ಕವಿತೆ : ಏಕಾಂಗಿ

– ವೆಂಕಟೇಶ ಚಾಗಿ.

ಆ ಸುಂದರ ಉದ್ಯಾನವನದಲ್ಲಿ
ಹಕ್ಕಿ ಪಕ್ಶಿಗಳ ಕಲರವ ಮದುರ ಸುಮದುರ
ಮನದ ಮಂಕುಗಳೆಲ್ಲಾ
ಬೆಟ್ಟದ ಮೇಲಿನ ಮೋಡಗಳ ಹಾಗೆ
ಕರಗಿ ಮನವ ತೊರೆದು ಬಿಡುವವು ಅಶ್ಟೇ

ಹುಲ್ಲು ಹಾಸಿನ ಹಸಿರು
ಕಣ್ಣುಗಳ ತುಂಬಿ ತುಳುಕುವ ನೋಟ
ನಲಿದಾಡುವ ಹೂವುಗಳ ದಿಮಾಕು
ಮತ್ತೆ ದುಂಬಿಗಳ ಅದೇ ಸುಂದರ ರಾಗ
ಚಿಗುರೆಲೆಗಳ ಮೇಲಿನ ಅಮ್ರುತಕೆ
ಇನ್ನೂ ಯಾರೂ ಒಡೆಯರಾಗಿಲ್ಲ
ನಿಸರ‍್ಗದೊಡಲಿನ ವೈಚಿತ್ರ‍್ಯಕೆ ಒಡೆಯರಾರು ?
ಪ್ರಶ್ನೆ ಮಾತ್ರ ಹಾಗೇ ಇದೆ
ಉತ್ತರದ ವಿಳಾಸವಿಲ್ಲದೆ

ಆ ಮೂಲೆಯ ಬೆಂಚಿನ ಮೇಲೆ
ಎರಡು ಹ್ರುದಯಗಳ ಮಿಡಿತ
ಸ್ಪಶ್ಟವಾಗಿ ಕೇಳುತ್ತಿದೆ ಮರದ ಮೇಲಿನ
ಪ್ರೇಮಿಗಳಿಗೂ
ಈ ಬಡಿತ ತುಡಿತ ಹೊಸದೇನು ಅಲ್ಲ
ಆದರೂ ಪ್ರತಿದಿನವೂ ಹೊಸದು
ಹೊಸ ಬಂದದ ಬೆಸುಗೆಯ ಹೂರಣ
ಆಗಾಗ ಕೋಪ ತಾಪ ಮುನಿಸುಗಳ
ಅಲ್ಪ ಅಪಸ್ವರ
ಆದರೂ ಪ್ರೀತಿಯ ಗಾನ ಅನುದಿನ

ಮೌನವಾಗಿರುವ ವ್ರುಕ್ಶಗಳಿಗೆ
ಪ್ರತಿ ಅವದಿಯೂ ಪ್ರೀತಿ ಪ್ರೇಕ್ಶಣ
ಸ್ಪಶ್ಟ ನಿಕರ ಪ್ರೀತಿಯ ಕಾರಣ
ಆಗಾಗ ಹರಸುವ ಮಳೆರಾಯನ ದರ‍್ಶನ
ಬಂದ ಆ ಹ್ರುದಯಗಳಿಗಶ್ಟೇ ಅಲ್ಲ
ಮೌನವಾಗಿರು ಜೀವಗಳಿಗೂ
ಕಾಣದೇ ಮಿಡಿಯುವ ಆತ್ಮಗಳಿಗೂ
ನಿಸರ‍್ಗದ ಮೇಲಿನ ನಂಬಿಕೆಗೆ ಹುಸಿ
ಕಂಡಿತ ಇಲ್ಲ

ಅದರೆ,
ವಯಸ್ಸಿನ ಆಕರ‍್ಶಣೆಯ ಬಲಿಪಶುಗಳ
ಹುಸಿ ಪ್ರೀತಿಗೆ ಯಾರು ಕಾರಣ
ಹೊಸ ಸೆಳೆತವೋ ಇಂಗಿತವೋ
ಬೇದವೋ ಬದುಕಿನ ಸೆಳೆತವೋ
ಪ್ರೀತಿಗೆ ಒಂದಿಶ್ಟು ಜಾಣ ಕುರುಡುತನ

ಹ್ರುದಯಗಳ ಹೊಸ ಹಾಡಿಗೋಸ್ಕರ
ತಾನೇ ಬಲಿಯಾದ ಗುಲಾಬಿಯ ತ್ಯಾಗ
ಯಾರಿಗೂ ತಿಳಿಯುತಿಲ್ಲ
ಹೊರಟು ಹೋದ ಹ್ರುದಯಗಳ ಜಾಗವೀಗ
ಕಾಲಿ ಬರೀ ಕಾಲಿ

ಆದರೆ
ಬಲಿಯಾದ ಗುಲಾಬಿಯ ತ್ಯಾಗ ಪ್ರೀತಿಯ ಕಣ್ಣೀರು
ಮಾತ್ರ ಏಕಾಂಗಿ
ಅಗೋ! ಅವನೇ, ಅವನೇ ಅನಾತ
ಆ ಎರಡೂ ಹ್ರುದಯಗಳ ಸ್ಪರ‍್ಶವಿಲ್ಲದೆ
ಏಕಾಂಗಿ ಬೆಂಚಿನ ಮೇಲೆ

(ಚಿತ್ರ ಸೆಲೆ : pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: