ಕವಿತೆ: ಒಲವಿನ ಬೆಸುಗೆ

– ರಾಮಚಂದ್ರ ಮಹಾರುದ್ರಪ್ಪ.

ನಿನ್ನ ಕೈಗಳಲ್ಲಿ ನನ್ನ ಕೈಗಳು ಬೆರೆತು ಹಿತವಾಗಿದೆ
ನಿನ್ನೀ ನಯವಾದ ಸ್ಪರ‍್ಶ ಹಾಯೆನಿಸಿದೆ
ಬಾಳಲ್ಲಿ ಎಂದೂ ಕಾಣದ ನಂಬಿಕೆ ಮೂಡಿದೆ
ಹೀಗೇ ಇದ್ದು ಬಿಡೋಣವೇ, ಗೆಳತಿ?

ನಂಬಿಕೆಯ ಅಡಿಪಾಯದ ಮೇಲೆ
ನಮ್ಮ ಪ್ರೀತಿಯ ನೀರೆರೆದು
ಕಟ್ಟೋಣವೇ ನಮ್ಮದೊಂದು ಒಲವಿನ ಅರಮನೆ?
ಚಳಿ, ಗಾಳಿ, ಬಿಸಿಲಿಗೆ ನಮಗೆ ಆಸರೆಯಾಗಿ
ನಮ್ಮ ನೋವು ನಲಿವಿಗೆ ಸಾಕ್ಶಿಯಾಗಿ
ನಮ್ಮರಮನೆ ಆಗಲಿ ನಮ್ಮೊಲವಿನ ಮನೆ
ನಮ್ಮ ಪ್ರೀತಿಯ ಚಿಗುರು ಇಲ್ಲಿ ಮರವಾಗಲು
ಆ ಮರ ಕಾಯಿ ಬಿಟ್ಟು ಹಣ್ಣಾಗಲು
ಒಲವಿನ ಬಾಳನ್ನು ಸವೆದು ನಾವೂ ಹಣ್ಣಾಗಲು
ಸಾರ‍್ತಕತೆ! ನಮ್ಮೊಲವಿನ ಬಾಳಿಗೊಂದು ದನ್ಯತೆ

ಬೀಗ ಹಾಕಿ ಬದ್ರ ಮಾಡು ಗೆಳತಿ ಈ ಬೆಸುಗೆಯನ್ನ
ಪ್ರಪಂಚ ಅಲ್ಲೋಲ ಕಲ್ಲೋಲವಾದರೂ
ಸಡಿಲವಾಗದಿರಲಿ ನಮ್ಮೀ ಬೆಸುಗೆ
ನಡೆ ಗೆಳತಿ, ಒಟ್ಟಿಗೆ ಹೆಜ್ಜೆ ಹಾಕೋಣ
ನಮ್ಮೊಲವಿನ ಮನೆಯೆಡೆಗೆ ಸಾಗೋಣ

(ಚಿತ್ರ ಸೆಲೆ: pxhere.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks