ಕವಿತೆ: ಇದ್ದೇ ಇರುವರು ಇವರು

– ಚಂದ್ರಗೌಡ ಕುಲಕರ‍್ಣಿ.

children, ಮಕ್ಕಳು

ಬೆಲ್ಲದ ಚೂರು ಬಿದ್ದರೆ ಸಾಕು
ಮುತ್ತಿ ಬಿಡುವವು ಇರುವೆ
ಸಾಲು ಸಾಲು ಹಚ್ಚಿ ಬರುವವು
ಕರೆಯದೆ ಇದ್ದರು ತಾವೆ

ತುಂಬ ಹೊದ್ದು ಮಲಗಿದರೂನು
ಬಂದೇ ಬಿಡುವವು ಸೊಳ್ಳೆ
ಗೊತ್ತಿಲ್ದಂಗ ರಕ್ತ ಹೀರಿ
ಎಬ್ಬಿಸಿ ಬಿಡುವವು ಗುಳ್ಳೆ

ಹುಳ ಹುಪ್ಪಡಿ ಹಿಡಿಯಲೆಂದು
ಓಡಾಡುವುದು ಹಲ್ಲಿ
ನುಣುಪು ಗೋಡೆ ಇದ್ದರೂ ಜಾರಿ
ಬೀಳುವುದಿಲ್ಲ ಮಲ್ಲಿ

ಮಾವಿನ ಹಣ್ಣಿನ ಸಿಹಿಸಿಹಿ ರುಚಿಗೆ
ದಾಳಿ ಇಡುವವು ನೂರು
ರೋಗ ಹರಡುವ ನೊಣಗಳ ಕ್ಯಾತಿಗೆ
ಸರಿಸಮ ನಿಲ್ಲರು ಯಾರು

ಎಂತಹ ಚಂದದ ಎಳೆರಂಗೋಲಿ
ಪುಟ್ಟ ಜೇಡನ ಜಾಲ
ಮತ್ತೆ ಮತ್ತೆ ಹೆಣೆದು ಬಿಡುವುದು
ಬಳಸಿ ರೇಶಿಮೆ ನೂಲ

ಗುಡಿಸಲೆ ಇರಲಿ ಅರಮನೆ ಇರಲಿ
ಇದ್ದೇ ಇರುವರು ಇವರು
ಏನೇ ಇದ್ದರೂ ಮನುಜನು ಇರುವ
ತಾಣವೆ ಇವುಗಳ ತವರು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: