ಈಜಾಟದ ಗಮ್ಮತ್ತು
ಹಳ್ಳಿಗಾಡಿನ ಆಟಗಳಲ್ಲಿ ಈಜಾಟ ಕೂಡ ಒಂದು. ಕೆರೆ, ತೊರೆ, ಬಾವಿ, ಹೊಂಡ ಹೀಗೆ ನೀರು ಇರುವ ಜಾಗಗಳಲ್ಲಿ ಮಕ್ಕಳು, ಹಿರಿಯರು ಬಿಡುವಿನ ವೇಳೆಯಲ್ಲಿ ಈಜಾಡುವುದು ಗ್ರಾಮೀಣ ಬಾಗಗಳಲ್ಲಿ ಕಂಡುಬರುವ ಸಾಮಾನ್ಯ ದ್ರುಶ್ಯವಾಗಿರುತ್ತದೆ .ಈಗಂತೂ ಬೇಸಿಗೆಯ ಈ ದಗೆ ತಣಿಸಲು ಈಜಿಗೆ ಹೆಚ್ಚು ಒತ್ತು ನೀಡುತ್ತಾರೆ. ರಜಾದಿನಗಳಲ್ಲಿ ತಮ್ಮ ತಮ್ಮ ಊರುಗಳಿಗೆ ಹೋದಾಗ ಎಳವೆಯಲ್ಲಿ ಬಹಳಶ್ಟು ಮಂದಿಗೆ ಈಜಾಡಿ ಕುಶಿ ಪಟ್ಟ ಅನುಬವವಾಗಿರಬಹುದು. ಈಜಾಟದ ಮಜಾ ಹೇಳತೀರದು. ಹಾಗೆಂದು ಎಲ್ಲರೂ ಈಜಾಡಲು ಆಗುವುದಿಲ್ಲ. ಚೆನ್ನಾಗಿ ಈಜುವುದನ್ನು ಕಲಿತವರಿಗೆ ಅದು ಸಾದ್ಯವಾಗುತ್ತದೆ. ದಿನ ಪತ್ರಿಕೆಗಳಲ್ಲಿ ಈಜು ಬಾರದೇ ಮುಳುಗಿ ಸತ್ತವರ ಸುದ್ದಿ ಆಗಾಗ್ಗೆ ಓದುತ್ತಲೇ ಇರುತ್ತೇವೆ, ದೂರದರ‍್ಶನ ವಾಹಿನಿಗಳಲ್ಲಿಯೂ ಈ ಬಗ್ಗೆ ನೋಡುತ್ತಿರುತ್ತೇವೆ.
ಶಾಲಾದಿನಗಳಲ್ಲಿ ’ಈಜು ಬಾರದ ಪಂಡಿತ ‘ಎಂಬ ಸ್ವಾರಸ್ಯಕರ ಕತೆ ಓದಿದ್ದು, ಕೇಳಿದ್ದು ಯಾರು ಮರೆಯಲು ಸಾದ್ಯ? ಪಂಡಿತನೊಬ್ಬ ದಾರಿ ಮದ್ಯೆ ನದಿ ದಾಟಲು ದೋಣಿಯಲ್ಲಿ ಪ್ರಯಾಣಿಸುತ್ತಾನೆ. ತನ್ನ ವಿದ್ಯೆಯ ಬಗ್ಗೆ ಅಹಂಕಾರ ಬೆಳೆಸಿಕೊಂಡಿದ್ದ ಆತ ತನ್ನ ಪಾಂಡಿತ್ಯವನ್ನು ಪ್ರದರ‍್ಶಿಸಲು ಅಂಬಿಗನಲ್ಲಿ ವೇದ ಉಪನಿಶತ್ತುಗಳ ಬಗ್ಗೆ ಪ್ರಶ್ನಿಸುತ್ತಾನೆ. ಉತ್ತರ ನೀಡಲಾಗದೆ ತಬ್ಬಿಬ್ಬಾದ ಅಂಬಿಗನನ್ನು ಪಂಡಿತ ಹೀಯಾಳಿಸುತ್ತಾನೆ. ಆ ವೇಳೆಗೆ ಜೋರಾಗಿ ಬಿರುಗಾಳಿಯು ಬೀಸತೊಡಗಿ ದೋಣಿ ಹತೋಟಿ ತಪ್ಪುತ್ತದೆ. ಆಗ ಅಂಬಿಗನು ಪಂಡಿತನಿಗೆ ನಿಮಗೆ ಈಜಲು ಬರುತ್ತದೆಯೇ ಎಂದು ಪ್ರಶ್ನಿಸಿದಾಗ ಈಜು ಬಾರದ ಆ ಪಂಡಿತನು ಇಲ್ಲ ಎಂದು ದುಕ್ಕಿಸುತ್ತಾನೆ. ಗಾಳಿ ಇನ್ನೂ ಜೋರಾಗುತ್ತಲೇ ದೋಣಿ ಮುಳುಗಿ ಪಂಡಿತನು ಜೀವ ಬಿಡುತ್ತಾನೆ. ಅಂಬಿಗನು ಈಜಿ ದಡ ಸೇರುತ್ತಾನೆ. ಹಾಗಾಗಿ ಏಶ್ಟೇ ವಿದ್ಯೆ ಗಳಿಸಿದ್ದರೂ ಪಂಡಿತನು ತನ್ನ ಜೀವವನ್ನು ರಕ್ಶಿಸಿಕೊಳ್ಳಲಾಗಲಿಲ್ಲ. ಈ ಮೂಲಕ ಈಜುವಿಕೆ ಒಂದು ಬಹುಮುಕ್ಯವಾದ ಜೀವರಕ್ಶಕ ವಿದ್ಯೆ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಈಜಾಡುವುದು ಒಂದು ಅಪ್ರತಿಮ ಕಲೆಯೇ. ನಮ್ಮ ಶರೀರಕ್ಕೆ ಪಾದದಿಂದ ಹಿಡಿದು ತಲೆವರೆಗೂ ಒಳ್ಳೆ ಶ್ರಮ ಮತ್ತು ಕೆಲಸ ನೀಡುವಂತಹ ಅತ್ಯುತ್ತಮ ವ್ಯಾಯಾಮ. ಅರ‍್ದಂಬರ‍್ದ ಕಲಿತರೂ ನಮಗದು ಮುಳುವೇ. ಈಜು ಅನ್ನೋದು ಸಹಸ್ರಾರು ವರುಶಗಳಿಂದಲೂ ನಮ್ಮ ನಾಡಿನಲ್ಲಿ ರೂಡಿಯಲ್ಲಿದೆ . ಅರಮನೆಗಳಲ್ಲಿ, ರಾಣಿಯರ ಅಂತಹಪುರಗಳಲ್ಲಿ ಈಜುಕೊಳಗಳಿದ್ದದ್ದನ್ನು ಇತಿಹಾಸದ ಕತೆಗಳಲ್ಲಿ, ಪುರಾಣಗಳಲ್ಲಿ ಕೇಳಿದ್ದೇವೆ. ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಮೊದಲಿಗಿಂತಲೂ ಈಜು ಕಲಿಯುವ ಪ್ರವ್ರುತ್ತಿ ಹೆಚ್ಚಾಗುತ್ತಿರುವುದು ಸಂತೋಶದ ವಿಶಯ. ಬೇಸಿಗೆ ಶಿಬಿರಗಳ ಮೂಲಕ ಈಜುಕೊಳಗಳಲ್ಲಿ ಈಜುಕಲಿಯುವ ಪ್ರಕ್ರಿಯೆ ಮನೆ ಮಾತಂತೆ ಆಗಿದೆ. ಆದಶ್ಟು ನುರಿತ ತರಬೇತುದಾರರಿಂದ ಮಕ್ಕಳಿಗೆ ಈಜು ಕಲಿಸುವುದು ಒಳ್ಳೆಯದು. ಕಲಿಯೋವರೆಗೂ ಬ್ರಹ್ಮ ವಿದ್ಯೆ, ಕಲಿತ ಮೇಲೆ ಕೋತಿ ವಿದ್ಯೆ ಎನ್ನುವ ಮಾತು ಈಜಿನ ಕಲಿಕೆಗೆ ಬಹಳ ಹತ್ತಿರವಾಗಿದೆ. ಈಜು ಕಲಿಕೆಯಲ್ಲಿ ಹಲವಾರು ಶೈಲಿಗಳಿವೆ. ಪ್ರೀ ಸ್ಟೈಲ್, ಬ್ಯಾಕ್ ಸ್ಟ್ರೋಕ್, ಪ್ಲೋಟಿಂಗ್, ಬಟರ್ ಪ್ಲೈ ಸ್ಟ್ರೋಕ್ ಇತ್ಯಾದಿ. ಈಜು ಕಲಿತ ಅನೇಕ ಮಕ್ಕಳು ಅಂತರಾಶ್ಟ್ರೀಯ ಮಟ್ಟದ ಈಜುಪಟುಗಳಾಗಿ ಹೊರಹೊಮ್ಮಿದ್ದಾರೆ. ಪ್ರಪ್ರತಮ ಬಾರಿಗೆ 1900 ರಲ್ಲಿ ಬಾರತವು ಒಲಂಪಿಕ್ ನ ಈಜು ಸ್ಪರ‍್ದೆಯಲ್ಲಿ ಬಾಗವಹಿಸಿದ ಪುರಾವೆಗಳಿವೆ. 1920ರಲ್ಲಿ ಜರುಗಿದ ಬೇಸಿಗೆ ಒಲಂಪಿಕ್ ಗುಂಪು ಈಜು ಸ್ಪರ‍್ದೆಯಲ್ಲಿ ಮೊದಲ ಬಾರಿ ಬಾರತೀಯ ತಂಡದ ಸ್ಪರ‍್ದಿಗಳು ಬಾಗವಹಿಸಿದ್ದರು. ಅದಾದ ಬಳಿಕ ಪ್ರತಿ ಬೇಸಿಗೆ ಒಲಂಪಿಕ್ ಕೂಟದಲ್ಲಿ ಬಾರತ ತಂಡವು ಬಾಗವಹಿಸಿದೆ. ನಂತರ 1964ರಲ್ಲಿ ಶುರುವಾದ ಚಳಿಗಾಲದ ಒಲಂಪಿಕ್ ಸ್ಪರ‍್ದೆಯಲ್ಲೂ ಬಾರತ ತಂಡ ಬಾಗವಹಿಸಿದೆ.
ಈಜಾಡುವುದರಿಂದ ದೇಹದ ಆರೋಗ್ಯಕ್ಕೆ ಆಗುವ ಲಾಬಗಳು
ನಿತ್ಯ ಒಂದು ಗಂಟೆ ಈಜುವುದರಿಂದ ಜಿಮ್, ಏರೋಬಿಕ್ಸ್ ಗಳಿಗಿಂತಲೂ ಮಿಗಿಲಾಗಿ ಅದಿಕ ಕ್ಯಾಲರಿಗಳನ್ನು ದಹಿಸಬಹುದಾಗಿದೆ. ಈಜು ಮೆದುಳಿನಿಂದ ಹಿಡಿದು ದೇಹದ ಎಲ್ಲಾ ಅಂಗಾಂಗಳನ್ನು ಕ್ರಿಯಾಶೀಲವಾಗಿಡುತ್ತದೆ ಮತ್ತು ಮಾನಸಿಕ ಒತ್ತಡದಿಂದ ದೂರವಿರಬಹುದಾಗಿದೆ. ಶರೀರದ ಅನಗತ್ಯ ಕೊಬ್ಬನ್ನು ಕರಗಿಸಬಹುದು. ಹ್ರುದಯದ ಸ್ವಾಸ್ತ್ಯಕ್ಕೆ ಹೆಚ್ಚು ಅನುಕೂಲಕರವಾಗಿದೆ.
ಈಜನ್ನು ಸಮರ‍್ಪಕವಾಗಿ ಕಲಿತದ್ದೇ ಆದರೆ, ಅದು ಕೊನೆಯವರೆಗೂ ಮರೆಯಲಾಗುವುದೇ ಇಲ್ಲ. ಅಳಿಸಲಾಗದ ವಿದ್ಯೆ. ಈಜು ಕಲಿತ ಮಾತ್ರಕ್ಕೆ ಎಲ್ಲೆಂದರಲ್ಲಿ ಈಜುವುದು ಅಸಾದ್ಯ ಹಾಗೂ ಅಪಾಯಕಾರಿ. ಸೀಮಿತವಾದ, ಈಜಲು ಅನುಕೂಲವಾದ, ಸಮರ‍್ಪಕವಾದ ಜಲಪ್ರದೇಶಗಳಲ್ಲಿ ಈಜಾಡುವುದು ಒಳಿತು.
( ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು