ಬಿ.ಜಿ.ಎಲ್ ಸ್ವಾಮಿ – ಕನ್ನಡದ ವಿಶಿಶ್ಟ ಬರಹಗಾರ

– ರಾಮಚಂದ್ರ ಮಹಾರುದ್ರಪ್ಪ.

ಕನ್ನಡದ ಅಗ್ರಗಣ್ಯ ಸಾಹಿತಿಗಳ ನಡುವೆ ವಿಶಿಶ್ಟವಾಗಿ ನಿಲ್ಲುವ ಬರಹಗಾರರು ಎಂದರೆ ಅದು ಬೆಂಗಳೂರು ಗುಂಡಪ್ಪ ಲಕ್ಶ್ಮಿನಾರಾಯಣ ಸ್ವಾಮಿ (ಡಾ. ಬಿ.ಜಿ.ಎಲ್. ಸ್ವಾಮಿ) ಅವರು. ಕ್ಲಿಶ್ಟಕರ ವೈಗ್ನಾನಿಕ ವಿಶಯಗಳನ್ನೂ ಸುಳುವಾಗಿ ಕನ್ನಡದಲ್ಲಿ ಎಲ್ಲರಿಗೂ ತಿಳಿಯುವಂತೆ, ಹಾಸ್ಯದ ಲೇಪನದೊಂದಿಗೆ ವಿವರಿಸುವ ಅವರ ಶೈಲಿ ಅದ್ವಿತೀಯ ಎಂದರೆ ಕಂಡಿತ ಅತಿಶಯವೇನಲ್ಲ. ವ್ರುತ್ತಿಯಿಂದ ಸಸ್ಯಶಾಸ್ತ್ರದ ಕಲಿಸುಗರಾಗಿದ್ದ ಸ್ವಾಮಿರವರು ತಮ್ಮ ಮೇರು ಕ್ರುತಿ ‘ಹಸುರು ಹೊನ್ನು’ ಗೆ ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ ಪಡೆದು, ಈ ಹೆಗ್ಗಳಿಕೆಗೆ ಪಾತ್ರರಾದ ಕನ್ನಡದ ಮೊದಲ ಹಾಗೂ ಏಕೈಕ ತಂದೆ (ಡಿ.ವಿ. ಗುಂಡಪ್ಪ) – ಮಗನ ಜೋಡಿ ಎಂಬ ವಿಶೇಶ ಗೌರವ ಪಡೆದರು.

ಹುಟ್ಟು – ಎಳವೆಯ ದಿನಗಳು

ಪೆಬ್ರವರಿ 5, 1918 ರಂದು ಕನ್ನಡದ ದಿಗ್ಗಜ ಸಾಹಿತಿ ಡಿ.ವಿ. ಗುಂಡಪ್ಪ ಹಾಗೂ ಬಾಗೀರತಿ ಅಮ್ಮನವರ ಮಗನಾಗಿ ಬಿ.ಜಿ.ಎಲ್. ಸ್ವಾಮಿ ಬೆಂಗಳೂರಿನಲ್ಲಿ ಹುಟ್ಟಿದರು. ತಂದೆ ಡಿ.ವಿ.ಜಿ. ಯವರ ಗರಡಿಯಲ್ಲಿ ಬೆಳೆದ ಸ್ವಾಮಿರಿಗೆ ತಂದೆಯವರ ಸಮಕಾಲೀನ ಸಾಹಿತಿಗಳ ಒಡನಾಟ ಕೂಡ ಎಳವೆಯಲ್ಲೇ ದೊರಕಿತು. ಸಹಜವಾಗಿಯೇ ಮನೆಯ ವಾತಾವರಣದಿಂದ ಓದುವ ಚಾಳಿ ಸ್ವಾಮಿರಿಗೆ ಚಿಕ್ಕ ವಯಸ್ಸಿನಲ್ಲೇ ಅಂಟಿತು. ಬಾಲ್ಯದಲ್ಲೇ ಅವರ ತಾಯಿಯನ್ನು ಕಳೆದುಕೊಂಡ ಸ್ವಾಮಿರವರು ಅಜ್ಜಿ ಹಾಗೂ ಸೋದರತ್ತೆಯ ಆರೈಕೆಯಲ್ಲಿ ಬೆಳೆದರು. ಬೆಂಗಳೂರಿನ ನ್ಯಾಶನಲ್ ಹೈಸ್ಕೂಲ್ ನಲ್ಲಿ ಶಾಲಾ ಶಿಕ್ಶಣ ಪಡೆದ ಸ್ವಾಮಿರಿಗೆ ಸಾಹಿತ್ಯದ ಬಗ್ಗೆ ಹೆಚ್ಚು ಆಸಕ್ತಿಯಿದ್ದರೂ ಇಂಟರ‍್ಮೀಡಿಯಟ್ ನಲ್ಲಿ ವಿಗ್ನಾನವನ್ನು ಆಯ್ದುಕೊಳ್ಳುತ್ತಾರೆ. ಚಿಕ್ಕಂದಿನಿಂದ ಚಿತ್ರಕಲೆ ಬಗ್ಗೆ ಕೂಡ ಅಪಾರ ಆಸಕ್ತಿ ಹೊಂದಿದ್ದ ಸ್ವಾಮಿ ಇಂಟರ‍್ಮೀಡಿಯಟ್ ಓದುವಾಗಲೇ ತಮ್ಮ ಒಂದು ಚಿತ್ರಕಲೆಗೆ ಕಲಾಮಂದಿರದ ಅ.ನ. ಸುಬ್ಬರಾಯರಿಂದ ವಿಶೇಶ ಬಹುಮಾನ ಪಡೆಯುತ್ತಾರೆ. ತಂದೆ ಡಿ.ವಿ.ಜಿ. ಅವರನ್ನು ನೋಡಲು ಬರುತ್ತಿದ್ದ ಶಿವರಾಮ ಕಾರಂತರೊಟ್ಟಿಗೆ ಚಿತ್ರಕಲೆ ಬಗ್ಗೆ, ಬಣ್ಣಗಾರಿಕೆ ಬಗ್ಗೆ ಚರ‍್ಚೆ ನಡೆಸಿ ದಿಗ್ಗಜರಿಂದ ಹೆಚ್ಚು ತಿಳಿದುಕೊಳ್ಳುವುದು ಕಾಲೇಜ್ ದಿನಗಳಲ್ಲಿ ಸ್ವಾಮಿರವರ ನೆಚ್ಚಿನ ಹವ್ಯಾಸವಾಗಿತ್ತು. ಇದರೊಟ್ಟಿಗೆ ಸಂಗೀತ ಕೂಡ ಅವರ ಬದುಕಿನ ಅವಿಬಾಜ್ಯ ಅಂಗಗಳಲ್ಲೊಂದಾಗಿತ್ತು. ಹೈಕ್ಸ್ಕೂಲ್ ನಲ್ಲೇ ಪಿಟೀಲೊಂದನ್ನು ಕೊಂಡು ರತ್ನಗಿರಿ ಸುಬ್ಬಾಶಾಸ್ತ್ರಿಗಳಲ್ಲಿ, ಆ ಬಳಿಕ ನಾರಾಯಣ ಸ್ವಾಮಿ ಬಾಗವತರ ಬಳಿ ಅಬ್ಯಾಸ ಮಾಡಿ ಸಂಗೀತದಲ್ಲೂ ತಕ್ಕ ಮಟ್ಟಿಗೆ ಸ್ವಾಮಿರವರು ಗ್ನಾನ ಸಂಪಾದಿಸಿದರು. 1939 ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ನಿಂದ ಸಸ್ಯಶಾಸ್ತ್ರದಲ್ಲಿ ಮೊದಲ ದರ‍್ಜೆಯಲ್ಲಿ ಬಿ.ಎಸ್ಸಿ. ಆನರ‍್ಸ್ ಪದವಿ ಪಡೆಯುತ್ತಾರೆ. ಆ ವೇಳೆ ತಂದೆ ಡಿ.ವಿ.ಜಿ. ರವರ ಬಗ್ಗೆ ವಿಶೇಶ ಅಬಿಮಾನ ಹೊಂದಿದ್ದ ಆಗಿನ ಮೈಸೂರಿನ ದೀವಾನರಾದ ಸರ್ ಮಿರ‍್ಜಾ ಇಸ್ಮಾಯಿಲ್ ಅವರು ಸರ‍್ಕಾರದ ಕಂದಾಯ ಇಲಾಕೆಯಲ್ಲಿ ಸ್ವಾಮಿರಿಗೆ ‘ಗಜೆಟೆಡ್ ಪ್ರೊಬೇಶನರ್’ ಹುದ್ದೆ ಕೊಡಿಸಲು ಮುಂದೆ ಬಂದಾಗ ಅವರು ಅದನ್ನು ತಿರಸ್ಕರಿಸಿ, “ನನ್ನ ಜೀವನ ವಿಗ್ನಾನಕ್ಕೆ ಮೀಸಲು” ಎಂದು ತಿಳಿಸುತ್ತಾರೆ. ಎ.ಆರ್. ಕ್ರಿಶ್ಣಶಾಸ್ತ್ರಿಗಳು ಅವರ ಸಸ್ಯಶಾಸ್ತ್ರ ಕಲಿಕೆಗೆ ಪ್ರೇರಣೆಯಾಗಿರುತ್ತಾರೆ. ಒಮ್ಮೆ ಶಾಸ್ತ್ರಿಗಳು ‘ಹಿಂದೂ’ ಪತ್ರಿಕೆಯಲ್ಲಿ ಕದಂಬ ಎಂಬ ಮರದ ಕುರಿತು ಪ್ರಕಟವಾದ ಇಂಗ್ಲಿಶ್ ಅಂಕಣವನ್ನು ತೋರಿಸಿ ಆ ಮರದ ಬಗ್ಗೆ ಹೆಚ್ಚು ಬರೆದು ಕೊಡಬೇಕೆಂದು ಹೇಳಿದಾಗ ಸ್ವಾಮಿಯವರ ಮೊದಲ ಕನ್ನಡ ಬರಹ ‘ಪ್ರಬುದ್ದ ಕರ‍್ನಾಟಕ’ದಲ್ಲಿ ಪ್ರಕಟವಾಗುತ್ತದೆ. ಬಳಿಕ 1940 ರಲ್ಲಿ ತಂದೆ ಡಿ.ವಿ.ಜಿ. ಅವರು ಕೊಡಿಸಿದ ಮೈಕ್ರೋಸ್ಕೋಪ್ ಸ್ವಾಮಿ ಅವರ ಬದುಕಿನ ಅವಿಬಾಜ್ಯ ಅಂಗವಾಗುತ್ತದೆ. ಅಲ್ಲಿಂದ ಎರಡು ವರುಶಗಳ ಕಾಲ ಬೆಂಗಳೂರಿನ ಸಂಶೋದನಾ ಪ್ರಯೋಗಾಲಯದಲ್ಲಿ (Forest Research Laboratory) ಸಹಾಯಕ ಸಂಶೋದಕರಾಗಿ ದುಡಿದು 1944 ರಲ್ಲಿ ಡಿ.ಎಸ್ಸಿ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆಯುತ್ತಾರೆ. ಇದರೊಟ್ಟಿಗೆ ಅವರ ಕನ್ನಡ ಹಾಗೂ ಇಂಗ್ಲಿಶ್ ಸಾಹಿತ್ಯ ಅದ್ಯಯನ ಕೂಡ ನಡೆಯುತ್ತಲೇ ಇರುತ್ತದೆ.

ಸ್ವಾಮಿರವರ ವ್ರುತ್ತಿ ಬದುಕು

ಎರಡು ವರುಶಗಳ ಕಾಲ ರಿಸರ‍್ಚ್ ಪೆಲೋಶಿಪ್ ಪಡೆದು ಅಮೇರಿಕಾದ ಸುಪ್ರಸಿದ್ದ ಹಾರ‍್ವರ‍್ಡ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಸಂಶೋದನೆ ಮುಂದುವರೆಸುವುದರೊಟ್ಟಿಗೆ, ಸ್ವಾಮಿಯವರು ಅಲ್ಲೇ 1951 ರ ವರೆಗೂ ಸಸ್ಯಶಾಸ್ತ್ರದ ಪ್ರಾದ್ಯಾಪಕರಾಗಿ ಕೆಲಸ ಮಾಡುತ್ತಾರೆ. ಅವರ ಪಾಟ ಕೇಳಲು ಅಮೇರಿಕಾದ ವಿದ್ಯಾರ‍್ತಿಗಳೂ ಕೂಡ ಉತ್ಸುಕರಾಗಿ ತಪ್ಪದೇ ಹಾಜರಿರುತ್ತಿದ್ದದು ವಿಗ್ನಾನವನ್ನು ಸುಳುವಾಗಿ ಕಲಿಸುವ ಸ್ವಾಮಿರ ಅಗಾದ ಪ್ರತಿಬೆಗೆ ಹಿಡಿದ ಕನ್ನಡಿ ಎಂದೇ ಹೇಳಬೇಕು. ಅವರ ಮೆಚ್ಚಿನ ಗುರು ಬೈಲಿರೊಟ್ಟಿಗೆ ಅರಕೆಯ ಕೆಲಸ ಮಾಡಿ ಅವರಿಂದಲೂ ಸ್ವಾಮಿರವರು ಪ್ರಶಂಸೆ ಗಳಿಸಿದ್ದುಂಟು. ಅಮೇರಿಕಾದಲ್ಲಿದ್ದಾಗಲೂ ಸಸ್ಯಶಾಸ್ತ್ರ ಅಬ್ಯಾಸದ ನಡುವೆಯೇ ಬಿಡುವು ಮಾಡಿಕೊಂಡು ವ್ಯಂಗ್ಯಚಿತ್ರ ರಚನೆಯ ಆರು ವಾರಗಳ ಕೋರ‍್ಸ್ ಮಾಡಿ ಅದರಲ್ಲೂ ಪರಿಣಿತಿ ಸಾದಿಸಿದ್ದರು. ಕಡಿಮೆ ಗೆರೆಗಳನ್ನು ಬಳಸಿ ಚಿತ್ರ ಬಿಡಿಸುವುದು ಸ್ವಾಮಿರವರ ವಿಶೇಶತೆ ಆಗಿತ್ತು. ಅಮೇರಿಕಾದಿಂದ 1951 ರಲ್ಲಿ ಬಾರತಕ್ಕೆ ಮರಳಿದ ಅವರು ಮೊದಲಿಗೆ ಎರಡು ವರುಶಗಳ ಕಾಲ ಮದರಾಸಿನ ವಿಶ್ವವಿದ್ಯಾನಿಲದ ಸಸ್ಯಶಾಸ್ತ್ರ ಪ್ರಯೋಗಾಲಯದಲ್ಲಿ ಹಿರಿಯ ಸಂಶೋದಕರಾಗಿ ಕೆಲಸ ಮಾಡಿದು. ಆ ಬಳಿಕ ಅದೇ ಊರಿನ ಪ್ರೆಸಿಡೆನ್ಸಿ ಕಾಲೇಜ್ ಗೆ ಅದ್ಯಾಪಕರಾಗಿ ಸೇರಿದರು. ಅದೇ ಕಾಲೇಜ್ ನಲ್ಲಿ 23 ವರುಶ ಸಸ್ಯಶಾಸ್ತ್ರ ಕಲಿಸಿದ ಸ್ವಾಮಿ ತಮ್ಮ ಅಗಾದ ಗ್ನಾನವನ್ನು ವಿದ್ಯಾರ‍್ತಿಗಳಿಗೆ ದಾರೆ ಎರೆದರು. ಇಂದಿಗೂ ಸಹ ಅವರಿಂದ ಸಸ್ಯಶಾಸ್ತ್ರ ಕಲಿತವರು ಸ್ವಾಮಿಯವರನ್ನು ಗೌರವದಿಂದ ನೆನೆಯುತ್ತಾರೆ. ಪಟ್ಯಪುಸ್ತಕದ ಕಲಿಕೆಗೆಗಶ್ಟೇ ಒತ್ತು ನೀಡದೆ ವಿಶಯಗಳ ಒಳ ಹೊಕ್ಕು ಬಿಡಿಬಿಡಿಯಾಗಿ ಪ್ರತಿಯೊಂದು ಅಂಶವನ್ನು ವಿವರಿಸುತ್ತಿದ್ದ ಅವರ ಕಲಿಸುವ ಚಳಕ ಕಾಲೇಜ್ ನ ಇನ್ನಿತರಿಗೂ ಮಾದರಿಯಾಗಿತ್ತು. ಅಂತಹ ಚಾಪು ಅವರು ತಮ್ಮ ಬಹುಮುಕ ಪ್ರತಿಬೆಯಿಂದ ಮೂಡಿಸಿದ್ದರು. ಉನ್ನತ ವ್ಯಾಸಂಗದಲ್ಲಿ ತೊಡಗಿದ್ದ ವಿದ್ಯಾರ‍್ತಿಗಳಿಗಾಗಿ ಹಾಗೂ ಅದ್ಯಾಪಕರಿಗಾಗಿ ‘ಸಸ್ಯಶಾಸ್ತ್ರದಲ್ಲಿ ಹೊಸ ಸಂಶೋದನೆ’ ಎಂಬ ವಿಶಯದಲ್ಲಿ ಆಗಾಗ್ಗೆ ಬಾಶಣಗಳನ್ನು ಸ್ವಾಮಿಯವರು ತಾವೇ ಮಾಡುತ್ತಿದ್ದದ್ದು ಮಾತ್ರವಲ್ಲದೆ, ಹೊರಗಿನಿಂದ ಕೂಡ ವಿಗ್ನಾನಿಗಳನ್ನು ಕರೆಸಿ ಸಸ್ಯಲೋಕದಲ್ಲಿ ಹೊಸ ಆವಿಶ್ಕಾರಗಳ ಕುರಿತು ಉಪನ್ಯಾಸಗಳನ್ನು ಏರ‍್ಪಡಿಸುತ್ತಿದ್ದರು. ಎಡಬಿಡದ ಅರಕೆಯ ಮೂಲಕ ಅವರು ಕಂಡು ಹಿಡಿದ ಎರಡು ಸಸ್ಯಗಳಿಗೆ ಅವರ ಗುರುಗಳಾದ ಪ್ರೊಪೆಸರ್ ಬೈಲಿ ಮತ್ತು ಪ್ರೊಪೆಸರ್ ಮಹೇಶ್ವರಿರವರ ಹೆಸರಿಟ್ಟು ತಮ್ಮ ಗುರುಗಳ ರುಣ ತೀರಿಸಿದ್ದು ಮಾತ್ರವಲ್ಲದೆ ಸಸ್ಯಶಾಸ್ತ್ರದ ಒಂದು ಮೇರು ಮೈಲುಗಲ್ಲು ಕೂಡ ಸ್ವಾಮಿ ಸಾದಿಸಿದರು. ಕಡೆಗೆ ಒಲ್ಲೆ ಒಲ್ಲೆ ಎನ್ನುತ್ತಲೇ ನಿವ್ರುತ್ತಿಗೂ ಮುನ್ನ 1960-64 ರ ವರೆಗೂ ಪ್ರೆಸಿಡೆನ್ಸಿ ಕಾಲೇಜ್ ನ ಪ್ರಾಂಶುಪಾಲರಾಗಿ ಕೂಡ ಅವರು ಸೇವೆ ಸಲ್ಲಿಸಿದರು. 70 ರ ದಶಕದ ಕೊನೆಯಲ್ಲಿ ಮೈಸೂರಿನ ಮಾನಸಗಂಗೋತ್ರಿಯಲ್ಲಿ ವಿಶೇಶ ಅದ್ಯಾಪಕರಾಗಿ ಕೆಲಕಾಲ ಅವರು ದುಡಿದರು. ದಶಕಗಳ ಕಾಲ ತಮಿಳು ನಾಡಿನಲ್ಲಿದ್ದ ಸ್ವಾಮಿರವರು ಚೆನ್ನಾಗಿ ತಮಿಳು ಕಲಿತು ಶಾಸನಗಳನ್ನು ಓದಿ ಹಲವು ಲೇಕನಗಳನ್ನು ಬರೆದರು. ಅವರು ಸಂಸ್ಕ್ರುತ ನುಡಿಯ ಅದ್ಯಯನ ಕೂಡ ಮಾಡಿ ಅದರಲ್ಲೂ ಅಪಾರ ಗ್ನಾನ ಸಂಪಾದಿಸಿದ್ದರು. ಮಲಯಾಳಮ್, ತೆಲುಗು ನುಡಿಗಳಲ್ಲೂ ಅವರು ಕಚಿತ ತಿಳುವಳಿಕೆ ಹೊಂದಿದ್ದರು. ಇದರೊಟ್ಟಿಗೆ ವಿದೇಶಿ ನುಡಿಗಳಾದ ಲ್ಯಾಟಿನ್, ಸ್ಪಾನಿಶ್, ಜರ‍್ಮನ್ ಹಾಗೂ ಪ್ರೆಂಚ್ ಗಳಲ್ಲಿ ಸಂಶೋದನ ಲೇಕನ ಬರೆಯುವಶ್ಟು ಪ್ರಬುತ್ವ ಸಂಪಾದಿಸಿದ್ದರು. ಬಾರತದ ಮತ್ತು ವಿದೇಶದ ಹಲವಾರು ನುಡಿಗಳಲ್ಲಿ ಸುಮಾರು 300 ಸಂಶೋದನಾ ಲೇಕನ ಬರೆದಿರುವ ಸ್ವಾಮಿಯವರದು ನಂಬಲಸಾದ್ಯವಾದ ಅದ್ವಿತೀಯ ಸಾದನೆ ಎಂದೇ ಹೇಳಬೇಕು. ಬಹುಶಹ ಬಾರತದ ಮಟ್ಟಿಗೆ ಸಸ್ಯಶಾಸ್ತ್ರವನ್ನು ಆ ಮಟ್ಟಕ್ಕೆ ಓದಿ, ಅರಕೆ ಮಾಡಿ, ವಿಗ್ನಾನ ಕ್ಶೇತ್ರಕ್ಕೆ ಕೊಡುಗೆ ನೀಡಿದ ಇನ್ನೊಬ್ಬರು ಇರಲಿಕ್ಕಿಲ್ಲ.

ಸ್ವಾಮಿರವರ ಬರಹ, ವಿಡಂಬನೆ

ಕಾಲೇಜ್ ನಲ್ಲಿ ಸಸ್ಯಶಾಸ್ತ್ರ ಕಲಿಸುತ್ತಾ ಸ್ವಾಮಿರವರು ಹತ್ತಾರು ಪುಸ್ತಕಗಳನ್ನು ಬರೆದದ್ದು ಪವಾಡವೆಂದೇ ಹೇಳಬೇಕು. ಕಾಲೇಜ್ ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಬರಹದಲ್ಲಿ ತೊಡಗಿಕೊಳ್ಳುತ್ತಿದ್ದ ಅವರ ಹುರುಪು ಯುವಕರನ್ನೂ ನಾಚಿಸುವಂತ್ತಿತ್ತು. ವೈಗ್ನಾನಿಕ ವಿಶಯಗಳನ್ನೂ ಎಂತವರಿಗೂ ತಿಳಿಯುವಂತೆ ಸುಳುವಾಗಿ ಬರೆಯುತ್ತಿದ್ದಅವರ ಶೈಲಿ ಓದುಗರ ಮನ ಗೆದ್ದಿತ್ತು. ಹಾಸ್ಯ, ವಿಡಂಬನೆ, ನೈಜ ಅನುಬವಗಳ ಹೂರಣದೊಂದಿಗೆ ಕೂಡಿರುತ್ತಿದ್ದ ಅವರ ಬರಹಗಳಲ್ಲಿ ರೋಚಕತೆ ಮನೆಮಾಡಿರುತ್ತಿತ್ತು. ಮದ್ರಾಸ್ ನಲ್ಲಿ ಒಮ್ಮೆ ತಮಿಳು ಸಂಗದ ಕಾರ‍್ಯದರ‍್ಶಿಯೊಬ್ಬರು ಸ್ವಾಮಿಯವರ ಬಳಿ ಬಂದು ತಮಿಳು ಮಹಾಕಾವ್ಯ ಶಿಲಪ್ಪದಿಕಾರಂ ಅನ್ನು ಕನ್ನಡಕ್ಕೆ ಅನುವಾದ ಮಾಡಬೇಕು ಎಂದು ಕೇಳಿಕೊಂಡಾಗ ಸ್ವಾಮಿಯವರು ನಸುನಕ್ಕು, “ನನಗೆ ತಮಿಳು ಬಾರದೆಂದು ನೀವು ಹೇಳ್ತೀರಿ. ಕನ್ನಡ ಬಾರದೆಂದು ಕನ್ನಡಿಗರು ಹೇಳ್ತಾರೆ. ಇಬ್ಬರೂ ಹೇಳುವುದನ್ನು ನಾನು ಸಂಪೂರ‍್ಣವಾಗಿ ಒಪ್ತೀನಿ” ಎಂದು ಹೇಳಿದ್ದರು! ತಮ್ಮ ಕಾಲೇಜ್ ಅನುಬವಗಳನ್ನು ಕಾಲೇಜುರಂಗ, ಕಾಲೇಜುತರಂಗ, ಪ್ರಾದ್ಯಾಪಕನ ಪೀಟದಲ್ಲಿ ಪುಸ್ತಕಗಳಲ್ಲಿ ವಿಡಂಬನೆಯಾಗಿ ಹೊರತಂದರು. ಈ ಪುಸ್ತಕಗಳು ಶಿಕ್ಶಣ ಇಲಾಕೆಯ ಅವ್ಯವಸ್ತೆ, ನಮ್ಮ ಕಲಿಕಾ ಕ್ರಮದ ಕುಂದುಗಳು, ವಿದ್ಯಾರ‍್ತಿಗಳ ಹಾಗೂ ಅದ್ಯಾಪಕರ ಅಸಡ್ಡೆ, ಕಾಲೇಜ್ ನ ರಾಜಕೀಯ, ಇವೆಲ್ಲದಕ್ಕೆ ಕನ್ನಡಿ ಹಿಡಿದಿವೆ. ಅವರು ವಿದ್ಯಾರ‍್ತಿಗಳೊಂದಿಗೆ ಕೈಗೊಂಡ ಹಲವಾರು ಪ್ರವಾಸಗಳ ಅನುಬವಗಳನ್ನು ಒಟ್ಟು ಮಾಡಿ, ತಮಾಶೆ, ಹಾಸ್ಯದ ಲೇಪನವನ್ನು ಬೆರೆಸಿ ವೈಗ್ನಾನಿಕ ವಸ್ತುನಿಶ್ಟೆಯೊಂದಿಗೆ ರಾಜಿ ಮಾಡಿಕೊಳ್ಳದೆ ಹೊರತಂದ ‘ಹಸುರು ಹೊನ್ನು’ ಕನ್ನಡದ ಮೇರುಕ್ರುತಿಗಳಲ್ಲೊಂದು ಎಂದರೆ ತಪ್ಪಾಗಲಾರದು. ‘ಹಸುರು ಹೊನ್ನು’ ಗಳಿಸಿದ ಕ್ಯಾತಿ, ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಸೇರಿದಂತೆ ಪಡೆದ ಪ್ರಶಸ್ತಿ ಪುರಸ್ಕಾರಗಳು ದೊಡ್ಡ ದಾಕಲೆಯೇ ಮಾಡಿತು. ಇಂದಿಗೂ ಬಾರತದ ಬೇರೆ ಯಾವ ನುಡಿಯಲ್ಲೂ ಇಂತಹ ವಿಬಿನ್ನ ಹಾಗೂ ವಿಶಿಶ್ಟ ಬಗೆಯ ಸಂಶೋದನಾತ್ಮಕ ವೈಗ್ನಾನಿಕ ಪುಸ್ತಕ ಪ್ರಕಟವಾಗಿರುವ ಎತ್ತುಗೆಗಳಿಲ್ಲ. ಅವರ ಪ್ರವಾಸ ಕತನ ‘ಅಮೇರಿಕಾದಲ್ಲಿ ನಾನು’ ಆ ದೇಶದ ವೈಶಿಶ್ಟತೆ, ಅಲ್ಲಿನ ಜನರ ಬದುಕು, ಹಾಗೂ ಅಲ್ಲಿನ ಮೌಲ್ಯಗಳೊಂದಿಗೆ ಆ ದೈತ್ಯ ರಾಶ್ಟ್ರದ ಇನ್ನೊಂದು ಮುಕವನ್ನೇ ನಮಗೆ ಪರಿಚಯಿಸುತ್ತದೆ. ಇನ್ನು ‘ಪಲಶ್ರುತಿ’, ‘ದೌರ‍್ಗಂದಿಕಾಪಹರಣ’, ‘ನಮ್ಮ ಹೊಟ್ಟೆಯಲ್ಲಿ ದಕ್ಶಿಣ ಅಮೇರಿಕಾ’ ಪುಸ್ತಕಗಳು ಹಸುರು ಹೊನ್ನಿನಂತೆಯೇ ವಿಗ್ನಾನದ ಕೌತುಕ ಸಂಗತಿಗಳನ್ನು ತಿಳಿಹಾಸ್ಯದ ಮೂಲಕ ನಮಗೆ ತಿಳಿಸುತ್ತವೆ. ‘ತಮಿಳು ತಲೆಗಳ ನಡುವೆ’ ಸ್ವಾಮಿರವರು ಮದ್ರಾಸ್ ನಲ್ಲಿ ತಮಿಳರೊಂದಿಗೆ ಕಳೆದ ದಿನಗಳನ್ನೂ, ಅವರಿಗೆ ಅವರ ತಾಯ್ನುಡಿ ತಮಿಳಿನ ಬಗ್ಗೆ ಇರುವ ಬಹಳಶ್ಟು ತಪ್ಪು ಕಲ್ಪನೆಗಳನ್ನು ನುಡಿಯರಿಮೆ ನೆಲೆಗಟ್ಟಲ್ಲಿ ವಾದಿಸಿ, ದಿಟದ ಅರಿವು ಮೂಡಿಸಿದ ಪುಸ್ತಕ. ಇದರಿಂದ ಅವರು ತಮಿಳರ ಕೆಂಗಣ್ಣಿಗೆ ಗುರಿಯಾದರೂ ಆ ಪುಸ್ತಕ ಹೆಚ್ಚು ಜನಮೆಚ್ಚುಗೆಗಳಿಸಿತು. ಅವರ ಮೈಸೂರ ಅನುಬವಗಳನ್ನು ಹೆಕ್ಕಿ ತಂದ ಪುಸ್ತಕ ‘ಮೈಸೂರು ಡೈರಿ’ ಪುಸ್ತಕ ಅವರು ನಮ್ಮನ್ನಗಲಿದ ಬಳಿಕ 1994 ರಲ್ಲಿ ಪ್ರಕಟಗೊಂಡು ಮೆಚ್ಚುಗೆ ಗಳಿಸಿತು. ಹಾಗೂ ಅವರ ಇಂಗ್ಲಿಶ್, ಸ್ಪ್ಯಾನಿಶ್, ಜರ‍್ಮನ್, ಲ್ಯಾಟಿನ್ ಹಾಗೂ ಪ್ರೆಂಚ್ ಸಂಶೋದನಾ ಲೇಕನಗಳು ಅಂತರಾಶ್ಟ್ರೀಯ ಕ್ಯಾತಿ ಹೊಂದಿರುವ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡು ಕನ್ನಡ ನಾಡಿಗೆ ಮಾತ್ರವಲ್ಲದೆ ಇಡೀ ದೇಶಕ್ಕೂ ಹಿರಿಮೆ ತಂದಿದೆ. ಸ್ವಾಮಿರವರಿಗೆ ಸಸ್ಯಗಳ ರಚನೆ, ಹೂಗಳ ಬೆಳವಣಿಗೆ, ಒಳರಚನೆ, ವಿಬಿನ್ನ ಪಂಗಡಗಳ ಗಿಡಗಳ ನಂಟುಗಳ ಬಗ್ಗೆ ಇದ್ದ ಅಗಾದ ಅರಿವು, ಅವರಲ್ಲಿ ಗಿಡಗಳೊಂದಿಗೆ ಮಾತಾಡುವಶ್ಟು ಅಳವು ಇತ್ತೇನೋ ಎಂದೆನಿಸುತಿತ್ತು ಎಂದು ಅವರ ನಿಕಟವರ‍್ತಿಗಳು ಸೋಜಿಗದಿಂದ ಹೇಳಿಕೊಂಡಿದ್ದಾರೆ.

ಸ್ವಾಮಿರವರಿಗೆ ಒಲಿದು ಬಂದ ಪ್ರಶಸ್ತಿ ಪುರಸ್ಕಾರಗಳು

ವಿಗ್ನಾನ ಹಾಗೂ ಸಾಹಿತ್ಯ ಕ್ಶೇತ್ರದಲ್ಲಿ ಅಪಾರ ಸಂಶೋದನೆ ಮಾಡಿ ಸಾದನೆಗೈದ ದಿಗ್ಗಜ ಸ್ವಾಮಿರನ್ನು ಬಾರತ ಸರ‍್ಕಾರವಾಗಲೀ, ಕರ‍್ನಾಟಕ ಸರ‍್ಕಾರವಾಗಲೀ ಗುರುತಿಸಿ ಗೌರವಿಸಿದ್ದು ಕಡಿಮೆಯೇ ಎಂದು ಹೇಳಬೇಕು. 1960 ರಲ್ಲಿ’ಅಮೇರಿಕಾದಲ್ಲಿ ನಾನು’ ಪುಸ್ತಕಕ್ಕೆ ರಾಜ್ಯ ಸಾಹಿತ್ಯ ಅಕ್ಯಾಡಮಿ ಪ್ರಶಸ್ತಿ ಮತ್ತು ‘ಹಸುರು ಹೊನ್ನು’ ಪುಸ್ತಕಕ್ಕೆ 1978 ರಲ್ಲಿ ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ ಅವರಿಗೆ ದೊರಕಿದೆ. 1977 ರಲ್ಲಿ ಬಾರತ ಸರ‍್ಕಾರದಿಂದ ಬೀರ್ ಬಲ್ ಸಾಹಾನಿ ಚಿನ್ನದ ಪದಕ, ಹಾಗೂ ಅದೇ ವರುಶ ‘ಪ್ರೆಕ್ ಮತ್ತು ಸ್ಪೆಟೀಶನ್ ಅಂತರಾಶ್ಟ್ರೀಯ ಸಸ್ಯವಿಗ್ನಾನ ಕಾಂಗ್ರೆಸ್’ ರಶ್ಯಾದ ಲೆನಿನ್ ಗ್ರಾಡ್ ನಲ್ಲಿ ನಡೆದಾಗ ಸ್ವಾಮಿರವರು ಅಲ್ಲಿ ಉಪಾದ್ಯಕ್ಶರಾಗಿ ಹಾಜರಿದ್ದರು. ಹಲವಾರು ದೇಶಗಳ ವಿಗ್ನಾನಿಗಳು ಸೇರುವ ಈ ಕೂಟದಲ್ಲಿ ಸ್ವಾಮಿರವರಿಗೆ ದೊರೆತ ಮರ‍್ಯಾದೆ ಬಾರತಕ್ಕೆ ಹೆಮ್ಮೆ ತಂದುಕೊಟ್ಟಿತು. ‘ಕಾಲೇಜುರಂಗ’ ಕ್ಕೆ ಕ್ರಿಶ್ಚಿಯನ್ ಲಿಟರೇಚರ್ ಸೊಸೈಟಿ ಪ್ರಶಸ್ತಿ ಸಿಕ್ಕರೆ, ಅವರ ‘ಸಂತಾನ ರಹಸ್ಯ’ ಕ್ಕೆ ದೇವರಾಜ್ ಬಹಾದುರ್ ಪ್ರಶಸ್ತಿದೊರಕಿತು. ಅವರದೊಂದು ಚಿತ್ರವನ್ನು ಅಮೇರಿಕಾದ ಪ್ರತಿಶ್ಟಿತ ಮ್ಯೂಜಿಯಮ್ ಒಂದರಲ್ಲಿ ಗೌರವಪೂರ‍್ವಕವಾಗಿ ಇರಿಸಲಾಗಿದೆ. ಹಾಗೂ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿನ ಬಾರತಿದಾಸನ್ ವಿಶ್ವವಿದ್ಯಾಲಯದಲ್ಲಿ ಸ್ವಾಮಿರವರ ಹೆಸರಿನ ಗೌರವಾರ‍್ತ ‘ದಿ ಸ್ವಾಮಿ ಬೊಟಾನಿಕಲ್ ಕ್ಲಬ್’ ಸ್ತಾಪಿಸಲಾಗಿದೆ. ಕರ‍್ನಾಟಕ ಸರ‍್ಕಾರದ ಪ್ರತಿಶ್ಟಿತ ರಾಜ್ಯೋತ್ಸವ ಪ್ರಶಸ್ತಿಗೆ ಕೂಡ ಸ್ವಾಮಿರವರು ಬಾಜನರಾಗಿದ್ದಾರೆ. ಆದರೆ ತಾವಾಯಿತು ತಮ್ಮ ಸಂಶೋದನೆಯಾಯಿತು ಎಂದುಕೊಂಡು ದಣಿವರಿಯದೆ ದುಡಿದ ಸ್ವಾಮಿರವರಿಗೆ ಈ ಬಗೆಯ ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ಎಳ್ಳಶ್ಟೂ ಒಲವು ಇರಲಿಲ್ಲ.

ಬಹುಮುಕ ದೈತ್ಯ ಪ್ರತಿಬೆ – ಬಿ.ಜಿ.ಎಲ್. ಸ್ವಾಮಿ

ತಮ್ಮ ಬದುಕಿನಾದ್ಯಂತ ವಿಗ್ನಾನ, ಸಾಹಿತ್ಯ, ಸಂಗೀತದೊಟ್ಟಿಗೆ ಸುತ್ತಲಿನ ಎಲ್ಲಾ ಕೌತುಕದ ವಿಶಯಗಳ ಕುರಿತು ತಿಳಿದುಕೊಳ್ಳುತ್ತಾ, ಎಲ್ಲರಿಗೂ ತಿಳಿ ಹೇಳುತ್ತಾ ತುಂಬಿದ ಕೊಡ ಎಂದೆನಿಸಿಕೊಂಡಿದ್ದ ಸ್ವಾಮಿರವರ ವ್ಯಕ್ತಿತ್ವ ಬಹು ಅಪರೂಪವಾದದ್ದು ಎಂದೇ ಹೇಳಬೇಕು. ವಿಗ್ನಾನ-ಸಾಹಿತ್ಯ-ಕಲೆಗಳ ತ್ರಿವೇಣಿ ಸಂಗಮವೆಂದೇ ಜನ ಅವರನ್ನು ಗುರುತಿಸಿದರೂ, ತಾವು ಮಾತ್ರ ‘ನನ್ನ ಒಲವು ಎಂದಿದ್ದರೂ ವಿಗ್ನಾನವೇ’ ಎಂದು ಹೇಳುತ್ತಿದ್ದರು. ತಮ್ಮ ವಿದ್ಯಾರ‍್ತಿಗಳಿಗೆ, ಪರೀಕ್ಶೆಗೆ ಓದುವುದು ಮಾತ್ರ ಗುರಿಯಾಗಬಾರದು, ಎಲ್ಲರೂ ವೈಗ್ನಾನಿಕ ಮನೋಬಾವ ಬೆಳೆಸಿಕೊಳ್ಳಬೇಕು ಎಂದು ಸದಾ ಹೇಳುತ್ತಿದ್ದರು. ಸ್ವಾಮಿರವರನ್ನು ಹತ್ತಿರದಿಂದ ಕಂಡ ವಿಗ್ನಾನಿಯೊಬ್ಬರು ಅವರ ಬಗ್ಗೆ ಹೆಮ್ಮೆ ಹಾಗೂ ಆಶ್ಚರ‍್ಯದಿಂದ ಈ ರೀತಿ ಹೇಳಿದ್ದಾರೆ

He represented the very best of Indian thought and civilisation. He had the face of an intellectual, the mind of a philosopher and the heart of a revolutionary and concealing scientist.

ಡಾ. ಸ್ವಾಮಿ ಅವರ ಎಲ್ಲಾ ಚಳಕಗಳನ್ನು, ಗ್ನಾನವನ್ನು, ಕೊಡುಗೆಯನ್ನು ಒಟ್ಟು ಮಾಡಿರುವ ಈ ಮೇಲಿನ ಸಾಲುಗಳು ಓದುಗರ ಮೈನವಿರೇಳಿಸದೇ ಇರದು. ಎಳವೆಯಲ್ಲಿ ತಂದೆ ದಿಗ್ಗಜ ಡಿ.ವಿ.ಜಿ. ರವರ ನೆರಳಲ್ಲಿದ್ದರೂ ಅರಕೆ, ಬರಹದ ಮೂಲಕ ತಮ್ಮದೇ ಬಗೆಯಲ್ಲಿ ಹೆಮ್ಮರವಾಗಿ ಬೆಳೆದು ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಶ್ಟ ಚಾಪು ಮೂಡಿಸಿದ ಸ್ವಾಮಿರವರ ಸಾದನೆ ಅವರನ್ನು ಕಂಡಿತ ಕನ್ನಡದ ಶ್ರೇಶ್ಟ ಸಾಹಿತಿಗಳ ಸಾಲಿನಲ್ಲಿ ನಿಲ್ಲಿಸುತ್ತದೆ.

ಕಾಲೇಜ್ ಕೆಲಸದಿಂದ ನಿವ್ರುತ್ತರಾಗಿ ತಮ್ಮ ಮುಂದಿನ ಅರಕೆ, ಬರಹ ಮುಂದುವರಿಸಲು ತಮ್ಮ ವೈಗ್ನಾನಿಕ ಸಲಕರಣೆಗಳು ಹಾಗೂ ಸಾವಿರಾರು ಪುಸ್ತಕಗಳ ಮೂಟೆಗಳೊಂದಿಗೆ ಮೈಸೂರಲ್ಲಿ ನೆಲೆಸಿದ್ದ ಸ್ವಾಮಿರವರು ಹಟಾತ್ತನೆ 2 ನವೆಂಬರ್, 1980 ರಂದು ರಾತ್ರಿ ತಮ್ಮ 62ನೇ ವಯಸ್ಸಿನಲ್ಲಿ ನಮ್ಮನ್ನೆಲ್ಲಾ ಅಗಲಿದರು. ಅವರ ದಿಡೀರ್ ಸಾವು ಕನ್ನಡಿಗರಲ್ಲಿ ದಿಗ್ಬ್ರಮೆ ಮೂಡಿಸಿತು. ಕಾಲೇಜ್ ನಿಂದ ಬಿಡುವು ಪಡೆದು ಇನ್ನು ಪೂರ‍್ಣಪ್ರಮಾಣವಾಗಿ ಬರಹದಲ್ಲಿ ತೊಡಗಬೇಕೆಂದುಕೊಂಡಿದ್ದ ಅವರಿಂದ ಕನ್ನಡದಲ್ಲಿ ಇನ್ನೆಶ್ಟು ಉತ್ಕ್ರುಶ್ಟ ಪುಸ್ತಕಗಳು ಬರಲಿದ್ದವೋ? ಸಸ್ಯಲೋಕದಲ್ಲಿ ಏನೇನು ಹೊಸ ಅರಕೆ ಆಗಲಿದ್ದವೋ? ಎಲ್ಲಾ ತಪ್ಪಿ ಹೋಯಿತೇ ಎಂದು ಕನ್ನಡಿಗರು ಇಂದಿಗೂ ಬೇಸರ ಪಡುತ್ತಿರುವುದು ಸುಳ್ಳಲ್ಲ. ಅಂತಹ ದೈತ್ಯ ಪ್ರತಿಬೆ ನಮ್ಮ ಹೆಮ್ಮೆಯ ಕನ್ನಡಿಗ ಡಾ. ಬಿ.ಜಿ.ಎಲ್. ಸ್ವಾಮಿಯವರು. ಎಲ್ಲರಿಗೂ ಮಾದರಿಯಾಗುವಂತ ಸರಳ ಬದುಕು ನಡೆಸಿ, ಕನ್ನಡ ಸಾಹಿತ್ಯ ಲೋಕಕ್ಕೆ ಹಾಗೂ ವಿಗ್ನಾನಕ್ಕೆ ಇವರು ನೀಡಿದ ಕೊಡುಗೆಯನ್ನು ಎಂದಿಗೂ ಮರೆಯದಿರೋಣ. ಹಾಗೆಯೇ ನಮ್ಮ ರಾಜ್ಯ ಸರ‍್ಕಾರಕ್ಕೂ ಸ್ವಾಮಿರವರ ಹೆಸರನ್ನು ಅಜರಾಮರ ಮಾಡುವಂತಹ ಯೋಜನೆಗಳನ್ನು ರೂಪಿಸಲು ನೆನಪಿಸೋಣ. ಯಾಕೆಂದರೆ ಮತ್ತೊಬ್ಬ ಬಿ.ಜಿ.ಎಲ್. ಸ್ವಾಮಿ ಬರಲು ಸಾದ್ಯವೇ ಇಲ್ಲ!

(ಚಿತ್ರ ಸೆಲೆ: bglswamy.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications