ರಾಗಿ ಹಿಟ್ಟಿನ ಒತ್ತು ಶಾವಿಗೆ

– ಶ್ಯಾಮಲಶ್ರೀ.ಕೆ.ಎಸ್.

ಬೇಕಾಗುವ ಸಾಮಾನುಗಳು

ರಾಗಿ ಹಿಟ್ಟು – 1 1/2 ಬಟ್ಟಲು
ನೀರು – 3 ಬಟ್ಟಲು
ಉಪ್ಪು – 1/2 ಟೀ ಚಮಚ

ಮಾಡುವ ಬಗೆ

ರಾಗಿ ಶಾವಿಗೆಗೆ ಬಳಸುವ ಹಿಟ್ಟಿನ ತಯಾರಿ: ರಾಗಿಯನ್ನು ಚೆನ್ನಾಗಿ ತೊಳೆದು ನೆರಳಲ್ಲಿ ಒಣಗಿಸಿ. ಚೆನ್ನಾಗಿ ಒಣಗಿದ ನಂತರ ಹಿಟ್ಟನ್ನು ಸಿದ್ದಪಡಿಸಿಕೊಳ್ಳಬೇಕು.

ಮೊದಲಿಗೆ ಒಂದು ಪಾತ್ರೆಗೆ ನೀರು ಹಾಕಿ, ಉಪ್ಪು ಮತ್ತು ಒಂದು ಚಮಚದಶ್ಟು ರಾಗಿ ಹಿಟ್ಟು ಸೇರಿಸಿ ಕುದಿಸಬೇಕು. ಹೀಗೆ ಕುದಿಯುವ ವೇಳೆ ಸ್ವಲ್ಪ ಸ್ವಲ್ಪವಾಗಿ ರಾಗಿ ಹಿಟ್ಟನ್ನು ಸೇರಿಸಿ ಮಿಶ್ರಣ ಮಾಡಿ ರಾಗಿ ಮುದ್ದೆಯ ಹದಕ್ಕೆ ಚೆನ್ನಾಗಿ ನಾದಿಕೊಳ್ಳಬೇಕು. ಮೂರ‍್ನಾಲ್ಕು ನಿಮಿಶ ಬೇಯಿಸಿ ಇಳಿಸಿ ಸಿಲಿಂಡರಾಕ್ರುತಿಗೆ ಮುದ್ದೆ ಮಾಡಿಕೊಂಡು ಇಡ್ಲಿ ತಟ್ಟೆ ಅತವಾ ಕುಕ್ಕರ್ ನಲ್ಲಿ ಎರಡು ಮೂರು ವಿ‌‌ಶಲ್ ಬರುವವರೆಗೆ ಬೇಯಿಸಬೇಕು. ವಿಶಲ್ ಆರಿದ ಮೇಲೆ ಶಾವಿಗೆ ಒರಳಿಗೆ ಎಣ್ಣೆ ಸವರಿ ಬೇಯಿಸಿದ ರಾಗಿ ಮುದ್ದೆ ಇಟ್ಟು ಒರಳಿನ ಕೆಳಗೆ ಒಂದು ಪ್ಲೇಟ್ ಅತವಾ ಬಾಳೆ ಎಲೆ ಇಟ್ಟು ಒತ್ತಬೇಕು. ಹೀಗೆ ಮಾಡಿದಾಗ ಒತ್ತು ಶಾವಿಗೆ ಸಿದ್ದವಾಗುತ್ತದೆ.

ಒತ್ತು ಶಾವಿಗೆಯನ್ನು ಕಾಯಿ ಹಾಲು ಮತ್ತು ಮಾಲ್ದಿ ಪುಡಿಯೊಂದಿಗೆ ಸವಿಯಬಹುದು. ಕಾಯಿ ಹಾಲು ಮತ್ತು ಮಾಲ್ದಿ ಪುಡಿಯನ್ನು ಹೇಗೆ ಮಾಡುವುದೆಂದು ಮುಂದಿನ ಬರಹದಲ್ಲಿ ನೋಡೋಣ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks