ಸಂಶೋದನೆ ಮತ್ತು ಉನ್ನತ ಶಿಕ್ಶಣದ ಮೇಲೆ ಹೊಸ-ಉದಾರೀಕರಣದ ಪರಿಣಾಮಗಳು
ಪಿ.ಎಚ್.ಡಿ. ಪದವಿ ಪಡೆಯುವುದು ಜ್ನಾನಾರ‍್ಜನೆಗಾಗಿ ಎಂದು ಚಿಕ್ಕವಳಿದ್ದಾಗಿನಿಂದಲೂ ಅಂದುಕೊಂಡಿದ್ದೆ. ಪ್ರಾದ್ಯಾಪಕರಾಗಿ ಕೆಲಸ ಮಾಡುವುದು ಒಂದು ಉದಾತ್ತ ವ್ರುತ್ತಿಯಲ್ಲಿ, ಸಮಾಜ ಸೇವೆಯಲ್ಲಿ ತೊಡಗುವುದು ಎಂದು ನಂಬಿದ್ದೆ. ಈಗ ಇದೆಲ್ಲ ನೆನಪಿಗೆ ಬಂದರೆ, ನಾನು ಎಶ್ಟು ಮೂರ‍್ಕಳಿದ್ದೆ ಎನ್ನಿಸುತ್ತೆ. ನಮ್ಮ ಉನ್ನತ ಶಿಕ್ಶಣ ವ್ಯವಸ್ತೆ ಸಮಾಜ ಸೇವೆಯಿಂದ ವ್ಯಾಪಾರಕ್ಕೆ ಮಾರ‍್ಪಾಡಾಗಿ ಎಶ್ಟೋ ವರ‍್ಶಗಳಾದವು ಎಂಬುದನ್ನು ಮರೆತಿದ್ದೆ. ತಟ್ಟನೆ ಕಪಾಳಕ್ಕೆ ಹೊಡೆದಂತೆ ಸತ್ಯ ಯಾವಾಗ ನನ್ನ ಮನಸ್ಸಿನ ಮೇಲೆ ಸಿಡಿದು ಬಿತ್ತೋ, ಆಗ ಗೊತ್ತಾಯಿತು ಶಿಕ್ಶಣವೆಂಬ ವ್ಯಾಪಾರದಲ್ಲಿ, ಸಂಶೋದಕರ ಸ್ತಾನವೇನು ಎಂದು!
ಇದು ಮೂರು ವರ‍್ಶಗಳ ಹಿಂದಿನ ಮಾತು. ಪಿ.ಎಚ್.ಡಿ. ಪದವಿ ಪಡೆಯಲು ನನಗೆ ಸೀಟ್ ಸಿಕ್ಕಾಗ, ನನಗಾದ ಕುಶಿಗೆ ಎಲ್ಲೆಯೇ ಇರಲಿಲ್ಲ. ಚಿಕ್ಕವಳಿದ್ದಾಗಲಿಂದಲೂ ಐ.ಐ.ಟಿ., ಐ.ಐ.ಎಂ. ಗಳ ಪ್ರಶಂಸೆ ಕೇಳಿ ಬೆಳೆದ ನನಗೆ, ಐ.ಐ.ಎಂ.ಗಳಲ್ಲೇ ಅತ್ತ್ಯುನ್ನತ ಎಂದೆನಿಸಿಕೊಂಡ ಅಹ್ಮದಾಬಾದಿನ ಸಂಸ್ತೆಯಲ್ಲಿ, ಸರ‍್ಕಾರೀ ವಿದ್ಯಾರ‍್ತಿ ವೇತನದ ಮೇಲೆ ಐದು ವರ‍್ಶ ವ್ಯಾಸಂಗ ಮಾಡಲು ಅವಕಾಶ ಸಿಕ್ಕಿದೆ ಎಂದರೆ, ಯಾಕೆ ತಾನೇ ಕುಶಿಯಾಗಲ್ಲ? ಆಗೇ ಆಗುತ್ತೆ. ಆದರೆ, ಹೊಸ-ಉದಾರೀಕರಣದ (Neo-Liberalization) ಚಾಯೆ ನನ್ನ ಕಲಿಕೆಯ ಮೇಲೆ ಬಿದ್ದಾಗಲೇ, ಪ್ರಸ್ತುತದಲ್ಲಿ ‘ಶಿಕ್ಶಣ’ ಎಂದರೇನು ಎಂಬುದು ಅರಿವಾಯಿತು.
ಏನಿದು ಹೊಸ-ಉದಾರೀಕರಣ?
ಬಂಡವಾಳಶಾಹಿ ಸಿದ್ದಾಂತವು ನಮ್ಮ ಜೀವನದ ಎಲ್ಲ ಅಂಶಗಳನ್ನೂ ತೀರ‍್ಮಾನಿಸುತ್ತಿದೆ ಎಂಬುದು, ಹೊಸ-ಉದಾರೀಕರಣದ ವಾದ. ಹೇಗೆ ಅಂತೀರಾ? ಉನ್ನತ ಶಿಕ್ಶಣವನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ. ಬಂಡವಾಳಶಾಹಿ ತರ‍್ಕದ ಪ್ರಕಾರ, ಪ್ರಾದ್ಯಾಪಕರು ಹಾಗೂ ಸಂಶೋದಕರು, ಅವರ ಜ್ನಾನ ನಿರ‍್ಮಾಣದ ಶ್ರಮವನ್ನು ಶಿಕ್ಶಣ ಸಂಸ್ತೆ/ವಿದ್ಯಾರ‍್ತಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಹಾಗೂ ವಿದ್ಯಾರ‍್ತಿಗಳು ಈ ಶ್ರಮವನ್ನು ದುಡ್ಡು ಕೊಟ್ಟು ಕೊಳ್ಳುತ್ತಿದ್ದಾರೆ. ಇದರಲ್ಲೇನಿದೆ ಸಮಸ್ಯೆ ಅಂತೀರಾ?
ಶಿಕ್ಶಣ ಎಂಬುದು ಸಾರ‍್ವಜನಿಕ ಸರಕು, ಅದು ಎಲ್ಲರಿಗೂ ಸಮಾನವಾಗಿ ದೊರಕಬೇಕು ಹಾಗೂ ಪ್ರಾದ್ಯಾಪಕರು ಸಾರ‍್ವಜನಿಕ ಹಿತಾಸಕ್ತಿಗಾಗಿ ಜ್ನಾನವನ್ನು ರಚಿಸಿ ಹಂಚಬೇಕು ಎಂಬ ಮಹತ್ತರ ಮೌಲ್ಯಗಳು ನಮ್ಮ ಸಮಾಜವನ್ನು ಒಂದು ಕಾಲದಲ್ಲಿ ಆಳುತ್ತಿದ್ದವು. ನಮ್ಮ ಸಂವಿದಾನದಲ್ಲಿಯೂ ಕೂಡ ಪ್ರಾತಮಿಕ ಶಿಕ್ಶಣದ ಹಕ್ಕನ್ನು, ಮೂಲಬೂತ ಹಕ್ಕನ್ನಾಗಿ ಎಲ್ಲ 6 ರಿಂದ 12 ವರ‍್ಶಗಳ ಮಕ್ಕಳಿಗೆ ಕಲ್ಪಿಸಿದೆ. ಆದರೆ, ಉನ್ನತ ಶಿಕ್ಶಣ ಬಂಡವಾಳವಾಗಿ ಮಾರ‍್ಪಾಡಾಗಿದೆ. ಹೀಗಿದ್ದಾಗ, “ಪ್ರಕಟಿಸು ಅತವಾ ನಶಿಸು” ಎಂಬ ವಿಶಕಾರಿ ಸಾಂಸ್ತಿಕ ಸಂಸ್ಕ್ರುತಿಯಲ್ಲಿ ಬಳಲುತ್ತಿರುವ ಪ್ರಾದ್ಯಾಪಕರು ಹಾಗೂ ಸಂಶೋದಕರು, ಹೇಗೆ ಸಮಾಜಮುಕಿಯಾಗಿರಲು ಸಾದ್ಯ? ಅವರ ನಡುವೆಯೇ ಸ್ಪರ‍್ದೆ ತೀವ್ರವಾಗಿರುವಾಗ, ವಿದ್ಯಾರ‍್ತಿಗಳಿಗೆ ಹಾಗೂ ಸಮಾಜಕ್ಕೆ ಹೇಗೆ ಸಹಾಯ ಮಾಡಬಲ್ಲರು?
ಸಂಶೋದನಾ ಲೇಕನಗಳನ್ನು ಪ್ರಕಟಿಸಬೇಕೆಂಬ ಅನಿವಾರ‍್ಯತೆಯಿಂದ, ಸುತ್ತಿ ಬಳಸಿ ಹೇಳಿದ್ದೇ ಹೇಳಿರುವಂತ ವಿಶಯಗಳಿರುವ ಬರಹಗಳನ್ನು ಪ್ರಕಟಿಸುವ ಕೆಲಸ ಮತ್ತು ಸಂಶೋದಕರ ನಡುವೆ ಪರಸ್ಪರ ಸಹಯೋಗಕ್ಕಿಂತ, ಅನಾರೋಗ್ಯಕರ ಸ್ಪರ‍್ದಾತ್ಮಕ ಮನೋಬಾವ ತೀವ್ರವಾಗಿದೆ. ಸಂಶೋದಕರಿಗೆ ‘ಪೀರ್ ರಿವ್ಯೂಡ್ ಜರ‍್ನಲ್’ಗಳಲ್ಲಿ (peer reviewed journals) ಲೇಕನಗಳನ್ನು ಪ್ರಕಟಿಸದಿದ್ದಲ್ಲಿ, ಕೆಲಸ ಸಿಗುವುದು ಅಸಾದ್ಯ. ಈ ವಿಶಕಾರಿ ಚಕ್ರವ್ಯೂಹದಲ್ಲಿ ಸಿಲುಕಿ ಎಶ್ಟೋ ಸಂಶೋದಕರು, ಪ್ರಾದ್ಯಾಪಕರು, ಮಾನಸಿಕ ರೋಗಗಳಿಂದ ಬಳಲುತ್ತಿದ್ದಾರೆ.
ಇದೆಲ್ಲದರ ಲಾಬ ಪಡೆಯುತ್ತಿರವುದು “ಎಲ್ಸೀವಿಯರ್” (Elsevier), “ಸೇಜ್” (Sage), “ಸ್ಪ್ರಿಂಗರ್” (Springer), “ಟೈಲರ್ ಅಂಡ್ ಪ್ರಾನ್ಸಿಸ್” (Taylor & Francis) ಎಂಬಂತಹ ದೈತ್ಯ ಪ್ರಕಾಶಕರು. ವಿಶ್ವದ ಎಲ್ಲಾ ದೊಡ್ಡ ವಿಶ್ವವಿದ್ಯಾಲಯಗಳು ಈ ಪ್ರಕಾಶಕರು ಪ್ರಕಟಿಸುವ ಜರ‍್ನಲ್ ಗಳ ಚಂದಾದಾರರಾಗಿದ್ದಾರೆ. ಇದುವೇ ಈ ಕಂಪನಿಗಳ ಮುಕ್ಯ ಆದಾಯದ ಮೂಲ. ಈ ಜರ‍್ನಲ್ ಗಳಲ್ಲಿ ಪ್ರಕಟಿಸಿದರೆ ಮಾತ್ರ ಅದು “ಅದಿಕ್ರುತವಾದ ಜ್ನಾನ” ಎಂದು ನಂಬಿದ್ದಾರೆ ಸಂಶೋದಕರು, ಪ್ರಾದ್ಯಾಪಕರು ಹಾಗೂ ವಿಶ್ವವಿದ್ಯಾಲಯಗಳು!
ಇದರ ಸಮಸ್ಯೆ ಹೀಗಿದೆ: ಈ ಜರ‍್ನಲ್ ಗಳು ಸಾಮಾನ್ಯ ಜನರಿಗೆ ದುರ‍್ಗಮ. ಅವುಗಳ ಬೆಲೆ ದುಬಾರಿಯಶ್ಟೇ ಅಲ್ಲ, ಈ ಲೇಕನಗಳಲ್ಲಿ ಬಳಸಲಾಗುವ ಸಂಕೀರ‍್ಣವಾದ ಆಂಗ್ಲ ಬಾಶೆ ಬಹುತೇಕ ಜನರಿಗೆ ತಿಳಿಯಲ್ಲ. ಸಾರ‍್ವಜನಿಕರ ತೆರಿಗೆ ಹಣದಿಂದ ವಿಶ್ವವಿದ್ಯಾಲಯಗಳಿಗೆ ಬಂಡವಾಳ ನೀಡಿ, ಅವರುಗಳಿಗೇ ಕೈಗೆಟುಕದ ಹಾಗೆ ಜ್ನಾನ ನಿರ‍್ಮಾಣವಾಗುತ್ತಿದೆ ಅಂದರೆ, ಯಾರಿಗೋಸ್ಕರ ಈ ವಿಶ್ವವಿದ್ಯಾಲಯಗಳು? ಯಾರಿಗೋಸ್ಕರ ಈ ಸಂಶೋದನೆಗಳು? ಹೀಗಿರುವಾಗ, ವಿಶ್ವವಿದ್ಯಾಲಯಗಳನ್ನು ಸಮಾಜ ಮುಕಿ ಸಂಸ್ತೆಗಳೆನ್ನಬಹುದೇ? ಹೀಗಿರುವಾಗ, ಪಿ.ಎಚ್.ಡಿ. ಪದವಿ ಹಾಗೂ ಪ್ರಾದ್ಯಾಪಕರ ವ್ರುತ್ತಿಯಿಂದ, ಸಂಶೋದನೆ ಮತ್ತು ಉನ್ನತ ಶಿಕ್ಶಣವನ್ನು ಸಮಾಜಕ್ಕೆ ಉಪಯೋಗವಾಗುವಂತೆ ನೋಡಿಕೊಳ್ಳಲು ಹೇಗೆ ಸಾದ್ಯ?
ಯಾವುದು “ಪ್ರಬಾವಶಾಲಿ ಸಂಶೋದನೆ”?
ಸಾಮಾಜಿಕ ವಿಜ್ನಾನದ ಸಂಶೋದನೆಯನ್ನು ಎರಡು ರೂಪಗಳಲ್ಲಿ ಮಾಡಬಹುದು. ಸಮಾಜದ ಯಾವ ಸಮುದಾಯದ ಬಗ್ಗೆ ಸಂಶೋದನೆ ನಡೆಯುತ್ತಿದೆಯೋ, ಆ ಸಮುದಾಯದ ಜನರ ‘ಜೊತೆಗೆ’ ಸಂಶೋದನೆ ಮಾಡುವುದು ಅತವಾ ಆ ಜನರ ‘ಮೇಲೆ’ ಸಂಶೋದನೆ ಮಾಡುವುದು. ಇವೆರಡರ ನಡುವಿನ ಅಂತರ – ಸಂಶೋದಕರು ಮತ್ತು ಜನರ ನಡುವಿನ ಅದಿಕಾರದ ಅಸಮತೋಲನ.
ಜನರ ‘ಜೊತೆಗೆ’ ಸಂಶೋದನೆ ಮಾಡುವುದು ಎಂದರೆ – ಸಂಶೋದನಾ ಪ್ರಶ್ನೆಯನ್ನು ಜನರ ಜೊತೆಗೆ ರಚಿಸುವುದು ಹಾಗೂ ಆ ಪ್ರಶ್ನೆಗೆ ಸಮಂಜಸ ಪರಿಹಾರವನ್ನು ಜನರ ಜೊತೆಗೆ ಅವರಿಗೆ ನೆರವಾಗುವಂತೆ, ಅವರ ಅಗತ್ಯಗಳ ಪೂರೈಕೆಯಾಗುವಂತೆ ಹಾಗೂ ಅವರ ಜೀವನ ನಿರ‍್ವಹಣೆಯ ಅದಿಕಾರವನ್ನು ಅವರೇ ಚಲಾಯಿಸುವಂತೆ ನೋಡಿಕೊಳ್ಳುವ ಸಂಶೋದನಾ ವಿನ್ಯಾಸವನ್ನು ರಚಿಸುವುದು. ಇದುವೇ ಪ್ರಜಾಸತ್ತೀಯ ಸಂಶೋದನೆ.
ಇದರ ತದ್ವಿರುದ್ದ ಸಂಶೋದನಾ ವಿನ್ಯಾಸ, ಜನರ ‘ಮೇಲೆ’ ಸಂಶೋದನೆ ಮಾಡುವುದು. ಅಂದರೆ, ಸಂಶೋದನೆಯಲ್ಲಿ ಜನರ ಬಾಗವಹಿಸುವಿಕೆ, ಕೇವಲ ಪ್ರಶ್ನೆಗಳಿಗೆ ಉತ್ತರ ನೀಡುವ respondents ಗಳಾಗಿ ಮಾತ್ರ. ಈ ರೀತಿಯ ಸಂಶೋದನೆಯ ಬಗೆಯಲ್ಲಿ ಸಂಶೋದಕರಿಗೆ ನಿಪುಣರು(experts) ಎಂದು ಹೇಳುವುದುಂಟು!
ಇವೆರಡೂ ಸಂಶೋದನಾ ವಿನ್ಯಾಸಗಳಲ್ಲಿ, ‘ಪ್ರಬಾವಶಾಲಿ ಸಂಶೋದನೆ’ (Research for impact) ಎಂದು ಯಾವುದಕ್ಕೆ ಹೇಳಬಹುದು? ಜನರ ‘ಜೊತೆ’ ಮಾಡುವುದಕ್ಕೋ, ಅತವಾ ಜನರ ‘ಮೇಲೆ’ ಮಾಡುವುದಕ್ಕೋ? ನಾವು ಪ್ರಜಾಪ್ರಬುತ್ವ ಎಂದೆನಿಸಿಕೊಂಡ ಸಮಾಜವೆಂದರೆ, ಜನರ ಜೊತೆ ಜ್ನಾನವನ್ನು ಸ್ರುಶ್ಟಿ ಮಾಡಬೇಕು. “ನಾವೇ ಪಂಡಿತರು, ನಮ್ಮನ್ನು ಬಿಟ್ಟು ಬೇರೆಯವರೆಲ್ಲ ಮೂರ‍್ಕರು” ಎಂಬ ಅಹಮ್ಮಿನಿಂದ ಸಂಶೋದನೆ ಮಾಡಿದರೆ ಕಲಿಕೆ ಮತ್ತು ಸಂಶೋದನೆಗೆ ಅರ‍್ತವೇ ಇಲ್ಲದಂತೆ. ಪ್ರಬಾವಶಾಲಿ ಸಂಶೋದನೆಯೆಂದರೆ ಜನರ ಜೊತೆ ಜ್ನಾನವನ್ನು ರಚಿಸುವುದು. ಸಂಶೋದನಾ ಬರಹಗಳನ್ನು ಪ್ರಕಟಿಸುವ ಒತ್ತಡದ ಇಲಿ ಓಟದಲ್ಲಿ ತೊಡಗುವ ಸಂಶೋದಕರಲ್ಲಿ, ಪ್ರಾದ್ಯಾಪಕರಲ್ಲಿಈ ಅರಿವು ಮೂಡಿದರೆ ನಮ್ಮ ಸಮಾಜದ ಅಬಿವ್ರುದ್ದಿ ಸಮಗ್ರವಾಗಿ ಆದೀತು ಎಂದು ನನ್ನ ಅನಿಸಿಕೆ.
(ಚಿತ್ರ ಸೆಲೆ: publicdomainvectors.org)
ಬರಹ ತುಂಬಾ ಚೆನ್ನಾಗಿದೆ..
(21 A -ಶಿಕ್ಷಣದ ಹಕ್ಕು – 6 ರಿಂದ 14 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ.)