ಲ್ಯಾಬಾಸಿನ್ ಜಲಪಾತ ರೆಸ್ಟೋರೆಂಟ್

– .

ಪಿಲಿಪೈನ್ಸ್, ಆಗ್ನೇಯ ಏಶ್ಯಾದ ಹಿಂದೂ ಮಹಾಸಾಗರದಲ್ಲಿರುವ ದ್ವೀಪಗಳ ಸಮೂಹ. ಒಂದೊಂದು ದ್ವೀಪವೂ ಒಂದೊಂದು ರೀತಿಯ ನೈಸರ‍್ಗಿಕ ಅದ್ಬುತವನ್ನು, ವಿದ್ಯಮಾನಗಳನ್ನು ಹೊಂದಿದೆ. ಈ ಕಾರಣದಿಂದ ಈ ದ್ವೀಪ ಸಮೂಹವು ವಿಶ್ವಾದ್ಯಂತ ಪ್ರವಾಸಿಗರನ್ನು ಬಹುವಾಗಿ ಆಕರ‍್ಶಿಸುತ್ತದೆ. ಈ ದ್ವೀಪ ಸಮೂಹದಲ್ಲಿ ಎಶ್ಟು ದ್ವೀಪಗಳಿವೆ ಎಂದರೆ, ದಿನಕ್ಕೊಂದು ದ್ವೀಪದಂತೆ ನೋಡುತ್ತಾ ಹೋದಲ್ಲಿ, ಪಿಲಿಪೈನ್ಸ್ ದ್ವೀಪ ಸಮೂಹದ ಎಲ್ಲಾ ದ್ವೀಪಗಳನ್ನು ನೋಡಿ ಮುಗಿಸುವ ವೇಳೆಗೆ ನೀವು ಇಪ್ಪತ್ತು ವರ‍್ಶ ಹಿರಿಯರಾಗಿರುತ್ತೀರಿ. ಈ ದ್ವೀಪ ಸಮೂಹದಲ್ಲಿರುವ ದ್ವೀಪಗಳ ಸಂಕ್ಯೆ 7641. ಇಲ್ಲಿನ ಎಲ್ಲಾ ದ್ವೀಪಗಳಲ್ಲೂ ಉಲ್ಲಾಸಕರ ಕಡಲತೀರಗಳು, ಹಸಿರು ತುಂಬಿದ ಗದ್ದೆಗಳು, ಜಲಪಾತಗಳು ಇದ್ದು ಪ್ರವಾಸಿಗರಿಗೆ ಸ್ವರ‍್ಗವಾಗಿದೆ. ಇದರೊಡನೆ ಅಲ್ಲಲ್ಲಿ ಜ್ವಾಲಾಮುಕಿಗಳೂ ಇವೆ.

ಇಲ್ಲಿನ ಜಲಪಾತಗಳು ದೇಶದ ಪ್ರವಾಸೋದ್ಯಮದ ಪ್ರಮುಕ ಬಾಗವಾಗಿವೆ. ಕೆಲವೊಂದು ಜಲಪಾತಗಳಂತೂ ಕಣ್ಮನ ಸೆಳೆಯುತ್ತವೆ. ಜಲಪಾತಗಳನ್ನು ನೋಡುವುದೇ ಒಂದು ಸಂಬ್ರಮ. ಜಲಪಾತದಿಂದ ನೆಲಕ್ಕೆ ಅಪ್ಪಳಿಸುವ ನೀರಿನ ಮೊರೆತ ಕಿವಿಗೆ ಇಂಪು. ಇಂತಹ ಜಲಪಾತದ ಅಡಿಯಲ್ಲಿ ಕುಳಿತು ಕುಟುಂಬಸ್ತರೊಂದಿಗೆ ಊಟ ಮಾಡುವುದನ್ನು ಕಲ್ಪಿಸಿಕೊಳ್ಳುವುದೂ ಸಹ ಕಶ್ಟ. ಆದರೆ, ಪಿಲಿಪೈನ್ಸ್ ನಲ್ಲಿರುವ ಲ್ಯಾಬಿಸಿನ್ ಜಲಪಾತದ ರೆಸ್ಟೋರೆಂಟಿನಲ್ಲಿ ನೀವು ಈ ಅನುಬವವನ್ನು ಪಡೆಯಬಹುದು.

ಲ್ಯಾಬಿಸನ್ ಜಲಪಾತದ ರೆಸ್ಟೋರೆಂಟ್ ಪಿಲಿಪೈನ್ಸ್ ನಲ್ಲಿರುವ ಪ್ರಸಿದ್ದ ವಿಲ್ಲಾ ಎಸ್ಕುಡೆರೊ ರೆಸಾರ‍್ಟ್ ತೋಟದಲ್ಲಿದೆ. ಲ್ಯಾಬಿಸನ್ ರೆಸ್ಟೋರೆಂಟ್ ಇರುವುದು ಜಲಪಾತದ ಅಡಿಯಲ್ಲಿ. ಹಾಗಾಗಿ ಇಲ್ಲಿಗೆ ಬರುವವರು ತಮ್ಮ ಪಾದರಕ್ಶೆಗಳನ್ನು ದರಿಸುವಂತಿಲ್ಲ. ಇಲ್ಲಿರುವ ಬಿದಿರಿನಿಂದ ಮಾಡಲ್ಪಟ್ಟ ಮೇಜುಗಳ ಮೇಲೆ ಊಟದ ಸವಿಯನ್ನು ಆಹ್ಲಾದಿಸಬಹುದು. ಮತ್ತೊಂದು ವಿಶೇಶತೆಯೆಂದರೆ ಊಟದ ಸವಿಯನ್ನು ಆಸ್ವಾದಿಸುವಾಗ ತಮ್ಮ ಪಾದಗಳು ಜಲಪಾತದ ನೀರಿನ ಹರಿವಿನಲ್ಲಿ ಮುಳುಗಿರುವುದರಿಂದ, ಅಸಾದಾರಣ ಅತ್ಯದ್ಬುತ ರೋಮಾಂಚಕ ಅನುಬವ ನಿಮ್ಮದಾಗುತ್ತದೆ. ಈ ಅನುಬವವನ್ನು ವರ‍್ಣಿಸಲು ಪದಗಳೇ ಇಲ್ಲ. ಯಾವುದೇ ಉಪಮೆ ಸಹ ಕಡಿಮೆಯಾಗುತ್ತದೆ.

ಇಲ್ಲಿಗೆ ಬರುವವರಿಗೆ ಕಾಡುವ ಪ್ರಶ್ನೆಯೆಂದರೆ, ಲ್ಯಾಬಿಸನ್ ವಾಸ್ತವಿಕವಾಗಿ ನೈಸರ‍್ಗಿಕ ಜಲಪಾತವೇ? ಎಂಬುದು. ಇದಕ್ಕೆ ಇಲ್ಲಿದೆ ಉತ್ತರ, ಪಕ್ಕದಲ್ಲೇ ಇರುವ ಲ್ಯಾಬಿಸನ್ ಅಣೆಕಟ್ಟಿನಿಂದ ಹೊರಗೆ ಹರಿದು ಬರುವ ನೀರನ್ನು ಇಲ್ಲಿ ಜಲಪಾತವಾಗಿಸಿದ್ದಾರೆ. ಈ ಲ್ಯಾಬಿಸನ್ ಅಣೆಕಟ್ಟು ಪಿಲಿಪೈನ್ಸ್ ದೇಶದ ಮೊದಲ ಜಲ ವಿದ್ಯುತ್ ಸ್ತಾವರವಾಗಿದೆ. ರೆಸ್ಟೋರೆಂಟ್ ಇರುವುದು ಕ್ರುತಕ ಜಲಪಾತದ ಅಡಿಯಲ್ಲಿ. ಅಂದಾಜು ನಲವತ್ತು ಅಡಿ ಎತ್ತರದಿಂದ ಹರಿದುಬರುವ ನೀರು, ರೆಸ್ಟೊರೆಂಟಿನಲ್ಲಿ ನಿಂತಿರುವವರ ಕಾಲನ್ನು ಸುಮಾರು ಒಂದು ಅಡಿಯಶ್ಟು ತೋಯಿಸುತ್ತದೆ.

ಈ ರೆಸ್ಟೊರೆಂಟಿನಲ್ಲಿ ಅನೇಕ ವಿಶೇಶತೆಗಳಿವೆ. ಇಲ್ಲಿ ಲಬ್ಯವಿರುವ ಊಟವೆಂದರೆ ಕಾಮಯನ್-ಶೈಲಿಯ ಬಪೆ ಮೀನು ಅಡುಗೆ, ಬಾರ‍್ಬೆಕ್ಯೂಡ್ ಚಿಕನ್, ತಾಜಾ ಹಣ್ಣುಗಳು, ಬಾಳೆಹಣ್ಣಿನ ಕ್ಯೂ, ಅನ್ನ ಹಾಗೂ ಇನ್ನಿತರೆ ಕಾದ್ಯಗಳು. ಇವುಗಳನ್ನು ಬಾಳೆ ಎಲೆಯ ಮೇಲೆ ಉಣ ಬಡಿಸುತ್ತಾರೆ. ಪಿಲಿಪೈನ್ಸ್ ನಂತಹ ದೇಶದಲ್ಲಿ ಬಾಳೆ ಎಲೆಯ ಮೇಲೆ ಉಣುವ ಅನುಬವವೇ ಬೇರೆ. ಈ ರೆಸ್ಟೋರೆಂಟಿಗೆ ಬಂದವರನ್ನು ಮನರಂಜಿಸಲು ಸ್ತಳೀಯ ಕಲಾವಿದರು ಪ್ರದರ‍್ಶನಗಳನ್ನು ನೀಡುತ್ತಾರೆ. ಇಲ್ಲಿನ ವಿಶೇಶ ಬಕ್ಶ್ಯಗಳನ್ನು ಆಸ್ವಾದಿಸುತ್ತಾ ಸಾಂಪ್ರದಾಯಿಕ ಸಂಗೀತದ ಮ್ರುದುವಾದ ಮದುರ ದ್ವನಿಯನ್ನು ಆಲಿಸಬಹುದು. ಸುತ್ತಲಿನ ಮರಗಿಡಗಳಲ್ಲಿ ವಾಸಿಸುವ ಅನೇಕ ಜಾತಿಯ ಪಕ್ಶಿಗಳನ್ನು ನೋಡಬಹುದು, ಅವುಗಳ ಕಲರವವನ್ನು ಆನಂದಿಸಬಹುದು.

ಈ ಸ್ತಳವು ಅಗಾದ ನೈಸರ‍್ಗಿಕ ವಿದ್ಯಮಾನಗಳಿಂದ ಆವ್ರುತವಾಗಿದೆ. ಹಾಗಾಗಿ ಪ್ರಕ್ರುತಿ ಪ್ರಿಯರಿಗೆ ಇದು ಅತ್ಯಂತ ಪ್ರಶಸ್ತವಾದ ಸ್ತಳ. ಒಂದೆಡೆ ಹಸಿರು ಮರಗಳ ಕಾನನ, ಮತ್ತೊಂದೆಡೆ ದುಮ್ಮಿಕ್ಕುವ ಜಲದಾರೆ, ಜೊತೆಗೆ ಮನತಣಿಸುವ ಆಹಾರ. ಸ್ವರ‍್ಗವೆಂದರೆ ಬಹುಶಹ ಇದೇ ಇರಬೇಕು ಅನಿಸದೇ ಇರದು. ಲ್ಯಾಬಿಸನ್ ಜಲಪಾತದ ರೆಸ್ಟೋರೆಂಟ್, ಪಿಲಿಪೈನ್ಸ್ ದೇಶದ ರಾಜದಾನಿ ಮನಿಲಾದಿಂದ ಕೇವಲ ಎರಡೂವರೆ ಗಂಟೆಯ ಪ್ರಯಾಣ. ಅಂದರೆ ಅಂದಾಜು ನೂರು ಮೈಲಿಗಳಶ್ಟು ದೂರ.

ರೆಸ್ಟೋರೆಂಟ್ ನ ವಿವರ:
ವಿಳಾಸ: ಟಿಯಾಂಗ್, ಕ್ವಿಜಾನ್, ಪಿಲಿಪೈನ್ಸ್
ಸಮಯ: ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ (ಕೊನೆಯ ಪ್ರವೇಶವು ಮದ್ಯಾಹ್ನ 2 ಗಂಟೆಗೆ ಮುಚ್ಚುತ್ತದೆ)

(ಮಾಹಿತಿ ಮತ್ತು ಚಿತ್ರಸೆಲೆ: instagram.com, matadornetwork.com, pickyourtrail.com, traveltriangle.com, atlasobscura.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಧನ್ಯವಾದಗಳು 🙏🙏🙏

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *