ಗಣಪತಿ ಹಬ್ಬದ ಬಾಲ್ಯದ ನೆನಪು

– ಚಂದ್ರಗೌಡ ಕುಲಕರ‍್ಣಿ.

ಕೆರೆಯಿಂದ ತಂದ ಅರಲನ್ನು(ಕೆಸರು) ಹದವಾಗಿ ಕಲಿಸಿ, ಅದರಲ್ಲಿ ಹತ್ತಿ ಅರಳಿ ಬೆರೆಸಿ ಕುಟ್ಟಿ 2-3 ದಿನ ಇಟ್ಟು ಗಣಪತಿ ಮಾಡುತ್ತಿದ್ದ ಬಡಿಗೇರ ನಾಗಪ್ಪಜ್ಜ. ನಮ್ಮ ಊರಿಗೆ ಬೇಕಾದ ಐದೂ ಗಣಪತಿಯನ್ನು ಅವನೇ ಮಾಡುತ್ತಿದ್ದ. ಅರಲು ಕಲಸುವುದರಿಂದ ಹಿಡಿದು ಗಣಪತಿ ಮಾಡುವ, ಅದಕ್ಕೆ ಬಣ್ಣ ಹಚ್ಚುವ ಎಲ್ಲ ಸಂಗತಿಗಳು ಇನ್ನೂ ಕಣ್ಮುಂದೆ ಕಟ್ಟಿದಂತಿವೆ.

ಗಣಪತಿ ನಾಲ್ಕೂ ಕೈಗಳಲ್ಲಿ ಹಿಡಿದ ಆಯುದ, ಕೆಳಗೆ ಕಾಲ ಮಗ್ಗುಲಲ್ಲಿ ಮಲಗಿದ ಇಲಿ,ಪಂಚೆ, ಸೆರಗು, ಉತ್ತರೀಯ, ಕಿರೀಟ, ಕಿರೀಟಕ್ಕೆ ಮಾತ್ರ ಹಚ್ಚಿದ ಮಿಂಚಿನ ಬಣ್ಣ…ಎಲ್ಲವೂ ನೆನಪಿಂದ ಮಾಸಿಲ್ಲ. ಮಾಸುವುದೂ ಇಲ್ಲ. ಶಾಲೆಯ ಪರವಾಗಿ ಎಲೆ, ಅಡಿಕೆ ಪಂಚ ಪಳಾರ,( ಚುರುಮರಿ, ಶೇಂಗಾಕಾಳು, ಪುಟಾಣಿ, ಬೆಲ್ಲದ ಚೂರು ಮುಂತಾದವು) ಕೊಟ್ಟು ನಮಗೆ ಗಣಪತಿ ಮಾಡಿಕೊಡಬೇಕು ಎಂದು ಹೇಳಿ ಬರುತ್ತಿದ್ದವರು ನಾವೇ. ಹೀಗಾಗಿ ನಮ್ಮ ಗಣಪ ಹೇಗೆ ರೂಪಗೊಳ್ಳುತ್ತಾನೆ ಎನ್ನುವುದನ್ನು ನೋಡುವ ಕುತೂಹಲದಿಂದ ದಿನವೂ ಶಾಲೆಯ ಬಿಡುವಿನ ವೇಳೆಯಲ್ಲಿ ನೋಡುತ್ತಲೇ ಕಾಲ ಕಳೆಯುತ್ತಿದ್ದೆವು. ನಾವೂ ಕೆರೆಯಿಂದ ಅರಲು ತಂದು ಗಣಪನನ್ನು ಮಾಡಲು ಪ್ರಯತ್ನಿಸುತ್ತಿದ್ದೆವು. ಮಾಡುವ ಐದು ಗಣಪತಿಗಳಲ್ಲಿ, ‘ಇದು ಶಾಲೆಯದು, ಇದು ಇವರದು’ ಎಂದು ಅಲ್ಲಿಯೇ ಹೆಸರಿಡುತ್ತಿದ್ದೆವು. ಎಲ್ಲ ಗಣಪತಿಗಳೂ 8-10 ಇಂಚು ಎತ್ತರ. ಎಲ್ಲರೂ ಒಯ್ದ ಅನಂತರ ಉಳಿದದ್ದು ಬಡಿಗೇರ ಮನೆಯದು. ನಾವೆಲ್ಲರೂ, 1-2-3-4 ನೇ ಇಯತ್ತೆಯವರು ಪಟ್ಟಿ ಹಾಕಿದ ಹಣದಿಂದ ಗಣಪತಿ ಹಬ್ಬ ಆಚರಿಸುತ್ತಿದ್ದುರಿಂದ ಅದು ನಮ್ಮ ಹಬ್ಬವೇ ಆಗಿರುತ್ತಿತ್ತು. ಗಣಪತಿಗೆ 10-12 ಆಣೆ ಬೆಲೆ. ಹೆಚ್ಚೆಂದರೆ 1 ರೂ. 4 ಆಣೆ( 6 ಪೈಸೆಗೆ ಒಂದು ಆಣೆ 16 ಆಣೆಗೆ ಒಂದು ರೂ. 3,ಆಣೆಗೆ 19 ಪೈಸೆ. 7 ಆಣೆಗೆ 44 ಪೈಸೆ, 11 ಆಣೆಗೆ 69 ಪೈಸೆ, 15 ಆಣೆಗೆ 94 ಪೈಸೆ. ಹೀಗೆ 100 ಪೈಸೆಗೆ ಸಮ ಮಾಡಲಾಗುತ್ತಿತ್ತು).

ಗಣಪತಿ ಇಡುವ ದಿನ ದ್ಯಾಮವ್ವನ ಗುಡಿ ಕಸಹೊಡೆದು, ತೊಳೆದು ಸ್ವಚ್ಚ ಮಾಡುತ್ತಿದ್ದೆವು. ಗುಡಿಯ ನಡು ಅಂಕಣದ ಎಡಬಾಗದಲ್ಲಿ ಇದ್ದ ಮಾಡವೇ ಗಣಪತಿ ಇಡುವ ಜಾಗ. ಗುಡಿಯ ಎಲ್ಲ ಜಂತಿಗೆ, ತೋಳು, ಬೋದುಗಳಿಗೆ ಜಾಲರಿ ಕತ್ತರಿಸಿ ಹಚ್ಚುತ್ತಿದ್ದೆವು. ಮಾಡಕ್ಕೆ ಮಿಂಚಿನ ಹಾಳೆಯ ಕಮಾನು. ನಮ್ಮ ಮಾಸ್ತರು ತಮ್ಮ ಊರಿನಿಂದ ಕಡದಳ್ಳಿಗೆ ಬರುವಾಗ, ಬ್ಯಾಂಕಿನವರ ಹೊಲದಲ್ಲಿಯ ಪೇರು,ಹುಣಸಿ ಕಾಯಿ ತಂದಿರುತ್ತಿದ್ದರು. ಗಣಪತಿ ಮಾಡದ ಮುಂದೆ ಅವನ್ನು ಜೋತು ಬೀಳುವಂತೆ ಕಟ್ಟುತ್ತಿದ್ದೆವು. ಕೆರೆಯ ಬಯಲಿನಲ್ಲಿದ್ದ ಕರಕಿಯನ್ನು ತಂದಿರುತ್ತಿದ್ದೆವು. ಗಣಪತಿ ಇಟ್ಟು ಪೂಜೆ ಮಾಡಿ, ಊದುಬತ್ತಿ ಹಚ್ಚಿ, ಕಾಯಿ ಒಡೆದು ಬಿಟ್ಟರೆ ಪೂಜೆ ಮುಗಿಯಿತು. ಕೇಪಿನ ಪಟಾಕಿ ಸದ್ದು ದ್ಯಾಮವ್ವನ ಗುಡಿ ತುಂಬ ಹಬ್ಬುತ್ತಿತ್ತು. ಚವತಿ ದಿನ ಸಾಮಾನ್ಯವಾಗಿ ಬೆಂಕಿ ಪಟಾಕಿ ಹಚ್ಚುತ್ತಿರಲಿಲ್ಲ. ಗಣಪತಿ ಇಟ್ಟ ದಿನದಿಂದ 4-5 ದಿನ ಗುಡಿ ಹತ್ತಿರದ ಮನೆಯವರು ದ್ಯಾಮವ್ವನ ಗುಡಿಯಲ್ಲಿ ಮಲಗಿ ತಮ್ಮ ಸೇವೆ ಸಲ್ಲಿಸುತ್ತಿದ್ದರು (ಶಾಲೆಗೆ ಸ್ವಂತ ಕಟ್ಟಡ ಇರಲಿಲ್ಲವಾದ್ದರಿಂದ ಗುಡಿಯೇ ಶಾಲೆಯಾಗಿತ್ತು).

ಅಂದು ಸಂಜೆ ಅಕ್ಕಿ ಕಾಳು ಹಿಡಿದು ಕೊಂಡು, ಅಪ್ಪಿ ತಪ್ಪಿ ಕೂಡ ಮೇಲೆ ನೋಡದೆ ಊರಿನ ಎಲ್ಲ ಗಣಪತಿಗಳಿಗೂ ಅಕ್ಶತೆ ಹಾಕಿ, ನಮಸ್ಕರಿಸಿ ಬರುತ್ತಿದ್ದೆವು. ಏಕೆಂದರೆ ಗಣಪತಿ ನೋಡುವುದಕ್ಕಿಂತ ಮೊದಲು ಚವತಿ ಚಂದ್ರ ನನ್ನು ನೋಡಿದರೆ ಗಣಪತಿ ಶಾಪ ತಟ್ಟುತ್ತದೆ ಎಂಬ ಅಂಜಿಕೆ. ಊರವರೆಲ್ಲರೂ ಪುರುಶರು, ತಾಯಂದಿರು ಗುಂಪು ಗುಂಪಾಗಿ ಗಣಪತಿಗೆ ಅಕ್ಶತೆ ಹಾಕಲು ಬರುತ್ತಿದ್ದರು. ಗಣಪತಿ ಕಳಿಸುವ ಅಶ್ಟಮಿ ದಿನ ಮಾತ್ರ ಪಟಾಕಿಗಳನ್ನು ಹಚ್ಚುತ್ತಿದ್ದೆವು. ಉಳಿದ ದಿನ ಕೀಲಿ ಕೈ ರಂದ್ರದಲ್ಲಿ ಬೆಂಕಿ ಕಡ್ಡಿಯ ಮದ್ದು ಕೆತ್ತಿ ಹಾಕಿ, ಮೊಳೆಯನ್ನು ರಂದ್ರದಲ್ಲಿ ಬಿಗಿಯಾಗಿ ಕೂಡಿಸಿ, ಮೊಳೆಯನ್ನು ಕೆಳಮುಕ ಮಾಡಿ ಕಲ್ಲಿನ ಮೇಲೆ ಬಲವಾಗಿ ಹೊಡೆದರೆ ಕೇಪಿನ ಸದ್ದು ಬರುತ್ತಿತ್ತು. 3-4 ದಿನ ಇದೇ ರೀತಿ ನಮ್ಮ ಮದ್ದು ಸುಡುವ ಆಟ. ಹೆಚ್ಚಿಗೇನೂ ಕರ‍್ಚು ಇರುತ್ತಿರಲಿಲ್ಲ. ಮನೆ ಮುಂದಿನ ಕಟ್ಟೆ, ಬೇವಿನಗಿಡದ ಕಟ್ಟೆ, ಬನ್ನಿಗಿಡದ,ಕಟ್ಟೆ,ಪತ್ರಿಗಿಡದ ಕಟ್ಟೆ, ಕಲ್ಮೇಶ ಗುಡಿಯ ಕಟ್ಟೆ- ಹೀಗೆ ಊರತುಂಬ ನಮ್ಮ ಕೇಪಿನ ಸದ್ದು. ನಮ್ಮ ಮಾಸ್ತರ ನರಗುಂದಕ್ಕೆ ಹೋಗಿ ಪಟಾಕಿ ತಂದು ಎಲ್ಲರಿಗೂ ಹಂಚುತ್ತಿದ್ದರು. ಚಿಕ್ಕವರಿಗೆ ಚಿಕ್ಕ ಪಟಾಕಿ, ದೊಡ್ಡವರಿಗೆ ಮದ್ದಿನ ಕುಡಿಕೆ, ಬೀಸುವ ಚಕ್ರ, ಹುಡುಗಿಯರಿಗೆ ಸುರಸುರ ಬತ್ತಿ, ಹೀಗೆ ಅವರೆ ಅಂದು ಸಾಯಂಕಾಲ ಎಲ್ಲರಿಗೂ ಹಂಚುತ್ತಿದ್ದರು.

ಗಣಪತಿ ಹೊಳೆಗೆ ಹೋಗುವ ದಿನ ನಮ್ಮ ಶಾಲೆಯ ಮುಂದೆ, ನಮ್ಮ ಗಣಪತಿ ಮುಂದೆ ಪಟಾಕಿ, ಸುರಸುರ ಬತ್ತಿ, ಮದ್ದಿನ ಕುಡಿಕೆ ಹಚ್ಚುತ್ತಾ, ಹೊಳೆಗೆ (ಊರ ಹತ್ತಿರ ಹರಿಯುವ ಬೆಣ್ಣಿಹಳ್ಳ) ಹೋಗುತ್ತಿದ್ದೆವು. ಊರಿನ‌ ಎಲ್ಲ ಗಣಪತಿಗಳು ಕೂಡಿ, ಊರಲ್ಲಿ ಮೆರವಣಿಗೆ ಮುಗಿಸಿ ಹಳ್ಳದ ದಾರಿ ಹಿಡಿಯುತ್ತಿದ್ದೆವು. ಹಿರಿಯರು, ಮಕ್ಕಳು, “ಗಣಪತಿ ಗಣಪತಿ ಮೋರಯ್ಯ, ಪುಂಡಿಪಲ್ಲೆ ಸೋರಯ್ಯ…” ಗೋಶಣೆ ಕೂಗುತ್ತ ಸಾಗುತ್ತಿದ್ದೆವು. ಬಜನಾ ಮೇಳದವರು ಬಕ್ತಿ,ಸಡಗರ, ಸಂಬ್ರಮದಿಂದ ಗಣಪತಿಯ ಮುಂದೆ ಸಾಗುತ್ತಿದ್ದರು. ಹಳ್ಳದ ದಂಡೆಯಲ್ಲಿ ಎಲ್ಲ ಗಣಪತಿಗಳನ್ನು ಕೂಡ್ರಿಸಿ, ಪೂಜೆ ಮಾಡಿ, ಮದ್ದು ಸುಡುವ ಸಂದರ‍್ಬದಲ್ಲಿಯೇ ನೀರಿನ ಮಡುವಿನಲ್ಲಿ ಮುಳುಗಿಸಿಬಿಡುವುದು ಪಾಲಿಸಿಕೊಂಡು ಬಂದ ರೂಡಿ. ಅನಂತರ ಸದ್ದಿಲ್ಲದೆ ಎಲ್ಲರೂ ಮನೆದಾರಿ ಹಿಡಿಯುತ್ತಿದ್ದರು. ಹೀಗೆ ಗಣಪತಿ ಹಬ್ಬ ಮುಗಿಯುತ್ತಿತ್ತು.

ಶಾಲೆಯಲ್ಲಿ 3-4 ದಿನ ಗಣಪತಿ ಬಗೆಗಿನ ಕತೆಗಳು ಹರಿದಾಡುತ್ತಿದ್ದವು. ಸ್ಪರ‍್ದೆಯಿಂದ ಎಲ್ಲ ಮಕ್ಕಳೂ ಕತೆ ಹೇಳುವುದರಲ್ಲಿ ಬಾಗವಹಿಸುತ್ತಿದ್ದೆವು. ಗಣಪತಿಗಳನ್ನು ಹೊಳೆಗೆ ಹಾಕಿ ಬಂದ ಅನಂತರ ನಮ್ಮ ಗುರುಗಳು ನಮಗೆ ಗೊತ್ತಿಲ್ಲದಂತೆಯೇ ಆ ಅಲ್ಪ ಸ್ವಲ್ಪ ಕರಗಿದ ಗಣಪತಿಗಳನ್ನು, ಹಳೆಯ ವಿದ್ಯಾರ‍್ತಿಗಳಿಂದ ಮಡುವಿನಿಂದ ಎತ್ತಿ ತಂದಿರಿಸುತ್ತಿದ್ದರು. ( ಏಕೆಂದರೆ ಅದು ಹದವಾದ, ಬಿರುಕು ಬಿಡದ ಮಣ್ಣಾಗಿರುತ್ತಿತ್ತು). ನಮಗೆಲ್ಲರಿಗೂ ಅದೇ ಗಣಪತಿ ಅರಲನ್ನು ಕೊಟ್ಟು, ಕುಂಬಳಕಾಯಿ, ಬದನೆಕಾಯಿ, ಬೆಂಡೆಕಾಯಿ, ಹೀರೇಕಾಯಿ ಮುಂತಾದ ಆಕ್ರುತಿಗಳನ್ನು ಮಾಡಿಸಿ, ಬಣ್ಣ ಹಚ್ಚಿಸಿ ಕಾಯ್ದಿಡುತ್ತಿದ್ದರು. ಶಾಲೆಗೆ ಮೇಲಿನ ಅದಿಕಾರಿಗಳು ಬಂದಾಗ ವಿದ್ಯಾರ‍್ತಿಗಳ ಚಟುವಟಿಕೆಗಳಾಗಿ ಇವನ್ನು ತೋರಿಸುತ್ತಿದ್ದರು.

ಇದು ಗಣಪತಿ ಹಬ್ಬದ ಬಾಲ್ಯದ ನೆನಪು.

( ಚಿತ್ರಸೆಲೆ: unsplash.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.