೇ ಹೆಚ್ಚು ನಿರತರಾಗಿದ್ದಾರೆ.
ಅಬಿವ್ರುದ್ದಿಶೀಲ ರಾಶ್ಟ್ರಗಳಲ್ಲಿ ಆನ್‍ಲೈನ್ ಶಿಕ್ಶಣ ವ್ಯವಸ್ತೆ ದಶಕಗಳ ಹಿಂದೆಯೇ ಜಾರಿಯಾಗಿದೆ. ಆದರೆ, ಅಬಿವ್ರುದ್ದಿ ಹೊಂದುತ್ತಿರುವ ಬಾರತದಲ್ಲಿ ಆನ್‍ಲೈನ್ ಶಿಕ್ಶಣ ವ್ಯವಸ್ತೆ ಹೊಸದು. ಪ್ರಾಯೋಗಿಕವಾಗಿ ನಡೆಸದೇ ದೇಶದಲ್ಲಿ ಏಕಾಏಕಿ ಆನ್‍ಲೈನ್ ಶಿಕ್ಶಣ ವ್ಯವಸ್ತೆ ಜಾರಿಗೆ ತಂದಿದ್ದು, ಮಕ್ಕಳಿಗೆ ಹಾಗೂ ಪೋಶಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆನ್‍ಲೈನ್ ತರಗತಿಗಳಿಂದ ಒಂದಶ್ಟು ತೊಂದರೆಗಳಿದ್ದರೆ, ಗೈರಾದರೆ ಶಿಕ್ಶಣದ ಮೇಲೆ ಪರಿಣಾಮ ಬೀರುವ ಸಾದ್ಯತೆಯೂ ಇದೆ. ಗ್ರಾಮೀಣ, ಗುಡ್ಡಗಾಡಿನ, ಆರ‍್ತಿಕವಾಗಿ ದುರ‍್ಬಲರಾದ ವಿದ್ಯಾರ‍್ತಿಗಳಿಗೆ ಆನ್ ಲೈನ್ ಶಿಕ್ಶಣ ಸರಿಯಾಗಿ ದೊರಕದೆ ಅಸಮಾನತೆಗೆ ಕಾರಣವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ‍್ಕ್ ಸಮಸ್ಯೆ, ಮೊಬೈಲ್ ಇಲ್ಲದ ಪರಿಣಾಮ ಆನ್ ಲೈನ್ ಶಿಕ್ಶಣದಿಂದಲೂ ಮಕ್ಕಳು ವಂಚಿತರಾಗಿದ್ದಾರೆ. ಇದು ಅವರ ಮುಂದಿನ ಬವಿಶ್ಯದ ಮೇಲೆ ಕರಿನೆರಳು ಬೀರಲಿದೆ.
ವಿಶಯಕ್ಕೆ ಪ್ರಾಯೋಗಿಕ ಕಲಿಕೆ ಬೇಕಾಗಿದ್ದರೆ ಆಗ ಆನ್ ಲೈನ್ ಕಲಿಕೆ ಸಾಲದು, ವಾಸ್ತವಿಕ ಪ್ರಯೋಗಶಾಲೆಯ ವ್ಯವಸ್ತೆ ಬೇಕು. ಇನ್ನು ಈ ಆನ್‌ಲೈನ್ ಶಿಕ್ಶಣದಲ್ಲಿ ಯಾವುದೇ ಸೈನ್ ಲ್ಯಾಂಗ್ವೇಜ್ ವ್ಯಾಕ್ಯಾನಕಾರರು ಇಲ್ಲದಿರುವುದು ವಿಶೇಶಚೇತನ ಮಕ್ಕಳಿಗೆ ಸವಾಲಾಗಿದೆ. ಮಕ್ಕಳು ಶಾಲೆಗೆ ಹೋಗುವುದರಿಂದ ಕೇವಲ ಕಲಿಯುವುದು ಮಾತ್ರವಲ್ಲ, ಬೌದ್ದಿಕ, ಮಾನಸಿಕ, ದೈಹಿಕ ಬೆಳವಣಿಗೆಯೊಂದಿಗೆ ಅವರ ಜ್ನಾನವೂ ವ್ರುದ್ದಿಯಾಗಿರುತ್ತದೆ. ಆದರೆ ಆನ್‌ಲೈನ್ ಪಾಟದಿಂದಾಗಿ ಪಾಟ ಮಾತ್ರ ಕಲಿಯಬಹುದು. ಮಾನಸಿಕ, ಬೌದ್ದಿಕವಾಗಿ ಗಟ್ಟಿಗೊಳ್ಳುವುದು ಕಶ್ಟ ಅನ್ನೋದು ನನ್ನ ಅನಿಸಿಕೆ.
ಒಬ್ಬರಿಗೊಬ್ಬರು ಉಪಟಳ ನೀಡುತ್ತಾ , ಶಿಕ್ಶಕರು ಪಾಟ ಮಾಡುವಾಗ ಅತ್ತ ಇತ್ತ ಕಣ್ಣು ಹಾಯಿಸುತ್ತ, ತರಗತಿಯಲ್ಲಿ ಕುಸ್ತಿ ಮಾಡುತ್ತಾ, ನಗುತ್ತಾ, ನಗಿಸುತ್ತಾ ಇದ್ದ ಮಕ್ಕಳಿಗೆ ಆನ್‍ಲೈನ್ ಶಿಕ್ಶಣ ಕಾರಾಗ್ರುಹವಾಗಿ ಮಾರ‍್ಪಟ್ಟಿದೆ. ಮಕ್ಕಳು ತಪ್ಪು ಮಾಡಿದಾಗ ಕಿವಿ ಹಿಂಡಿ ಬುದ್ದಿ ಹೇಳುತ್ತಿದ್ದ ಶಿಕ್ಶಕರಿಗಂತು ಶಾಲೆ ಯಾವಾಗ ಬಾಗಿಲು ತೆರೆಯುತ್ತದೆಯೋ ಎಂಬ ಚಿಂತೆ. ಆನ್‌ಲೈನ್ ಶಿಕ್ಶಣ ಗುರು-ಶಿಶ್ಯರ ನಡುವೆ ಇದ್ದ ಮಾನಸಿಕ ಬಂದವನ್ನು ಕಡಿತಗೊಳಿಸುತ್ತದೆ. ನಿಮಗೆ ಪಾಟ ಮಾಡುತ್ತಿದ್ದೇನೆ ಗೋಡೆಗಲ್ಲ ಎನ್ನುತ್ತಿದ ಶಿಕ್ಶಕರಿಗೆ ಕಂಪ್ಯೂಟರ್ ಗೋಡೆಗೆ ಪಾಟ ಮಾಡುವ ಸ್ತಿತಿ ಬಂದಿದೆ. ಇಂದು ಗಣಿತ ಶಿಕ್ಶಕಿ ಶಾಲೆಗೆ ಬರಬಾರದಪ್ಪ ಎಂದು ಬೇಡುತ್ತಿದ ಲಾಸ್ಟ್ ಬೆಂಚ್ ಸ್ಟೂಡೆಂಟ್ಸ್ ಗಣಿತ ಶಿಕ್ಶಕಿಯ ಕೈಯಲ್ಲಿ ಯಾವಾಗ ಕಿವಿ ಹಿಂಡಿಸಿಕೊಳುತ್ತೇನೋ ಎಂದು ಕಾಯುತ್ತಿದ್ದಾರೆ.
ತರಗತಿಯಲ್ಲಿ ನಡೆಯುವ ಪಾಟಕ್ಕೆ ಅದರದ್ದೇ ಆದ ಆಯಾಮ ಇದೆ. ವಿದ್ಯಾರ‍್ತಿಗಳು ಚರ‍್ಚೆ, ಪ್ರಶ್ನೆ, ಜಗಳ, ವಾದಗಳ ಮೂಲಕ ಕಲಿಯುತ್ತಾರೆ. ತರಗತಿ ಶಿಕ್ಶಣಕ್ಕೆ ಇಂತಹ ವೈವಿದ್ಯತೆಗಳು ಇವೆ. ಆದರೆ ಆನ್‌ಲೈನ್‌ನಲ್ಲಿ ಇಂತಹ ಅವಕಾಶವಾಗಲಿ ಹಾಗೂ ವೈವಿದ್ಯತೆಯಾಗಲಿ ಇಲ್ಲ. ಎಲ್ಲಾ ಜಾತಿಯ ಎಲ್ಲಾ ವರ‍್ಗದ ವಿದ್ಯಾರ‍್ತಿಗಳು ಒಂದು ಕಡೆ ಸೇರುವುದರಿಂದ ಸಮಾಜ, ಪರಿಸರದ ಬಗ್ಗೆ ವಿದ್ಯಾರ‍್ತಿಗಳಿಗೆ ಅನುಬವ ಸಿಗುತ್ತದೆ. ಆದರೆ ಆನ್‌ಲೈನ್ ಕಲಿಕೆಯಿಂದ ಇದನ್ನು ಕಳೆದುಕೊಳ್ಳುವ ಅಪಾಯವಿದೆ. ಪರಿಣಾಮ ವಿದ್ಯಾರ‍್ತಿಗಳು ಸಮಾಜದಿಂದ ದೂರವಾಗುವ ಅಪಾಯವಿದೆ. ಜೀವನಕ್ಕಿಂತ ಜೀವ ಮುಕ್ಯ, ಆದ್ದರಿಂದ ಇದು ಇಂದಿಗೆ ಅನಿವಾರ‍್ಯ ಕೂಡ ಹೌದು. ಶಾಲೆ ಬಾಗಿಲು ತೆರೆದು ವಿದ್ಯಾರ‍್ತಿಗಳು ಬೇಗ ಶಾಲೆಗೆ ಬಂದು ಶಿಕ್ಶಕರಿಗೆ ಕೀಟಲೆ ಕೂಡಲಿ ಎಂದು ಬಗವಂತನಲ್ಲಿ ಪ್ರಾರ‍್ತಿಸೋಣ.
(ಚಿತ್ರ ಸೆಲೆ: pixabay.com)
ಶಾಲೆಗೆ ಹೋಗಿ ಕಲಿತದ್ದು ಬೇರೆಯೇ ಮನೆಯಲ್ಲಿ ಕಲಿಯುವುದು ಅನಿವಾರ್ಯ ಮತ್ತು ಸ್ವಲ್ಪ ದಿನ ಅಷ್ಟೇ
ಕಲಿಯಲು ಆಸಕ್ತಿ ಇರುವ ಎಲ್ಲಾ ವಿಧ್ಯಾರ್ಥಿಗಳಲ್ಲಿ ಫೋನ್ ಇಲ್ಲ. ಅದೊಂದು ದುಃಖಕರ ಸಂಗತಿ.