ಮಾಡಿನೋಡಿ ಕೋಳಿ ಬಿರಿಯಾನಿ

– ನಿತಿನ್ ಗೌಡ.

ಬೇಕಾಗುವ ಸಾಮಾನುಗಳು

  • ಕೋಳಿ ಮಾಂಸ – 1 ಕಿಲೋ
  • ಟೋಮೋಟೋ – 1
  • ಬೆಳ್ಳುಳ್ಳಿ – 12 -14 ಎಸಳು
  • ಶುಂಟಿ – 1 1/2 ಇಂಚು
  • ಈರುಳ್ಳಿ – 3 (ಚಿಕ್ಕ ಗಾತ್ರ)
  • ಹಸಿ‌ ಮೆಣಸಿನ ಕಾಯಿ – 6 ರಿಂದ 7
  • ಚಕ್ಕೆ – 1 ರಿಂದ 1 1/2 ಇಂಚು
  • ಲವಂಗ – 5
  • ನಕ್ಶತ್ರ ಮೊಗ್ಗು – 1
  • ಬಿರಿಯಾನಿ ಎಲೆ – 6
  • ಸೋಂಪು – ಸ್ವಲ್ಪ
  • ಮೊಸರು – 1 ಕಪ್ಪು
  • ಕಾರದ ಪುಡಿ – 1 ಚಮಚ
  • ಕೊತ್ತಂಬರಿ ಬೀಜದ ಪುಡಿ(ದನಿಯಾ) – 1 ಚಮಚ
  • ಗರಂ ಮಸಾಲೆ – 1/2 ಚಮಚ ( ಬೇಕಾದ್ದಲ್ಲಿ ಮಾತ್ರ )
  • ಕೊತ್ತಂಬರಿ ಸೊಪ್ಪು – ಒಂದು ಹಿಡಿ
  • ಪುದೀನ – ಸ್ವಲ್ಪ
  • ಅರಿಶಿಣ – 1/2 ಚಮಚ
  • ಉಪ್ಪು – ರುಚಿಗೆ ತಕ್ಕಶ್ಟು
  • ಕಾಳುಮೆಣಸು – 4 ರಂದ 5 ( ಬೇಕಾದ್ದಲ್ಲಿ )
  • ಎಣ್ಣೆ – ಒಂದು ಚಿಕ್ಕ ಕಪ್ಪು
  • ಜೀರಾ ಅಕ್ಕಿ + ಗಮ್ಸಾಲೆ ಅಕ್ಕಿ – ಅಂದಾಜು ಒಂದೂವರೆ ಲೋಟ( 4 ಜನಕ್ಕೆ )

ಮಾಡುವ ಬಗೆ:

ಮೊದಲಿಗೆ ಅಕ್ಕಿಯನ್ನು ತೊಳೆದು ಐದು ನಿಮಿಶ ನೆನೆಸಿಡಿ. ಈಗ ಕುಕ್ಕರ್ ಗೆ ಎಣ್ಣೆ ಹಾಕಿ, ಅದಕ್ಕೆ ಚಕ್ಕೆ, ಲವಂಗ, ನಕ್ಶತ್ರ ಮೊಗ್ಗು, ಬಿರಿಯಾನಿ ಎಲೆ ಹಾಕಿ ಕೊಂಚ ಹುರಿದುಕೊಳ್ಳಿರಿ. ಆಮೇಲೆ ಇದಕ್ಕೆ ಹೆಚ್ಚಿಟ್ಟುಕೊಂಡಿರುವ ಹಸಿಮೆಣಸಿನ ಕಾಯಿ, ಈರುಳ್ಳಿ ಹಾಕಿ ಬಾಡಿಸಿ ನಂತರ ಟೋಮೋಟೋ ಹಾಕಿ ಬಾಡಿಸಿ. ಈಗ ಇದಕ್ಕೆ ಕೋಳಿ ಮಾಂಸ ಮತ್ತು ಅದಕ್ಕೆ ಉಪ್ಪು, ಅರಿಶಿಣ ಹಾಕಿ ಬೇಯಿಸಿ. ಕೋಳಿಮಾಂಸ ಬೆಂದಮೇಲೆ ಅದಕ್ಕೆ ರುಬ್ಬಿಟ್ಟುಕೊಂಡ ಶುಂಟಿ-ಬೆಳ್ಳುಳ್ಳಿ ಗಸಿಯನ್ನ ಹಾಕಿ ಬೇಯಿಸಿ. ಆಮೇಲೆ ಇದಕ್ಕೆ ಪುದೀನ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಒಂದು ನಿಮಿಶ ಬೇಯಿಸಿ. ಈಗ ಇನ್ನೊಂದೆಡೆ ಮೊಸರು, ಕಾರದ ಪುಡಿ, ದನಿಯಾ ಪುಡಿ ಮತ್ತು ಗರಂ ಮಸಾಲೆಯನ್ನು ಒಂದು ಲೋಟದಲ್ಲಿ ಹಾಕಿ ಕಲಸಿಕೊಂಡು, ಕುಕ್ಕರ್ ಗೆ ಹಾಕಿ. ಎರಡು ನಿಮಿಶದ ನಂತರ, ಇದಕ್ಕೆ ಅಕ್ಕಿಯನ್ನು ಹಾಕಿ ಜೊತೆಗೆ ಅಳತೆಗೆ ತಕ್ಕಂತೆ ನೀರನ್ನು ( 1 ಲೋಟ ಅಕ್ಕಿಗೆ 2 ಲೋಟ ನೀರು) ಹಾಕಿ ಕೊತ ಕೊತ ಕುದಿಯಲು ಬಿಡಿ. ಒಮ್ಮೆ ಕುದಿ ಬಂದ ನಂತರ ಉಪ್ಪು ಸರಿ ಇರುವುದಾ ಎಂದು ನೋಡಿ, ಬೇಕಿದ್ದಲ್ಲಿ ಉಪ್ಪನ್ನು ಹಾಕಿಕೊಳ್ಳಿರಿ. ಈಗ ಕುಕ್ಕರ್ ಮುಚ್ಚಳ ಮುಚ್ಚಿ, ಎರಡು ಸೀಟಿ ಹೊಡೆಸಿ ತೆಗೆಯಿರಿ. ಬೇಕಾದ್ದಲ್ಲಿ ಮೊಸರು ಬಜ್ಜಿ ಮತ್ತು ಕೋಳಿ ಶೇರವಾ ಮಾಡಿಕೊಂಡು,ಅದರ ಮೇಲೆ ನಿಂಬೆ ಹುಳಿಯನ್ನು ಹಿಂಡಿಕೊಂಡು ಇದನ್ನು ಸವಿಯಬಹುದು.

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: