ಕವಿತೆ: ಸತ್ತವರಿದ್ದಾರೆ ಎಚ್ಚರಿಕೆ

– ವೆಂಕಟೇಶ ಚಾಗಿ.

ಸುತ್ತಲೂ ವಿಶದ ಬಲೆ
ಕತ್ತಲಿನ ಕಾರ‍್ಮೋಡದ ನೆರಳು
ಎಲ್ಲೋಬಿದ್ದ ಬೆಳಕನ್ನು ಕದ್ದು
ಬದುಕಿನ ನಾಟಕ ನಡೆಯುತಿದೆ
ದಿನಗಳನ್ನು ಸುಟ್ಟುಹಾಕಿ
ಇತಿಹಾಸವನ್ನು ಮುದ್ರಿಸಲಾಗುತ್ತಿದೆ
ಮನೆಯೊಳಗೆ
ಸತ್ತವರಿದ್ದಾರೆ ಎಚ್ಚರಿಕೆ

ರಕ್ತ ಮಾಂಸಗಳಲ್ಲಿ
ಸಂಬಂದಗಳ ಕೊಂಡಿಯೇ ಇಲ್ಲ
ಅನ್ಯಾಯಗಳ ಮಾರುಕಟ್ಟೆಯಲ್ಲಿ
ನ್ಯಾಯ ಕೊಳೆತು ನಾರುತ್ತಿದೆ
ದೇವರನ್ನು ನಾಲ್ಕು ಗೋಡೆಯೊಳಗೆ
ಕೂಡಿಹಾಕಿ,
ಪಾಟ ಹೇಳಿಕೊಡಲಾಗುತ್ತಿದೆ
ನಮ್ಮೊಳಗೆ
ಸತ್ತವರಿದ್ದಾರೆ ಎಚ್ಚರಿಕೆ

ಬಿಸಿಲಿಗೆ ಬೆಂಕಿ ಹಾಕಿ
ಕಾಗದ ಪತ್ರಗಳಲ್ಲಿ ಬರೆಯಲಾಗಿದೆ
ಬಡವರ ಕಣ್ಣೀರು ಸಂಗ್ರಹಿಸಿ
ಬೆಂಕಿ ನಂದಿಸುವ ನಾಟಕವಿದೆ
ಹೆಣೆದ ಮನಸುಗಳನು ಬಿಡಿಸಿ
ಪ್ರತ್ಯೇಕ ಗಡಿಗಳಲ್ಲಿ ಬಂದಿಸಲಾಗಿದೆ
ಎಶ್ಟೇ ಹಣ ಹಾಕಿದರೂ
ತುಂಬುತ್ತಲೇ ಇಲ್ಲ ಹೊಟ್ಟೆ
ದೇಶದೊಳಗೆ
ಸತ್ತವರಿದ್ದಾರೆ ಎಚ್ಚರಿಕೆ

ಆತ್ಮಸಾಕ್ಶಿಯ ಚಿಗುರನ್ನು
ಕತ್ತರಿಸಿ ಹೂಳಲಾಗಿದೆ
ತನ್ನೆಡೆಗೆ ತೋರುವ ಎಲ್ಲಾ ರೀತಿಯ
ನನ್ನದೇ ಕೈಯ ಬೆರಳುಗಳನ್ನು
ಕಣ್ಣಿಗೆ ಕಾಣದಂತೆ ಬಚ್ಚಿಡಲಾಗಿದೆ
ಹರಕು ಮನಸ್ಸಿನ ಬಟ್ಟಯ ಮೇಲೆ
ಕ್ಶಣಕ್ಕೊಂದು ಹೊಸ ಬಟ್ಟೆ
ಹುಟ್ಟಿದಾಗಲೇ ಸಾವು ಜೀವಕ್ಕೆ
ಮನದೊಳಗೆ
ಸತ್ತವನಿದ್ದಾನೆ ಎಚ್ಚರಿಕೆ

 

(ಚಿತ್ರ ಸೆಲೆ: scienceve.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: