ನಾ ನೋಡಿದ ಸಿನೆಮಾ: ಗೋಸ್ಟ್

– ಕಿಶೋರ್ ಕುಮಾರ್.

ತನಗೆ, ಇಲ್ಲವೇ ತನ್ನವರಿಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಕತೆಗಳು ಹೆಚ್ಚಾಗಿ ತೆರೆಗೆ ಬಂದದ್ದು 80 ರ ದಶಕದಲ್ಲಿ. ಆ ಕತೆಗಳಲ್ಲಿ ಹೆಚ್ಚಾಗಿ ‘ಸೇಡು’ ಒಂದು ನೇರ ಗುರಿಯಾಗಿರುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಹೇಳುವ ಬಗೆಯಶ್ಟೇ ಅಲ್ಲದೇ, ಸಿನೆಮಾ ಮೇಕಿಂಗ್ ಕೂಡ ತುಂಬಾ ಬದಲಾವಣೆಯಾಗಿದ್ದು ಕತೆಯ ತಿರುಳನ್ನು ಬಿಟ್ಟುಕೊಡದೆ ಕೊನೆಯವರೆಗೂ ಏತಕ್ಕಾಗಿ ಇದೆಲ್ಲ ಎನ್ನುವ ಮಟ್ಟಕ್ಕೆ ಕುತೂಹಲ ಮೂಡಿಸಿಕೊಂಡು ಹೋಗುವ ಕತೆಗಳ ಕಾಲ ಇದು. ಈ ರೀತಿಯ ಒಂದು ಕತೆಯನ್ನು ಹೊಂದಿರುವ ಚಿತ್ರವೇ ಗೋಸ್ಟ್.

ಒಂದು ಸೆರೆಮನೆಯನ್ನು ತಮ್ಮ ಸುಪರ‍್ದಿಗೆ ತೆಗೆದುಕೊಳ್ಳುವ ಒಂದು ಗುಂಪು, ಏತಕ್ಕಾಗಿ ಇದೆಲ್ಲ ಎಂದು ತಿಳಿಯದೆ ತಲೆಕೆಡಿಸಿಕೊಂಡ ಪೊಲೀಸರು, ಇದರ ಮುಕ್ಯ ತಲೆ ಯಾರು, ಆತನ ಹಿನ್ನೆಲೆ ಏನು ಎಂದು ತಿಳಿಯಲು ಹರಸಾಹಸ ಪಡಬೇಕಾದ ಸನ್ನಿವೇಶ, ಆತ ಯಾರೆಂದು ತಿಳಿದೊಡನೆ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡುವ ಆತನ ಹಿನ್ನೆಲೆ. ಹೀಗೆ ಯಾರು ಮತ್ತು ಏಕೆ ಎನ್ನುವ ಗೊಂದಲವನ್ನು ನೋಡುಗರಲ್ಲಿ ಹಾಗೇ ಇರಿಸಿಕೊಂಡು ಸಿನೆಮಾ ಮುನ್ನಡೆಯುತ್ತದೆ. ವಿ.ಎಪ್.ಎಕ್ಸ್ (VFX) ಬಳಸಿ ಶಿವರಾಜ್ ಕುಮಾ‍ರ್ ಅವರನ್ನು ಹಳೆಯ (vintage) ಲುಕ್ ನಲ್ಲಿ ನೋಡುಗರ ಮುಂದಿಟ್ಟಿರುವುದು ಹಾಗೂ ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್ ಎನ್ನಬಹುದು. ಹೀಗೆ ನೋಡುಗರಿಗೆ ಒಂದು ಹೊಸ ಅನುಬವನ್ನು ನೀಡಲು ತೆರೆಗೆ ಬಂದಿದೆ ಗೋಸ್ಟ್.

ಪಾತ್ರವರ್‍ಗಕ್ಕೆ ಬಂದರೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾ‍ರ್ ಅವರು ಮುಕ್ಯ ಬೂಮಿಕೆಯಲ್ಲಿದ್ದು, ಇನ್ನುಳಿದಂತೆ ದತ್ತಣ್ಣ, ಪ್ರಶಾಂತ್ ನಾರಾಯಣ್, ಅರ್‍ಚನಾ ಜೋಯಿಸ್, ಅಬಿಜಿತ್, ಜಯರಾಮ್, ಸತ್ಯ ಪ್ರಕಾಶ್, ಅನುಪಮ್ ಕೇ‍ರ್ ಹಾಗೂ ವಿಜಯಲಕ್ಶ್ಮಿ ಸಿಂಗ್ ನಟಿಸಿದ್ದಾರೆ. ಈ ಸಿನೆಮಾದಲ್ಲಿ ನಾಯಕಿಯ ಪಾತ್ರವೇ ಇಲ್ಲ, ಹೀಗಿದ್ದರೂ ಅದರ ಕೊರತೆ ಕಾಣದಂತೆ ಕೊಂಡೊಯ್ದಿದ್ದಾರೆ ನಿರ‍್ದೇಶಕ ಶ್ರೀನಿ.

ಕಾಮಿಡಿ ಹಾಗೂ ತ್ರಿಲ್ಲ‍ರ್ ಸಿನೆಮಾಗಳಿಗೆ ಹೆಸರಾದ ನಿರ‍್ದೇಶಕ ಶ್ರೀನಿ ಅವರ ನಿರ‍್ದೇಶನದಲ್ಲಿ ಮೂಡಿಬಂದಿರುವ ಚಿತ್ರ ಇದಾಗಿದೆ. ನಿರ‍್ದೇಶನದಲ್ಲಿ ಶ್ರೀನಿ ಅವರ ಕೆಲಸ ಎದ್ದು ಕಾಣುತ್ತದೆ. ಸಿನೆಮಾಟೋಗ್ರಪಿ ಈ ಚಿತ್ರದ ಹೈಲೈಟ್ ಗಳಲ್ಲಿ ಒಂದಾಗಿದ್ದು, ಮಹೇಂದ್ರ ಸಿಂಹ ಅವರು ಇದರ ಹೊಣೆ ಹೊತ್ತಿದ್ದಾರೆ. ಅರ‍್‍ಜುನ್ ಜನ್ಯ ಅವರ ಸಂಗೀತವಿದ್ದು, ಅದರಲ್ಲೂ ಹಿನ್ನೆಲೆ ಸಂಗೀತವಂತೂ ನೋಡುಗರಿಗೆ ಒಂದು ಹೊಸ ಅನುಬವ ನೀಡುತ್ತದೆ. ದೀಪು ಎಸ್ ಕುಮಾರ‍್ ಅವರ ಸಂಕಲನ ಹಾಗೂ ಎಂ. ಜಿ. ಶ್ರೀನಿವಾಸ್ ಅವರ ಚಿತ್ರಕತೆ ಇದ್ದು, ಸಂದೇಶ್ ಪ್ರೊಡಕ್ಶನ್ಸ್ ಅವರು ಈ ಚಿತ್ರವನ್ನು ನಿರ‍್ಮಿಸಿದ್ದಾರೆ.

ಬಿಡುಗಡೆಗೂ ಮುನ್ನವೇ ಮೋಶನ್ ಪೋಸ್ಟರ್ ಹಾಗೂ ಅದರ ಹಿನ್ನೆಲೆ ಸಂಗೀತದ ಮೂಲಕ ಎಲ್ಲರ ಗಮನ ಸೆಳೆದಿದ್ದ ಗೋಸ್ಟ್, ಅಕೋಬರ್ 19, 2023 ರಂದು ತೆರೆಗೆ ಬಂದಿದೆ. ಹೊಸ ತನದಿಂದ ಕೂಡಿರುವ ಸಿನೆಮಾ ಇದಾಗಿದ್ದು, ಚಿತ್ರತಂಡದ ಕೆಲಸ ಮೇಕಿಂಗ್ ನಲ್ಲಿ ಎದ್ದು ಕಾಣುತ್ತದೆ. ಚಿತ್ರದ ರುಣಾತ್ಮಕ ವಿಶಯಗಳಿಗೆ ಬಂದರೆ, ಶೀರ್‍ಶಿಕೆ (title) ಹಾಡಿನಲ್ಲಿ 4 ಬಾಶೆ ಬೆರೆಸಿ ಚಿತ್ರಾನ್ನ ಮಾಡೋದು ಬೇಕಿರಲಿಲ್ಲ, ಅದರಲ್ಲೂ ಕನ್ನಡ ಸಾಲುಗಳಲ್ಲಿ ಹಿಂದಿ ಇಂಗ್ಲೀಶ್ ತುರುಕಿರೋದರಿಂದ ಕನ್ನಡ ಸಾಲುಗಳು ಕನ್ನಡದ್ದು ಅಂತ ಅನಿಸೊಲ್ಲ. ಕತೆಯನ್ನು ಕೊಂಡೊಯ್ದ ಬಗೆಯನ್ನು ನೋಡಿದರೆ ಎಡಿಟಿಂಗ್ ನಲ್ಲಿ ಇನ್ನೂ ಹೆಚ್ಚಿನ ಗಮನ ಕೊಡಬಹುದಿತ್ತು ಅನಿಸುತ್ತದೆ, ಏಕೆಂದರೆ ಸನ್ನಿವೇಶದಿಂದ ಸನ್ನಿವೇಶ ತುಂಬಾ ಬೇಗನೆ ಬದಲಾಗುವುದಲ್ಲದೆ, ಕತೆಯನ್ನು ಹೇಳುವ ಬಗೆಯಲ್ಲಿ ಸ್ವಲ್ಪ ಗಮನ ಹರಿಸಬೇಕಿತ್ತು. ಇದೆಲ್ಲವನ್ನು ಪಕ್ಕಕ್ಕಿಟ್ಟರೆ 132 ನಿಮಿಶಗಳ ಕಾಲ ನೋಡುಗರಿಗೆ ಒಂದೊಳ್ಳೆ ಸಿನೆಮಾ ಅನುಬವನ್ನು ನೀಡುತ್ತದೆ ಗೋಸ್ಟ್. ಚಿತ್ರದ ಕೊನೆಯಲ್ಲಿ ಬರುವ ಸನ್ನಿವೇಶ ಎರಡನೇ ಬಾಗ ಇರಬಹುದೆ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಹಾಗಾದರೆ ಗೋಸ್ಟ್ ಎರಡನೇ ಬಾಗ ಬರಬಹುದೇ?

(ಚಿತ್ರಸೆಲೆ: in.bookmyshow.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: