ಓರಿಯೋ-ಹೈಡ್ ಅಂಡ್ ಸೀಕ್ ಕೇಕು

– ನಿತಿನ್ ಗೌಡ.

ಬೇಕಾಗುವ ಸಾಮಾನುಗಳು

  • ಓರಿಯೋ ಬಿಸ್ಕೆಟ್ – 1 ಪ್ಯಾಕು
  • ಹೈಡ್ ಅಂಡ್ ಸೀಕ್ ಬಿಸ್ಕೆಟ್ – 1 ಪ್ಯಾಕು
  • ಉಪ್ಪು – ಒಂದು ಹಿಡಿ (ಅಚ್ಚಿನ ಕೆಳಗೆ ಹಾಕಲು)
  • ಈನೋ – 1 ಸ್ಯಾಚೆ

ಕೇಕನ್ನು ಚೆಂದಗೊಳಿಸಲು (ಬೇಕಾದ್ದಲ್ಲಿ)

  • ಡೈರಿಮಿಲ್ಕ್ ಚಾಕಲೇಟು – 2
  • ಜೀರಿಗೆ ಪೆಪ್ಪರ‍್ಮೆಂಟು ಸ್ವಲ್ಪ
  • ಐಸ್‍‍ಕ್ರೀಮು – 2 ಸ್ಕೂಪ್

ಮಾಡುವ ಬಗೆ

ಮೊದಲಿಗೆ ಓರಿಯೋ (ಕ್ರೀಮ್ ತೆಗೆದಿಟ್ಟು) ಮತ್ತು ಹೈಂಡ್ ಅಂಡ್ ಸೀಕ್ ಬಿಸ್ಕೆಟ್‍‍ಗಳನ್ನು ಮಿಕ್ಸಿಯಲ್ಲಿ ರುಬ್ಬಿ ಪುಡಿಮಾಡಿಕೊಳ್ಳಬೇಕು. ಈಗ ಈ ಪುಡಿಗೆ ಕೊಂಚ ಕೊಂಚವಾಗಿ ಹಾಲನ್ನು ಬೆರೆಸಿ, ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಈಗ ಕೇಕು ಮಾಡುವ ಅಚ್ಚಿಗೆ/ಪಾತ್ರೆಗೆ ತುಪ್ಪ ಸವರಿಟ್ಟುಕೊಳ್ಳಬೇಕು. ಆಮೇಲೆ ಬೇರೊಂದು ಪಾತ್ರೆಗೆ ಒಂದು ಹಿಡಿ ಪುಡಿಯುಪ್ಪು ಹಾಕಿ, ಹರಡಿ 2 ನಿಮಿಶ ಕಾಯಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ, ಪಾತ್ರೆಯ ಎಲ್ಲೆಡೆ ಬಿಸಿ ಒಂದೇ ಮಟ್ಟಕ್ಕೆ ತಲುಪಿ, ಕೇಕು ಹದವಾಗಿ ಬೇಯುತ್ತದೆ. ಕಲಸಿಟ್ಟುಕೊಂಡ ಬಿಸ್ಕೆಟ್ ಪುಡಿಗೆ ಒಂದು ಚಮಚ ತುಪ್ಪ ಮತ್ತು ಒಂದು ಚಮಚ ಈನೋ ಹಾಕಿ, ಕಲಸಿ ತಕ್ಶಣ ಕೇಕಿನ ಅಚ್ಚಿಗೆ ಹಾಕಿ, ಮುಚ್ಚಳ ಮುಚ್ಚಿ 20 ನಿಮಿಶ ಬೇಯಲು ಇಡಬೇಕು. ಕೇಕಿಗೆ ಒಂದು ಕಡ್ಡಿ ಚುಚ್ಚಿ, ಅದು ಹಸಿಯಿದ್ದಲ್ಲಿ ಕೇಕನ್ನು ಇನ್ನೂ ಕೊಂಚ ಬೇಯಿಸಿಕೊಳ್ಳಬಹುದು. ಈಗ ಬಿಸಿ ಆರಿದಮೇಲೆ ಅಚ್ಚಿನಿಂದ ಕೇಕನ್ನು ತೆಗೆದು ಮಗಚಿ, ಇನ್ನೊಂದು ತಟ್ಟೆಗೆ ಹಾಕಿಕೊಳ್ಳಬೇಕು. ಈಗ ಕೇಕು ಸವಿಯಲು ಸಿದ್ದವಿದ್ದು, ಬೇಕಾದ್ದಲ್ಲಿ ಈ ಕೆಳಗಿನ ಬಗೆಯಲ್ಲಿ ಕೇಕನ್ನು ಚೆಂದಗೊಳಿಸಬಹುದು.

ಈ ಮೊದಲು ತೆಗೆದಿಟ್ಟುಕೊಂಡ ಓರಿಯೋ ಕ್ರೀಮ್ ಮತ್ತು ಡೈರಿ ಮಿಲ್ಕ್ ಚಾಕಲೇಟುಗಳನ್ನು ಒಂದು ಚಿಕ್ಕ ಪಾತ್ರೆಗೆ ಹಾಕಿ, ಕೊಂಚ ಬಿಸಿ ಮಾಡಿ, ಕರಗಿಸಿ ಕೇಕಿನ ಮೇಲೆ ಹಾಕಬೇಕು. ಆಮೇಲೆ ಇದರ ಮೇಲೆ ಐಸ್ ಕ್ರೀಮನ್ನು ಹಾಕಿ, ಜೀರಿಗೆ ಪೆಪ್ಪರ‍್ಮೆಂಟು ಉದುರಿಸಿ, ಬಿಸ್ಕೆಟ್ಟನ್ನು ಮೇಲಿಟ್ಟು ಚೆಂದಗೊಳಿಸಬಹುದು.

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: