ಆಲೂಗಡ್ಡೆ ಬಗೆಗೆ ನಿಮಗೆಶ್ಟು ಗೊತ್ತು?
ಆಲೂ ಎಲ್ಲರಿಗೂ ಚಿರಪರಿಚಿತವಿರುವ ಒಂದು ತರಕಾರಿ. ಹಲವು ಬಗೆಯ ಕಾದ್ಯಗಳಲ್ಲಿ ಬಳಸಲ್ಪಡುವ ಇದು, ಬೇರಾವುದೇ ತರಕಾರಿಗಳೊಂದಿಗೆ ಹೊಂದಿಕೆಯಾಗುವ ಏಕೈಕ ತರಕಾರಿ. ಆಲೂಗಡ್ಡೆ ಹೆಸರೇ ಸುಳಿವು ನೀಡುವಂತೆ ಇದು ಬೇರಿನಲ್ಲಿ ಬಿಡುವಂತ ತರಕಾರಿ. ಇದರ ವೈಜ್ನಾನಿಕ ಹೆಸರು ಸೊಲಾನಮ್ ಟ್ಯುಬರೋಸಂ(solanum tuberosum), ಇದು ವಿದೇಶಿಯರ ಅಚ್ಚು ಮೆಚ್ಚಿನ ದಿನ ನಿತ್ಯದ ತರಕಾರಿ. ಬಾರತದಲ್ಲಿ ಅಕ್ಕಿ, ಗೋದಿ, ಮೆಕ್ಕೆಜೋಳದ ನಂತರದ ಸ್ತಾನ ಪಡೆದಿರುವುದು ಈ ಆಲೂ. ಬಹುತೇಕ ಎಲ್ಲಾ ರುತುವಿನಲ್ಲೂ ನಿರಂತರವಾಗಿ ಕಾಣಸಿಗುತ್ತದೆ.
ಆಲೂಗಡ್ಡೆಯು ಮೂಲತಹ ದಕ್ಶಿಣ ಅಮೆರಿಕ ಕಂಡದ ಆಂಡಿಸ್ ಪರ‍್ವತ ಶ್ರೇಣಿಗಳಲ್ಲಿ ಸಹಸ್ರಾರು ವರ‍್ಶಗಳ ಹಿಂದೆಯೇ ಕಂಡುಬಂದದ್ದಾಗಿದೆ. ಇದು ಮೊದಲು ಬಾರತಕ್ಕೆ ಪೋರ‍್ಚುಗೀಸರ ಮೂಲಕವೇ ಬಂದಿತು. ಆದರೆ ಆಲೂಗಡ್ಡೆಯು ಬಾರತದಾದ್ಯಂತ ಹರಡುವಂತೆ ಮಾಡಿದ್ದು ಬ್ರಿಟೀಶರು. ಬ್ರಿಟೀಶ್ ವ್ಯಾಪಾರಿಗಳು ಆಲೂಗಡ್ಡೆಯನ್ನು ಬಂಗಾಳಕ್ಕೆ ತಂದರು. ಇಲ್ಲಿಂದ ಬಾರತದ ಉದ್ದಗಲಕ್ಕೂ ಹರಡಿತು. ತೆಲುಗು ಬಾಶೆಯಲ್ಲಿ ಆಲೂಗಡ್ಡೆಗೆ “ಬಂಗಾಳಾದುಂಪ” ಎಂದು ಕರೆಯುತ್ತಾರೆ. ಏಕೆಂದರೆ ಇದು ಬಂಗಾಳದಿಂದ ಆಂದ್ರಕ್ಕೆ ಬಂದಿತು. ಕೊಂಕಣಿಯಲ್ಲಿ ಆಲೂಗಡ್ಡೆಗೆ “ಬಟಾಟೊ” ಮತ್ತು ಮರಾಟಿಯಲ್ಲಿ “ಬಟಾಟಾ” ಎಂದು ಕರೆಯುತ್ತಾರೆ. ಇವೆರಡೂ ಆಲೂಗಡ್ಡೆಗೆ ಪೋರ‍್ಚುಗೀಸ್ ಪದವಾದ “ಬತಾತ” ಇಂದ ಬಂದದ್ದು. ಪೋರ‍್ಚುಗೀಸ್ ಬತಾತವು ಸ್ಪ್ಯಾನಿಶ್ “ಪತಾತಾ” ಇಂದ ಬಂದದ್ದು. ಇಂಗ್ಲಿಶ್ “ಪೊಟಾಟೊ” ಸ್ಪ್ಯಾನಿಶ್ “ಪತಾತಾ” ಇಂದ ಬಂದದ್ದು.
ಆಲೂ ಚಿಪ್ಸ್, ಪ್ರೆಂಚ್ ಪ್ರೈಸ್, ಆಲೂ ಪ್ರೈ, ಆಲೂ ಪರೋಟ, ಆಲೂ ಗ್ರೇವಿ, ಆಲೂ ಮಸಾಲ, ಹುಳಿ, ಗೋಲ್ಗಪ್ಪ, ಬಜ್ಜಿ, ಆಲೂ ಗೋಬಿ ಇತ್ಯಾದಿ ಹೀಗೆ ಆಲೂ ಇಂದ ಎಶ್ಟೆಲ್ಲ ಕಾದ್ಯಗಳನ್ನು ತಯಾರಿಸಬಹುದಲ್ಲವೇ. ಇನ್ನು ಮಸಾಲದೋಸೆ ಜೊತೆ ಸವಿಯುವ ಆಲೂಗಡ್ಡೆ ಪಲ್ಯ ದಕ್ಶಿಣ ಬಾರತದಲ್ಲಿ ಮನೆಮಾತಾಗಿರುವುದಂತು ದಿಟ. ಆಲೂಗಡ್ಡೆಯನ್ನು ಬಹಳಶ್ಟು ದಿನ ಬಳಸದೇ ಇದ್ದಲ್ಲಿ ಹಸಿರು ಬಣ್ಣಕ್ಕೆ ತಿರುಗಿ ಮೊಳಕೆ ಬರುವುದನ್ನು ಗಮನಿಸಿರಬಹುದು. ಇದು ಬಳಸಲು ಅಶ್ಟು ಯೋಗ್ಯವಲ್ಲ. ಕೆಲವೊಮ್ಮೆ ಆಲೂವನ್ನು ಕತ್ತರಿಸಿದಾಗಲು ಕೆಲಬಾಗ ಕಪ್ಪಾಗಿರುತ್ತದೆ. ಇದರ ಹಿಂದಿನ ಕಾರಣ ಅದಕ್ಕೆ ಗಾಯವಾಗಿರುವುದು. ಇದನ್ನು ಚಿಲ್ಲಿಂಗ್ ಇಂಜ್ಯೂರಿ ಎನ್ನಲಾಗುತ್ತದೆ. ಶೀತದಿಂದಾಗಿ ಆಲೂಗಡ್ಡೆಯ ಪಿಶ್ಟವು ಸಕ್ಕರೆಯಾಗಿ ಬದಲಾಗುತ್ತದೆ. ಕೆಲವೊಮ್ಮೆ ಆಲೂಗಡ್ಡೆಯ ಚೀಲಗಳನ್ನು ಆಕಡೆ ಈಕಡೆ ಹೊರಳಿಸಿದಾಗಲೂ, ಎತ್ತಿ ಹಾಕಿದಾಗಲೂ ಗಾಯಗೊಳ್ಳುತ್ತವೆ. ಪೆಟ್ಟು ಬಿದ್ದಾಗ ಅದರ ಜೀವಕೋಶದ ಗೋಡೆಗಳು ಕಿಣ್ವವನ್ನು ಬಿಡುಗಡೆ ಮಾಡುತ್ತವೆ. ಆ ವೇಳೆಯಲ್ಲಿಯೂ ಆಲೂಗಡ್ಡೆಯ ಒಳಬಾಗ ಕಪ್ಪಾಗುತ್ತವೆ. ಈ ಕಪ್ಪು ಕಲೆಗಳು ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎನ್ನುವ ಅಬಿಪ್ರಾಯವಿದೆ.
ಆಲೂಗಡ್ಡೆ ಸಹ ಇತರೆ ತರಕಾರಿಗಳಂತೆ ಜೀವಸತ್ವಗಳ ಕಣಜ, ಆರೋಗ್ಯ ವರ‍್ದಕ. ಇದರ ಅನಿಯಮಿತ ಸೇವನೆಯಿಂದ ಮಾತ್ರ ಅಸಿಡಿಟಿ, ವ್ರುದ್ದರಲ್ಲಿ ಕೈ ಕಾಲು ಹಿಡಿಯುವುದು ಈ ರೀತಿಯ ಅಡ್ಡ ಪರಿಣಾಮಗಳು ಕೇಳಿಬರುವುದು. ಆಲೂಗಡ್ಡೆಯನ್ನು ಸ್ಟಾರ‍್ಚ್, ಆಲ್ಕೋಹಾಲ್ ತಯಾರಿಕೆ, ಮುಂತಾದ ಔದ್ಯಮಿಕ ಉದ್ದೇಶಗಳಿಗಾಗಿ ಕೂಡ ಬಳಸಲಾಗುತ್ತದೆ. ಆಲೂ ಕೈಗೆಟುಕುವ ಸುಲಬ ದರದಲ್ಲಿ ಸಿಗುವುದಲ್ಲದೇ, ಅಡುಗೆಯಲ್ಲಿ ಬೇಗ ಬೇಯುತ್ತದೆ. ಇದು ಬೆಂದಾಗ ಮೆಲ್ಲಲು ಮೆತ್ತಗಿರುವುದರಿಂದ ಮಕ್ಕಳು, ಹಿರಿಯರೆಂದು ಬೇದ ಮಾಡದೇ ಎಲ್ಲರಿಗೂ ತುಂಬಾ ಪ್ರಿಯವಾದ ತರಕಾರಿ ಎನಿಸಿದೆ.
( ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು