ಕಿರುಗವಿತೆಗಳು

– ನಿತಿನ್ ಗೌಡ.

ಮುಗಿಯದ ಅದ್ಯಾಯ

ನೀನೊಂದು ಮುಗಿಯದ ಅದ್ಯಾಯ
ಬರೆಯಲು ಸಾಕಶ್ಟಿದೆ ಪುಟಗಳು..
ಶಾಯಿಯೂ ಬೇಕಿಲ್ಲ, ಮೌನದ ಮಾತೇ ಸಾಕು
ಆದರೆ ಹೆಚ್ಚೇನು ಬಯಸಲಾಗದು;
ಮುಚ್ಚಿರಲು ಮನದೊಲುಮೆಯ ಹೊತ್ತಿಗೆ..

ಯಾವುದದು?

ಯಾವುದದು ಅಂದ; ಮನಸೋ? ಒಡಲೋ?
ಯಾವುದದು ಮೊದಲು; ಹುಟ್ಟೋ? ಸಾವೋ?
ಯಾವುದದು ಕೊನೆ; ದಿಗಂತವೋ? ಪಯಣವೋ?
ಯಾವುದದು ದಿಟ; ಇರುವುದೋ? ಇಲ್ಲದಿರುವುದೋ?

ಮಿತಿಮೀರಿದೆ

ಮಿತಿಮೀರಿದೆ ಕಾತರ‌ವು ಮನದೊಳಗೆ
ಕುಣಿದಾಡಿದೆ ಅದಕಾಗಿಯೇ, ತನು ಒಳಗೊಳಗೊಳಗೆ
ಹೊಡೆದಾಡುತಿದೆ ಎದೆ ಬಡಿತವು, ಎಡೆಬಿಡದೆ..
ಬಿಡದಂತಿದೆ ಈ ಅನುಬಾವವು, ಅರೆಗಳಿಗೆ
ಈ ಜನ್ಮಕು,ಮರುಜನ್ಮಕು ನೀ ನನ್ನುಸಿರೊಳಗೆ
ಇನ್ನೇನಿದೆ, ಕೊಡು ನೀ ಜಾಗ ನಿನ ಎದೆಯೊಳಗೆ

ಚಡಪಡಿಕೆ

ಹಚ್ಚಾಗಿದೆ ಒಲುಮೆಯ ಕಿಚ್ಚು
ರಂಗೇರಿದೆ ಮನದಾಗಸದ ಬಯಲು
ಚಿತ್ತಾರವು ಒಡಮೂಡಿದೆ, ಕನಸೊಳಗೆ
ಎದುರಾಗಿದೆ ಇನ್ನಿಲ್ಲದ ಚಡಪಡಿಕೆ
ತೆರೆಯೆಳೆಯಬೇಕಿದೆ ಅದಕೆ;
ತಿಳಿಸು‌ ನೀ ಏನಿದೆ ನಿನ್ನ ಮನದೊಳಗೆ

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks