ಅಲಾಸಿಟಾಸ್ ಉತ್ಸವ
– ಕೆ.ವಿ.ಶಶಿದರ.
ಪ್ರತಿ ವರ‍್ಶ ಜನವರಿ 24 ರಂದು ಬೊಲಿವಿಯಾದ ಜನರು ಸೇರುವುದು ಲಾ ಪಾಜ್ ನಗರದಲ್ಲಿ. ಇಲ್ಲಿ ಸೇರುವ ಉದ್ದೇಶ ಬರಪೂರ ಶಾಪಿಂಗ್ ಮಾಡಲು. ಇದು ಸಾಮಾನ್ಯ ಶಾಪಿಂಗ್ ಅಲ್ಲ. ಬದಲಿಗೆ ಅವರುಗಳು ಮನೆ-ಕಾರುಗಳು, ವಿದ್ಯುತ್ ಉಪಕರಣಗಳು, ಬಟ್ಟೆ, ಆಹಾರ ಪದಾರ‍್ತಗಳು, ಕಂಪ್ಯೂಟರ‍್ಗಳು, ಏರ‍್ಲೈನ್ ಟಿಕೇಟುಗಳು ಕೊನೆಗೆ ವಿಶ್ವವಿದ್ಯಾಲಯದ ಡಿಗ್ರಿ ಸರ‍್ಟಿಪಿಕೇಟುಗಳು ಎಲ್ಲದರ ಮಿನಿಯೇಚರ್ ಗಳನ್ನು ಶಾಪಿಂಗ್ ಮಾಡಿ, ಶಾಪಿಂಗ್ ಬ್ಯಾಗುಗಳಲ್ಲಿ ತುಂಬಿಕೊಳ್ಳುತ್ತಾರೆ. ಇವೆಲ್ಲವೂ ಅಂದು ಅಲ್ಲಿ ಬಹಳ ಅಗ್ಗದ ಬೆಲೆಗೆ ದೊರೆಯುತ್ತವೆ.
ಬೊಲಿವಿಯಾದ ಅತಿ ದೊಡ್ಡ ಹಬ್ಬ
ಅಲಾಸಿಟಾಸ್ ಉತ್ಸವ ಅತವಾ ಸ್ಪಾನಿಶ್‍ನಲ್ಲಿ ಪೆರಿಯಾ ಡೆ ಲಾಸ್ ಅಲಾಸಿಟಾಸ್ ಉತ್ಸವ ಒಂದು ತಿಂಗಳ ಕಾಲ ನಡೆಯುವ ಬೊಲಿವಿಯಾದ ಅತಿ ದೊಡ್ಡ ಹಬ್ಬವಾಗಿದೆ. ಈ ಹಬ್ಬದ ಸಂದರ‍್ಬದಲ್ಲಿ, ಬೊಲಿವಿಯಾದ ಅದ್ರುಶ್ಟ ಮತ್ತು ಸಮ್ರುದ್ದಿಯ ಸಾಂಪ್ರದಾಯಿಕ ದೇವರು ಎಕೆಕೊ ಅತವಾ ಐಮಾರಗೆ, ಉತ್ಸವದಲ್ಲಿ ಕೊಂಡುಕೊಂಡ ಈ ಎಲ್ಲಾ ವಸ್ತುಗಳನ್ನು ಸಮರ‍್ಪಿಸುತ್ತಾರೆ. ಇದರಿಂದ ದೇವರ ಅನುಗ್ರಹ ದೊರೆತು, ಅದ್ರುಶ್ಟ ಮತ್ತು ಸಂತೋಶ ತಮ್ಮದಾಗುತ್ತದೆ ಎಂಬ ಬರವಸೆ, ನಂಬಿಕೆ ಅವರುಗಳದ್ದು.
ಹಿನ್ನೆಲೆ
ಅಲಾಸಿಟಾಸ್ ಉತ್ಸವ ಮೂಲತಹ ಆಚರಿಸಲಾಗುತ್ತಿದ್ದುದು ಸೆಪ್ಟಂಬರ್ ತಿಂಗಳಿನಲ್ಲಿ. ಇದು ಪ್ರಾರಂಬವಾಗಿದ್ದು ರೈತರಿಗಾಗಿ. ದೇಶದ ಎಲ್ಲಾ ಕಡೆಯ ರೈತರು ಮುಂಬರುವ ವರ‍್ಶದಲ್ಲಿ ಸಮ್ರುದ್ದ ಬೆಳೆ ದೊರಕಲಿ ಎಂದು ಎಕೆಕೊ ದೇವರಿಗೆ ಉಡುಗೊರೆಗಳನ್ನು ನೀಡಿ ಪ್ರಾರ‍್ತಿಸುತ್ತಿದ್ದರಂತೆ. ಮೊದಲು ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯುತ್ತಿದ್ದ ಈ ಆಚರಣೆ ಜನವರಿಗೆ ಬದಲಾದುದರ ಹಿಂದೆಯೂ ಒಂದು ಕತೆಯಿದೆ. ಲಾ ಪಾಜ್ ಸ್ಪಾನಿಶ್ ರಾಜನ ಹಿಡಿತದಲ್ಲಿತ್ತು. ಎಲ್ಲಾ ರಾಜಕೀಯ ವಿಶಯದಲ್ಲೂ ಸ್ಪಾನಿಶ್ ರಾಜನದೇ ಅಂತಿಮ ನಿರ‍್ದಾರವಾಗಿತ್ತು. 1781ರಲ್ಲಿ, ಕ್ರಾಂತಿಕಾರಿ ತುಪಕ್ ಕಟಾರಿ ನಾಯಕತ್ವದಲ್ಲಿ ಐಮಾರ ಜನರ ಗುಂಪು ಲಾ ಪಾಜ್‍ಗೆ ಮುತ್ತಿಗೆ ಹಾಕಿ, ಚರ‍್ಚ್ ಗಳನ್ನು ಮತ್ತು ಸರ‍್ಕಾರಿ ಆಸ್ತಿಯನ್ನು ಹಾಳುಗೆಡವಿತು. ಇದೆಲ್ಲಾ ನಡೆದಿದ್ದು ಅವರ ಸುಪರ‍್ದಿಯಲ್ಲಿದ್ದ ಆರು ತಿಂಗಳ ಅವದಿಯಲ್ಲಿ. ಈ ಮುತ್ತಿಗೆಯ ಸವಿ ನೆನಪಿಗಾಗಿ ಅಲಾಸಿಟಾಸ್ ಉತ್ಸವದ ದಿನಾಂಕವನ್ನು ಸೆಪ್ಟೆಂಬರ್ ತಿಂಗಳಿಂದ ಜನವರಿಗೆ ಬದಲಾಯಿಸಲಾಯಿತು. ದಿನಾಂಕಗಳು ಬದಲಾವಣೆಯಾದ ನಂತರ ಅಲಾಸಿಟಾಸ್ ಉತ್ಸವದ ಪರಿದಿ ಇನ್ನೂ ಹೆಚ್ಚಾಯಿತು. ಮೊದಲು ರೈತರು ತಮ್ಮ ಉತ್ಪನ್ನಗಳು, ಬೆಳೆ ಹೇರಳವಾಗಲಿ ಎಂದಶ್ಟೇ ಪ್ರಾರ‍್ತಿಸುತ್ತಿದ್ದರು. ಜನವರಿಗೆ ಬದಲಾದ ನಂತರ ಸಂಪತ್ತು, ಶಿಕ್ಶಣ, ಪ್ರಯಾಣದಂತಹ ವಿಶಯಗಳಿಗಾಗಿಯೂ ಎಕೆಕೊನಲ್ಲಿ ಪ್ರಾರ‍್ತನೆ ಸಲ್ಲಿಸುವುದು ಪ್ರಾರಂಬವಾಯಿತು.
ಬೊಲಿವಿನ್ನರು ತಮ್ಮ ಇಶ್ಟಾರ‍್ತ ಸಿದ್ದಿಗಾಗಿ, ಎಕೆಕೊದ ಸಣ್ಣ ಸಣ್ಣ ಪ್ರತಿಮೆಗಳನ್ನು ಕರೀದಿಸಿ, ಮನೆಯಲ್ಲೇ ಇರಿಸಿಕೊಳ್ಳುವುದನ್ನು ಪ್ರಾರಂಬಿಸಿದ್ದಾರೆ. ತಮ್ಮ ಮನದ ಇಶ್ಟಾರ‍್ತ ಸಿದ್ದಿಸಲು ಮನೆಯಲ್ಲಿನ ಎಕೆಕೊಗೆ ತಮ್ಮಿಶ್ಟದ ವಸ್ತುಗಳನ್ನು ಕರೀದಿಸಿ ಅರ‍್ಪಿಸುತ್ತಾರೆ. ಎಕೆಕೊ ದೇವರ ಪೂಜಾರಿಯ ಆಶೀರ‍್ವಾದದ ನಂತರ ಈ ವಸ್ತಗಳನ್ನು ಎಕೆಕೊ ದೇವರ ಅಂಗವಸ್ತ್ರಕ್ಕೆ ಬಿಗಿಸುತ್ತಾರೆ. ಎಕೆಕೋ ಬೇಡಿಕೆಯನ್ನು ಈಡೇರಿಸುವ ದೇವರಾಗಿರುವುದರಿಂದ ಹಲವಾರು ಉಡುಗೊರೆಯೊಂದಿಗೆ ಅದರ ಬಾಯಲ್ಲಿ ಸಿಗರೇಟನ್ನು ಬೆಳಗಿಸುವ ಪ್ರವ್ರುತ್ತಿಯನ್ನು ಕಾಣಬಹುದು. ಮದ್ಯದ ವ್ಯಸನಿಗಳು ತಾವು ಮದ್ಯ ಸೇವಿಸುವ ಮುನ್ನ, ಎಕೆಕೊ ದೇವರ ಮುಂದಿನ ನೆಲದ ಮೇಲೆ ಸ್ವಲ್ಪ ಪ್ರಮಾಣ ಮದ್ಯ ಸುರಿದು, ನಂತರ ಸೇವಿಸುವ ಪರಿಪಾಟವನ್ನು ಪಾಲಿಸುತ್ತಾರೆ. ಈ ಎಲ್ಲಾ ಉಡುಗೊರೆಗಳನ್ನು ಸ್ವೀಕರಿಸಿದ ಎಕೆಕೊ, ಆ ಕುಟುಂಬದ ಸದಸ್ಯರುಗಳ ಮೇಲೆ ನಿಗಾ ಇಟ್ಟು ದುರಾದ್ರುಶ್ಟವನ್ನು ತೊಡೆದು ಹಾಕಿ, ವರ‍್ಶ ಮುಗಿಯುವ ಮೊದಲು ಸ್ವೀಕರಿಸಿದ ಉಡುಗೊರೆಗೆ ಬದಲಿಯಾಗಿ ಅವರ ಇಶ್ಟಾರ‍್ತವನ್ನು ಪೂರೈಸುತ್ತಾನೆ ಎಂಬ ನಂಬಿಕೆ ಅವರಲ್ಲಿದೆ.
ಅಲಾಸಿಟಾಸ್ ಉತ್ಸವದ ಸಮಯದಲ್ಲಿ ಲಾ ಪಾಜ್ ನಗರದ ಎಲ್ಲಾ ಬೀದಿಗಳು ಮತ್ತು ಉದ್ಯಾನವನಗಳು ಮಳಿಗೆಗಳಿಂದ ತುಂಬಿ ಹೋಗಿರುತ್ತವೆ. ಈ ದಿನಗಳಲ್ಲಿ ಅತಿ ಹೆಚ್ಚು ವ್ಯಾಪಾರವಾಗುವುದು ಸಣ್ಣ ಸಣ್ಣ ಗೊಂಬೆಗಳಾದರೂ, ಪಿಂಗಾಣಿ, ಚರ‍್ಮ ಹಾಗೂ ಕರಕುಶಲ ವಸ್ತುಗಳೂ, ಒಣಗಿದ ಹಣ್ಣುಗಳು ಮತ್ತು ಬೇಯಿಸಿದ ಪದಾರ‍್ತಗಳು ಸಹ ಯತೇಚ್ಚವಾಗಿ ಮಾರಾಟಕ್ಕೆ ಲಬ್ಯವಿರುತ್ತವೆ. ಜನವರಿ 24ರ ಮದ್ಯಾಹ್ನ ಕ್ಯಾತೋಲಿಕ್ ಗುರುಗಳು ಉಡುಗೊರೆಗಳನ್ನು ಸ್ಯಾನ್ ಪ್ರಾನ್ಸಿಸ್ಕೋದ ಕ್ಯಾತೆಡ್ರೆಲ್ನಲ್ಲಿ ಆಶೀರ‍್ವದಿಸುವ ಮೂಲಕ ಲಾ ಪಾಜ್‍ನ ಮೂಲ ದೇವರನ್ನು ಗೌರವಿಸುತ್ತಾರೆ. ಅಲಾಸಿಟಾಸ್ ಉತ್ಸವ ಪ್ರವಾಸಿಗರಿಗೆ ಬೊಲಿವಿಯಾದ ಆಕರ‍್ಶಕ ಸಮ್ರುದ್ದ ಸಂಸ್ಕ್ರುತಿಯ ಒಳ ನೋಟವನ್ನು ಪರಿಚಯಿಸುವ ಸುಲಬ ಮಾರ‍್ಗವಾಗಿದೆ. ಅಲಾಸಿಟಾಸ್ ಉತ್ಸವದ ಸಮಯದಲ್ಲಿ ಪ್ರವಾಸಿಗರು ಹಾಗೂ ಬೊಲಿವಿಯನ್ನರು ಪ್ರವಾಹದೋಪಾದಿಯಲ್ಲಿ ಲಾ ಪಾಜ್ ನಗರವನ್ನು ಸೇರುವ ಕಾರಣ ಸ್ತಳವನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳುವುದು ಕ್ಶೇಮಕರ.
(ಮಾಹಿತಿ ಮತ್ತು ಚಿತ್ರಸೆಲೆ: boliviaemprende.com, bolivia.com, elchacoinforma.com, spanishbytes.com )
ಇತ್ತೀಚಿನ ಅನಿಸಿಕೆಗಳು