ಬ್ರೆಕ್ಟ್ ಕವನಗಳ ಓದು

– ಸಿ.ಪಿ.ನಾಗರಾಜ.

ಕವಿಯ ಜೀವನದ ವಿವರ

ಪೂರ್‍ಣ ಹೆಸರು: ಆಯ್ಗನ್ ಬರ‍್ಟೊಲ್ಟ್ ಪ್ರೆಡಿರಿಕ್ ಬ್ರೆಕ್ಟ್
ಜೀವಿತ ಕಾಲ: ಕ್ರಿ.ಶ.1898 ರಿಂದ ಕ್ರಿ.ಶ.1956
ಹುಟ್ಟಿದ ದೇಶ: ಜರ್‍ಮನಿ
ಕಸುಬು: ಜರ್‍ಮನ್ ನುಡಿಯಲ್ಲಿ ಕತೆ, ಕವನ, ನಾಟಕಗಳ ರಚನೆ, ನಾಟಕಗಳ ನಿರ್‍ದೇಶನ ಮತ್ತು ಪತ್ರಿಕೋದ್ಯಮ.
ಸಾಹಿತ್ಯ ರಚನೆ: 45 ನಾಟಕಗಳು; 1200 ಕ್ಕಿಂತ ಹೆಚ್ಚಿನ ಕವನಗಳ ರಚನೆ. ಇದರಲ್ಲಿ ನಾಟಕಗಳಿಗಾಗಿ ರಚಿಸಿದ ರಂಗಗೀತೆಗಳು ಸೇರಿವೆ.

‘ಗೆಲಿಲಿಯೊ’, ‘ಕಕೇಶಿಯನ್ ಚಾಕ್ ಸರ್‍ಕಲ್’, ‘ತ್ರೀ ಪೆನ್ನಿ ಅಪೇರಾ’ ಎಂಬ ಈ ಮೂರು ನಾಟಕಗಳು ಪ್ರಪಂಚದ ಎಲ್ಲೆಡೆಯಲ್ಲಿಯೂ ಒಳ್ಳೆಯ ನಾಟಕಗಳೆಂದು ಹೆಸರನ್ನು ಪಡೆದಿವೆ.

====================================

ಸಕಲ ಸೌಕರ್ಯಗಳಿದ್ದ ವಾಹನದಲ್ಲಿ ಪ್ರವಾಸ ಮಾಡುತ್ತಿದ್ದಾಗ

(ಕನ್ನಡ ಅನುವಾದ: ಶಾ.ಬಾಲುರಾವ್)

ಸಕಲ ಸೌಕರ್ಯಗಳಿದ್ದ ವಾಹನದಲ್ಲಿ ಕೂತು
ಹಳ್ಳಿಗಾಡಿನ ಮಳೆಗಾಲದ ರಸ್ತೆಯಲ್ಲಿ
ಪ್ರವಾಸ ಮಾಡುತ್ತಿದ್ದಾಗ
ಒಂದು ಇಳಿಸಂಜೆಯ ವೇಳೆ
ಒಬ್ಬ ಚಿಂದಿ ತೊಟ್ಟ ಮನುಷ್ಯ ಕಣ್ಣಿಗೆ ಬಿದ್ದ
“ನನ್ನನ್ನೂ ಕರಕೊಂಡು ಹೋಗಿ” ಎಂದು ಅವನು ತಲೆಬಾಗಿ ಕೈಬೀಸಿದ.

ಮೇಲೆ ಮುಚ್ಚಿಗೆಯಿತ್ತು. ಒಳಗೆ ಜಾಗವಿತ್ತು.
ಆದರೂ ಅವನನ್ನು ಬಿಟ್ಟು ಮುಂದೆ ಹೋದೆವು.
“ಇಲ್ಲ, ನಾವು ಯಾರನ್ನೂ ನಮ್ಮ ಜತೆ ಕರಕೊಂಡು ಹೋಗೋಕ್ಕಾಗೊಲ್ಲ”
ಎಂದು ನಾನು ಸಿಡುಕಿ ಹೇಳಿದ್ದು ಎಲ್ಲರಿಗೂ ಕೇಳಿಸಿತು.

ಇದ್ದಕ್ಕಿದ್ದಂತೆ ನಾನೇ ನನ್ನ ಆ ದನಿಗೆ ಬೆಚ್ಚಿಬಿದ್ದಾಗ
ನಾವಾಗಲೇ ತುಂಬ ದೂರ ಹೋಗಿದ್ದೆವು.
ಪ್ರಾಯಶಃ ಒಂದು ದಿನದ ಪ್ರಯಾಣದಷ್ಟೇನೊ.

ಇದು ನನ್ನ ವರ್ತನೆ
ಮತ್ತು
ಇದು ನಮ್ಮ ಇಡೀ ಪ್ರಪಂಚ.

====================================

ಮಾನವ ಸಮುದಾಯದ ಬದುಕಿನಲ್ಲಿ ಬಡವರ ಸಂಕಟಕ್ಕೆ ಸಿರಿವಂತರು ಮರುಗುವುದಿಲ್ಲ ಮತ್ತು ನೆರವಾಗುವುದಿಲ್ಲ ಎಂಬ ವಾಸ್ತವವನ್ನು ಪ್ರಸಂಗವೊಂದರ ಮೂಲಕ ಈ ಕವನದಲ್ಲಿ ಹೇಳಲಾಗಿದೆ.

‘ಬಡವರು’ ಎಂದರೆ ಮಾನವ ಜೀವಿಯು ಉಳಿದು ಬೆಳೆದು ಬಾಳಲು ಅತ್ಯಗತ್ಯವಾದ ಅನ್ನ, ಬಟ್ಟೆ, ವಸತಿ, ವಿದ್ಯೆ, ಆರೋಗ್ಯದಿಂದ ವಂಚಿತರಾಗಿ ಜೀವನವಿಡೀ ನರಳುತ್ತಿರುವ ದುಡಿಯುವ ಶ್ರಮಜೀವಿಗಳು; ‘ಸಿರಿವಂತರು’ ಎಂದರೆ ದೊಡ್ಡ ಪ್ರಮಾಣದಲ್ಲಿ ಆಸ್ತಿ, ಹಣ, ಒಡವೆ, ವಸ್ತುಗಳನ್ನು ಹೊಂದಿರುವವರು.

ಸಕಲ=ಎಲ್ಲ/ಸಮಸ್ತ; ಸೌಕರ್ಯ=ಅನುಕೂಲ; ವಾಹನ=ಕಾರು/ಮೋಟಾರು; ಇಳಿಸಂಜೆಯ ವೇಳೆ=ರವಿಯು ಪಶ್ಚಿಮದ ದಿಕ್ಕಿನಲ್ಲಿ ಮರೆಯಾಗುವ ಸಮಯ; ಚಿಂದಿ ತೊಟ್ಟ ಮನುಷ್ಯ=ಉಣಲು/ಉಡಲು/ತೊಡಲು ಸಾಕಶ್ಟು ಇಲ್ಲದ ಬಡವನಾದ ವ್ಯಕ್ತಿ; ಕಣ್ಣಿಗೆ ಬಿದ್ದ=ಕಾಣಿಸಿಕೊಂಡ/ಕಂಡು ಬಂದ; ತಲೆಬಾಗಿ=ಅತಿ ವಿನಯದಿಂದ ಕುಗ್ಗಿ; ಕೈಬೀಸಿದ=ತನ್ನನ್ನು ಕಾರಿನಲ್ಲಿ ಕರೆದುಕೊಂಡು ಹೋಗುವಂತೆ ಮೊರೆಯಿಡುತ್ತ, ಸಾಗುತ್ತಿರುವ ಕಾರಿಗೆ ಅಡ್ಡಲಾಗಿ ಕಯ್ ಒಡ್ಡಿದ;

ಮುಚ್ಚಿಗೆ=ಕಾರಿನಲ್ಲಿ ಕುಳಿತವರು ಗಾಳಿ, ಬಿಸಿಲು, ಚಳಿ ಮತ್ತು ಮಳೆಗೆ ಸಿಲುಕದಂತೆ ಕಾರಿಗೆ ಹಾಕಿರುವ ಮೇಲಿನ ಲೋಹದ ಹೊದಿಕೆ; ಒಳಗೆ ಜಾಗವಿತ್ತು=ಕಾರಿನಲ್ಲಿ ಇನ್ನೂ ಹಲವರು ಕುಳಿತುಕೊಂಡು ಪಯಣಿಸಲು ಜಾಗವಿತ್ತು. ಅಂದರೆ ಕಾರಿನಲ್ಲಿ ಕೆಲವು ಸೀಟುಗಳು ಕಾಲಿಯಿದ್ದವು; ಸಿಡುಕು=ಕೋಪದಿಂದ ಕೆರಳಿ/ಅಸಹನೆಯಿಂದ ಕೂಡಿ; ಬೆಚ್ಚಿಬೀಳು=ಆತಂಕ ಮತ್ತು ಹೆದರಿಕೆಯಿಂದ ದೇಹ ಕಂಪಿಸುವುದು;

ಇದ್ದಕ್ಕಿದ್ದಂತೆ ನಾನೇ ನನ್ನ ಆ ದನಿಗೆ ಬೆಚ್ಚಿಬಿದ್ದೆ=ಬಡವನ ಬೇಡಿಕೆಯನ್ನು ಮನಸ್ಸಿಗೆ ಹಾಕಿಕೊಳ್ಳದೆ, ಅದನ್ನು ನಿರಾಕರಿಸುತ್ತ ಕಾರಿನ ಒಡೆಯನಾದ ನಾನು ಆಡಿದ ಮಾತಿಗೆ ಮತ್ತು ಮಾತನ್ನಾಡುವಾಗ ನನ್ನ ದನಿಯಲ್ಲಿದ ಆಕ್ರೋಶ ಮತ್ತು ತಿರಸ್ಕಾರದ ಒಳಮಿಡಿತವನ್ನು ಗಮನಿಸಿ, ನಾನೇ ಕಂಪಿಸಿದೆ; ಏಕೆಂದರೆ ನನಗೆ ಅರಿವಿಲ್ಲದಂತೆಯೇ ಸಿರಿವಂತಿಕೆಯ ಅಹಂಕಾರ ಮತ್ತು ಬಡವರ ಬಗ್ಗೆ ಇರುವ ತಿರಸ್ಕಾರ ಇಂತಹ ವರ್‍ತನೆಗೆ ಕಾರಣವಾಗಿತ್ತು;

ಪ್ರಾಯಶಃ=ಸುಮಾರು; ವರ್ತನೆ=ನಡೆನುಡಿ;

ಇದು ನನ್ನ ವರ್ತನೆ= “ಚಿಂದಿಯುಟ್ಟ ವ್ಯಕ್ತಿಯು ಮಳೆಗಾಲದ ಇಳಿಸಂಜೆಯಲ್ಲಿ ಒಬ್ಬನೇ ನಡೆದುಕೊಂಡು ಹೋಗುತ್ತಿದ್ದಾನೆ. ಇಂತಹ ಚಳಿ ಮಳೆಯಲ್ಲಿ ಆತನು ಯಾವ ಬಗೆಯ ಸಂಕಟಕ್ಕೆ ಒಳಗಾಗಿರಬಹುದು ಎಂಬ ಆಲೋಚನೆಯಾಗಲಿ” ಇಲ್ಲವೇ “ಕಾರಿನಲ್ಲಿ ಮತ್ತೊಬ್ಬರು ಕುಳಿತುಕೊಳ್ಳಲು ಜಾಗವಿರುವಾಗ, ಆತನನ್ನು ಜತೆಯಲ್ಲಿ ಕರೆದುಕೊಂಡು ಹೋಗೋಣ ಎಂಬ ಕರುಣೆಯಾಗಲಿ” ಕಾರಿನ ಒಡೆಯನಾದ ನನ್ನ ಮನದಲ್ಲಿ ಮಿಡಿಯಲಿಲ್ಲ. ಇದಕ್ಕೆ ಬದಲಾಗಿ ಚಿಂದಿಯುಟ್ಟ ವ್ಯಕ್ತಿಯ ದನಿಯನ್ನು ಕೇಳಿ ಕುಪಿತಗೊಂಡು, ಒರಟು ದನಿಯಲ್ಲಿ “ಇಲ್ಲ, ನಾವು ಯಾರನ್ನೂ ನಮ್ಮ ಜತೆ ಕರಕೊಂಡು ಹೋಗೋಕ್ಕಾಗೊಲ್ಲ” ಎಂದು ನುಡಿದೆ; ಬಡವನ ಕೋರಿಕೆಯನ್ನು ಮನ್ನಿಸದ, ಬಡವನಿಗೆ ಕರುಣೆಯನ್ನು ತೋರಿಸದ, ಬಡವನ ದನಿಯನ್ನು ಕೇಳುತ್ತಿದ್ದಂತೆಯೇ ಕುಪಿತನಾಗುವ ಕ್ರೂರತನದ ನಡೆನುಡಿಯು ನನ್ನ ವ್ಯಕ್ತಿತ್ವದಲ್ಲಿದೆ;
ಇದು=ತಿರಸ್ಕಾರದಿಂದ ಕೂಡಿದ ಕರುಣೆಯಿಲ್ಲದ ನಡೆನುಡಿ;

ಇಡೀ=ಎಲ್ಲವನ್ನೂ ಒಳಗೊಂಡು; ಪ್ರಪಂಚ=ಲೋಕ/ಜಗತ್ತು/ಮಾನವ ಸಮುದಾಯ;

ಇದು ನಮ್ಮ ಇಡೀ ಪ್ರಪಂಚ=ಕಾರಿನ ಒಡೆಯನ ನಡೆನುಡಿಯಂತೆಯೇ ಪ್ರಪಂಚದಲ್ಲಿರುವ ಸಿರಿವಂತರಲ್ಲಿ ಬಹುತೇಕ ಮಂದಿ ಬಡವರ ಬಗ್ಗೆ ಇದೇ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಬಡತನದ ಬೇಗೆಯಲ್ಲಿ ಬೇಯುತ್ತಿರುವ ವ್ಯಕ್ತಿಗಳು ಬದುಕಿ ಉಳಿಯುವುದಕ್ಕೆ ಅಗತ್ಯವಾದ ಏನನ್ನಾದರೂ ಬೇಡಿದಾಗ, ಸಿರಿವಂತರು ತಮಗಿರುವ ಅನುಕೂಲಗಳಲ್ಲಿ ಸ್ವಲ್ಪವನ್ನಾದರೂ, ಅದರ ಅಗತ್ಯವಿರುವವರಿಗೆ ನೆರವಿನ ರೂಪದಲ್ಲಿ ನೀಡಬೇಕು ಎನ್ನುವ ಉದಾರವಾದ ಮನಸ್ಸನ್ನು ಸಿರಿವಂತರಲ್ಲಿ ಬಹುತೇಕ ಮಂದಿ ಹೊಂದಿಲ್ಲ;

====================================

ಈ ಕವನದಲ್ಲಿ ಕಂಡುಬರುವ ಕಾರಿನ ಒಡೆಯ ಮತ್ತು ಚಿಂದಿಯುಟ್ಟ ವ್ಯಕ್ತಿಯ ಪ್ರಸಂಗದ ಮೂಲಕ “ಸಿರಿವಂತರಲ್ಲಿ ಕರುಣೆಯಿಲ್ಲದ ವ್ಯಕ್ತಿತ್ವ ರೂಪುಗೊಳ್ಳಲು ಕಾರಣಗಳೇನು” ಎಂಬುದನ್ನು ತಿಳಿಯಬೇಕು.

ನಮ್ಮ ಕಣ್ಣ ಮುಂದಿನ ಜಗತ್ತಿನ ಎಲ್ಲ ದೇಶಗಳಲ್ಲಿಯೂ ಮತ್ತು ಎಲ್ಲ ಸಮಾಜಗಳಲ್ಲಿಯೂ ಸಿರಿವಂತರ ಸಂಕೆಗಿಂತ ಬಡವರ ಸಂಕೆಯು ಹೆಚ್ಚಾಗಿರಲು ಕಾರಣವೇನೆಂದರೆ ‘ಆಸ್ತಿಯ ಹಕ್ಕನ್ನುಳ್ಳ ಸಂಪತ್ತಿನ ವ್ಯವಸ್ತೆ’ ಮತ್ತು ‘ಮೇಲು ಕೀಳಿನ ತಾರತಮ್ಯದಿಂದ ಕೂಡಿರುವ ಜಾತಿ/ಮತದ ಸಾಮಾಜಿಕ ವ್ಯವಸ್ತೆ.’

ಈ ಎರಡು ವ್ಯವಸ್ತೆಗಳಿಂದಾಗಿ ಮೇಲು ಜಾತಿ/ಮತದ ಬಲ, ತೋಳ್ ಬಲ, ಹಣಬಲ ಮತ್ತು ಆಡಳಿತದ ಗದ್ದುಗೆಯ ಬಲವುಳ್ಳ ಕೆಲವೇ ಜನರು, ಈ ಬಲಗಳಲ್ಲಿದ ದುಡಿಯುವ ಶ್ರಮಜೀವಿಗಳನ್ನು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಹತೋಟಿಯಲ್ಲಿಟ್ಟುಕೊಂಡು, ಜಗತ್ತಿನಲ್ಲಿ ಉತ್ಪಾದನೆಗೊಳ್ಳುವ ಸಂಪತ್ತನ್ನು ದೋಚುತ್ತಿದ್ದಾರೆ. ಆದ್ದರಿಂದಲೇ ಪ್ರಪಂಚದ ಯಾವುದೇ ದೇಶದಲ್ಲಿ ಇಲ್ಲವೇ ಸಮಾಜದಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ಸಂಪತ್ತನ್ನು ಹೊಂದಿರುವ ಸಿರಿವಂತರಿಗಿಂತ, ಅಲ್ಪಸ್ವಲ್ಪ ಸಂಪತ್ತನ್ನು ಹೊಂದಿ ಇತ್ತ ಸಿರಿವಂತರಲ್ಲದ ಅತ್ತ ಬಡವರಲ್ಲದ ನಡುವಣ ವರ್‍ಗದವರ (middle class) ಮತ್ತು ಯಾವುದೇ ಸಂಪತ್ತನ್ನು ಹೊಂದಿರದ ಬಡವರ ಸಂಕೆಯು ಕೋಟಿಗಟ್ಟಲೆ ಹೆಚ್ಚಾಗಿದೆ. ಸರಿ ಸುಮಾರು 650 ಕೋಟಿಗಿಂತಲೂ ಹೆಚ್ಚಿನ ಜನರಿಂದ ಕೂಡಿರುವ ಪ್ರಪಂಚದಲ್ಲಿ ಅತ್ಯಂತ ದೊಡ್ಡ ಪ್ರಮಾಣದ ಸಂಪತ್ತನ್ನು ಹೊಂದಿರುವ ಮೊದಲ ನೂರು ಮಂದಿಯ ಹೆಸರನ್ನು ಆಗಾಗ್ಗೆ ಪತ್ರಿಕೆಗಳು ಪ್ರಕಟಿಸುತ್ತಿರುತ್ತವೆ. ಪ್ರಪಂಚದ ಸಮಸ್ತ ಸಂಪತ್ತಿನಲ್ಲಿ ಬಹು ದೊಡ್ಡ ಪಾಲು ಬೆರಳೆಣಿಕೆಯ ಸಂಕೆಯ ಸಿರಿವಂತರ ಕಯ್ ವಶದಲ್ಲಿರುವುದು ಈ ವರದಿಯಿಂದ ಕಂಡುಬರುತ್ತದೆ.

ಸಿರಿವಂತರು ಹೊಂದಿರುವ ಸಂಪತ್ತೆಲ್ಲವೂ ಬೂಮಿಯಲ್ಲಿ ದುಡಿಯುತ್ತಿರುವ ಶ್ರಮಜೀವಿಗಳಿಂದ ಉತ್ಪನ್ನಗೊಂಡಿದ್ದಾಗಿದೆ. ಯಾವೊಬ್ಬ ಸಿರಿವಂತನೂ ತಾನು ಈ ಜಗತ್ತಿನಲ್ಲಿ ಹುಟ್ಟಿಬರುವಾಗ ತನ್ನ ಜತೆಯಲ್ಲಿ ಯಾವ ಸಂಪತ್ತನ್ನು ಹೊತ್ತು ತಂದಿಲ್ಲ. ಅವನು ಹೊಂದಿರುವುದೆಲ್ಲ ಈ ಜಗತ್ತಿಗೆ ಸೇರಿದ್ದೇ ಆಗಿದ್ದೆ. ಜಗತ್ತಿನಲ್ಲಿ ಹುಟ್ಟಿ ಬೆಳೆದು ಬಾಳುವ ಪ್ರತಿಯೊಬ್ಬ ವ್ಯಕ್ತಿಯು ಅನ್ನ-ಬಟ್ಟೆ-ವಸತಿ-ವಿದ್ಯೆ-ಉದ್ಯೋಗ-ಆರೋಗ್ಯವನ್ನು ಪಡೆದು ನೆಮ್ಮದಿಯ ಜೀವನವನ್ನು ನಡೆಸುವುದಕ್ಕೆ ಪ್ರಪಂಚದಲ್ಲಿರುವ ನಿಸರ್‍ಗ ಸಂಪತ್ತು ಮತ್ತು ಮಾನವ ಸಮುದಾಯದ ದುಡಿಮೆಯಿಂದ ಉತ್ಪಾದನೆಗೊಳ್ಳುವ ಸಂಪತ್ತು ಸರಿ ಸಮಾನವಾಗಿ ಎಲ್ಲರಿಗೂ ಸಲ್ಲಬೇಕಾಗಿದೆ. ಉದಾಹರಣೆ: ಒಂದು ಮನೆಯಲ್ಲಿ ವಾಸಿಸುತ್ತಿರುವ ಒಂದೇ ಕುಟುಂಬಕ್ಕೆ ಸೇರಿದ ನಾಲ್ಕು ಮಂದಿಗೆ ಮಾಡಿದ ಅಡುಗೆಯನ್ನು ಎಲ್ಲರೂ ಸೇವಿಸಬೇಕೆ ಹೊರತು, ಒಬ್ಬ ಹೊಟ್ಟೆ ಬಿರಿಯುವಂತೆ ಉಂಡು, ಮತ್ತೊಬ್ಬ ಅರೆಹೊಟ್ಟೆ ಉಂಡು, ಇನ್ನುಳಿದ ಇಬ್ಬರು ಹಸಿವಿನಿಂದ ನರಳುತ್ತಿದ್ದರೆ ಅದು ಮನೆ ಎನಿಸುವುದಿಲ್ಲ; ಅದು ಕುಟುಂಬವಾಗುವುದಿಲ್ಲ;

ಮಾನವ ಸಮುದಾಯದಲ್ಲಿರುವ ದಾರ್‍ಮಿಕ ನಂಬಿಕೆಗಳು ಸಿರಿತನ ಮತ್ತು ಬಡತನದ ಅಸಮಾನತೆಯು ಸದಾಕಾಲ ಮುಂದುವರಿಯಲು ಕಾರಣವಾಗಿವೆ.

ಪ್ರತಿಯೊಬ್ಬ ವ್ಯಕ್ತಿಯ ಬಡತನ ಇಲ್ಲವೇ ಸಿರಿತನಕ್ಕೆ ಆಯಾಯ ವ್ಯಕ್ತಿಯು ತನ್ನ ಹಿಂದಿನ ಜನ್ಮದಲ್ಲಿ ಮಾಡಿರುವ ಒಳಿತು ಕೆಡುಕಿನ ನಡೆನುಡಿಯೇ ಕಾರಣವೆಂಬ ಪೂರ್‍ವಜನ್ಮದ ಕರ್‍ಮಸಿದ್ಧಾಂತ ಮತ್ತು ಪ್ರತಿಯೊಬ್ಬ ವ್ಯಕ್ತಿಯು ಹುಟ್ಟಿದಾಗಲೇ ಆತನ/ಆಕೆಯ ಹಣೆಯಲ್ಲಿ ಹುಟ್ಟಿನಿಂದ ಸಾವಿನ ತನಕ ಏನೇನು ಆಗಬೇಕೆಂಬುದನ್ನು ದೇವರು ಬರೆದಿದ್ದಾನೆ. ಆದ್ದರಿಂದ ಹಣೆ ಬರಹ/ವಿದಿ ಬರಹದಂತೆಯೇ ಬಡತನ/ಸಿರಿತನ ವ್ಯಕ್ತಿಗೆ ಬರುತ್ತದೆ ಎಂಬ ನಂಬಿಕೆಯನ್ನು ಮೇಲು ಜಾತಿ ಮತ್ತು ಮೇಲು ವರ್‍ಗದ ಜನರಿಂದ ರಚನೆಗೊಂಡಿರುವ ದರ್‍ಮ, ದೇವರು, ಕಲೆ, ಸಂಗೀತ ಮತ್ತು ಸಾಹಿತ್ಯದ ಸಂಗತಿಗಳೆಲ್ಲವೂ ಜನಮನದಲ್ಲಿ ಬೇರೂರುವಂತೆ ಮಾಡಿವೆ.

ಇಂತಹ ನಂಬಿಕೆಗಳಿಂದಾಗಿ ಪ್ರಪಂಚದಲ್ಲಿರುವ ಸಿರಿವಂತರು ಮತ್ತು ಬಡವರು- ಇಬ್ಬರೂ ಮೇಲು ಕೀಳಿನ ಮತ್ತು ಅಸಮಾನತೆಯ ಬದುಕಿಗೆ ಮಾನಸಿಕವಾಗಿ ಒಗ್ಗಿಹೋಗಿದ್ದಾರೆ. ಇದರಿಂದಾಗಿ ಸಿರಿವಂತರ ಮನದಲ್ಲಿ “ನಮ್ಮಂತೆಯೇ ಮಾನವರಾಗಿ ಹುಟ್ಟಿ ಬೆಳೆದು ಬಾಳುತ್ತಿರುವ ಜನರ ಬಡತನಕ್ಕೆ ಕಾರಣವೇನು?… ಬಡವರ ಸಂಕಟಗಳೇನು?… ಬಡತನವನ್ನು ನಿವಾರಿಸುವುದಕ್ಕೆ ನಮ್ಮ ಕೊಡುಗೆಯೇನು?… ಈಗ ನಾನು ಹೊಂದಿರುವ ಸಂಪತ್ತು ಯಾವ ರೀತಿಯಲ್ಲಿ ನನಗೆ ದೊರಕಿತು? ನನಗಿರುವ ಸಂಪತ್ತು ಮತ್ತೊಬ್ಬನಿಗೆ ಇಲ್ಲದಿರಲು ಕಾರಣಗಳೇನು?” ಎಂಬುದನ್ನು ಕುರಿತ ಆಲೋಚನೆಗಳು ಇಲ್ಲವಾಗಿವೆ. ಆಸ್ತಿಯ ಒಡೆತನದ ಹಕ್ಕು ಇರುವುದರಿಂದಲೇ ಸಿರಿವಂತರು ಕರುಣೆಯಿಲ್ಲದವರಾಗಿದ್ದಾರೆ.

ಬಡವರ ಮನದಲ್ಲಿ “ನಾವು ಸಂಪತ್ತನ್ನಾಗಲಿ ಇಲ್ಲವೇ ಒಳ್ಳೆಯ ಬದುಕನ್ನಾಗಲಿ ಈ ಪ್ರಪಂಚಕ್ಕೆ ಬರುವಾಗ ದೇವರಿಂದ ಕೇಳಿ ಪಡೆದುಕೊಂಡು ಬರಲಿಲ್ಲ. ಆದ್ದರಿಂದ ಮಯ್ಯಲ್ಲಿ ಶಕ್ತಿಯಿರುವ ತನಕ ದುಡಿಯುತ್ತಿದ್ದು, ಕೊನೆಗೊಮ್ಮೆ ಸಾಯಬೇಕು” ಎಂಬ ನಿಲುವನ್ನು ಹೊಂದಿದ್ದಾರೆಯೇ ಹೊರತು, ತಮ್ಮ ಬಡತನಕ್ಕೆ ಜನಾಂಗ ತಾರತಮ್ಯ, ಜಾತಿಮತದ ಕಟ್ಟುಪಾಡುಗಳು, ಆಸ್ತಿಯ ಹಕ್ಕು ಮತ್ತು ಸಿರಿವಂತರು ಮಾಡುತ್ತಿರುವ ಸುಲಿಗೆ ಮತ್ತು ವಂಚನೆಯು ಕಾರಣವೆಂಬ ವಾಸ್ತವವನ್ನು ಅರಿಯದವರಾಗಿದ್ದಾರೆ. ಆಸ್ತಿಯು ಇಲ್ಲದಿರುವುದರಿಂದಲೇ ಬಡವರು ಕಯ್ ಒಡ್ಡಿ ಬೇಡುವ ದೀನರಾಗಿದ್ದಾರೆ;

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: