ಸಯ್ಯದ್ ಕಿರ‍್ಮಾನಿ – ದಿಗ್ಗಜ ವಿಕೆಟ್ ಕೀಪರ್
ಬಾರತದ ಕ್ರಿಕೆಟ್ ಇತಿಹಾಸದಲ್ಲಿ ದೋನಿಗೂ ಮುನ್ನ ವಿಕೆಟ್ ನ ಹಿಂದೆ ಎಲ್ಲಾ ಬಗೆಯ ದಾಕಲೆಗಳನ್ನು ಮಾಡಿ ದಿಗ್ಗಜ ವಿಕೆಟ್ ಕೀಪರ್ ಎಂದು ಹೆಸರು ಗಳಿಸಿದ್ದು ಒಬ್ಬರು ಮಾತ್ರ. ಆಗಿನ ಕಾಲದಲ್ಲಿ ಈಗಿನಂತೆ ಆಟಕ್ಕೆ ತಕ್ಕುದಾದ ಗುಣಮಟ್ಟದ ಸಲಕರಣೆಗಳು ಇಲ್ಲದಿದ್ದರೂ ಸ್ಪಿನ್ ಹಾಗೂ ವೇಗದ ಬೌಲಿಂಗ್ ನಲ್ಲೂ ವಿಕೆಟ್‌ನ ಹಿಂದೆ ಗೋಡೆಯಂತೆ ನಿಂತು ಲೀಲಾಜಾಲವಾಗಿ ಕ್ಯಾಚ್ ಹಾಗೂ ಸ್ಟಂಪ್ ಮಾಡುತ್ತಿದ್ದವರೇ ನಮ್ಮ ಕರ‍್ನಾಟಕದ ಹೆಮ್ಮೆಯ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ಸಯ್ಯದ್ ಮುಜ್ತಾಬ ಹುಸೇನ್ ಕಿರ‍್ಮಾನಿ.
ಹುಟ್ಟು, ಎಳವೆಯ ಕ್ರಿಕೆಟ್ ಪಯಣ
29 ಡಿಸೆಂಬರ್, 1949 ರಂದು ಮದ್ರಾಸ್ ನಲ್ಲಿ ಕಿರ‍್ಮಾನಿ ಹುಟ್ಟಿದರು. ಅವರಿನ್ನೂ ಪುಟ್ಟ ಹುಡುಗ ಆಗಿರುವಾಗಲೇ ಅವರ ಕುಟುಂಬ ಬೆಂಗಳೂರಿಗೆ ಬಂದು ನೆಲೆಸಿತು. ಶಾಲೆಯಲ್ಲಿ ಕಲಿಯುವ ಹೊತ್ತಿನಲ್ಲಿ ಅತ್ಲೆಟಿಕ್ಸ್, ಪುಟ್ ಬಾಲ್ ಹಾಗೂ ಹಾಕಿ ಆಡುತ್ತಿದ್ದ ಕಿರ‍್ಮಾನಿ ಕಡೆಗೆ ಆರಿಸಿಕೊಂಡಿದ್ದು ಮಾತ್ರ ತಮ್ಮ ನೆಚ್ಚಿನ ಕ್ರಿಕೆಟ್ ಆಟವನ್ನು. ಜಯಮಹಲ್ ಬಡಾವಣೆಯಲ್ಲಿ ಗೆಳೆಯರೊಂದಿಗೆ ಕಾರ‍್ಕ್ ಚೆಂಡಿನಲ್ಲಿ ಕ್ರಿಕೆಟ್ ಆಡುತ್ತಾ ಬೆಳೆದ ಅವರು ಕೀಪರ್ ಆಗಿ ಚೆಂಡು ತಡೆಯಲು ಮೊದಲು ಬಳಸಿದ್ದು ಇಟ್ಟಿಗೆಯನ್ನು ಎಂಬುವುದು ಸೋಜಿಗದ ಸಂಗತಿ. ಎರಡೂ ಕೈಗಳಲ್ಲಿ ಒಂದೊಂದು ಇಟ್ಟಿಗೆ ಹಿಡಿದು ಗಟ್ಟಿಯಾದ ಕಾರ‍್ಕ್ ಚೆಂಡು ತಡೆಯುತ್ತಾ ಕಿರ‍್ಮಾನಿ ಒಂದು ಬಗೆಯಲ್ಲಿ ಕೀಪಿಂಗ್ ನ ಮೊದಲ ಪಟ್ಟುಗಳನ್ನು ಕಲಿತರು ಎಂದೇ ಹೇಳಬೇಕು. ಅವರ ತಂದೆಗೆ ಮಗ ಆಡುತ್ತಾ ಕಾಲ ಕಳೆದರೆ ಓದಿನಲ್ಲಿ ಹಿಂದೆ ಬೀಳುತ್ತಾನೆ ಎಂದು ಆಟದ ಬಗೆಗೆ ಅವರೆಂದೂ ಪ್ರೋತ್ಸಾಹ ನೀಡದೆ ಹೋದರೂ ಕಿರ‍್ಮಾನಿ ಮಾತ್ರ ಕ್ರಿಕೆಟ್ ನಲ್ಲಿ ಪಕ್ವವಾಗುತ್ತಾ ಬೆಳೆಯುತ್ತಾ ಹೋದರು.
ಶಾಲಾ ಕ್ರಿಕೆಟ್ ನ ದೈತ್ಯ ಪ್ರತಿಬೆ
1965/66 ರ ಸಾಲಿನಲ್ಲಿ ಆಸ್ಟ್ರೇಲಿಯಾ ಸ್ಕೂಲ್ಸ್ ತಂಡ ಬಾರತಕ್ಕೆ ಮೂರು ಅನದಿಕ್ರುತ ಟೆಸ್ಟ್ ಗಳ ಸರಣಿಗಾಗಿ ಬಂದಾಗ ಬಾರತ ಸ್ಕೂಲ್ಸ್ ತಂಡಕ್ಕೆ ಆಯ್ಕೆಯಾದ ಬಲಗೈ ಬ್ಯಾಟ್ಸ್ಮನ್ ಕಿರ‍್ಮಾನಿ ತಮ್ಮ ಬ್ಯಾಟಿಂಗ್ ಚಳಕದಿಂದ ಮೂರೂ ಪಂದ್ಯಗಳಲ್ಲಿ ಎಲ್ಲರ ಗಮನ ಸೆಳೆದರು. ಮದ್ರಾಸ್ ನಲ್ಲಿ 121, ಹೈದರಾಬಾದ್ ನಲ್ಲಿ 132 ಹಾಗೂ ಬಾಂಬೆಯಲ್ಲಿ 75 ರನ್ ಗಳಿಸಿ 16 ರ ಎಳೆಯ ವಯಸ್ಸಿನಲ್ಲೇ ದೇಶದಾದ್ಯಂತ ಸಂಚಲನ ಮೂಡಿಸಿದರು. ಬಳಿಕ 1966 ರ ಕೂಚ್-ಬೆಹಾರ್ ಟ್ರೋಪಿಯಲ್ಲೂ ಅವರ ಬ್ಯಾಟಿಂಗ್ ನಾಗಾಲೋಟ ಮುಂದುವರೆಯಿತು. ಮದ್ರಾಸ್ ಸ್ಕೂಲ್ಸ್ ಎದುರು 88 ಮತ್ತುದಕ್ಶಿಣ ವಲಯದ ಪರ ಆಡುತ್ತಾ ಪೂರ‍್ವ ವಲಯದ ಎದುರು ಔಟಾಗದೆ 134 ರನ್ ಗಳಿಸಿ ಮುಂದಿನ ಮಟ್ಟದಲ್ಲಿ ಆಡಲು ತಾವು ಸಜ್ಜಾಗಿರುವುದನ್ನು ಸಾರಿ ಹೇಳಿದರು. ಈ ಹೊತ್ತಿನಲ್ಲಿ ಅವರ ಪ್ರತಿಬೆಯನ್ನು ಗುರುತಿಸಿ 17 ರ ಹರೆಯದ ಕಿರ‍್ಮಾನಿಯವರಿಗೆ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಕೆಲಸ ನೀಡಿ ಕ್ರಿಕೆಟ್ ಆಡಲು ದೊಡ್ಡ ವೇದಿಕೆ ಕಲ್ಪಿಸಿ ಕೊಟ್ಟಿತು. ಅಲ್ಲೂ ಮಿಂಚಿದ ಕಿರ‍್ಮಾನಿ 1967 ರಲ್ಲಿ ಬಾರತ ಸ್ಕೂಲ್ಸ್ ತಂಡದೊಟ್ಟಿಗೆ ಇಂಗ್ಲೆಂಡ್ ಪ್ರವಾಸ ಮಾಡಿದರು. ಇಂಗ್ಲೆಂಡ್ ನಲ್ಲೂ ಅವರ ಬ್ಯಾಟ್ ಸದ್ದು ಮಾಡಿತು. ಅಲ್ಲಿನ ಪ್ರತಿಕೂಲ ವಾತಾವಾರಣದಲ್ಲಿ ಹ್ಯಾಂಪ್ಶೈರ್ ಸ್ಕೂಲ್ಸ್ ಎದುರು ಅವರುಗಳಿಸಿದ ಶತಕ ಅವರನ್ನು ಮೈಸೂರು ರಣಜಿ ತಂಡದ ಹೊಸ್ತಿಲಿಗೆ ತಂದು ನಿಲ್ಲಿಸಿತು.
ರಣಜಿ ಪಾದಾರ‍್ಪಣೆ
1967/68 ರ ಸಾಲಿನಲ್ಲಿ ಮೈಸೂರು ರಾಜ್ಯ ರಣಜಿ ತಂಡದ ಪರ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಮೈದಾನದಲ್ಲಿ ಮದ್ರಾಸ್ ತಂಡದ ಎದುರು ಕಿರ‍್ಮಾನಿ ರಣಜಿ ಪಾದಾರ‍್ಪಣೆ ಮಾಡಿದರು. ಕುಂದೆರನ್ ಅವರು ಕೀಪರ್ ಆಗಿದ್ದರಿಂದ ಈ ಪಂದ್ಯವನ್ನು ಕಿರ‍್ಮಾನಿ ಬ್ಯಾಟ್ಸ್ಮನ್ ಆಗಿ ಆಡಿ, 5 ಮತ್ತು 0 ರನ್ ಗಳಿಸಿ ವೈಪಲ್ಯ ಅನುಬವಿಸಿದರು. ಎರಡನೇ ಪಂದ್ಯದಿಂದ ವಿಕೆಟ್ ಕೀಪಿಂಗ್ ಹೊಣೆ ಹೊತ್ತ ಅವರು ಕ್ರಮೇಣ ಮೊದಲ ದರ‍್ಜೆ ಕ್ರಿಕೆಟ್ ನಲ್ಲೂ ಲಯ ಕಂಡುಕೊಂಡು 1969/70 ರ ಸಾಲಿನಲ್ಲಿ ಬಾಂಬೆ ಎದುರು 75 ರನ್ ಗಳಿಸಿ ತಮ್ಮ ಮೊದಲ ಅರ‍್ದ ಶತಕ ಬಾರಿಸಿದರು. ಹೀಗೆ ಎರಡು ವರುಶಗಳ ಕಾಲ ನಿರಂತರತೆ ಕಾಪಾಡಿಕೊಂಡು ದುಲೀಪ್ ಟ್ರೋಪಿ ಹಾಗೂ ಇರಾನಿ ಕಪ್ ತಂಡಗಳಿಗೂ ಆಯ್ಕೆಯಾಗಿ ಕೀಪಿಂಗ್ ನಲ್ಲಿ ಮಾತ್ರವಲ್ಲದೆ ಕೆಳಗಿನ ಕ್ರಮಾಂಕದಲ್ಲಿ ರನ್ ಗಳಿಸಿ ಪ್ರಬಾವ ಬೀರಿದರು. ಕಡೆಗೆ ಆಯ್ಕೆಗಾರರು ಬಾರತದ 1971 ರ ಇಂಗ್ಲೆಂಡ್ ಪ್ರವಾಸಕ್ಕೆ ಕೀಪರ್ ಪಾರುಕ್ ಇಂಜಿನಿಯರ್ ರ ಗರಡಿಯಲ್ಲಿ ಯುವ ಕಿರ‍್ಮಾನಿ ಪಳಗಲಿ ಎಂದು ಅವರನ್ನು ಹೆಚ್ಚುವರಿ ಕೀಪರ್ ಆಗಿ ಆರಿಸಿದರು. ಹೀಗೆ ಅನುಬವದ ಕೊರತೆ ಇದ್ದರೂ ಕಿರ‍್ಮಾನಿ ತಮ್ಮ ಅಳವಿನಿಂದ ಗಮನ ಸೆಳೆದು 21 ರ ಹರೆಯದಲ್ಲೇ ಅಂತರಾಶ್ಟ್ರೀಯ ಕ್ರಿಕೆಟ್ ಆಡುವ ಮಟ್ಟ ತಲುಪಿದ್ದು ಪವಾಡವೆಂದೇ ಆಗಿನ ಪತ್ರಿಕೆಗಳು ವರದಿ ಮಾಡಿದವು.
1971-75 : ಬಾರತ ತಂಡದೊಂದಿಗಿದ್ದರೂ ಸಿಗದ ಅವಕಾಶ
ನಾಲ್ಕು ವರುಶಗಳ ಕಾಲ ಬಾರತ ತಂಡದೊಂದಿಗೆ ಎಲ್ಲಾ ವಿದೇಶ ಪ್ರವಾಸಗಳಿಗೆ ಹೋದರೂ ಕಿರ‍್ಮಾನಿ ಅವರಿಗೆ ಟೆಸ್ಟ್ ಆಡುವ ಅವಕಾಶ ಸಿಗುವುದಿಲ್ಲ. 1971 ಹಾಗೂ 1974ರ ಇಂಗ್ಲೆಂಡ್ ಪ್ರವಾಸದ ವೇಳೆ ಕೇವಲ ಕೌಂಟಿ ತಂಡಗಳ ಎದುರಿನ ಮೊದಲ ದರ‍್ಜೆ ಪಂದ್ಯಗಳಿಗೆ ಮಾತ್ರ ಅವರಿಗೆ ಮಣೆ ಹಾಕಲಾಗುತ್ತದೆ. ಇದರಿಂದ ಎದೆಗುಂದದ ಕಿರ‍್ಮಾನಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಒಳ್ಳೆ ಪ್ರದರ‍್ಶನದಿಂದ ತಮ್ಮ ಆಟದ ಪಟ್ಟುಗಳನ್ನು ಇನ್ನೂ ಸುದಾರಿಸಿಕೊಳ್ಳುತ್ತಾರೆ. ಅವರ ಎಳವೆಯ ತರಬೇತುದಾರ ಕೆ.ಕೆ. ತಾರಾಪೊರ್ ವರ‍್ಶಾನುಗಟ್ಟಲೆ ಅವಕಾಶ ಸಿಗದೇ ಹಾತೊರೆಯುತ್ತಿದ್ದ ಕಿರ‍್ಮಾನಿ ಬೆನ್ನಿಗೆ ನಿಂತು ಹುರಿದುಂಬಿಸುತ್ತಾರೆ.
ಅಂತರಾಶ್ಟ್ರೀಯ ಕ್ರಿಕೆಟ್ ಪಾದಾರ‍್ಪಣೆ
ಸುಮಾರು ಐದು ವರುಶಗಳ ಕಾಲ ಹೆಚ್ಚುವರಿ ಕೀಪರ್ ಆಗಿದ್ದ ಕಿರ‍್ಮಾನಿ ಕಡೆಗೂ 1976 ರ ಆಕ್ಲ್ಯಾನ್ಡ್ ಟೆಸ್ಟ್ ನಲ್ಲಿ ಎಡೆ ಪಡೆದು ತಮ್ಮ ಅಂತರಾಶ್ಟ್ರೀಯ ಕ್ರಿಕೆಟ್ ವ್ರುತ್ತಿ ಬದುಕು ಮೊದಲು ಮಾಡಿದರು. ಆದರೆ ಈ ಪಂದ್ಯದಲ್ಲಿ ಕೇವಲ 14 ರನ್ ಗಳಿಸಿದ ಅವರು, ವಿಕೆಟ್ ನ ಹಿಂದೆ ಕೂಡ ಒಂದೂ ಬಲಿ ಪಡೆಯಲಾಗದೆ ನಿರಾಸೆ ಅನುಬವಿಸುತ್ತಾರೆ. ಬಳಿಕ ಎರಡನೇ ಕ್ರೈಸ್ಟ್ಚರ‍್ಚ್ ಟೆಸ್ಟ್ ನಲ್ಲಿ 27 ರನ್ ಗಳಿಸಿ ಒಟ್ಟು 6 ಬಲಿ (5 ಕ್ಯಾಚ್, 1 ಸ್ಟಂಪಿಂಗ್) ಪಡೆದರು. ಆಗಿನ ಹೊತ್ತಿನಲ್ಲಿ ಇನ್ನಿಂಗ್ಸ್ ಒಂದರಲ್ಲಿ ಇದು ಬಾರತದ ಪರ ಕೀಪಿಂಗ್ ದಾಕಲೆಯಾಗಿತ್ತು. ಅದೇ ಪ್ರವಾಸದಲ್ಲಿ ಒಂದು ದಿನದ ಪಂದ್ಯಗಳಲ್ಲಿಯೂ ಕಿರ‍್ಮಾನಿ ಪಾದಾರ‍್ಪಣೆ ಮಾಡಿದರು. ಅಲ್ಲಿಂದ ಎರಡೂ ಬಗೆಯ ಆಟದಲ್ಲಿ ಸ್ತಿರ ಪ್ರದರ‍್ಶದಿಂದ ತಂಡದ ಅವಿಬಾಜ್ಯ ಅಂಗವಾದರು.
ಕೆರ‍್ರಿ ಪ್ಯಾಕರ್ ವರ‍್ಲ್ಡ್ ಸಿರೀಸ್ ಪ್ರಹಸನ
1979 ರ ಹೊತ್ತಿಗೆ ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ಸಾಕಶ್ಟು ಹೆಸರು ಮಾಡಿದ್ದ ಕಿರ‍್ಮಾನಿ ಮತ್ತು ದಿಗ್ಗಜ ಬ್ಯಾಟ್ಸ್ಮನ್ ಗಾವಸ್ಕರ್ ರಿಗೆ ಆಸ್ಟ್ರೇಲಿಯಾದ ಉದ್ಯಮಿ ಕೆರ‍್ರಿ ಪ್ಯಾಕರ್ ಹುಟ್ಟು ಹಾಕಿದ್ದ ಕಾಸಗಿ ಪಂದ್ಯಾವಳಿ ವರ‍್ಲ್ಡ್ ಸಿರೀಸ್ ನಲ್ಲಿ ಆಡಲು ಕರೆ ನೀಡಲಾಗುತ್ತದೆ. ಇದಕ್ಕೆ ಇಂಬು ನೀಡುವಂತೆ ಪ್ಯಾಕರ್ ರೊಂದಿಗೆ ಕಿರ‍್ಮಾನಿ ಹಾಗೂ ಗಾವಸ್ಕರ್ ಮಾತುಕತೆಯಾಡುತ್ತಿರುವ ತಿಟ್ಟಗಳು ಸುದ್ದಿ ಹಾಳೆಗಳಲ್ಲಿ ಪ್ರಕಟವಾಗುತ್ತವೆ. ಆದರೆ ಇಬ್ಬರೂ ಸಹ ಬಾರತ ತಂಡವನ್ನು ಬಿಡಲೊಲ್ಲೆವು ಎಂದು ಪ್ಯಾಕರ್ ರ ಹಣದ ಆಮಿಶವನ್ನು ತಿರಸ್ಕರಿಸುತ್ತಾರೆ. ಗಾವಸ್ಕರ್ ತಂಟೆಗೆ ಹೋಗದ ಬಿಸಿಸಿಐ ಕಿರ‍್ಮಾನಿಗೆ ಮಾತ್ರ ಶಿಕ್ಶೆ ನೀಡುತ್ತದೆ. 1979 ರ ಇಂಗ್ಲೆಂಡ್ ಸರಣಿ ಹಾಗೂ ಅದೇ ಸಾಲಿನ ವಿಶ್ವಕಪ್ ಗೆ ಅವರನ್ನುತಂಡದಿಂದ ಕೈಬಿಡಲಾಗುತ್ತದೆ. ಬಾಂಬೆಯ ವಾಂಕೆಡೆ ಅಂಗಳದಲ್ಲಿ ತಂಡ ಅಬ್ಯಾಸದಲ್ಲಿ ತೊಡಗಿರುವಾಗ ಗುಂಡಪ್ಪ ವಿಶ್ವನಾತ್ ರವರು ಗೆಳೆಯ ಕಿರ‍್ಮಾನಿರನ್ನು ಬಿಗಿದಪ್ಪಿ ಒದ್ದೆ ಕಣ್ಣುಗಳಿಂದ ಈ ಸುದ್ದಿಯನ್ನು ಹೇಳಿದೊಡನೆ ಅವರಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗುತ್ತದೆ. ಮುಂದೇನು ಎಂದು ತಿಳಿಯದ ಕಿರ‍್ಮಾನಿ ಹತಾಶರಾಗಿ ಅಲ್ಲಿಂದ ಹೊರಬಂದು ಟಾಕ್ಸಿಯೊಂದನ್ನು ಏರಿ ಗಂಟೆಗಟ್ಟಲೆ ಎಲ್ಲಿಗೆ ಹೋಗಬೇಕೆಂದು ಸಹ ಓಡಿಸುಗನಿಗೆ ಹೇಳದೆ ತಡ ರಾತ್ರಿವರೆಗೂ ಬಾಂಬೆ ಊರಿನಾದ್ಯಂತ ಗೊತ್ತು ಗುರಿಯಿಲ್ಲದೆ ತಿರುಗಾಡಿದ್ದು ಈಗ ಇತಿಹಾಸದ ಪುಟ ಸೇರಿದೆ.
ಮರಳಿದ ಕಿರ‍್ಮಾನಿ ದಿಗ್ಗಜರಾಗಿ ಬೆಳೆದ ಹಾದಿ
ಕಿರ‍್ಮಾನಿ ಅವರ ಬೆಲೆ ಅರಿತ ಆಯ್ಕೆಗಾರರು ವಿಶ್ವಕಪ್ ಬಳಿಕ 1979ರ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಗೆ ಮತ್ತೊಮ್ಮೆಅವರನ್ನು ಆರಿಸುತ್ತಾರೆ. ಆರು ಟೆಸ್ಟ್ ಗಳ ಆ ಸರಣಿಯಲ್ಲಿ ಎಂದಿನಂತೆ ಚುರುಕಾಗಿ ತಪ್ಪುಗಳಿಲ್ಲದೆ ಕೀಪಿಂಗ್ ಮಾಡಿದ ಕಿರ‍್ಮಾನಿ ಬಾಂಬೆ ಟೆಸ್ಟ್ ನಲ್ಲಿ ನೈಟ್ ವಾಚ್‌ಮನ್ ಆಗಿ ಕಣಕ್ಕಿಳಿದು ಶತಕ (101) ಗಳಿಸಿ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಅಳವು ತೋರಿಸುತ್ತಾರೆ. ಆ ನಂತರ 1979/80 ರ ಪಾಕಿಸ್ತಾನ ಪ್ರವಾಸದಲ್ಲಿ ಒಟ್ಟು 19 ಬಲಿ (17 ಕ್ಯಾಚ್, 2 ಸ್ಟಂಪ್) ಪಡೆದು ಸರಣಿಯೊಂದರಲ್ಲಿ ಬಾರತದ ಪರ ಇದ್ದ ನರೇನ್ ತಮ್ಹಾನೆರ ದಾಕಲೆಯನ್ನು ಸರಿಗಟ್ಟುತ್ತಾರೆ. ಕಿರ‍್ಮಾನಿರ ಕೀಪಿಂಗ್ ಯಾವ ಮಟ್ಟಕ್ಕೆ ಅಚ್ಚುಕಟ್ಟಾಗಿತ್ತು ಎಂದರೆ 1981/82 ರ ಇಂಗ್ಲೆಂಡ್ ಸರಣಿಯಲ್ಲಿ ಎದುರಾಳಿ ತಂಡ ಗಳಿಸಿದ ಒಟ್ಟು 1,964 ರನ್ ಗಳಲ್ಲಿ ಒಂದೂ ಬೈ ರನ್ ಇರಲಿಲ್ಲ! ಇಂಗ್ಲೆಂಡ್ ನಲ್ಲಿ ನಡೆದ 1983 ರವಿಶ್ವಕಪ್ ವೇಳೆ ದಿಗ್ಗಜ ವಿಕೆಟ್ ಕೀಪರ್ ಗಳಾದ ಇಂಗ್ಲೆಂಡ್ ನ ಆಲನ್ ನಾಟ್, ವಿಂಡೀಸ್ ನ ಜೆಪ್ ಡೂಜಾನ್ ಹಾಗೂ ಆಸ್ಟ್ರೇಲಿಯಾದ ರಾಡ್ನಿ ಮಾರ‍್ಶ್ ರೊಟ್ಟಿಗೆ ಕಿರ‍್ಮಾನಿ ಊಟದ ಕೂಟದಲ್ಲಿ ಪಾಲ್ಗೊಂಡಾಗ ನಾಟ್ ಅವರು“ನಮ್ಮೆಲ್ಲರಿಗಿಂತ ಕಿರ‍್ಮಾನಿ ಶ್ರೇಶ್ಟ ಕೀಪರ್. ಏಕೆಂದರೆ ಬಾರತದ ತಿರುಗುವ ಪಿಚ್ ಗಳಲ್ಲಿ ಚಂದ್ರ, ಪ್ರಸನ್ನರಂತಹ ಸ್ಪಿನ್ನರ‍್ಗಳ ಬೌಲಿಂಗ್ ನಲ್ಲಿ ನಿರಾಯಾಸವಾಗಿ ಕೀಪಿಂಗ್ ಮಾಡುವ ಚಳಕ ಇವರಿಗೆ ಮಾತ್ರ ಇದೆ” ಎಂದು ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಇದೇ ವಿಶ್ವಕಪ್ ನಲ್ಲಿ ಜಿಂಬಾಬ್ವೆ ಎದುರು ತಂಡ ಸಂಕಶ್ಟದಲ್ಲಿರುವಾಗ ಕಪಿಲ್ ದೇವ್ ರೊಂದಿಗೆ ಒಂಬತ್ತನೇ ವಿಕೆಟ್ ಗೆ ಮುರಿಯದ 126 ರನ್ ಗಳ ಜೊತೆಯಾಟವಾಡಿ ಕಿರ‍್ಮಾನಿ ಗೆಲುವಿನಲ್ಲಿ ತಮ್ಮ ಕೊಡುಗೆ ನೀಡುತ್ತಾರೆ. ಬಾರತ ಗೆದ್ದ 1983 ರ ವಿಶ್ವಕಪ್ ನಲ್ಲಿ ಕಿರ‍್ಮಾನಿ ತಮ್ಮ ಅಸಾಮಾನ್ಯ ಪ್ರದರ‍್ಶನದಿಂದ “ಬೆಳ್ಳಿ ಗ್ಲವ್ಸ್” ಪ್ರಶಸ್ತಿ ಪಡೆದು ವಿಶ್ವದ ಶ್ರೇಶ್ಟ ಕೀಪರ್ ಎಂಬ ಗೌರವಕ್ಕೆ ಪಾತ್ರರಾಗುತ್ತಾರೆ. ಬಳಿಕ ಅವರು ಅದೇ ವರುಶ ವೆಸ್ಟ್ಇಂಡೀಸ್ ಎದುರು ಒಂದು ಒಂದು-ದಿನದ ಪಂದ್ಯದಲ್ಲಿ ಬಾರತದ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಾರೆ. ಹೀಗೆ ತಮ್ಮ ಆಟದಲ್ಲಿ ಯಾವುದೇ ಕುಂದುಗಳಿಲ್ಲದೆ ತಂಡದ ಶಕ್ತಿಯಾಗಿದ್ದ ಕಿರ‍್ಮಾನಿ 1985/86 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ‍್ಡರ್ ರ ಕ್ಯಾಚ್ ಹಿಡಿದು ಕಾಲಿಗೆ ಪೆಟ್ಟು ಮಾಡಿಕೊಂಡು ಹೊರನಡೆಯುತ್ತಾರೆ. ದುರದ್ರುಶ್ಟವಶಾತ್ ಅದೇ ಅವರ ಕಡೇ ಅಂತರಾಶ್ಟ್ರೀಯ ಪಂದ್ಯವಾಗುತ್ತದೆ. ಯುವಕರಿಗೆ ಅವಕಾಶ ನೀಡುವ ಮನಸು ಮಾಡಿದ್ದ ಆಯ್ಕೆಗಾರರು 36 ರಹರೆಯದ ಕಿರ‍್ಮಾನಿರನ್ನು ಮತ್ತೆಂದೂ ಆಯ್ಕೆಗೆ ಪರಿಗಣಿಸುವುದೇ ಇಲ್ಲ. ಆದರೆ ಆ ವೇಳೆಗಾಗಲೇ ಹತ್ತು ವರ‍್ಶದ ಅಂತರಾಶ್ಟ್ರೀಯ ವ್ರುತ್ತಿ ಬದುಕಿನಲ್ಲಿ ಕರ‍್ನಾಟಕದ ವಿಕೆಟ್ ಕೀಪರ್ ಕಿರ‍್ಮಾನಿ ಒಟ್ಟು 88 ಟೆಸ್ಟ್ ಗಳಲ್ಲಿ 2 ಶತಕ ಹಾಗೂ 12 ಅರ‍್ದಶತಕಗಳೊಂದಿಗೆ 27 ರ ಸರಾಸರಿಯಲ್ಲಿ 2,759 ರನ್ ಗಳಿಸುವುದರ ಜೊತೆಗೆ ವಿಕೆಟ್ ನ ಹಿಂದೆ ಅತ್ಯದಿಕ 198 ಬಲಿ( 170 ಕ್ಯಾಚ್, 28 ಸ್ಟಂಪಿಂಗ್) ಮಾಡಿ ದಾಕಲೆ ಮಾಡಿರುತ್ತಾರೆ. 49 ಒಂದು ದಿನದ ಪಂದ್ಯಗಳಲ್ಲಿ 373 ರನ್ ಜೊತೆಗೆ 27 ಕ್ಯಾಚ್ ಮತ್ತು 9 ಸ್ಟಂಪಿಂಗ್ ಮಾಡಿರುತ್ತಾರೆ.
ಕರ‍್ನಾಟಕ ತಂಡಕ್ಕೆ ಕಿರ‍್ಮಾನಿರ ಕೊಡುಗೆ
ರಾಜ್ಯ ತಂಡದೊಂದಿಗೆ ಎರಡು ರಣಜಿ ಟೂರ‍್ನಿ ಹಾಗೂ ಒಂದು ಇರಾನಿ ಕಪ್ ಗೆದ್ದಿರುವ ಕಿರ‍್ಮಾನಿ ಕೀಪಿಂಗ್ ಜೊತೆಗೆ ಬ್ಯಾಟಿಂಗ್ ನಿಂದಲೂ ತಂಡಕ್ಕೆ ಸದಾ ನೆರವಾಗುತ್ತಿದ್ದರು. ಕರ‍್ನಾಟಕದ ಪರ ಒಟ್ಟು 97 ರಣಜಿ ಪಂದ್ಯಗಳನ್ನಾಡಿರುವ ಅವರು 9 ಶತಕ ಹಾಗೂ 16 ಅರ‍್ದಶತಕಗಳೊಂದಿಗೆ 34ರ ಸರಾಸರಿಯಲ್ಲಿ 4,179 ರನ್ ಗಳಿಸಿ 101 ಕ್ಯಾಚ್ ಹಿಡಿದು 42 ಸ್ಟಂಪಿಂಗ್ ಮಾಡಿದ್ದಾರೆ. ಯುವಕರಿಗೆ ಎಡೆ ಮಾಡಿಕೊಡಲು 1988 ರಿಂದ ಎರಡು ರುತುಗಳಿಗೆ ರೈಲ್ವೇಸ್ ತಂಡದ ಪರ ಆಡಿದ ಅವರು ಬಳಿಕ ಕರ‍್ನಾಟಕ ತಂಡ ಸೊರಗಿದ್ದನ್ನು ಕಂಡು ನಾಯಕನಾಗಿ ಹಿಂದಿರುಗುತ್ತಾರೆ. ಅವರ ಮುಂದಾಳ್ತನದ ಹೊತ್ತಿನಲ್ಲೇ ಶ್ರೀನಾತ್, ಕುಂಬ್ಳೆ, ದ್ರಾವಿಡ್ ಹಾಗೂ ಪ್ರಸಾದ್ ರಂತಹ ಪ್ರತಿಬೆಗಳು ಬೆಳಕಿಗೆ ಬಂದದ್ದು ವಿಶೇಶ. 1967 ರಿಂದ 1994 ರ ತನಕ ಒಟ್ಟು 27 ವರ‍್ಶಗಳ ಕಾಲ ಮೊದಲ ದರ‍್ಜೆ ಕ್ರಿಕೆಟ್ ಆಡಿದ ಕಿರ‍್ಮಾನಿ 12 ರಣಜಿ ಪಂದ್ಯಗಳಲ್ಲಿ ಕರ‍್ನಾಟಕವನ್ನು ಮುನ್ನಡೆಸಿ ಒಂದೂ ಸೋಲು ಕಾಣದೆ 7 ಪಂದ್ಯಗಳನ್ನು ಗೆದ್ದಿರುವುದು ಅವರ ಹೆಗ್ಗಳಿಕೆ.
ಕಿರ‍್ಮಾನಿರಿಗೆ ಒಲಿದು ಬಂದ ಪ್ರಶಸ್ತಿ ಪುರಸ್ಕಾರಗಳು
ಬಾರತದ ಶ್ರೇಶ್ಟ ಕೀಪರ್ ಆಗಿದ್ದ ಕಿರ‍್ಮಾನಿ ಅವರಿಗೆ ಮೊದಲಿಗೆ 1980 ರಲ್ಲಿ ಅರ‍್ಜುನ ಪ್ರಶಸ್ತಿ ಒಲಿದು ಬಂತು. ಆ ಬಳಿಕ ಬಾರತ ಸರ‍್ಕಾರ ಅವರ ಕೊಡುಗೆಯನ್ನು ಮನಗಂಡು 1982 ರಲ್ಲಿ ಪ್ರತಿಶ್ಟಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. 1992 ರಲ್ಲಿ ಎಮ್.ಸಿ.ಸಿ. ಯ ಗೌರವ ಸದಸ್ಯತ್ವ ಪಡೆದುಕೊಂಡ ಅವರು 2014 ರಲ್ಲಿ ಸೀಯಟ್ ನ ಜೀವಮಾನ ಸಾದನೆ ಪ್ರಶಸ್ತಿ ಹಾಗೂ 2015 ರಲ್ಲಿ ಬಿ.ಸಿ.ಸಿ.ಐ ನ ಕರ‍್ನಲ್ ಸಿ.ಕೆ. ನಾಯ್ಡು ಜೀವಮಾನ ಸಾದನೆ ಗೌರವಕ್ಕೆ ಪಾತ್ರರಾದರು.
ಕಿರ‍್ಮಾನಿ ಎಂಬ ಬಹುಮುಕ ಪ್ರತಿಬೆ
ಎಂತಹ ಸಂದಿಗ್ದ ಪರಿಸ್ತಿತಿಯಲ್ಲೂ ತಮ್ಮ ತಾಳ್ಮೆ ಕಳೆದುಕೊಳ್ಳದ ಕಿರ‍್ಮಾನಿ ಆಟದ ಹೊತ್ತಿನಲ್ಲಿ ವಿಕೆಟ್ ನ ಹಿಂದೆ ತಮ್ಮ ಹಾಸ್ಯ ಪ್ರಗ್ನೆಯಿಂದ ಆಟಗಾರನ್ನೆಲ್ಲಾ (ಎದುರಾಳಿ ಆಟಗಾರರನ್ನು ಸೇರಿಸಿ) ನಗೆಗಡಲಲ್ಲಿ ತೇಲಿಸುತ್ತಿದ್ದರು. ಕ್ರಿಕೆಟ್‌ನಿಂದಾಚೆ ನೋಡುವುದಾದರೆ, ಹಿಂದಿ, ಕನ್ನಡ ಹಾಗೂ ಮಲಯಾಳಮ್ ನಲ್ಲಿ ತಲಾ ಒಂದೊಂದು ಸಿನಿಮಾದಲ್ಲಿ ನಟಿಸಿದ್ದಾರೆ. ಹವ್ಯಾಸಿ ನಟನಾಗಿ ಈ ಸಿನಿಮಾಗಳಲ್ಲಿ ನಟಿಸಿದ್ದರೂ ಅಚ್ಚುಕಟ್ಟಾಗಿ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ ಎಂದು ಸಿನಿ ವಿಮರ‍್ಶಕರು ವರದಿ ಮಾಡಿದ್ದು ಅವರ ನಟನಾ ಚಳಕಕ್ಕೆ ಎತ್ತುಗೆ ಎಂದೇ ಹೇಳಬೇಕು.
ಯುವ ಕೀಪರ್ ಗಳಿಗೆ ಮಾದರಿ ನಮ್ಮ ಕಿರ‍್ಮಾನಿ
ತಮ್ಮ ಆಟದ ದಿನಗಳಲ್ಲಿ ಎದುರಾಳಿ ಬ್ಯಾಟ್ಸ್ಮನ್ ಗಳ ಗಮನ ಹಾಳುಗೆಡವಲು ಮಾತಿನ ಚಕಮಕಿಗೆ ಎಂದೂ ಇಳಿಯದ್ದಿದ್ದ ಕಿರ‍್ಮಾನಿ ತಮಗೆ ಕಾತ್ರಿಯಾದರೆ ಮಾತ್ರ ಅಂಪೈರ್ ರಿಗೆ ಮನವಿ ಸಲ್ಲಿಸುವ ನೇರ‍್ಮೆ ಹೊಂದಿದ್ದರು. ವಿನಾಕಾರಣ ಮನವಿ ಸಲ್ಲಿಸಿ ಅಂಪೈರ‍್ಗಳನ್ನು ಎಂದೂ ಗೊಂದಲದಲ್ಲಿ ಸಿಲುಕಿಸಿದವರಲ್ಲ ಅವರು. ಹಾಗಾಗಿ ಅಂಪೈರ್ ಗಳನಂಬಿಕೆ ಸಂಪಾದಿಸದ್ದ ಕಿರ‍್ಮಾನಿ ತಮ್ಮ ಮನವಿಗಳ ತೂಕ ಹೆಚ್ಚಿಸಿಕೊಂಡು ತಂಡಕ್ಕೆ ನೆರವಾಗಿದ್ದರು. ಆದರೆ ಈಗಿನ ಕೀಪರ್ ಗಳ ಆಟಾಟೋಪಗಳನ್ನು, ಕುಯುಕ್ತಿಯನ್ನು ಕಂಡು ಹಲವಾರು ಬಾರಿ ಕಿರ‍್ಮಾನಿ ಬೇಸರ ಹೊರಹಾಕಿದ್ದಾರೆ. ಇದು ಕ್ರಿಕೆಟ್ ಆಡುವ ಬಗೆಯಲ್ಲ ಎಂದೂ ಸಹ ಟೀಕಿಸಿದ್ದಾರೆ. ಈ ದಿಗ್ಗಜನ ಕಿವಿಮಾತನ್ನ ಈಗಿನ ಕೀಪರ್ ಗಳು ಕೇಳಿದರೆ ಕಂಡಿತ ಆಟದ ಸಬ್ಯತೆಗೆ ಒಳಿತು. ನಿವ್ರುತ್ತಿಯ ಬಳಿಕ ಕೂಡ ಕೋಚ್ ಆಗಿ ಯುವ ಆಟಗಾರರಿಗೆ ಮಾರ‍್ಗದರ‍್ಶಕರಾಗಿರುವುದರ ಜೊತೆಗೆ ಕೆ.ಎಸ್.ಸಿ.ಎ ಹಾಗೂ ಬಿ.ಸಿ.ಸಿ.ಐ ನ ಹಲವಾರು ಗೌರವಯುತ ಪದವಿಗಳನ್ನು ಅಲಂಕರಿಸಿ ಕ್ರಿಕೆಟ್ ನ ಬೆಳವಣಿಗೆಗೆ ದುಡಿಯುತ್ತಿರುವ ಕಿರ‍್ಮಾನಿ ನಿಜವಾಗಿಯೂ ಒಬ್ಬ ದಿಗ್ಗಜ ಆಟಗಾರ. ದೋನಿ ಅವರಿಗೂ ಮುನ್ನ ಬಾರತದಲ್ಲಿ ಯಾರೂ ಶ್ರೇಶ್ಟ ಕೀಪರ್ ಗಳಿರಲಿಲ್ಲ ಎಂದು ಮೂಗು ಮುರಿಯುವವರಿಗೆ ಕಿರ‍್ಮಾನಿ ಅವರ ಹೆಸರೇ ಉತ್ತರ. ಅವರ ಕೊಡುಗೆಯನ್ನು ನಾವೆಂದೂ ಮರೆಯದಿರೋಣ.
ಸೊಗಸಾಗಿ ಬರದಿದ್ದಿರಾ… ಎಷ್ಟೊಂದು ಅಂಕಿಅಂಶಗಳನ್ನ ಕೊಟ್ಟಿದಿರಾ…ಕಿರ್ಮಾನಿ ನಿಜ್ವಾಗ್ಲೂ ಶ್ರೇಷ್ಠ ಕೀಪರ್!