ಆರೋಗ್ಯವೇ ಬಾಗ್ಯ

– ಸಂಜೀವ್ ಹೆಚ್. ಎಸ್.

ಬಹುಶಹ ಕೊರೊನಾ ಬಂದಮೇಲೆ ಬಹುತೇಕರಿಗೆ ಆಹಾರ ಮತ್ತು ಆರೋಗ್ಯದ ಮಹತ್ವದ ಜೊತೆಗೆ, ‘ನಿಜವಾದ ಸಂಪತ್ತು ಎಂದರೆ ಅದು ಆರೋಗ್ಯ!’ ಎಂಬ ದಿಟ ಅರಿವಾದಂತೆ ಕಾಣುತ್ತಿದೆ. ಕೋಟಿ ಕೋಟಿ ಸಂಪಾದನೆ ಮಾಡಿಟ್ಟಿದ್ದರೂ, ಆರೋಗ್ಯವನ್ನು ವ್ರುದ್ದಿಸುವ ಮತ್ತು ಜೀವವನ್ನು ಉಳಿಸಿಕೊಳ್ಳುವ ಸಾದ್ಯತೆ ಕಡಿಮೆಯಾಗುತ್ತಿದೆ. ಎಲ್ಲಾ ತರಹದ ಸೌಲಬ್ಯಗಳನ್ನು ಹೊಂದಿದ್ದು, ಕಾಸು ಕೂಡ ಕರ‍್ಚು ಮಾಡಲು ಹಿಂದೆ ಮುಂದೆ ನೋಡದ ವ್ಯಕ್ತಿಗಳನ್ನು ಸಹ ಕೊರೊನಾ ಬಲಿ ತೆಗೆದುಕೊಂಡಿದೆ. ಉತ್ತಮ ಜೀವನ ನಡೆಸಲು, ನಾವು ಜೀವನಪೂರ‍್ತಿ ದುಡ್ಡು ಸಂಪಾದನೆ ಮಾಡುವತ್ತ ಗಮನ ಕೊಡುತ್ತಿರುತ್ತೇವೆ. ಆದರೆ ಒಂದು ದಿನ ಅದೇ ದುಡ್ಡಿದ್ದರೂ ಕೂಡ, ನಮ್ಮನ್ನು ಬಹುಕಾಲ ಉಳಿಸಲು ಸಾದ್ಯವಿಲ್ಲ ಎಂಬುದು ಕಹಿಸತ್ಯ. ಸಂಪಾದಿಸಿದ ಹಣ, ಆಸ್ತಿ ನಮ್ಮ ಆರೋಗ್ಯವನ್ನು ವ್ರುದ್ದಿಸುವುದರಲ್ಲಿ ಅತವಾ ಉಳಿಸಿಕೊಳ್ಳುವುದಕ್ಕಾಗಿ ಪ್ರಯೋಜನಕ್ಕೆ ಬರುವುದಿಲ್ಲ ಎಂದಾದರೆ, ಗಳಿಸಿದ ಆಸ್ತಿ, ಅಂತಸ್ತು ಮತ್ತು ಸಂಪಾದನೆಗೆ ಎಶ್ಟು ಬೆಲೆ ಇದೆ?

ಜೀವನದುದ್ದಕ್ಕೂ ಆರೋಗ್ಯಕರ ಜೀವನ ನಡೆಸುವ ಸಲುವಾಗಿ ಸಂಪಾದನೆ ಮಾಡುವ ಹಂತದಲ್ಲಿ, ಸಂಪಾದನೆ ಮಾಡುವ ರೀತಿ, ಕ್ರಮ ಜೀವನಶೈಲಿ ನಮ್ಮ ಆರೋಗ್ಯವನ್ನೇ ಕಬಳಿಸಿದರೆ, ಅಶ್ಟೊಂದು ಹಣ ಸಂಪಾದನೆ ಮಾಡಿ ಪ್ರಯೋಜನವೇನು? ಹಾಗಾದರೆ ಏನಿದು ಆರೋಗ್ಯ ಸಂಪಾದನೆ?. ಹಣ ಆಸ್ತಿ ಸಂಪಾದನೆ ಕೇಳಿದ್ದೇವೆ, ಇದಾವುದು ಆರೋಗ್ಯ ಸಂಪಾದನೆ? ಆರೋಗ್ಯ ಸಂಪಾದನೆ ಮಾಡುವುದಾದರೂ ಹೇಗೆ? ಇವೆಲ್ಲಾ ಸೂಕ್ಶ್ಮತೆಗಳನ್ನು ಒಳಗೊಂಡ ಪ್ರಶ್ನೆಗಳಾಗಿವೆ. ಮನುಶ್ಯ ಸಮಾಜ ಜೀವಿ, ಗಂಡ-ಹೆಂಡತಿ, ಮಕ್ಕಳು, ಅಪ್ಪ-ಅಮ್ಮ ಅಣ್ಣ-ತಮ್ಮ ಬಂದು-ಬಳಗ ಮತ್ತು ಸ್ನೇಹಿತರು ಸೇರಿದಂತೆ ಎಲ್ಲರ ನಡುವೆ ಉತ್ತಮ ಬಾಂದವ್ಯ ಬೆಳೆಸಿಕೊಂಡು, ತನ್ನ ಆರೋಗ್ಯವನ್ನು ವ್ರುದ್ದಿಸಿಕೊಂಡು ಸಮಾಜದ ಏಳಿಗೆಗೆ ತನ್ನ ಕೆಲಸಗಳ ಮೂಲಕ ಕೊಡುಗೆ ನೀಡುವುದು ಉತ್ತಮ ನಾಗರಿಕನ ಜವಾಬ್ದಾರಿಯಾಗಿದೆ. ಆದರೆ ಹೆಚ್ಚಿನವರು ಬೇಜವಾಬ್ದಾರಿಯಿಂದ ಲಕ್ಶ್ಯದಿಂದ ವಿಮುಕರಾಗಿ ಓಡುತ್ತಿದ್ದಾರೆ. ಅತಿಯಾದ ಕೆಲಸದ ಒತ್ತಡ, ಆರೋಗ್ಯ ಕ್ರಮದಲ್ಲಿ ಏರುಪೇರು, ವಿರುದ್ದ ಆಹಾರ ಪದ್ದತಿ, ಬದಲಾಗುತ್ತಿರುವ ಜೀವನಶೈಲಿ, ದುಶ್ಚಟಗಳು, ದ್ವೇಶ, ಅಸೂಯೆ, ಮೋಸ ಮತ್ತು ಮಾನಸಿಕ ದುರ‍್ಬಲತೆ, ಇವೆಲ್ಲವೂ ಕೂಡ ನಮ್ಮ ಆರೋಗ್ಯ ಸಂಪಾದನೆ ಎಂಬ ವಿಚಾರವನ್ನು ಹಿಂದೆ ಸರಿಸಿದೆ.

ಇಂದಿನ ಯಾಂತ್ರಿಕ ಜೀವನದಲ್ಲಿ ಮನುಶ್ಯ ಹಣದ ವ್ಯಾಮೋಹದಲ್ಲಿ ಆರೋಗ್ಯ ನಿರ‍್ಲಕ್ಶಿಸುತ್ತಿದ್ದಾನೆ. ಇದೊಂದು ಅಪಾಯಕಾರಿ ಬೆಳವಣಿಗೆಯಾಗಿದೆ. ಜನರಿಗೆ ಉತ್ತಮ ಆರೋಗ್ಯದ ಮಹತ್ವ ಆಸ್ಪತ್ರೆಯಲ್ಲಿದ್ದಾಗಲೇ ಅರಿವಿಗೆ ಬರುವುದು! ಇಂದು ನಾಯಿ ಕೊಡೆಗಳಂತೆ ಆಸ್ಪತ್ರೆಗಳು ಹುಟ್ಟಿಕೊಳ್ಳುತ್ತಿವೆ. ರೋಗ-ರುಜಿನ ಬಂದು, ಆಸ್ಪತ್ರೆಯನ್ನು ನಾಲ್ಕು ದಿನ ಸುತ್ತಾಡಿ ಬಂದಮೇಲೆ ಆರೋಗ್ಯ ಕಾಪಾಡಿಕೊಳ್ಳಬೇಕು, ಆರೋಗ್ಯಕರ ಆಹಾರವನ್ನು ಸೇವಿಸಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ, ಆ ಪ್ರತಿಜ್ನೆ ಸ್ವಲ್ಪ ದಿನ ಅಶ್ಟೇ. ಅದು ದೀರ‍್ಗಕಾಲದ ಪ್ರತಿಜ್ನೆಯಾಗಿ ನಿಲ್ಲದು. ಕೊನೆಗೆ ಜನ ಮತ್ತದೇ ಹಳೆಯ ಜೀವನ ಶೈಲಿಗೆ ಜೋತು ಬೀಳುತ್ತಾರೆ, ಏಕೆಂದರೆ, ಉತ್ತಮ ಹವ್ಯಾಸಗಳು ಬಹಳಶ್ಟು ತ್ಯಾಗಗಳನ್ನು ಬಯಸುತ್ತವೆ. ಬೆಳಿಗ್ಗೆ ಎದ್ದು ಸಣ್ಣದೊಂದು ಕಾಲ್ನಡಿಗೆ, ವ್ಯಾಯಾಮ, ಯೋಗ, ದ್ಯಾನ ಇತ್ಯಾದಿ ಮಾಡಿದರೆ ಒಳ್ಳೆಯದು, ಆದರೆ ಅವುಗಳಿಗೆಲ್ಲಾ ಟೈಮ್ ಎಲ್ಲಿದೆ ಸ್ವಾಮಿ? ದಿನದಲ್ಲಿ ಹೊತ್ತಿಲ್ಲದ ಹೊತ್ತಿನಲ್ಲಿ ಕಾಪಿ, ಟೀ ಕುಡಿಯಲು, ಸಂಜೆಯಾದರೆ ಬೀದಿ ಬದಿಯ ಕುರುಕಲು ತಿಂಡಿ ತಿನ್ನಲು ಮತ್ತು ರಾತ್ರಿಹೊತ್ತಿಗೆ ಕುಡಿತದಂತಹ ದುಶ್ಚಟಗಳನ್ನು ಪಾಲಿಸಲು – ಹೀಗೆ ಇವುಗಳಿಗೆಲ್ಲ ಸಮಯವಿದೆ. ಉತ್ತಮ ಆಹಾರ ಪದ್ದತಿ ಮತ್ತು ಕ್ರಮಕ್ಕೆ ಬಹಳಶ್ಟು ದುಂದು ವೆಚ್ಚವಾಗುವುದು ಎಂದು ಜನ ಹೇಳುತ್ತಾರೆ ಆದರೆ ಅನಾರೋಗ್ಯಕರ ಜೀವನಶೈಲಿಗೆ ಕೊಡುವ ಪ್ರಾಮುಕ್ಯತೆಗೆ ಯಾವುದೇ ದುಂದು ವೆಚ್ಚದ ಮುಕ ನೋಡುವುದಿಲ್ಲ!

ಹಣ ಸಂಪಾದನೆ ಮಾಡುವ ಬರದಲ್ಲಿ ನಾವು ನಮ್ಮ ಆಹಾರ ಮತ್ತು ಆರೋಗ್ಯವನ್ನು ಕಡೆಗಣಿಸಿ, ಶಾಶ್ವತವಲ್ಲದ ಇಂದು ಬಂದು ನಾಳೆ ಹೋಗುವ ಬೌತಿಕ ಸಂಪಾದನೆಗೆ ಹಗಲು-ರಾತ್ರಿಯೆನ್ನದೆ ದುಡಿಯುತ್ತೇವೆ. ಆದರೆ, ನಾವು ಇರುವತನಕ ನಮ್ಮನ್ನು ಚೆನ್ನಾಗಿರಿಸಲು ಬೇಕಿರುವ ಆರೋಗ್ಯವನ್ನು ಬಹುತೇಕ ಕಾಲದವರೆಗೆ ಕಡೆಗಣಿಸಿ ಬಿಡುತ್ತೇವೆ. ಇಂದು ದುಡ್ಡು ಮಾಡುವ ಕಾಲ, ಮೊದಲು ಒಂದಶ್ಟು ದುಡ್ಡು ಸಂಪಾದನೆ ಮಾಡಿ ಇಡೋಣ ನಂತರ ನೆಮ್ಮದಿಯ ಜೀವನ ನಮ್ಮದಾಗುತ್ತದೆ ಎಂಬ ಬ್ರಮೆಯ ಬಾವನೆಯೇ ನಮ್ಮೆಲ್ಲರನ್ನು ಮಾನಸಿಕವಾಗಿ ಕಾಡುತ್ತಿರುವ ದೊಡ್ಡ ರೋಗವಾಗಿದೆ. ಕಂಡಿತವಾಗಿಯೂ ನೆಮ್ಮದಿಯ ನಾಳೆ ಎಂಬುದು ಬರುವುದಿಲ್ಲ. ಇಂದು ಆ ನೆಮ್ಮದಿಯ ನಾಳೆಗಾಗಿ ಒಂದಶ್ಟು ಉತ್ತಮ ಅಬ್ಯಾಸಗಳು ಮತ್ತು ಹವ್ಯಾಸಗಳನ್ನು ಬೆಳೆಸಿಕೊಂಡರೆ, ನಮ್ಮ ಇಂದು ಮತ್ತು ನಾಳೆ ಎರಡೂ ಕೂಡ ನೆಮ್ಮದಿಯಿಂದ ಕೂಡಿರುತ್ತವೆ ಮತ್ತು ಜೀವನದ ಪಯಣ ನೆಮ್ಮದಿಯಿಂದ ಕೂಡಿ ಸಾಗುತ್ತದೆ. ಹಣ ಆಸ್ತಿ ಸಂಪಾದನೆ ಕಂಡಿತವಾಗಿಯೂ ತಪ್ಪಲ್ಲ, ಆದರೆ ಅದನ್ನು ಸಂಪಾದನೆ ಮಾಡುವ ಬರದಲ್ಲಿ ಆರೋಗ್ಯವನ್ನು ಹಾಳು ಮಾಡಿಕೊಂಡರೆ ಸಂಪಾದನೆ ಮಾಡಿದುದೆಲ್ಲಾ ವ್ಯರ‍್ತ. ಗಳಿಸಿದ ಸಂಪಾದನೆಯನ್ನು ಅನುಬವಿಸುವುದು ಕೂಡ ಅಶ್ಟೇ ಮುಕ್ಯ ಅಲ್ಲವೇ. ಗಳಿಸಿ ಕೂಡಿಟ್ಟು ಮುಂದೊಂದು ದಿನ ಅವುಗಳಿಂದ ಸುಕಿಸುತ್ತೇವೆ ಎಂಬುದು ಮೂರ‍್ಕತನ.

ಬಾರತೀಯರು ತಮ್ಮ ಸಂಪಾದನೆಯ 27% ನಶ್ಟು ಆರೋಗ್ಯ ಮತ್ತು ಔಶದಿಗಳಿಗಾಗಿ ಕರ‍್ಚು ಮಾಡುತ್ತಾರೆ ಅಂತ ಹೇಳಲಾಗುತ್ತದೆ. ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡರೆ ಅದು ಕೇವಲ ನಮಗಶ್ಟೇ ಆಗುವ ನಶ್ಟವಲ್ಲ. ನಮ್ಮ ಜೊತೆಗಿರುವವರ, ಕುಟುಂಬದವರ ಮತ್ತು ನಮ್ಮನ್ನು ನಂಬಿ ಅವಲಂಬಿತವಾಗಿರುವವರ ಜನರ ಮೇಲೆ ಕೂಡ ಮಾಡುವ ನಶ್ಟವಾಗಿದೆ. ಹಣ ಸಂಪಾದನೆಗೆ ಹೊತ್ತು ಕೊಡುವಶ್ಟೇ ಮುತುವರ‍್ಜಿ ಮತ್ತು ಕಾಳಜಿಯನ್ನು ಆರೋಗ್ಯ ಸಂಪಾದನೆಗೂ ಕೂಡ ಮೀಸಲಿಟ್ಟರೆ ನಾವು ,ನಮ್ಮವರು ಮತ್ತು ನಮ್ಮ ಸುತ್ತಲಿನ ಸಮಾಜ ಎಲ್ಲವೂ ಕೂಡ ಸುಸ್ತಿರ ಮತ್ತು ಸ್ವಾಸ್ತ್ಯದಿಂದ ಕಂಗೊಳಿಸುತ್ತದೆ.

 

( ಚಿತ್ರಸೆಲೆ: pixabay.com )

 

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *