ವಿಜಯಕ್ರಿಶ್ಣ – ಕರ್‍ನಾಟಕದ ಹೆಮ್ಮೆಯ ಆಲ್ರೌಂಡರ್
ಕರ‍್ನಾಟಕ ರಾಜ್ಯ ತಂಡ 1970 ಹಾಗೂ 80ರ ದಶಕದಲ್ಲಿ ಒಟ್ಟು ಮೂರು ರಣಜಿ ಟೂರ‍್ನಿ ಗೆದ್ದದ್ದು ಕನ್ನಡಿಗರ ಕ್ರಿಕೆಟ್ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದ ಸಾದನೆ. ಈ ಗೆಲುವುಗಳಲ್ಲಿ ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ದಿಗ್ಗಜರಾಗಿ ಬೆಳೆದಿದ್ದ ಎರಪಲ್ಲಿ ಪ್ರಸನ್ನ, ಚಂದ್ರಶೇಕರ್ ಹಾಗೂ ವಿಶ್ವನಾತ್ ಅವರೊಟ್ಟಿಗೆ ಹಲವು ಆಟಗಾರರ ಬಹು ಅಮೂಲ್ಯ ಕೊಡುಗೆಯೂ ಇತ್ತು. ಅಂತಹ ಆಟಗಾರರ ಪೈಕಿ ಶ್ರೇಶ್ಟ ಆಟಗಾರ ಎನಿಸಿಕೊಂಡು ಸುಮಾರು 15 ವರುಶಗಳ ಕಾಲ ತಂಡದ ಬೆನ್ನೆಲುಬಿನಂತೆ ಬ್ಯಾಟ್ ಮತ್ತು ಬಾಲ್ ಎರಡರಿಂದಲೂ ಹಲವಾರು ಗೆಲುವುಗಳನ್ನು ದಕ್ಕಿಸಿಕೊಟ್ಟಂತಹ ಕರ‍್ನಾಟಕದ ಮೇರು ಆಲ್ ರೌಂಡರ್ ಎಂದರೆ ಅದು ಬರಮಯ್ಯ ವಿಜಯಕ್ರಿಶ್ಣ ಅವರು. ಎಡಗೈ ಬ್ಯಾಟ್ಸ್ಮನ್ ಹಾಗೂ ಎಡಗೈ ಸ್ಪಿನ್ನರ್ ಆಗಿದ್ದ ಅವರು ಕಡೇವರೆಗೂ ಹೋರಾಡುವ ಚಲದಿಂದಲೇ ದೇಸೀ ಕ್ರಿಕೆಟ್ ನಲ್ಲಿ ಹೆಸರುವಾಸಿಯಾಗಿದ್ದರು.
ಹುಟ್ಟು – ಎಳವೆಯ ಕ್ರಿಕೆಟ್
ಅಕ್ಟೋಬರ್ 12, 1949 ರಂದು ವಿಜಯಕ್ರಿಶ್ಣ ಬೆಂಗಳೂರಿನಲ್ಲಿ ಹುಟ್ಟಿದರು. ಕುಮಾರ ಪಾರ‍್ಕ್ ನ ಬೆತೆಸ್ಡಾ ಶಾಲೆಯಲ್ಲಿ ಪ್ರಾತಮಿಕ ಶಿಕ್ಶಣದ ಹೊತ್ತಿನಲ್ಲೇ ಸ್ಪೋರ‍್ಟ್ಸ್ ಕಲಿಸುಗರಾದ ಡೀನಾರ ಮಾರ‍್ಗದರ‍್ಶನದಲ್ಲಿ ಅವರು ಕ್ರಿಕೆಟ್ ಆಡಲು ಮೊದಲು ಮಾಡಿದರು. ಪ್ಯಾಡ್ಸ್, ಗ್ಲವ್ಸ್ ಇಲ್ಲದೆ ಪುಟ್ಟ ವಿಜಯಕ್ರಿಶ್ಣ ಕಾರ‍್ಕ್ ಬಾಲ್ ನಲ್ಲಿ ಕ್ರಿಕೆಟ್ ಆಡುತ್ತಿದ್ದದ್ದು ನಿಜಕ್ಕೂ ಸೋಜಿಗವೇ. ಆ ಬಳಿಕ ಗೆಳೆಯ ನಾಗಬೂಶಣ್ ಹುಟ್ಟುಹಾಕಿದ್ದ ‘ಕ್ರಾಕರ‍್ಸ್’ ತಂಡದ ಮೂಲಕ ಅವರು ಲೆದರ್ ಬಾಲ್ ಕ್ರಿಕೆಟ್ ಆಡತೊಡಗಿದರು. ಕೇವಲ ಹನ್ನೊಂದನೇ ವಯಸ್ಸಿಗೆ ಮೈಸೂರಿನಲ್ಲಿ ಮೊದಲ ಲೀಗ್ ಪಂದ್ಯ ಆಡಿ ತಮ್ಮ ಎಡಗೈ ಸ್ಪಿನ್ನಿಂದ 5 ವಿಕೆಟ್ ಪಡೆದು ವಿಜಯಕ್ರಿಶ್ಣ ಎಲ್ಲರೂ ಬೆಕ್ಕಸ ಬೆರಗಾಗುವಂತೆ ಮಾಡಿದರು. ನಂತರ ಶೇಶಾದ್ರಿಪುರಮ್ ಶಾಲೆಯಲ್ಲಿ ಅವರು ಪ್ರೌಡ ಶಿಕ್ಶಣ ಕಲಿಯುವ ಹೊತ್ತಿಗೆ ತರಬೇತುದಾರ ಸಲೂಸ್ ನಜರತ್ ರ ಗರಡಿಯಲ್ಲಿ ಮಲ್ಲೇಶ್ವರಮ್ ನ ಸಿರೂರ್ ಪಾರ‍್ಕ್ ನಲ್ಲಿ ಆಟದ ಪಟ್ಟುಗಳನ್ನು ಕಲಿತು ವ್ರುತ್ತಿಪರ ಕ್ರಿಕೆಟರ್ ಆಗುವತ್ತ ಮೊದಲ ಹೆಜ್ಜೆ ಇಟ್ಟರು. 1964 ರಲ್ಲಿ ವಿಜಯಕ್ರಿಶ್ಣ ಮೈಸೂರು ರಾಜ್ಯ ಸ್ಕೂಲ್ಸ್ ತಂಡದ ಪರ ಆಡಿ ದಕ್ಶಿಣ ವಲಯದ ಶ್ರೇಶ್ಟ ಆಲ್ರೌಂಡರ್ ಗೌರವಕ್ಕೆ ಪಾತ್ರರಾದರು. ಬಳಿಕ ದಕ್ಶಿಣ ವಲಯ ಸ್ಕೂಲ್ಸ್ ತಂಡದ ಪರ ದೆಹಲಿಯಲ್ಲಿ ಅವರು ನೀಡಿದ ಸ್ತಿರ ಪ್ರದರ‍್ಶನದಿಂದ ರಾಜ್ಯ ಕಿರಿಯರ ತಂಡದಲ್ಲಿ ಎಡೆ ಪಡೆದರು. ಈ ಮಟ್ಟದಲ್ಲೂ ಎರಡು ವರುಶಗಳ ಕಾಲ ಬ್ಯಾಟ್ ಹಾಗೂ ಬಾಲ್ ಎರಡರಿಂದಲೂ ಗಮನ ಸೆಳೆದ ವಿಜಯಕ್ರಿಶ್ಣ, ರಾಜ್ಯ ರಣಜಿ ತಂಡದ ನಾಯಕ ವಿ. ಸುಬ್ರಮಣ್ಯ ಅವರ ಕಣ್ಣಿಗೆ ಬಿದ್ದರು. ಒಬ್ಬ ಅಳವುಳ್ಳ ಆಲ್ ರೌಂಡರ್ ಹುಡುಕಾಟದಲ್ಲಿದ್ದ ಅವರು ಹತ್ತೊಂಬತ್ತು ವರುಶದ ವಿಜಯಕ್ರಿಶ್ಣರನ್ನು ಮೈಸೂರು ರಣಜಿ ತಂಡದಲ್ಲಿ ಎಡೆ ಪಡೆಯುವಂತೆ ಮಾಡುತ್ತಾರೆ.
ರಣಜಿ ಕ್ರಿಕೆಟ್ ನ ದಿಗ್ಗಜ ವಿಜಯಕ್ರಿಶ್ಣ
ಡಿಸೆಂಬರ್ 1968 ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಮೈದಾನದಲ್ಲಿ ಹೈದರಾಬಾದ್ ಎದುರು ವಿಜಯಕ್ರಿಶ್ಣ ಮೈಸೂರು ರಾಜ್ಯ ತಂಡದ ಪರ ತಮ್ಮ ಚೊಚ್ಚಲ ರಣಜಿ ಪಂದ್ಯ ಆಡಿದರು. ತಮ್ಮ ಸ್ಪಿನ್ ಚಳಕದಿಂದ (2/32; 1/1) ಒಳ್ಳೆಯ ಆರಂಬ ಪಡೆದ ಅವರು ಮದ್ರಾಸ್ ಎದುರು ಎರಡನೇ ಪಂದ್ಯದಲ್ಲಿ (4/48; 2/37) ಮತ್ತು ಅದೇ ವರುಶದ ಬಂಗಾಳ ಎದುರಿನ ಸೆಮೀಸ್ ನಲ್ಲಿ ಉತ್ತಮ ಪ್ರದರ‍್ಶನದಿಂದ (2/46; 2/47) ತಂಡದ ಕಾಯಮ್ ಸದಸ್ಯರಾದರು. 1971/72 ರ ರಾಜಸ್ತಾನದ ವಿರುದ್ದ ಕ್ವಾರ‍್ಟರ್ ಪೈನಲ್ ನಲ್ಲಿ ಕಾಲಿಗೆ ಪೆಟ್ಟಾಗಿದ್ದರೂ ವಿಜಯಕ್ರಿಶ್ಣ ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟ್ ಮಾಡಿ ಔಟಾಗದೆ 71 ರನ್ ಗಳಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ಅವರ ಗಟ್ಟಿತನಕ್ಕೆ ಮಾರುಹೋಗಿದ್ದ ರಾಜಸ್ತಾನ ಆಟಗಾರರು ನಡೆಯಲು ಕಶ್ಟ ಪಡುತ್ತಿದ್ದ ವಿಜಯಕ್ರಿಶ್ಣರನ್ನು ಡ್ರೆಸ್ಸಿಂಗ್ ಕೋಣೆವರೆಗೂ ಹೊತ್ತುಕೊಂಡು ಬಂದದ್ದು ಇಂದಿಗೂ ಅವರ ವ್ರುತ್ತಿಬದುಕಿನ ಮರೆಲಾಯಗದ ಕ್ಶಣಗಳಲ್ಲೊಂದು. ರಾಜ್ಯ ತಂಡ 1973/74 ರಲ್ಲಿ ಮೊದಲ ರಣಜಿ ಟೂರ‍್ನಿ ಗೆದ್ದು ಬೀಗಿದ್ದುದ್ದರ ಹಿಂದೆ ಪೈನಲ್ ನಲ್ಲಿ ವಿಜಯಕ್ರಿಶ್ಣ ಬ್ಯಾಟ್ ನಿಂದ ನೀಡಿದ ಕೊಡುಗೆ ಅತ್ಯಮೂಲ್ಯವಾದದ್ದು ಎಂದೇ ಹೇಳಬೇಕು. ರಾಜಸ್ತಾನ ಎದುರು ಪೈನಲ್ ನಲ್ಲಿ ವಿಶ್ವನಾತ್ ಹಾಗೂ ಬ್ರಿಜೇಶ್ ಪಟೇಲ್ ರ ವಿಕೆಟ್ ಗಳೊಂದಿಗೆ 99 ರನ್ ಗಳಿಗೆ ಒಟ್ಟು 4 ವಿಕೆಟ್ ಕಳೆದುಕೊಂಡು ಸಂಕಶ್ಟದಲ್ಲಿದ್ದಾಗ ಅವರು ಗಳಿಸಿದ 71 ರನ್ ತಂಡವನ್ನು 300 ರ ಹತ್ತಿರಕ್ಕೆ ಕೊಂಡೊಯ್ದು, ಟೂರ‍್ನಿ ಗೆಲುವಿನಲ್ಲಿ ನಿರ‍್ಣಾಯಕ ಪಾತ್ರ ವಹಿಸಿತು. ನಂತರ 1975/76 ರಲ್ಲಿ ಮಹಾರಾಶ್ಟ್ರ ಎದುರು ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಕ್ವಾರ‍್ಟರ್ ಪೈನಲ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ ಎರಡು ತಾಸಿನಲ್ಲಿ ಅವರು ಔಟಾಗದೆ ಗಳಿಸಿದ ಶತಕ (102) ಆ ಸಾಲಿನ ವೇಗದ ಶತಕ ಎಂದು ಎಲ್.ಪಿ. ಜೈ ಟ್ರೋಪಿಯನ್ನು ಅವರ ಕೈಗೆ ತಂದಿಟ್ಟಿತು. ದೇಸೀ ತಂಡಗಳೆದುರು ಮಾತ್ರವಲ್ಲದೆ ವಿಜಯಕ್ರಿಶ್ಣ ಅಂತರಾಶ್ಟ್ರೀಯ ತಂಡಗಳೆದುರು ಪ್ರವಾಸಿ ಪಂದ್ಯಗಳಲ್ಲಿ ಕೂಡ ಪ್ರಾಬಲ್ಯ ಮೆರೆದ್ದಿದ್ದರು. ಅವುಗಳಲ್ಲಿ 1979 ರಲ್ಲಿ ಅಹಮದಾಬಾದ್ ನಲ್ಲಿ ಆಲ್ವಿನ್ ಕಾಲಿಚರನ್ ರ ಬಲಾಡ್ಯ ವೆಸ್ಟ್ ಇಂಡೀಸ್ ಎದುರು ವಿಜಯಕ್ರಿಶ್ಣರ (6/79; 3/89) ಪ್ರದರ‍್ಶನ ಅವರ ಅಳವು ಅಂತರಾಶ್ಟ್ರೀಯ ಮಟ್ಟದ್ದೆಂದು ಸಾಬೀತು ಮಾಡಿತು. ಗಟಾನುಗಟಿಗಳಿದ್ದ ವಿಂಡೀಸ್ ತಂಡವನ್ನು ದೇಸೀ ತಂಡ ಕರ‍್ನಾಟಕ ಮಣಿಸಿದ್ದು ಪವಾಡವೇ! ತಂಡದಲ್ಲಿ ದಿಗ್ಗಜ ಚಂದ್ರಶೇಕರ್ ಆಡಿ ಬೌಲ್ ಮಾಡಿದರೂ ಆ ಗೆಲುವಿನ ಹಿಂದೆ ಇದ್ದದ್ದು ವಿಜಯಕ್ರಿಶ್ಣರ ಕೈಚಳಕ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ನಂತರ 1982/83 ರ ರಣಜಿ ಪೈನಲ್ ನಲ್ಲಿ ಬಾಂಬೆ ಎದುರು ಇನ್ನಿಂಗ್ಸ್ ಮುನ್ನಡೆಗಾಗಿ ಅವರು ಬಿರುಸಾಗಿ ಬ್ಯಾಟ್ ಮಾಡಿದ ರೀತಿ ಎಲ್ಲರಿಗೂ ಮೈನವಿರೇಳಿಸಿತ್ತು. 534 ರನ್ ಗಳ ಬೆನ್ನತ್ತಿ ಹೊರಟ ಕರ‍್ನಾಟಕ ತಂಡ 470/8 ಕ್ಕೆ ಸಿಲುಕಿದಾಗ ಕೇವಲ ನಾಲ್ಕು ಓವರ್ ಗಳಲ್ಲಿ ವಿಜಯಕ್ರಿಶ್ಣ 42 ರನ್ ಬಾರಿಸಿ ತಂಡಕ್ಕೆ ಮೂರನೇ ರಣಜಿ ಕಿರೀಟ ಮುಡಿಸಿದ್ದರು. ಹೀಗೆ ರಾಜ್ಯ ತಂಡಕ್ಕೆ ಬ್ಯಾಟ್ ಮತ್ತು ಬಾಲ್ ಎರಡರಿಂದಲೂ ಸದಾ ನೆರವಾಗುತ್ತಿದ್ದ ವಿಜಯಕ್ರಿಶ್ಣ ಅಕ್ಶರಶಹ ತಂಡದ ದೊಡ್ಡ ಶಕ್ತಿಯಾಗಿದ್ದರು.
ಕರ‍್ನಾಟಕ ತಂಡದ ರೆಬೆಲ್ – ವಿಜಯಕ್ರಿಶ್ಣ
ತಮ್ಮ ವ್ರುತ್ತಿಬದುಕಿನಾದ್ಯಂತ ಇದ್ದುದ್ದನ್ನು ಇದ್ದ ಹಾಗೆ ಯಾರ ಮುಲಾಜು ಕೂಡ ನೋಡದೆ ನೇರವಾಗಿ ಮುಕದ ಮೇಲೆ ಹೇಳುವ ಗುಣ ವಿಜಯಕ್ರಿಶ್ಣ ಅವರದಾಗಿತ್ತು. ಇದರಿಂದ ಅವರು ಸಾಕಶ್ಟು ಬಾರಿ ಆಯ್ಕೆಗಾರರ ಕೆಂಗಣ್ಣಿಗೆ ಗುರಿಯಾಗಿ ತಂಡದಲ್ಲಿ ಎಡೆ ಕಳೆದುಕೊಂಡು ತೊಂದರೆಗಳಿಗೂ ಒಳಗಾಗಿದ್ದರು. ವಿಜಯಕ್ರಿಶ್ಣರ ಪ್ರತಿಬೆಯನ್ನು ಅರಿತಿದ್ದ ನಾಯಕ ಸುಬ್ರಮಣ್ಯ ಹಲವಾರು ಬಾರಿ ತಾಳ್ಮೆಯ ಪಾಟ ಹೇಳಿ ಅವರ ಬೆನ್ನಿಗೆ ನಿಂತಿದ್ದರು. 1980 ರ ದಶಕದಲ್ಲಿ ಒಮ್ಮೆ ದಿಗ್ಗಜ ಬಲಗೈ ಬ್ಯಾಟ್ಸ್ಮನ್ ಸುನಿಲ್ ಗಾವಸ್ಕರ್ ಕರ‍್ನಾಟಕ ತಂಡದ ಎದುರು ಪಂದ್ಯವೊಂದರಲ್ಲಿ ಎಡಗೈ ಬ್ಯಾಟಿಂಗ್ ಮಾಡಿದ್ದು ವಿಜಯಕ್ರಿಶ್ಣರನ್ನು ಕೆರಳಿಸಿತ್ತು. ತಮ್ಮ ತಂಡವನ್ನು ಗೇಲಿ ಮಾಡಲೆಂದು ಗಾವಸ್ಕರ್ ಹೀಗೆ ಮಾಡಿದ್ದಾರೆಂದು ತಿಳಿದ ಅವರು ಅದಕ್ಕೆ ಪ್ರತಿಯಾಗಿ ‘ಅಂಡರ್ ಆರ‍್ಮ್’ ಬೌಲ್ ಮಾಡಲು ಮುಂದಾಗಿದ್ದರು. ಆದರೆ ನಾಯಕ ಗುಂಡಪ್ಪ ವಿಶ್ವನಾತ್ ಅವರನ್ನು ತಡೆದಿದ್ದರು. ಎದುರಾಳಿ ದಿಗ್ಗಜ ಗಾವಸ್ಕರ್ ಎಂಬುದನ್ನೂ ಲೆಕ್ಕಿಸದೆ ಸೇರಿಗೆ ಸವ್ವಾಸೇರು ನೀಡುವ ಅವರ ಗುಣ ನಿಜಕ್ಕೂ ಹೊಗಳುವಂತದ್ದು.
ವಿಜಯಕ್ರಿಶ್ಣರ ವ್ರುತ್ತಿಬದುಕು
ಒಟ್ಟು 15 ವರುಶಗಳ ಕಾಲ ಕರ‍್ನಾಟಕ ತಂಡದ ಪರ ದೇಸೀ ಕ್ರಿಕೆಟ್ ಆಡಿದ ವಿಜಯಕ್ರಿಶ್ಣ ಮೂರು ರಣಜಿ ಟೂರ‍್ನಿ ಹಾಗೂ ಎರಡು ಇರಾನಿ ಕಪ್ ಗೆದ್ದಿದ್ದಾರೆ. 80 ಮೊದಲ ದರ‍್ಜೆ ಪಂದ್ಯಗಳಲ್ಲಿ 27 ರ ಸರಾಸರಿಯಲ್ಲಿ 194 ವಿಕೆಟ್ ಗಳು ಹಾಗೂ 26 ರ ಸರಾಸರಿಯಲ್ಲಿ 2 ಶತಕ ಹಾಗೂ 16 ಅರ‍್ದಶತಕಗಳೊಂದಿಗೆ 2,297 ರನ್ ಗಳಿಸಿರುವ ಅವರು ಮೇರು ಕ್ರಿಕೆಟರ್ ಎಂಬುದರಲ್ಲಿ ಎರಡು ಮಾತಿಲ್ಲ. ಚಂದ್ರ, ಪ್ರಸನ್ನ, ಬೇಡಿ ಅವರಂತಹ ದಿಗ್ಗಜ ಸ್ಪಿನ್ನರ್ ಗಳ ಸಮಕಾಲೀನರಾಗಿದ್ದರಿಂದಲೇ ಅಳವಿದ್ದರೂ ವಿಜಯಕ್ರಿಶ್ಣ ಎಂದೂ ಬಾರತದ ಪರ ಅಂತರಾಶ್ಟ್ರೀಯ ಕ್ರಿಕೆಟ್ ಆಡಲಾಗಲಿಲ್ಲ ಎಂಬುದು ಕ್ರಿಕೆಟ್ ಪಂಡಿತರ ಅಂಬೋಣ. ದುರಂತ ಎಂದರೆ ಚಂದ್ರ ಹಾಗೂ ಪ್ರಸನ್ನ ಇಬ್ಬರೂ ರಾಜ್ಯ ತಂಡಕ್ಕೆ ಮರಳಿದಾಗ ರಣಜಿ ಟೂರ‍್ನಿಯಲ್ಲೂ ಅವರಿಗೆ ಹೆಚ್ಚು ಬೌಲಿಂಗ್ ಅವಕಾಶ ಸಿಗುತ್ತಿರಲಿಲ್ಲ. ಆದರೆ ಇವ್ಯಾವುದಕ್ಕೂ ದ್ರುತಿಗೆಡದ ವಿಜಯಕ್ರಿಶ್ಣ ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ಆಟದಿಂದಲೇ ಉತ್ತರ ನೀಡುತ್ತಿದ್ದರು. ಹಲವಾರು ಬಾರಿ ದಕ್ಶಿಣ ವಲಯದ ಪರ ಆಡಿದರೂ ಅದರ ಮುಂದಿನ ಹಂತದ ಕ್ರಿಕೆಟ್ ಗೆ ಅವರು ಆಯ್ಕೆ ಆಗಲೇ ಇಲ್ಲ. ಆದರೆ ಇದರ ಬಗ್ಗೆ ಬೇಸರಗೊಳ್ಳದ ಈ ಕರ‍್ನಾಟಕದ ಆಲ್ ರೌಂಡರ್, ಅವರ ಕ್ಲಬ್ ಸಿಟಿ ಕ್ರಿಕೆಟರ‍್ಸ್ ಪರ ಆಗಿರಲಿ ಅತವಾ ಅವರ ಸಿಂಡಿಕೇಟ್ ಬ್ಯಾಂಕ್ ತಂಡದ ಪರ ಆಗಿರಲಿ ಸದಾ ತೀವ್ರತೆಯಿಂದ, ಶ್ರದ್ದೆಯಿಂದ ಕ್ರಿಕೆಟ್ ಆಡುತ್ತಿದ್ದರು. ತಮ್ಮ ಚಲ ಹಾಗೂ ವ್ರುತ್ತಿಪರತೆಯಿಂದ ವಿಜಯಕ್ರಿಶ್ಣ ಸಹ ಆಟಗಾರರಿಗೆ ಮಾದರಿಯಾಗಿದ್ದರು. ಸಾಂಪ್ರದಾಯಿಕ ಎಡಗೈ ಸ್ಪಿನ್ನರ್ ಆಗಿದ್ದ ಅವರು ಪ್ಲೈಟ್, ಟರ‍್ನ್, ಲೂಪ್ ನ ಎಸೆತಗಳು ಮಾತ್ರವಲ್ಲದೆ ಆಗಾಗ ಚೈನಾಮ್ಯಾನ್ ಬಗೆಯಲ್ಲೂ ಬೌಲಿಂಗ್ ಮಾಡುತ್ತಿದ್ದದು ವಿಶೇಶ. ಬ್ಯಾಟಿಂಗ್ ನಲ್ಲೂ ಸಹ ತಂಡದ ಅಗತ್ಯಕ್ಕೆ ತಕ್ಕಂತೆ ತಾಳ್ಮೆಯ ಆಟಕ್ಕೂ ಸೈ, ಬಿರುಸಿನ ಆಟಕ್ಕೂ ಸೈ ಎಂಬಂತೆ ಆಡುತ್ತಿದ್ದರು. ಪೀಲ್ಡಿಂಗ್ ಗೆ ಹೆಚ್ಚು ಪ್ರಾಶಸ್ತ್ಯ ಇಲ್ಲದಿದ್ದ ಕಾಲದಲ್ಲಿ ಕ್ರಿಕೆಟ್ ಆಡಿದರೂ ವಿಜಯಕ್ರಿಶ್ಣ ಮಿಂಚಿನ ಪೀಲ್ಡರ್ ಆಗಿದ್ದರು. ರಾಜ್ಯ ತಂಡದ ಪರ ಆಗಿದ್ದ ಸುಬ್ರಮಣ್ಯರ ಕ್ಯಾಚ್ ಗಳ ದಾಕಲೆಯನ್ನು ಮುರಿದದ್ದು (72) ಅವರ ಪೀಲ್ಡಿಂಗ್ ಚಳಕಕ್ಕೆ ಸೂಕ್ತ ಎತ್ತುಗೆ. ಬೇರೆ ದೇಸೀ ತಂಡದ ಅಂತರಾಶ್ಟ್ರೀಯ ಆಟಗಾರರು ಕೂಡ ಅವರನ್ನು ಗೌರವಿಸುತ್ತಿದ್ದರು.
ನಿವ್ರುತ್ತಿ ಬಳಿಕ ಕೂಡ ಕ್ರಿಕೆಟ್ ನೊಂದಿಗೆ ತಮ್ಮ ನಂಟನ್ನು ಉಳಿಸಿಕೊಂಡಿದ್ದ ವಿಜಯಕ್ರಿಶ್ಣ, 1998/99 ರಲ್ಲಿ ರಣಜಿ ಟೂರ‍್ನಿ ಗೆದ್ದ ಕರ‍್ನಾಟಕ ತಂಡದ ಆಯ್ಕೆಗಾರರಾಗಿದ್ದರು. ಹಿರಿಯ ಸ್ಪಿನ್ನರ್ ಆಗಿ ಸುನಿಲ್ ಜೋಶಿ, ಅನಂತ್, ಆನಂದ್ ಕಟ್ಟಿ ರಂತಹ ಸ್ಪಿನ್ನರ್ ಗಳನ್ನು ತಿದ್ದಿದರು. ಕರ‍್ನಾಟಕ ಕ್ರಿಕೆಟ್ ವಲಯದಲ್ಲಿ ದಿಗ್ಗಜರಾಗಿದ್ದರೂ ಎಲೆ ಮರೆಕಾಯಿಯಂತೆ 71 ವರುಶಗಳ ಬದುಕು ನಡೆಸಿ ಜೂನ್ 17, 2021 ರಂದು ವಿಜಯಕ್ರಿಶ್ಣ ನಮ್ಮನ್ನೆಲ್ಲಾ ಅಗಲಿದರು. ಅವರ ಸಾವಿನಿಂದ ಕರ‍್ನಾಟಕ ಕ್ರಿಕೆಟ್ ನ ಬವ್ಯ ಇತಿಹಾಸದ ಒಂದು ಕೊಂಡಿ ಕಳಚಿದ್ದು ಸುಳ್ಳಲ್ಲ. ಅವರ ಕೊಡುಗೆಯನ್ನು ಎಲ್ಲಾ ತಂಡಗಳ ದಿಗ್ಗಜ ಕ್ರಿಕೆಟರ್ ಗಳು, ಪತ್ರಕರ‍್ತರು ಮಾತ್ರವಲ್ಲದೆ ಮುಕ್ಯಮಂತ್ರಿ ಯಡಿಯೂರಪ್ಪನವರು ಕೂಡ ನೆನೆದು ಅವರ ಸಾವಿಗೆ ಸಂತಾಪ ಸೂಚಿಸಿದರು. ಅಂತರಾಶ್ಟ್ರೀಯ ಆಟಗಾರರನ್ನು ಮಾತ್ರ ಗೌರವಿಸುವ ಪರಿಪಾಟ ಹೊಂದಿರುವ ಬಾರತದಲ್ಲಿ ಮೊದಲ ದರ‍್ಜೆ ಆಟಗಾರ ವಿಜಯಕ್ರಿಶ್ಣರಿಗೆ ಸಿಕ್ಕ ಗೌರವ ಮೆಚ್ಚುವಂತದ್ದು. ಮುಂದಿನ ಪೀಳಿಗೆ ಕೂಡ ಕನ್ನಡಿಗ ವಿಜಯಕ್ರಿಶ್ಣರ ಕೊಡುಗೆಯನ್ನು ಮರೆಯದಂತೆ ನೋಡಿಕೊಳ್ಳುವ ಹೊಣೆ ನಮ್ಮೆಲ್ಲರದು. ತಪ್ಪದೇ ಕ್ರಿಕೆಟ್ ಆಟವನ್ನು ಪ್ರೀತಿಸುವ ಪ್ರತಿಯೊಬ್ಬರಿಗೆ ಈ ದಿಗ್ಗಜನನ್ನು ಪರಿಚಯಿಸೋಣ.
(ಚಿತ್ರ ಸೆಲೆ: deccanherald.com, thehindu.com)
ಒಳ್ಳೆಯ ಬರಹ, ರಾಮು. ವಿಜಯಕೃಷ್ಣ ಅವರ ಬಗ್ಗೆ ಗೊತ್ತಿರದ ವಿಚಾರಗಳನ್ನು ವಿವರಿಸಿದ್ದೀರಿ.