ಎತ್ತಿನ ಬುಜ ಮತ್ತು ನೂರು ರೂಪಾಯಿ

– ರಾಹುಲ್ ಆರ್. ಸುವರ‍್ಣ.

ಅದೆಶ್ಟೋ ಸಾರಿ ನಾವು ಅಲ್ಲಿಲ್ಲಿ ಹೋಗಬೇಕು ಎಂದು ಯೋಚನೆ ಮಾಡಿರುತ್ತೇವೆ ಆದರೆ ಯೋಚನೆ, ಯೋಚನೆಯಾಗಿಯೇ ಉಳಿದು ಹೋಗುತ್ತದೆ. ಹತ್ತು ಕಲ್ಲು ಹೊಡೆದರೆ ಒಂದಾದರೂ ಉದುರೀತು ಎನ್ನುತ್ತಾರಲ್ಲ ಆ ರೀತಿಯಲ್ಲಿಯೇ ರೂಪುಗೊಂಡ ನಮ್ಮ ಡಿಗ್ರಿ ಬದುಕಿನ ಕೊನೆಯ ಪ್ರವಾಸವಿದು. ಹೋಗುವುದಕ್ಕೆ ಸಾಕಶ್ಟು ದಿನಗಳ ಮುಂಚೆಯೇ ಎಲ್ಲರಂತೆ ನಮ್ಮದೂ ಒಂದು ವಾಟ್ಸಾಪ್ ಗ್ರೂಪ್ ಕೂಡ ಜಾರಿಗೆ ಬಂದಿತ್ತು. ಆದರೆ ವಾಟ್ಸಾಪ್ ಗ್ರೂಪ್ ಮಾಡಿ ಹೋಗದೆ ಇರುವವರ ಗುಂಪಿಗೆ ಸೇರದೆ, ನಾವೊಂದು ಹದಿನಾರು ಹುಡುಗರು ಸೇರಿಕೊಂಡು ಎರಡು ದಿನಕ್ಕೆ ಸಾಲುವಶ್ಟು ಬಟ್ಟೆಬರೆ ತುಂಬಿಕೊಂಡು ಹೊರಟೆಬಿಟ್ಟೆವು.

ರಾತ್ರಿ 9 ಕ್ಕೆ ರೈಲು ಎಂದು ಎಲ್ಲರಿಗೂ ಗೊತ್ತಿದ್ದರಿಂದ ಯಾರೂ ತಡಮಾಡದೆ ಎಂಟರ ಆಸುಪಾಸಿನಲ್ಲಿ ಬಂದು ಸ್ಟೇಶನ್ ತಲುಪಿದ್ದೆವು. ಆ ಹೊತ್ತಿಗೆ ನಮ್ಮನ್ನು ಕಳುಹಿಸಿ ಕೊಡಲು ಯಾರು ಬಂದಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ ಮಳೆಯಂತೂ ನಮ್ಮನಪ್ಪಿ ವಿದಾಯ ಹೇಳಿತು. ಅಶ್ಟರಲ್ಲಿ “ಪ್ರಯಾಣಿಕರ ಗಮನಕ್ಕೆ” ಎನ್ನುವ ಆಕರ‍್ಶಣೀಯ ಸ್ವರದಿಂದ ಸೂಚನೆಯೊಂದು ಬಂತು. ಸೂಚನೆಗೆ ತಕ್ಕಂತೆ ನಮ್ಮ ಕಾಲುಗಳು ಕೆಲಸ ಆರಂಬಿಸಿದವು. ಎಂದಿನಂತೆ ರೈಲು ತಡವಾಗಿಯೇ ಬಂದು ಸ್ಟೇಶನ್ ತಲುಪಿತು. ಅದು ಶನಿವಾರವಾದ್ದರಿಂದ ನೋಡಿದಶ್ಟು ಉದ್ದಕ್ಕೂ ರೈಲು ತುಂಬಿತ್ತು. ಉಪಾಯ ಬಲ್ಲವನಿಗೆ ಅಪಾಯ ಇಲ್ಲವೆಂಬಂತೆ ಎಲ್ಲೂ ಏನೂ ತೊಂದರೆಯಾಗದೆ ಕೆಲವರ ಕತೆ ಹಲವರ ವ್ಯತೆ ನೋಡಿಕೊಂಡು ಸಕಲೇಶಪುರಕ್ಕೆ ಬಂದು ತಲುಪಿದೆವು. ನಾವು ಬುಕ್ ಮಾಡಿದ ರೆಸಾರ‍್ಟ್ ಒಳಗೆ ನಾವು ಹೋಗಬೇಕಾಗಿದ್ದದ್ದು ಬೆಳಿಗ್ಗೆ 11 ರ ಹೊತ್ತಿಗೆ. ಆದರೆ ನಾವು ಸಕಲೇಶಪುರ ತಲುಪಿದ್ದು ಬೆಳಗಿನ 3ರ ಸುಮಾರಿಗೆ. ಅಲ್ಲಿಯವರೆಗೆ ಎಲ್ಲವು ಸರಿಯಾಗಿಯೇ ಹೋಯಿತು ಆದರೆ ಅದರಿಂದ ಮುಂದೆ, ಅಂದರೆ 3ರಿಂದ 11 ರವರೆಗೆ ಏನುಮಾಡುವುದು ಎಂದು ಯಾರೊಬ್ಬರಿಗೂ ಗೊತ್ತಿರಲಿಲ್ಲ. ನಮ್ಮ ಅದ್ರುಶ್ಟಕ್ಕೆ ಸ್ಟೇಶನ್ ನ ಕಾಯುವ ಕೋಣೆ ನಮಗಾಗಿಯೇ ಕಾಲಿಯಾಗಿ ಕಾಯುತಿತ್ತು. ತಡ ಮಾಡದೆ ಹೋಗಿ ತಂದ ಬ್ಯಾಗ್ ಗಳನ್ನು ತಲೆಯಡಿಗೆ ಸೇರಿಸಿ ಅಲ್ಲೇ ಕಣ್ಣು ಮುಚ್ಚಿದೆವು.

ಮತ್ತೆ ಕಣ್ಣು ಬಿಡುವಾಗ ಬೆಳಕು ಹರಿದು, ಮಳೆ ಸುರಿದು ಸ್ವಾಗತ ಕೋರಿ ಸಮಯ 7 ಆಗಿತ್ತು. ಸ್ಟೇಶನ್ ನಲ್ಲೆ ಇದ್ದ ವ್ಯವಸ್ತೆ ಬಳಸಿಕೊಂಡು ಸ್ಟೇಶನ್ ನಿಂದ ಜಾಗ ಕಾಲಿ ಮಾಡಿದೆವು. ತಿಂಡಿ ತಿನ್ನುವುದಕ್ಕೆಂದು ಸಿಟಿಗೆ ಬಂದರೆ ಶ್ರೀಗಂದ ಹೋಟೆಲ್ ಹಾಗೂ ಸಣ್ಣದಾದ ಮತ್ತೊಂದು ಹೋಟೆಲ್ ಬಿಟ್ಟು ಇನ್ನೆಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ರಾತ್ರಿಯಿಂದ ಕಾಲಿಯಿದ್ದ ಹೊಟ್ಟೆಗೆ ಏನೇ ಬಿದ್ದರೂ ಸಾಕಾಗಿತ್ತು. ಹಾಗಾಗಿ ಕೆಲವರು ಸಣ್ಣ ಹೋಟೆಲ್, ಇನ್ನುಳಿದವರು ಶ್ರೀಗಂದಕ್ಕೆ ಹೋಗಿ ಹೊಟ್ಟೆ ಗಟ್ಟಿ ಮಾಡಿಕೊಂಡು ಬಸ್ ಸ್ಟಾಂಡ್ ಕಡೆಗೆ ಬಂದೆವು. ಅದು ಸರ‍್ಕಾರಿ ಬಸ್ಸುಗಳ ನಿಲ್ದಾಣವಾಗಿ, ಬಾನುವಾರವಾಗಿದ್ದರೂ ಹೆಂಗಸರ ಸಂಕ್ಯೆ ಕಡಿಮೆ ಇದ್ದದ್ದು ಆಶ್ಚರ‍್ಯ. ಬಹುಶಹ ನಾವು ಹೋದ ಸಮಯ ಬೇಗ ಅನ್ನಿಸಿತು. ಒಂದರ ಹಿಂದೊಂದು ಸರ‍್ಕಾರಿ ಬಸ್ಸುಗಳು ಬರುವುದನ್ನು ನೋಡಿ ಅದರ ಕುರಿತು ಮಾತನಾಡುತ್ತಾ, ಒಬ್ಬರನೊಬ್ಬರು ಕಾಲೆಳೆಯುತ್ತ ಸಮಯ ಹೋದುದೆ ಗೊತ್ತಾಗಲಿಲ್ಲ. ನೋಡ ನೋಡುತ್ತಲೇ ನಾವು ಹತ್ತ ಬೇಕಾಗಿದ್ದ ಬಸ್ಸು ಬಂದಾಗಿತ್ತು, ಕೂಡಲೆ ಮೇಲೇರಿ ಡ್ರೈವರ್ ಪಕ್ಕದ ಸೀಟಿಗೆ ಒರಗಿಕೊಂಡೆವು. ಕಣ್ಣಲ್ಲೆ ಕಾಪಿ ತೋಟದ ಉದ್ದಳತೆ ಮಾಡುತ್ತಿರುವಾಗ, ಡ್ರೈವರ್ ತಾವಾಗಿಯೇ ನಮ್ಮೊಂದಿಗೆ ಮಾತು ಶುರು ಮಾಡಿದರು. ಆದ್ದರಿಂದ ಆ ಅರ‍್ದ ಗಂಟೆಯ ಪ್ರಯಾಣ ಹೋಗಿದ್ದೇ ಗೊತ್ತಾಗಲಿಲ್ಲ.

ಅಂತೂ ರೆಸಾರ‍್ಟ್ ತಲುಪಿದೆವು. ಸುತ್ತಲೂ ಕಾಪಿ ತೋಟ, ಅಲ್ಲಲ್ಲಿ ಒಂದೊಂದು ಜಿಗ್ಗಿನ ಮರ (ಅಂದರೆ ಮಲೆನಾಡಿನಲ್ಲಿ ಒಲೆಗೆ ಹಾಕಲು ಬಳಸುವ ಮರ) ಮತ್ತು ತಣ್ಣನೆಯ ಗಾಳಿ, ಒಳ ಹೋಗುತ್ತಿದ್ದಂತೆ ಮಲೆನಾಡನ್ನು ಪರಿಚಯಿಸಿತು. ಹೋಗುತ್ತಿದ್ದ ಹಾಗೆ ಮೊದಲು ಎಲ್ಲರ ಕಣ್ಣು ತಿರುಗಿದ್ದೆ ಸ್ವಿಮ್ಮಿಂಗ್ ಪೂಲ್ ಕಡೆಗೆ, ಉಟ್ಟ ಬಟ್ಟೆ ಬದಿಗೆಸೆದು ತಡಮಾಡದೆ ನೀರಿಗೆ ಹಾರಿದೆವು. ಮಲೆನಾಡಿನವನಾದ ನನಗೆ ವಾತಾವರಣ ಹೊಸದನಿಸದಿದ್ದರೂ, ಅವರಂತೆ ನಾನೂ ಒಬ್ಬನಾಗಿದ್ದೆ. ನಂತರ ಊಟ ಮುಗಿಸಿ ಇನ್ನೇನು ನಿದ್ರೆಗೆ ಜಾರುವಶ್ಟರಲ್ಲಿ ಅಲ್ಲಿದ್ದ ಸೌಂಡ್ ಬಾಕ್ಸ್ ಗೆಳೆಯರ ಕೈ ಸೇರಿ, ನಿದ್ದೆ ಹಾಳುಗೆಡಿಸಿತು. ಮತ್ತೆ ಬಾರದ ನಿದ್ರೆಗೆ ಯಾಕೆ ಪ್ರಯತ್ನಿಸುವುದು ಎಂದುಕೊಂಡು ಹಾಡು ಹೇಳುತ್ತಾ, ಕುಣಿಯುತ್ತಾ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಮಾಡಿದೆವು, ಆಗ ನಮ್ಮಲ್ಲೊಬ್ಬ ಲೈವ್ ನೋಡಲು ಬಂದವರ ಪ್ರೊಪೈಲ್ ನೋಡುತ್ತಾ ಕಾಲ ಹರಣ ಮಾಡುತಿದ್ದ, ಬಹುಶಹ ನಿಮ್ಮ ಗುಂಪಿನಲ್ಲೂ ಈ ರೀತಿಯವನೊಬ್ಬ ಇರಬಹುದೊ ಏನೋ. ಸಮಯ ಸಂಜೆಯಾದ್ದರಿಂದ ಮಲೆನಾಡಿನದೆ ಕಾಪಿ ಬಂತು, ಮಲೆನಾಡಿನಲ್ಲಿ ಕಾಪಿ ಕುಡಿಯುವುದಕ್ಕೂ ಪುಣ್ಯ ಮಾಡಿರಬೇಕು. ಕುಡಿದು ತೋಟ ಸುತ್ತಲು ಹೊರಟೆವು, ಹೋಗುತ್ತಿದ್ದಂತೆಯೇ ಮಲೆನಾಡಿನ ಜೀರುಂಡೆ, ಸದ್ದು ಮಾಡಲು ಶುರುಮಾಡಿತು. ತೋಟ ಸುತ್ತಿದವರಿಗೆ ಊರನ್ನೊಮ್ಮೆ ನೋಡೋಣ ಎಂದು ಮನಸ್ಸಾಯಿತು, ಹಾಗಾಗಿ ತೋಟದ ಕಾಲುದಾರಿಯನ್ನೇ ಹಿಡಿದು ತೋಟದಿಂದ ಹೊರ ಹೋಗಿ ಊರಿನ ರಸ್ತೆಯಲ್ಲಿ ಹೆಜ್ಜೆ ಹಾಕಿದೆವು.ಸುತ್ತಲೂ ಹಸಿರೇ ಕಾಣುವ ಊರಿಗೆ ಅಲ್ಲಲ್ಲಿ ಬಹು ಅಂತಸ್ತಿನ ಕಟ್ಟಡಗಳು ಏರಿ ಕಪ್ಪು ಚುಕ್ಕಿಯಂತೆ ಗೋಚರವಾಗುತಿತ್ತು.

ರಾತ್ರಿಯಾಗುತ್ತಿದ್ದಂತೆ ನಿದಾನಕ್ಕೆ ಚಳಿ ಮೈ ಸವರಲು ಶುರುಮಾಡಿತು. ಪೈರ್ ಕ್ಯಾಂಪ್ಗೆಂದೇ ತಂದಿಟ್ಟ ಅರೆ ಬರೆ ನೆನೆದ ಕಟ್ಟಿಗೆಗಳನ್ನು ಎರಡೆರಡು ತುಂಡು ಮಾಡಿ ಬೆಂಕಿ ಹಚ್ಚಿದೆವು. ಅಲ್ಲಿಂದ ಒಂದೊಂದೇ ಕತೆಗಳು ಆರಂಬವಾದವು, ಕಾಲೇಜು ಮತ್ತು ನಮ್ಮ ನಡುವಿನ ಸಂಬಂದ ಮತ್ತಿನ್ನಶ್ಟು ಹೆಚ್ಚಿನದು ಎಂದನಿಸತೊಡಗಿತು. ಮೊದ ಮೊದಲು ಮುಗಿದರೆ ಸಾಕೆನ್ನುವ ಕಾಲೇಜು ಈಗ ಇನ್ನು ಒಂದಶ್ಟು ದಿನ ಇರಬೇಕಿತ್ತು ಎಂದನಿಸುವಶ್ಟು ನಾವು ಕಾಲೇಜಿಗೆ ಹತ್ತಿರವಾಗಿದ್ದೆವು. ಮಾತುಕತೆ, ಡ್ಯಾನ್ಸ್, ಗತ್ತು, ಗಮ್ಮತ್ತು ಎಲ್ಲವೂ ಮುಗಿದ ಬಳಿಕ ಊಟ ಮುಗಿಸಿ ಚಳಿ ಗಾಳಿ ಒಳ ಬರದ ಹಾಗೆ ಚಾದರ ಹೊದ್ದುಕೊಂಡು ಮಲಗಿದೆವು. ಬೆಳಗ್ಗೆ 9ರ ಹೊತ್ತಿಗೆ ಬರಬೇಕಿದ್ದ ನಮ್ಮ ತಿರುಗಾಟದ ಗಾಡಿ ಸ್ವಲ್ಪ ತಡವಾಗಿ ಬಂದು ನಾವಿದ್ದಲ್ಲಿಗೆ ಸೇರಿತು. ತಿಂಡಿ ತಿಂದು ಹೊರಟು ನಿಂತಿದ್ದ ನಾವು ರೆಸಾರ‍್ಟ್ ನಿಂದ ಎತ್ತಿನ ಬುಜದ ಬುಡಕ್ಕೆ ತಲುಪಿದೆವು. ಹೋಗುತ್ತಿದ್ದಂತೆ ಮಳೆಯಾಯಿತು. ಕೆಲವರು ರೈನ್ ಕೋಟ್ ಹಾಕಿಕೊಂಡರೆ ಇನ್ನು ಕೆಲವರು ಹಾಕಿದ ಬಟ್ಟೆಯನ್ನು ರೈನ್ ಕೋಟ್ ಮಾಡಿಕೊಂಡರು, ಆ ಗುಂಪಿನಲ್ಲಿ ನಾನೂ ಇದ್ದೆ. ಒಬ್ಬರ ಹಿಂದೊಬ್ಬರು ಬೆಟ್ಟ ಹತ್ತಲು ಮುಂದೆ ಬಂದೆವು, ಮುಂದೆ ಹೋಗುತ್ತಿದ್ದಂತೆ ಸುತ್ತಲೂ ಆವರಿಸಿಕೊಂಡಿದ್ದ ಮಂಜು, ಅದರತ್ತ ಬಿಟ್ಟು ಬೇರೆಲ್ಲೂ ಗಮನ ಹರಿಸದಂತೆ ಮಾಡಿತ್ತು.ಮೇಲೆ ಹೋಗುತ್ತಿದ್ದಂತೆ ಇದೇಕೋ ಬೇಡವಿತ್ತೇನೋ ಅನಿಸಿದ್ದೂ ಉಂಟು, ಸ್ವಲ್ಪವೇ ಸ್ವಲ್ಪ ಕಾಲು ಜಾರಿದ್ದರೂ ಪೋಟೊದಲ್ಲಿ ನಮ್ಮನ್ನು ನೋಡಬೇಕಾಗಿತ್ತು. ಕಶ್ಟವೋ, ಇಶ್ಟವೋ ಅಂತೂ ಬೆಟ್ಟದ ತುತ್ತ ತುದಿಗೆ ತಲುಪಿದೆವು. ದಣಿವಾಗಿದ್ದರೂ ಅಲ್ಲಿ ಕುಡಿಯಲು ನೀರಿರಲಿಲ್ಲ, ತಿನ್ನಲು ತಿಂಡಿಯ ಪೊಟ್ಟಣ ಇರಲಿಲ್ಲ. ಅಲ್ಲಿದ್ದುದು ಪ್ರಕ್ರುತಿಯ ಸೌಂದರ‍್ಯ ಹಾಗೂ ಆಗ ತಾನೆ ಅದನ್ನು ಹಾಳುಮಾಡಲಾರಂಬಿಸಿದ ಪ್ಲಾಸ್ಟಿಕ್. ಮನುಶ್ಯ ಹೋದಲೆಲ್ಲಾ ಹಾಳು ಮಾಡುವುದು ಬಿಟ್ಟರೆ, ಹಾಳಾಗಿದ್ದನ್ನು ಸರಿ ಪಡಿಸಿ ಗೊತ್ತಿಲ್ಲ, ಒಂದು ವೇಳೆ ಸರಿ ಪಡಿಸಿದರೂ, ಅದು ಮರು ದಿನ ಪತ್ರಿಕೆಗಳಲ್ಲಿ ಹೆಡ್ ಲೈನ್.

ನೂರು ರೂಪಾಯಿ ಕತೆ ಇಲ್ಲಿಂದ ಆರಂಬ. ಪೋಟೊ ತೆಗೆಯುವುದಕ್ಕೆಂದು ಒಬ್ಬೊಬ್ಬರು ಅವರವರದೇ ಶೈಲಿಯಲ್ಲಿ ಒಂದೊಂದು ಕಲ್ಲಿನ ಮೇಲೆ ಒಂದೊಂದು ರೀತಿಯಲ್ಲಿ ತಪಸ್ಸಿಗೆ ಕುಳಿತಂತೆ ಕುಳಿತರು. ನಾನು ಹಾಗೆ ಮೈ ಮೇಲಿದ್ದ ಜಾಕೆಟನ್ನು ತೆಗೆದು ಗೆಳೆಯನ ಕೈಗಿಟ್ಟು ನಾಲ್ಕೈದು ಪೋಟೊ ತೆಗಿಸಿಕೊಂಡೆ, ಕೆಲವರದ್ದು ಮಳೆ ಬಂದರೂ ಪೋಟೊ ಶೂಟ್ ಮುಗಿಯಲೇ ಇಲ್ಲ, ಆ ಹೊತ್ತಿನಲ್ಲಿ ನಾವೆಲ್ಲ ದೂರಾಗುವೆವು ಎಂಬುದನ್ನೇ ಮರೆಸಿ ಬಿಟ್ಟಿತ್ತು. ನಾವು ನೋಡಲು ಇನ್ನೂ ಎರಡು ಜಾಗ ಬಾಕಿಯಿದ್ದರಿಂದ ಬಂದ ದಾರಿಯಲ್ಲೇ ಕೆಳಗಿಳಿದೆವು. ಇಳಿದು ನಾವೊಂದು 3 ಹುಡುಗರು ಕಾಲು ದಾರಿಯಲ್ಲಿ ನಡೆಯುತ್ತಿರುವಾಗ ಒಂದು ತಿಗಣೆ ಜೊತೆಗಾರರಿಲ್ಲದೆ ರಸ್ತೆ ಮದ್ಯದಲ್ಲಿ ತಿಣುಕಾಡುತ್ತಿತ್ತು. ಅದನ್ನು ನೋಡಿದ ನಮ್ಮಲ್ಲೊಬ್ಬ ಅದರ ಪೋಟೊ ತೆಗೆಯುವ ಸಾಹಸಕ್ಕೆ ಕೂತ. ಈತ ಪೋಟೊ ತೆಗೆಯುವಾಗ ನಾನು ಯಾಕೋ ಸುಮ್ಮನೆ ಬಂದ ದಾರಿಯ ಕಡೆಗೆ ನೋಡುತ್ತೇನೆ, ಬಲಿಶ್ಟವಾದ ಎರಡು ಕೊಂಬುಗಳುಳ್ಳ ಎತ್ತು ನಮ್ಮನ್ನೆ ದಿಟ್ಟಿಸಿ ನೋಡುತ್ತ ನಾವಿದ್ದಲ್ಲಿಗೆ ಓಡಿ ಬರುತಿತ್ತು, ನೆನಪಿರುವುದು ಅಶ್ಟೆ. ಮುಂದೇನಾಯಿತು ಎಂಬುದು ನಮ್ಮ ನಮ್ಮ ಕಾಲುಗಳಿಗೇ ಗೊತ್ತು. ಒಮ್ಮೆ ಮನೆ ನೆನಪಾಗಿಂದ್ದತು ಹೌದು. ನಾವು ಓಡಿ ಬಂದ ರಬಸಕ್ಕೆ ನಮ್ಮೆದುರಿಗೆ ಓಡುತಿದ್ದವರು ನಮಗಿಂತ ಹಲವು ಹೆಜ್ಜೆ ಹಿಂದುಳಿದಿದ್ದರು, ಪುಣ್ಯಕ್ಕೆ ಯಾರಿಗೂ ಏನೂ ಆಗಲಿಲ್ಲ. ಗಾಡಿ ಒಳಗೆ ಬಂದು ಏನಾದರೂ ತಿನ್ನೋಣವೆಂದು ಜಾಕೆಟ್ ಜೇಬಿಗೆ ಕೈ ಹಾಕುತ್ತೇನೆ 100 ರೂಪಾಯಿ ಕಾಣೆ, ಏನು ಆಗದ ಕುಶಿಗೆ ಆ ನೂರು ರೂಪಾಯಿಗೆ ಹೆಚ್ಚಿಗೆಯೇನು ತಲೆ ಕೆಡಿಸಿಕೊಳ್ಳಲಿಲ್ಲ. ಪರ‍್ಸ್ ಗೆ ಕೈ ಹಾಕಿ ಬೇರೆ ಹಣದಲ್ಲಿ ತಿಂಡಿ ತಿಂದು ಗಾಡಿ ಹತ್ತಿರ ಬಂದು ಗೆಳೆಯನೊಬ್ಬನ ಬಳಿ ಹೀಗಾಯಿತು ಎಂದು ಹೇಳುಕೊಂಡಾಗ ಆತ, ಮತ್ತೊಬ್ಬ ಗೆಳೆಯನ ಹೆಸರನ್ನು ಹೇಳಿ ಅವನಲ್ಲಿ ಕೇಳು ಎಂದ. ಮತ್ತೆ ಕೂಡಲೆ ಆತನ ಬಳಿ ಹೋಗಿ ಬೆಟ್ಟದ ಮೇಲೆ 100 ರೂಪಾಯಿ ಸಿಕ್ಕಿದೆಯಾ ಎಂದು ಕೇಳಿದೆ, “ಹಾ.. ನಿನ್ನದ” ಎನ್ನುತ್ತ ನಕ್ಕು ಅದನ್ನು ಹಿಂದಿರುಗಿಸಿದ. ಕೊನೆಗೆ ಅದು ಆತನಿಗೆ ಹೇಗೆ ಸಿಕ್ಕಿತು ಎಂದರೆ, ಆತನ ಕೈಗೆ ನಾನು ಜಾಕೆಟ್ ಕೊಟ್ಟಾಗ ಆ ಹಣ ಕೆಳಗೆ ಬಿದ್ದಿದೆ. ಆತ ಅದನ್ನು ಪೋಟೊ ತೆಗೆಯಲು ದೂರದಲ್ಲಿ ನಿಂತ ನನ್ನನ್ನು ಕೇಳಿದ್ದಾನೆ, ಆದರೆ ನಾನು ನನಗರಿಯದಂತೆ ನನ್ನದಲ್ಲ ಎಂದಿದ್ದೇನೆ. ಏನೇ ಇರಲಿ ನನ್ನ ಹಣ ಬೇರೆಯೊಬ್ಬರಿಗೆ ಸೇರಿ, ಕೊನೆಗೆ ನನ್ನ ಕೈಗೆ ಬಂದು ಸೇರಿತು. ಇಂತ ಹಣದ ಮೇಲೆ ಇಂತವರದ್ದೇ ಹೆಸರು ಬರೆದ ಮೇಲೆ ಅದನ್ನು ಯಾರು ತಾನೆ ಬದಲಾಯಿಸಲು ಸಾದ್ಯ.

ಅಲ್ಲಿಂದ ನೇರವಾಗಿ ನೋಡ ಬೇಕಿದ್ದ ಎರಡು ಜಾಗಗಳನ್ನು ನೋಡಿ, ಮೂಡಿಗೆರೆಯ ಮಸಾಲೆ ತಿಂದು ರೈಲು ಹತ್ತಿದೆವು. ಬದುಕು ಹೊಸಬರನ್ನು ಅವರ ಹೊಸತನವನ್ನು ಪರಿಚಯಿಸುತ್ತದೆ, ಆದರೆ ಅದಕ್ಕೆ ಹೊಂದಿಕೊಳ್ಳುವ ಆಯ್ಕೆ ನಾವೇ ಮಾಡಬೇಕಾಗಿರುತ್ತದೆ. ಇಂತಹದೊಂದು ಪ್ರವಾಸಕ್ಕೆ ನಾವೆಲ್ಲ ಒಟ್ಟು ಗೂಡಿ ಹೋಗಿರದೆ ಇದ್ದರೆ, ಡಿಗ್ರಿ ಬದುಕಿಗೆ ಪೂರ‍್ಣ ವಿರಾಮವಿಟ್ಟರು, ಅಲ್ಪ ವಿರಾಮದ ಅನುಬವವಾಗುತಿತ್ತೊ ಏನೋ…

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks