ರಾಜಮುಡಿಯ ರಾಜವೈಬವ
ಅನ್ನದೇವರ ಮುಂದೆ ಇನ್ನು ದೇವರುಂಟೆ ?
ಅನ್ನವಿರುವ ತನಕ ಪ್ರಾಣವು ಜಗದೊಳ
ಅನ್ನವೇ ದೈವ ಸರ್ವಜ್ಞ
ಅನ್ನ ಹಸಿವು ನೀಗಿಸುವ ಅತವಾ ನಾಲಿಗೆಯ ರುಚಿ ತೀರಿಸುವ ಸಾದನವಲ್ಲ. ಬಾರತೀಯ ಸಂಸ್ಕ್ರುತಿಯಲ್ಲಿ ಅನ್ನಕ್ಕೆ ತನ್ನದೇ ಆದ ಸ್ತಾನಮಾನವಿದೆ. ಅನ್ನ ಒಡಲಿಗೆ ಶಕ್ತಿ ಮತ್ತು ಮನಸ್ಸಿಗೆ ಚೈತನ್ಯ ತುಂಬುವ ಸಂಜೀವಿನಿ. ಅನ್ನಪೂರ‍್ಣೇಶ್ವರಿ ಹೆಸರಿನಲ್ಲಿ ಅನ್ನಕ್ಕೆ ದೈವದ ರೂಪವನ್ನು ನೀಡಿ ಅನೇಕ ಬಾರತೀಯ ದೇವಾಲಯಗಳಲ್ಲಿ ಬಕ್ತಿ ಗೌರವದಿಂದ ಪೂಜಿಸುವುದು ಪ್ರತೀತಿ. ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಉಪಯೋಗಿಸಲ್ಪಡುತ್ತಿರುವ ಈ ಪ್ರಮುಕ ದಾನ್ಯದಲ್ಲಿ ಬಗೆ ಬಗೆಯ ಪ್ರಬೇದಗಳಿವೆ. ಈ ನಿಟ್ಟಿನ್ನಲ್ಲಿ ನಮ್ಮ ಕರ‍್ನಾಟಕದಲ್ಲಿ ವಿಶೇಶ ಸ್ತಾನ ಪಡೆದ ಅಕ್ಕಿಯ ತಳಿ “ರಾಜಮುಡಿ”. ಹೆಸರಿಗೆ ತಕ್ಕಂತೆ ರುಚಿ ಮತ್ತು ಪಲವತ್ತತೆಯಲ್ಲಿ ರಾಜವೈಬೋಗ ಕಾಣಬಲ್ಲ ಅಕ್ಕಿಯೆಂದರೆ ತಪ್ಪಿಲ್ಲ. ಅಡುಗೆ ಮನೆಯಲ್ಲಿ ಅನ್ನ ಬೇಯುತ್ತಿದ್ದರೆ ಅದರ ಪರಿಮಳಕ್ಕೆ ಹೊರಜಗಲಿಯಲ್ಲಿ ಕುಳಿತವರ ಮೂಗು ಅರಳುವುದರಲ್ಲಿ ಸಂಶಯವಿಲ್ಲ! ಇದು ರಾಜಮುಡಿಯ ಮಹಿಮೆ.
ರಾಜಮುಡಿ ಅಕ್ಕಿಯ ಹಿನ್ನೆಲೆ
ಹಿಂದೆ ಮೈಸೂರು ಮಹಾರಾಜರಿಗೆ ಹಾಸನ ಜಿಲ್ಲೆಯ ಹೊಳೆನರಸಿಪುರದಿಂದ ‘ರಾಜಮುಡಿ ಅಕ್ಕಿ’ ಸರಬರಾಜಾಗುತ್ತಿತ್ತು. ರಾಜರಿಗೆ ಅದು ಮುಡಿಪಾದುದರಿಂದ ‘ರಾಜಮುಡಿ’ ಅಂತ ಹೆಸರು ಬಂದಿರಬಹುದು ಎಂಬುದು ಪ್ರತೀತಿ. ಮಹಾರಾಜರ ಆಸ್ತಾನದಲ್ಲಿ ರೈಟರ್ ಆಗಿ ಮತ್ತು ಕಾರ‍್ಮಿಕರಾಗಿ ಹೊಲದಲ್ಲಿ ದುಡಿಯಲು ಹಾಸನ ಜಿಲ್ಲೆಯ ಕಡೆಯಿಂದಲೇ ಜನರು ಇದ್ದರು. ಹಾಗಾಗಿ ಇಲ್ಲಿನ ಅಕ್ಕಿ ಮೈಸೂರಿಗೆ ಹೋಗಿರಬಹುದು ಎನ್ನುವುದು ಹಲವರ ವಾದ. ಹಾಸನ ಜಿಲ್ಲೆಯ ರಾಮದೇವರಕಟ್ಟೆ ಪ್ರದೇಶದಲ್ಲಿ, ಇವತ್ತಿಗೆ ಸರಿಸುಮಾರು 500 ವರ‍್ಶಗಳ ಹಿಂದೆ ಈ ತಳಿಯನ್ನು ಅಬಿವ್ರುದ್ದಿ ಪಡಿಸಲಾಯಿತು. ಮೈಸೂರು ರಾಜರ ಆಳ್ವಿಕೆಯ ಕಾಲದಲ್ಲಿ, ಈ ಪ್ರಾಂತ್ಯದ ರೈತರು ರಾಜರಿಗೆ ತೆರಿಗೆಯನ್ನು ಕೊಡಲು ಆಗದಿದ್ದಾಗ, ರಾಜಮುಡಿ ಅಕ್ಕಿಯನ್ನೇ ರಾಜರಿಗೆ ತೆರಿಗೆಯಾಗಿ ಕೊಡುತ್ತಿದ್ದದ್ದು ಇತಿಹಾಸ. ನಂಜನಗೂಡಿನ ನಂಜುಂಡೇಶ್ವರನಿಗೆ ರಾಜಮುಡಿ, ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿಗೆ ವೈರಮುಡಿ ಎಂಬ ಪ್ರತೀತಿ ಇದೆ. ಒಮ್ಮೆ ಈ ಇಬ್ಬರು ದೇವರಿಗೂ ವೈಮನಸ್ಸಾದಾಗ, ರಾಜಮುಡಿ ಮಾತಿನ ಯುದ್ದದಲ್ಲಿ ಜಯಿಸಿ ತ್ರಿಕಾಲದಲ್ಲಿಯೂ ಸಹ ಶ್ರೀಕಂಟೇಶ್ವರನಿಗೆ ರಾಜಮುಡಿ ಅಕ್ಕಿಯ ನೈವೇದ್ಯವನ್ನು ಮತ್ತು ಬೆಳಗಿನ ತೇರನ್ನು ಎಳೆಯುವುದು ಸಂಪ್ರದಾಯವಾಯಿತು. ಅಂತೆಯೇ ರಾತ್ರಿಯ ಹೊತ್ತಲ್ಲಿ ಚೆಲುವನಾರಾಯಣ ಸ್ವಾಮಿಯ ವೈರಮುಡಿ ತೇರನ್ನು ಎಳೆಯುವುದು ಸಂಪ್ರದಾಯವಾಯಿತು. ಮಾರುಕಟ್ಟೆಯಲ್ಲಿ ಲಬ್ಯವಿರುವ ಅಪರೂಪದ ಕೆಂಪಕ್ಕಿಗಳಲ್ಲಿ ಒಂದಾದ ರಾಜಮುಡಿ, ಸಾಂಪ್ರದಾಯಿಕವವಾಗಿ ಮೈಸೂರಿನ ಒಡೆಯರ್‍ಗಳ ಯುಗದೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತಾ ಬಂದಿದೆ.
ರಾಜಮುಡಿ ಅಕ್ಕಿ ಪಾಲಿಶ್ ಆಗಿರುವುದಿಲ್ಲ, ಜೊತೆಗೆ ಇದು ಕೆಂಪು ಮತ್ತು ಕಂದು ಬಣ್ಣದ ಮಿಶ್ರಣದಲ್ಲಿ ಬರುತ್ತದೆ. ಒಂದು ಹಂತದಲ್ಲಿ, ಈ ಅಕ್ಕಿ ಹೆಚ್ಚು ಜನಪ್ರಿಯವಾಗಿತ್ತು. ತದನಂತರ ನಮ್ಮ ಜನರು ಬಿಳಿ ಅಕ್ಕಿಗೆ ಹೆಚ್ಚಿನ ಒತ್ತು ನೀಡಲು ಆರಂಬಿಸಿದಂತೆ ರಾಜಮುಡಿ ತೆರೆಮರೆಗೆ ಸರಿಯಿತು. ಇತ್ತೀಚಿಗೆ ಸಾವಯವ ಮತ್ತು ಆರೋಗ್ಯಕರ ಅಕ್ಕಿಯ ಬಗೆಗಿನ ಅರಿವು ಜನರಲ್ಲಿ ಹೆಚ್ಚಾದಂತೆ, ಸಾಂಪ್ರದಾಯಿಕ ರಾಜಮುಡಿ ಅಕ್ಕಿಯೂ ಪ್ರಾಮುಕ್ಯತೆ ಪಡೆಯುತ್ತಿದೆ. ಇದು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಸಹ ಹೊಂದಿದೆ. ಅಂದರೆ ರಾಜಮುಡಿ ಅಕ್ಕಿಯ ಅನ್ನ ರಕ್ತಕ್ಕೆ ಸಕ್ಕರೆಯ ಸರಬರಾಜನ್ನು ಬೇಗ ಮಾಡುವುದಿಲ್ಲ, ಆದರೆ ಹೈಬ್ರಿಡ್ ತಳಿ ಹಾಗಲ್ಲ ತಿಂದ ತಕ್ಶಣ ರಕ್ತಕ್ಕೆ ಸಕ್ಕರೆಯ ಅಂಶವನ್ನು ತಲುಪಿಸುತ್ತದೆ. ಹಾಗಾಗಿ ಇದೊಂದು ಮದುಮೇಹಿ ಸ್ನೇಹಿ ಆಹಾರವಾಗಿ ಪರಿಗಣಿಸಲ್ಪಟ್ಟಿದೆ.
ನಾವು ಪ್ರತಿ ದಿನ ಅನ್ನಕ್ಕೆ ಬಳಸುವ ಸಾಮಾನ್ಯ ಅಕ್ಕಿಗೆ ಹೋಲಿಸಿದರೆ ಕಂದು ಬಣ್ಣದ ಅಕ್ಕಿ ಅತವಾ ಸಾಮಾನ್ಯವಾಗಿ ಕರೆಯುವ ಕೆಂಪಕ್ಕಿ ಅನ್ನ ತುಂಬ ವಿಶಿಶ್ಟವಾದದ್ದು. ಇದಕ್ಕೆ ಕಾರಣ ಅದನ್ನು ಸಂಸ್ಕರಿಸುವ ಪ್ರಕ್ರಿಯೆ. ನಾವು ಪ್ರತಿ ದಿನ ಅನ್ನಕ್ಕೆ ಬಳಸುವ ಅಕ್ಕಿ ನೋಡಲು ಬೆಳ್ಳಗಿರುತ್ತದೆ. ಅಂದರೆ ಅದರ ಮೇಲಿನ ಹೊಟ್ಟು ಮತ್ತು ಜೀವಾಣುಗಳನ್ನು ಸಂಪೂರ‍್ಣವಾಗಿ ತೆಗೆಯಲಾಗುತ್ತದೆ. ಆದರೆ ಕೆಂಪಕ್ಕಿಯ ಸಂಸ್ಕರಣೆಯಲ್ಲಿ ಕೇವಲ ಅದರ ಮೇಲಿನ ಹೊಟ್ಟು ಮಾತ್ರ ತೆಗೆಯಲಾಗುತ್ತದೆ. ಕೆಂಪಕ್ಕಿಯ ಪೌಶ್ಟಿಕ ಸತ್ವಗಳನ್ನು ಒಳಗೊಂಡಿರುವ ಜೀವಾಣುಗಳು ಮತ್ತು ನಾರಿನ ಅಂಶ ನಮ್ಮ ದೇಹದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ತಂದುಕೊಡುತ್ತದೆ. ಆದುನಿಕ ಜೀವನ ಶೈಲಿಗೆ ಮಾರು ಹೋಗಿರುವ ನಾವು ನಿಸ್ಸತ್ವದಿಂದ ಕೂಡಿದ ಹೈಬ್ರಿಡ್ ತಳಿಯ ಬಿಳಿ ಅಕ್ಕಿಯನ್ನು ದಿನನಿತ್ಯ ಬಳಸುತ್ತಿರುವುದು ವಿಶಾದಕರ.
ಹಳೇ ಮೈಸೂರು ಪ್ರಾಂತ್ಯದಲ್ಲಿ ಪುರಾತನ ಕಾಲದಿಂದಲೂ ಅಬಿವ್ರುದ್ದಿಗೊಂಡಂತಹ ರಾಜಮುಡಿ ದೇಸಿ ಅಕ್ಕಿ ತಳಿಯ ಮಹತ್ವ ಮತ್ತು ಉಪಯೋಗವನ್ನು ಈ ಬೌಗೋಳಿಕ ಪ್ರಾಂತ್ಯದ ಜನರು ಅರಿತು ಬಳಸುತ್ತಿರುವುದನ್ನು ನಾವು ಗುರುತಿಸಬಹುದಾಗಿದೆ . ಇದರ ಉಪಯೋಗದಿಂದ ಈ ಪ್ರಾಂತ್ಯದ ಜನರು ಆರೋಗ್ಯವಾಗಿಯೂ ಇದ್ದು, ಇದನ್ನು ರಾಜಮಹಾರಾಜರು, ಸೈನಿಕರು, ಕುಸ್ತಿಪಟುಗಳು, ಶ್ರೀಸಾಮಾನ್ಯರು ಸಹ ಉಪಯೋಗಿಸುತ್ತಿದ್ದರು. ಹೊಳೆನರಸೀಪುರ, ಚನ್ನರಾಯಪಟ್ಟಣ, ಕೆ.ಆರ್ ನಗರ ಮತ್ತು ಕೆ.ಆರ್ ಪೇಟೆ ಸುತ್ತಲಿನ ಕ್ರುಶಿ ಪ್ರದೇಶದಲ್ಲಿ ‘ರಾಜಮುಡಿ’ಗೆ ಸಿಂಹಪಾಲು. ಬೇರೆಡೆ ಒಯ್ದು ಇದನ್ನು ಬೆಳೆದರೆ, ಇಲ್ಲಿನ ರುಚಿ ಸಿಗದು. ಬಹುಶಹ ಮಣ್ಣಿನ ಪಲವತ್ತತೆ ಇದಕ್ಕೆ ಕಾರಣವಿರಬಹುದು. ಅಕ್ಕಿ ರವೆಯು ರಾಜಮುಡಿಯ ಮೌಲ್ಯವರ‍್ದಿತ ರೂಪವಾಗಿದೆ. ಕೊನೆಯದಾಗಿ ನಮ್ಮ ಹಿರಿಯರು ಹೇಳಿದಂತೆ ನಮ್ಮ ಮಣ್ಣಿನ ಆಹಾರ, ದಾನ್ಯ,, ತರಕಾರಿ ಮತ್ತು ಹಣ್ಣುಗಳು ನಮ್ಮ ಜನರಿಗೆ ನೈಜ ಔಶದವಾಗಿವೆ. ಮಣ್ಣಿನ ಮಕ್ಕಳಿಗೆ ನಮ್ಮ ಮಣ್ಣಿನ ಬೆಳೆಯೇ ಮದ್ದು ಎಂದರೆ ತಪ್ಪಾಗುವುದಿಲ್ಲ.
( ಚಿತ್ರ ಸೆಲೆ: flickr.com )
ಉತ್ತಮ ಮಾಹಿತಿ