ಕವಿತೆ: ಹೊಸ ವರುಶವೆಂದರೆ

– ಶ್ಯಾಮಲಶ್ರೀ.ಕೆ.ಎಸ್.

ಹೊಸ ವರುಶವೆಂದರೆ
ಹೊಸ ಸೂರ‍್ಯ ಉದಯಿಸುವನೇ
ಹೊಸ ಚಂದ್ರಮ ಜನಿಸುವನೇ
ಚುಕ್ಕಿ ತಾರೆಗಳ ಎಣಿಸಬಲ್ಲೆವೇ

ಅಶುದ್ದ ವಾಯು ಶುದ್ದಿಯಾಗುವುದೇ
ಕಡಲ ನೀರು ಸಿಹಿಯಾಗುವುದೇ
ಮರಳುಗಾಡು ಹೊಳೆಯಾಗುವುದೇ
ಹೋದ ಜೀವ ಮರುಜನ್ಮ ಪಡೆವುದೇ

ಎಣೆಯಿಲ್ಲದೆ ಬದಲಾಗುವ ಸಮಯಕೆ
ಅಡ್ಡಿ ಇರದು ಓಡುವ ಕಾಲಕೆ
ಪರಿವರ‍್ತನೆ ಬೇಕು ನರಜನ್ಮಕೆ
ಕಡೆ ತನಕ ಇರಲಿ ನೆಮ್ಮದಿ ಹರಕೆ

ಬರಲಿ ಬರಲಿ ಹೊಸ ವರುಶ ಬರಲಿ
ಹೊಸ ತನದ ಸಿರಿ ಹೊತ್ತು ತರಲಿ
ಕಹಿ ಗಳಿಗೆಗಳು ದೂರ ಸರಿಯಲಿ
ಸಿಹಿ ನೆನಪುಗಳು ಅರಳಿ ಮರಳಿ ಬರಲಿ

ತರಲಿ ತರಲಿ ಹೊಸ ಹರುಶ ತರಲಿ
ನೊಂದ ಮನಕೆ ಸಾಂತ್ವನ ದೊರಕಲಿ
ಬರಡು ಹ್ರುದಯದಿ ಪ್ರೀತಿ ಅರಳಲಿ
ಬದುಕಿಗೊಂದು ಹೊಸ ಅರ‍್ತ ಸಿಗಲಿ

(ಚಿತ್ರ ಸೆಲೆ: deviantart.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: