ಬ್ರೆಕ್ಟ್ ಕವನಗಳ ಓದು – 13 ನೆಯ ಕಂತು

– ಸಿ.ಪಿ.ನಾಗರಾಜ.

*** ಕಗ್ಗತ್ತಲ ಕಾಲದಲ್ಲಿ ***

(ಕನ್ನಡ ಅನುವಾದ: ಶಾ.ಬಾಲುರಾವ್)

ಕಗ್ಗತ್ತಲ ಕಾಲದಲ್ಲಿ
ಹಾಡುವುದೂ ಉಂಟೆ
ಹೌದು… ಹಾಡುವುದೂ ಉಂಟು
ಕಗ್ಗತ್ತಲ ಕಾಲವನ್ನು ಕುರಿತು.

ಮಾನವ ಸಮುದಾಯವು ಒಲವು ನಲಿವು ನೆಮ್ಮದಿಯಿಂದ ಜತೆಗೂಡಿ ಬಾಳುವುದಕ್ಕೆ ಆಗದಂತಹ ಕೆಡುಕಿನ ಸನ್ನಿವೇಶ ಉಂಟಾದಾಗ, ಬರಹಗಾರರು ಎದೆಗುಂದಿ ಹಿಂಜರಿದು ಸುಮ್ಮನಾಗದೆ, ತಮ್ಮ ಮಾತು ಮತ್ತು ಬರಹದ ಮೂಲಕ ಅಂತಹ ಕೆಡುಕು ಉಂಟಾಗಲು ಕಾರಣವಾದ ವಾಸ್ತವದ ಸಂಗತಿಗಳನ್ನು ಜನರಿಗೆ ಮನದಟ್ಟು ಮಾಡಿಸಿ, ಕೆಡುಕಿನ ಎದುರಾಗಿ ಒಗ್ಗೂಡಿ ಹೋರಾಡುವ ಮನೋಬಲವನ್ನು ಜನರಲ್ಲಿ ಮೂಡಿಸುವ ಕೆಲಸವನ್ನು ಮಾಡಬೇಕೆಂಬ ಸಂಗತಿಯನ್ನು ಈ ಕವನದಲ್ಲಿ ಹೇಳಲಾಗಿದೆ.

ಕರಿದು+ಕತ್ತಲು>ಕರ‍್ಗತ್ತಲು>ಕಗ್ಗತ್ತಲು.

ಕರಿದು=ಕಪ್ಪು ಬಣ್ಣ; ಕತ್ತಲು=ಬೆಳಕು ಇಲ್ಲದಿರುವುದು; ಕಗ್ಗತ್ತಲು=ತುಸುವಾದರೂ ಬೆಳಕಿಲ್ಲದೆ ಸಂಪೂರ‍್ಣವಾಗಿ ಕತ್ತಲು ಕವಿದಿರುವುದು;

ಈ ಕವನದ ತಲೆಬರಹವಾದ ‘ಕಗ್ಗತ್ತಲ ಕಾಲ’ ಎಂಬ ನುಡಿಗಟ್ಟು ಒಂದು ರೂಪಕವಾಗಿ ಬಳಕೆಯಾಗಿದೆ.

ಮಾನವ ಸಮುದಾಯ ನೆಮ್ಮದಿಯಿಂದ ಬಾಳುವುದಕ್ಕೆ ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ, ಆರೋಗ್ಯದ ಸಂಗತಿಗಳು ಅತ್ಯಗತ್ಯವಾಗಿರುವಂತೆಯೇ ಜನರು ಪರಸ್ಪರ ಪ್ರೀತಿ, ಕರುಣೆ, ಸಮಾನತೆ ಮತ್ತು ಗೆಳೆತನದಿಂದ ಬಾಳುವಂತಹ ಸಾಮಾಜಿಕ ಪರಿಸರವಿರಬೇಕು.

ಆದರೆ ನಾಡಿನ ಆಡಳಿತ ಗದ್ದುಗೆಯಲ್ಲಿರುವ ವ್ಯಕ್ತಿಗಳು, ಮೇಲು ಜಾತಿಯ ಜನರು ಮತ್ತು ಸಿರಿವಂತರು ಜತೆಗೂಡಿ ತಮ್ಮ ಸಂಪತ್ತನ್ನು ಮತ್ತು ಅದಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ನಾಡಿನ ಜನಸಮುದಾಯಗಳ ನಡುವೆ ಜನಾಂಗ, ಜಾತಿ, ದರ‍್ಮ ಮತ್ತು ದೇವರ ಹೆಸರಿನಲ್ಲಿ ಅಸೂಯೆ, ಅನುಮಾನ, ಹಗೆತನ ಮತ್ತು ಸೇಡಿನ ಬಾವನೆಗಳನ್ನು ಕೆರಳಿಸಿ, ಜನರು ತಮ್ಮತಮ್ಮಲ್ಲಿಯೇ ಕಚ್ಚಾಟ ಕಾದಾಟ, ಕೊಲೆ ಸುಲಿಗೆಯಲ್ಲಿ ತೊಡಗುವಂತೆ ಬಹುಬಗೆಯ ಹುನ್ನಾರಗಳನ್ನು ಮಾಡುತ್ತಿರುತ್ತಾರೆ, ಆಡಳಿತದ ತಪ್ಪುಗಳನ್ನು ಎತ್ತಿತೋರಿಸುವವರನ್ನು ‘ದೇಶದ್ರೋಹಿಗಳು’-‘ದರ‍್ಮದ್ರೋಹಿಗಳು’-‘ಬಯೋತ್ಪಾದಕರು’ ಎಂದು ಆಪಾದಿಸಿ ಸೆರೆಮನೆಗೆ ತಳ್ಳುವ, ಹಿಂಸಿಸುವ ಮತ್ತು ಕೊಲ್ಲುವ ಕ್ರೂರತನಕ್ಕೆ ಆಡಳಿತದ ಗದ್ದುಗೆಯಲ್ಲಿ ಕುಳಿತಿರುವವರು ಮುಂದಾಗುತ್ತಾರೆ.

ಆಡಳಿದ ಗದ್ದುಗೆಯಲ್ಲಿ ಕುಳಿತವರ ಬೆಂಬಲದಿಂದ ಮೇಲುಜಾತಿಯವರು ಕೆಳಜಾತಿಗಳ ಜನರ ಮೇಲೆ ಮತ್ತು ಪ್ರಬಲ ಕೋಮಿನವರು ದುರ‍್ಬಲ ಕೋಮಿನವರ ಮೇಲೆ ದೇಶದಲ್ಲಿ ಜಾರಿಯಲ್ಲಿರುವ ಕಾನೂನನ್ನು ಲೆಕ್ಕಿಸದೆ ನಡೆಸುವ ದಬ್ಬಾಳಿಕೆ ಹಾಗೂ ಮಾಡುವ ಹಿಂಸಾಚಾರಕ್ಕೆ ಅಡೆತಡೆಗಳೇ ಇಲ್ಲವಾಗುತ್ತವೆ. ಜನಸಾಮಾನ್ಯರು ನೆಮ್ಮದಿಯಿಂದ ಜೀವನವನ್ನು ನಡೆಸಲು ದಿಕ್ಕುತೋಚದಂತಾಗಿ, ಸಾವು ನೋವಿನ ಆತಂಕದಿಂದಲೇ ಬದುಕಿನ ಪ್ರತಿಯೊಂದು ಗಳಿಗೆಯನ್ನು ಎಣಿಸುತ್ತಿರುತ್ತಾರೆ. ಇಂತಹ ಕಾಲವನ್ನು ಕಗ್ಗತ್ತಲ ಕಾಲವೆಂಬ ರೂಪಕ ಚಿತ್ರಿಸುತ್ತದೆ.

ಹಾಡು=ಮಾನವರು ತಮ್ಮ ಜೀವನದ ನೋವು ನಲಿವುಗಳನ್ನು, ಮನದಲ್ಲಿ ಮೂಡುವ ಕಲ್ಪನೆಗಳನ್ನು ಮತ್ತು ಚಿಂತನೆಗಳನ್ನು ಇಂಪಾದ ದನಿಯಲ್ಲಿ ನಾದಮಯವಾಗಿ ಹೊರಹೊಮ್ಮಿಸುವ ನುಡಿ;

ಹಾಡುವುದೂ ಉಂಟೆ=ಎದೆತುಂಬಿ ಹಾಡುತ್ತಾರೆಯೇ / ಪಟ್ಟಪಾಡೆಲ್ಲವನ್ನೂ ಹಾಡುವುದಕ್ಕೆ ಆಗುತ್ತದೆಯೇ;

ಹೌದು=ಆಗುವುದು; ಹಾಡುವುದೂ ಉಂಟು=ಹಾಡುವುದು ಕಂಡುಬರುತ್ತದೆ; ಕುರಿತು=ಉದ್ದೇಶಿಸಿ;

ಕಗ್ಗತ್ತಲ ಕಾಲವನ್ನು ಕುರಿತು ಹಾಡುವುದು=ಕಗ್ಗತ್ತಲ ಕಾಲ ಉಂಟಾಗಲು ಕಾರಣಗಳೇನು ಎಂಬುದನ್ನು ಜನಮನಕ್ಕೆ ಅರಿವಾಗುವಂತೆ ವಿವರಿಸಿ ಹೇಳಿ, ಕಗ್ಗತ್ತಲು ಕವಿದಿರುವ ಎಡೆಯಲ್ಲಿ ಬೆಳಕು ಹರಿಯುವಂತೆ ಮಾಡಲು ಏನನ್ನು ಮಾಡಬೇಕೆಂಬುದನ್ನು ಜನರಿಗೆ ತಿಳಿಸುವ ಹೊಣೆಗಾರಿಕೆಯು ಬರಹಗಾರರ ಪಾಲಿಗೆ ಇರುತ್ತದೆ. ಜನಮನದಲ್ಲಿ ಕವಿದಿರುವ ಹಗೆತನ ಮತ್ತು ಕ್ರೂರತನದ ಒಳಮಿಡಿತಗಳ ಕತ್ತಲೆಯನ್ನು ಹೋಗಲಾಡಿಸಿ, ಜನಮನದಲ್ಲಿ ಪರಸ್ಪರ ಪ್ರೀತಿ-ಕರುಣೆ-ಸಮಾನತೆ ಮತ್ತು ಗೆಳೆತನದಿಂದ ಕೂಡಿದ ಮಾನವೀಯತೆಯ ಬೆಳಕನ್ನು ಪಸರಿಸುವಂತಹ ಸಂಗತಿಗಳನ್ನು ಬರಹಗಾರರು ಹೇಳಬೇಕು.

ಈ ಕವನದಲ್ಲಿ ನಿರೂಪಣೆಗೊಂಡಿರುವ ಸಂಗತಿಗಳನ್ನು ಬ್ರೆಕ್ಟ್ ಅವರ ಜೀವನದ ಹಿನ್ನೆಲೆಯಲ್ಲಿಯೂ ನೋಡಬಹುದು.

ಬ್ರೆಕ್ಟ್ ಅವರು ‘ಕಗ್ಗತ್ತಲ ಕಾಲದಲ್ಲಿ’ ಎಂಬ ಈ ಕವನವನ್ನು ಕ್ರಿಶ 1939 ರಲ್ಲಿ ಸ್ವೀಡನ್ ದೇಶದಲ್ಲಿದ್ದಾಗ ರಚಿಸಿದರು. ಈ ವೇಳೆಗಾಗಲೇ ಜರ‍್ಮನಿಯಲ್ಲಿ ಹಿಟ್ಲರನ ಜನಾಂಗೀಯ ದಾಳಿಯಲ್ಲಿ ಯಹೂದಿಗಳ ಮೇಲೆ ಹಲ್ಲೆ, ಕೊಲೆ, ಸುಲಿಗೆ ಹೆಚ್ಚಾಗಿದ್ದವು. ಹಿಟ್ಲರನ ನಿರಂಕುಶ ಆಡಳಿತದ ವಿರುದ್ದವಾಗಿ ಜನರಲ್ಲಿ ಎಚ್ಚರವನ್ನು ಮೂಡಿಸುತ್ತಿದ್ದ ಬರಹಗಾರರ ಪುಸ್ತಕಗಳನ್ನು ಬಹಿರಂಗವಾಗಿ ಸುಟ್ಟು, ಬರಹಗಾರರನ್ನು ಸೆರೆಮನೆಗೆ ತಳ್ಳುವ ಮತ್ತು ಕೊಲ್ಲುವ ಯೋಜನೆಯನ್ನು ನಾಜಿ ಸರ‍್ಕಾರ ಹಾಕಿಕೊಂಡಿತ್ತು. ಈ ಪಟ್ಟಿಯಲ್ಲಿ ಯಹೂದಿ ಜನಸಮುದಾಯಕ್ಕೆ ಸೇರಿದ್ದ ಬ್ರೆಕ್ಟ್ ಅವರು ಹೆಸರು ಇತ್ತು.

ಹಿಟ್ಲರನ ಕೆಂಗಣ್ಣಿಗೆ ಗುರಿಯಾಗಿದ್ದ ಬ್ರೆಕ್ಟ್ ಅವರು ಕ್ರಿ.ಶ. 1933 ರಲ್ಲಿ ಬರ‍್ಲಿನ್ ನಗರವನ್ನು ತೊರೆದು ದೇಶಾಂತರವಾಸಿಯಾಗಿ ಆಸ್ಟ್ರಿಯಾ, ಡೆನ್ಮಾರ‍್ಕ್, ಸ್ವೀಡನ್, ಸ್ವಿಟ್ಜರ್ ಲ್ಯಾಂಡ್, ಪ್ರಾನ್ಸ್ ಗಳಲ್ಲಿ ಕೆಲವು ವರುಶಗಳ ಕಾಲ ಇದ್ದು, 1941 ರಲ್ಲಿ ಅಮೆರಿಕ ದೇಶಕ್ಕೆ ಬಂದು ನೆಲೆಸಿದರು. ಹಿಟ್ಲರ್ ನ ಮರಣದ ನಂತರ, ಅಮೆರಿಕ ದೇಶದಿಂದ ಯುರೋಪಿಗೆ 1947 ರಲ್ಲಿ ಹಿಂತಿರುಗಿ ಬಂದು, ಪೂರ‍್ವ ಜರ‍್ಮನಿಯ ಬರ‍್ಲಿನ್ ನಗರದಲ್ಲಿ ನೆಲೆಗೊಂಡು 1956 ರಲ್ಲಿ ಮರಣಹೊಂದುವ ತನಕ ರಂಗ ಚಟುವಟಿಕೆಯಲ್ಲಿ ತೊಡಗಿದರು.

ಬ್ರೆಕ್ಟ್ ಅವರು ದೇಶಾಂತರವಾಸಿಯಾಗಿ ಸುಮಾರು ಹದಿನಾಲ್ಕು ವರುಶ ಬೇರೆ ಬೇರೆ ದೇಶಗಳಲ್ಲಿದ್ದರೂ ತಮ್ಮ ಕತೆ, ಕವನ ಮತ್ತು ನಾಟಕಗಳ ಮೂಲಕ ಜನಾಂಗಿಯ ಹಗೆತನದ ಆಡಳಿತದ ದಬ್ಬಾಳಿಕೆಯನ್ನು ಮತ್ತು ಸಂಪತ್ತಿನ ಹಂಚಿಕೆಯಲ್ಲಿರುವ ಅಸಮಾನತೆಯನ್ನು ತೊಲಗಿಸುವಂತಹ ವಿಚಾರಗಳನ್ನು ಜನಮನದಲ್ಲಿ ಬಿತ್ತುತ್ತ; ದುಡಿಯುವ ಶ್ರಮಜೀವಿಗಳ ಕೊಡುಗೆಯಿಂದ ಮಾನವ ಸಮುದಾಯ ಉಳಿದು ಬೆಳೆದು ಬಾಳುತ್ತಿರುವುದನ್ನು ಚಿತ್ರಿಸುತ್ತ; “ಸರ‍್ವರಿಗೂ ಸಮ ಪಾಲು; ಸರ‍್ವರಿಗೂ ಸಮ ಬಾಳು” ಎಂಬ ಕಾರ‍್ಲ್ ಮಾರ‍್ಕ್ಸ್ ಅವರ ತತ್ವಗಳನ್ನು ಪ್ರತಿಪಾದಿಸುತ್ತ, ಜಗತ್ತಿನಲ್ಲಿರುವ ಇಡೀ ಮಾನವಸಮುದಾಯದ ಒಳಿತಿನ ಬಗ್ಗೆ ಚಿಂತಿಸುತ್ತ ಸದಾಕಾಲ ಕ್ರಿಯಾಶೀಲರಾಗಿದ್ದರು.

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: