ಕಿರುಗವಿತೆಗಳು

– ನಿತಿನ್ ಗೌಡ.

ಚೆಲುವೆಂಬ ಬಿಸಿಲುಗುದುರೆ

ಹೊಳೆವ ನೇಸರನ‌ ಕದಿರದು,
ಹದಿಹರೆಯದ ಚೆಲುವಂತೆ..
ಚೆಲುವಿತ್ತು, ಹೊಳಪಿತ್ತು ಹಗಲೆಂಬ ಯೌವ್ವನದಲಿ
ಕೊನೆಗೆ ಎಲ್ಲವೂ‌ ಮಾಸಿತ್ತು, ಇರುಳೆಂಬ ಮುಪ್ಪಲ್ಲಿ

ಇರುವಿಕೆ

ಬೀಸುವ ತಂಗಾಳಿಯ ಹಿಂದಿರುವವರಾರು?
ಗಟಿಸಿದ ಹಳಮೆಯ ಹೊಸೆದವರಾರು?
ಗಟಿಸುವ ಮುಂಬೊತ್ತನು‌ ಬೆಸೆವವರಾರು?
ಈ ಗೊಂದಲದಲಿ‌ ಇಂದಿನ ಇರುವಿಕೆಯ ಮರೆತಿರುವವರಾರು!

ಬಯಕೆ

ಬಯಸಿದಂತೆ ಗಟಿಸಿದಲ್ಲಿ
ಬಯಕೆಗೆಲ್ಲಿ ಬೆಲೆ ?
ನಿನಗೆ ದೊರೆವುದದು, ನೀ ಬಯಸೋದಲ್ಲ,
ಬದಲಿಗೆ ನಿನ್ನ ಕೈಯಲ್ಲಿ ನಿಬಾಯಿಸಬಹುದಾದದ್ದು

ಹಂಬಲ

ಹಿರಿಹಂಬಲ‌ ಮನದೊಳಗೆ
ಬಯಸಿದ್ದೆಲ್ಲ ಬೇಕೇ ಬೇಕೆಂದು..
ಜಗ ನಡೆಯುವುದು, ಹಾಗಲ್ಲ!
ನೀ ಪಡೆದ ಬದುಕದು
ಬಹುಜನರ ಕನಸು..
ನೀ‌ ಕಾಣುವ ಏಳು-ಬೀಳದು
ನಿನದೇನೆ ಯೋಚನೆಯ ಕೂಸು..
ನೀ‌ ಅರಸಿದ ದಾರಿ,
ಅದು‌ ನಿನದೇನೆ ರಹದಾರಿ..
ನೀ‌ ಪಡೆವ ಬೇಕು ಬೇಡಗಳವು
ನೀ ಕಂಡ ದಾರಿಯರಸಿ ಬಂದ ಬಳುವಳಿಯವು..

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: