ಪಾರ‍್ಕೋ ಪಾಲಿಯಾಟ್ನೊ ಲೂನಾ ಪಾರ‍್ಕ್ – ಸೈಪ್ರಸ್
– ಕೆ.ವಿ.ಶಶಿದರ.
ಪಾರ‍್ಕೊ ಪಾಲಿಯಾಟ್ಸೊ ಲೂನಾ ಪಾರ‍್ಕ್ ಸೈಪ್ರಸ್ ನ ಅಯಾ ನಾಪಾದಲ್ಲಿ ಅತ್ಯಂತ ಜನಪ್ರಿಯ ಮನರಂಜನಾ ಸ್ತಳಗಳಲ್ಲಿ ಒಂದಾಗಿದೆ. ಅಯಾ ನಾಪಾ ಸೈಪ್ರಸ್ ನ ರಾಜದಾನಿ ನಿಕೋಸಿಯಾದಿಂದ ಒಂದು ಗಂಟೆ ಮೂವತ್ತು ನಿಮಿಶದ ಹಾದಿಯಲ್ಲಿದೆ. ಅಂದರೆ ಅಂದಾಜು 85 ಕಿಲೋಮೀಟರ್ ದೂರದಲ್ಲಿದ್ದು. ಈ ಸಣ್ಣ ನಗರ ಇಲ್ಲಿನ ಬೀಚುಗಳಿಗೆ ಹೆಸರುವಾಸಿ. ಈ ಉದ್ಯಾನವನಕ್ಕೆ ಕಾಲಿಡುವ ಪ್ರೇಕ್ಶಕರಿಗೆ ಅತಿ ಹೆಚ್ಚಿನ ರೋಮಾಂಚನ ಹಾಗೂ ಅನನ್ಯ ಬಾವನೆಗಳು ಪುಟಿದೇಳುತ್ತವೆ. ವಯಸ್ಕರು ಮತ್ತು ಮಕ್ಕಳಿಗಾಗಿ ಆಟಗಳು, ಸಾಹಸಮಯ ಕ್ರೀಡೆಗಳು ಮನರಂಜನಾ ಪ್ರಿಯರನ್ನು ಗುರಿಯಾಗಿರಿಸಿಕೊಂಡು ಈ ಪಾರ‍್ಕ್ ನಿರ‍್ಮಾಣಗೊಂಡಿದೆ.
1999ರಲ್ಲಿ ಸೈಪ್ರೆಸ್ ನ ಅಯಾ ನಾಪಾದಲ್ಲಿ ಸ್ತಾಪನೆಗೊಂಡ ಈ ಅಮ್ಯೂಸ್ಮೆಂಟ್ ಪಾರ‍್ಕ್, ಈಗ ವಿಶ್ವ ಪ್ರಸಿದ್ದಿಗಳಿಸಿದೆ. ಪ್ರಾರಂಬದ ದಿನಗಳಲ್ಲಿ ಚಿಣ್ಣರಿಗಾಗಿ ಚಿಕ್ಕ ಏರಿಳಿಕೆ ಮತ್ತು ಆಟಿಕೆ ಕಾರುಗಳಿಗೆ ಮಾತ್ರ ಈ ಅಮ್ಯೂಸ್ಮೆಂಟ್ ಪಾರ‍್ಕಿನಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಕ್ರಮೇಣ ವಿಸ್ತರಣೆಗೊಂಡ ಈ ಪಾರ‍್ಕ್ ಇಂದು ಇಪ್ಪತ್ತೈದು ಸಾವಿರ ಚದರ ಮೀಟರ್ ವಿಸ್ತೀರ‍್ಣ ಹೊಂದಿದೆ. ಈಗ ಇದು ವಿವಿದ ಆಕರ‍್ಶಣೆಯ ತಾಣವಾಗಿದೆ.
ಪ್ರಾತಮಿಕವಾಗಿ ಈ ಅಮ್ಯೂಸ್ಮೆಂಟ್ ಪಾರ‍್ಕ್ ಮಕ್ಕಳನ್ನು ಗುರಿಯಾಗಿಸಿಕೊಂಡು ನಿರ‍್ಮಿಸಲಾಗಿತ್ತು. ಈಗ ಮಕ್ಕಳಿಗಶ್ಟೇ ಇದು ಮೀಸಲಾಗಿಲ್ಲ. ವಯಸ್ಕರೂ ಸಹ ಇದರಲ್ಲಿ ಮನರಂಜನೆ ಪಡೆಯಬಹುದು. ಇಲ್ಲಿ ವಯಸ್ಕರ ಮೇಲೆ ನಿಸ್ಸಂದೇಹವಾಗಿ ಅಳಿಸಲಾಗದ ಪ್ರಬಾವ ಬೀರುವ ಅನೇಕ ಆಕರ‍್ಶಣೆಗಳಿವೆ. ಇವುಗಳಲ್ಲಿ ಸ್ಲಿಂಗ್ ಶಾಟ್ (ಕವಣೆ) ಅತ್ಯಂತ ಜನಪ್ರಿಯವಾಗಿದೆ. ಇದರಲ್ಲಿ ಕುಳಿತರೆ, ಇದು ಕೆಲವೇ ಕ್ಶಣಗಳಲ್ಲಿ 80 ಮೀಟರ್ ಎತ್ತರಕ್ಕೆ ಏರುತ್ತದೆ. ಇದೊಂದು ಮೈ ‘ಜುಂ’ ಅನ್ನುವ ಅನುಬವ. ಈ ಅನುಬವವನ್ನು ರೆಕಾರ‍್ಡ್ ಮಾಡಿ ಅದರ ಡಿವಿಡಿಯನ್ನು ನೀಡಲಾಗುವುದು. ಇದನ್ನು ನೆನೆಪಿನ ಕುರುಹಾಗಿ ಇರಿಸಿಕೊಳ್ಳಬಹುದು.
ಈ ಉದ್ಯಾನವನಕ್ಕೆ ಬೇಟಿ ನೀಡುವ ಸಂದರ‍್ಶಕರಿಗೆ ವೈಲ್ಡ್ ಮೌಸ್ ಮತ್ತು ಬೂಸ್ಟರ್ ಸವಾರಿಗಳು ಸಾಕಶ್ಟು ಕುಶಿ ನೀಡುತ್ತವೆ. ಇವು ಪ್ರೇಕ್ಶಕರ ಅಚ್ಚುಮೆಚ್ಚಿನ ಆಟಗಳು. ಎಲ್ಲಾ ಪ್ರಸಿದ್ದ ಉದ್ಯಾನವನದಲ್ಲಿದ್ದಂತೆ ಈ ಉದ್ಯಾನವನದಲ್ಲೂ ಅತಿ ದೊಡ್ಡ ಪೆರ‍್ರಿಸ್ ವೀಲ್ ಇದೆ. ಇದು ಸುಮಾರು 45 ಮೀಟರ್ (ಅಂದಾಜು 125 ಅಡಿ) ಎತ್ತರಕ್ಕೆ ಹೋಗುತ್ತದೆ. ಪೆರ‍್ರಿಸ್ ವೀಲ್ ಮೇಲಕ್ಕೆ ಹೋದಾಗ ಸುತ್ತ ಮುತ್ತಲಿನ ವಿಹಂಗಮ ನೋಟ ನಿಮ್ಮದಾಗುತ್ತದೆ. ಅಲ್ಲಿಂದ ಅತಿ ಸುಂದರ ಪೋಟೋಗಳನ್ನು ಸಹ ಕ್ಲಿಕ್ಕಿಸಬಹುದು
ಅಯಾ ನಾಪಾದ ಪಾರ‍್ಕೊ ಪಾಲಿಯಾಟ್ಸೊ ಲೂನಾ ಪನ್ ಪಾರ‍್ಕಿನಲ್ಲಿ ವಯಸ್ಕರಿಗಾಗಿ ರೋಮಾಂಚನಕಾರಿ ಚಟುವಟಿಕೆಗಳಿವೆ. ಅದರಲ್ಲೂ ಪಾರ‍್ಮುಲಾ-1 ಬೂಸ್ಟರ್ ಅತ್ಯಂತ ಪುಳಕಗೊಳಿಸುವ ಆಟ. ಪಾರ‍್ಮುಲಾ -1 ರ ವೇಗ ಸಾಮಾನ್ಯ ಕಾರಿನಲ್ಲಿ ಓಡಾಡಿದವರಿಗೆ ತೀವ್ರವಾದ, ಎದೆ ಜಲ್ಲೆನಿಸುವ ಅನುಬವವನ್ನು ನೀಡುತ್ತದೆ. ಇದರೊಂದಿಗೆ ವೈಲ್ಡ್ ಮೌಸ್ ಸ್ಪಿನ್ನಿಂಗ್ ರೋಲರ್ ಕೋಸ್ಟರ್ ಕೂಡ ತ್ರಿಲ್ ನೀಡುವ ಆಟವಾಗಿದೆ.
ಅಯಾ ನಾಪಾದ ಈ ಪನ್ ಪಾರ‍್ಕಿನಲ್ಲಿರುವ ಆಕರ‍್ಶಣೆಗಳನ್ನು ಅನುಬವಿಸಲು ಟೋಕನ್ನುಗಳನ್ನು ನೀಡಬೇಕಿರುತ್ತದೆ, ಉದ್ಯಾನವನದ ಪ್ರವೇಶದಲ್ಲಿನ ಬಾಕ್ಸ್ ಆಪೀಸ್ ನಲ್ಲಿ ಟೋಕನ್ನುಗಳು , ಒಂದು ಯುರೋಗೆ ಒಂದರಂತೆ ಸಿಗುತ್ತವೆ. ಒಂದೊಂದು ಆಕರ‍್ಶಣೆಗೂ ಒಂದೊಂದು ವಿಬಿನ್ನ ಪ್ರಮಾಣದ ಟೋಕನ್ನುಗಳನ್ನು ಪಾವತಿಸಬೇಕಿರುತ್ತದೆ. ಅತಿ ಹೆಚ್ಚೆಂದರೆ ಮೂರು ಟೋಕನ್ನುಗಳನ್ನು ಅದೂ ಅತಿ ತೀವ್ರವಾದ ಮನರಂಜನೆಯ ಆಟಕ್ಕಾಗಿ ನೀಡಬೇಕಾಗುತ್ತದೆ. ಮನರಂಜನೆಯಶ್ಟೇ ಅಲ್ಲದೆ ಈ ಉದ್ಯಾನವನದಲ್ಲಿ ಸಣ್ಣ ಸಣ್ಣ ಕೆಪೆಗಳೂ ಇವೆ. ಇದರಲ್ಲಿ ರುಚಿಕರವಾದ ಪದಾರ‍್ತಗಳು ಲಬ್ಯವಿರುತ್ತವೆ. ವಿರಮಿಸಲು ಸಹ ಇಲ್ಲಿ ಸ್ತಳಾವಕಾಶವಿದೆ. ಇದರೊಂದಿಗೆ ಸಣ್ಣ ಸಣ್ಣ ಕುಟುಂಬದ ಹಾಗೂ ಮೋಜಿನ ಕೂಟಗಳನ್ನು ಆಯೋಜಿಸಲು ಅವಕಾಶವಿದೆ.
(ಮಾಹಿತಿ ಮತ್ತು ಚಿತ್ರಸೆಲೆ: parkopaliatsocy.com, cyprusalive.com, kidsfunincyprus.com, cyprusisland.net )
ಇಂದು ನನ್ನ ಈ ಬರಹವನ್ನು ಪ್ರಕಟಿಸಿದ ಹೊನಲು ತಂಡಕ್ಕೆ ಧನ್ಯವಾದಗಳು