ಯಮನ ಗೆದ್ದ ಬಾಲಕ

– .

ಪುಟ್ಟ ಬಾಲಕನೊಬ್ಬನು ಯಮನ ಗೆದ್ದಂತಹ
ಕತೆಯೊಂದ ನಾ ಹೇಳುವೆ ಕೇಳಿರಿ ಮಕ್ಕಳೆ
ಸಾವಿರಾರು ವರ‍್ಶಗಳ ಹಿಂದೆ ಬನದಲ್ಲೊಂದು
ತವಸಿಗಳಾಶ್ರಮವಿತ್ತು ಕೇಳಿರಿ ಮಕ್ಕಳೆ

ವಿಶ್ವವರಾದೇವಿ ಉದ್ದಾಲಕರೆಂಬ ದಂಪತಿಗಳು
ಸಂತಾನ ಬಾಗ್ಯವಿಲ್ಲದೆ ನಿತ್ಯ ಕೊರುಗುತ್ತಿದ್ದರು
ಆಶ್ರಮದ ಮುನಿಗಳ ಮಾತಿನಂತೆ ದಂಪತಿಗಳು
ಪುತ್ರಕಾಮೇಶ್ಟಿ ಯಾಗದಿ ಪುತ್ರರತ್ನವ ಪಡೆದರು

ಯಾಗದ ಪಲದಿ ಜನಿಸಿದ ಮುದ್ದು ಮಗುವಿಗೆ
ನಚಿಕೇತನೆಂದು ನಾಮಕರಣ ಮಾಡಿದರು
ಉಪನಯನದ ಬಳಿಕ ಗುರುಕುಲಕ್ಕೆ ಕಳಿಸಿ
ವೇದಾದ್ಯಯನಗಳ ಶಿಕ್ಶಣವನು ನೀಡಿದರು

ಒಮ್ಮೆ ಉದ್ದಾಲಕ ವಿಶ್ವಜೀತ್ ಯಾಗವ ಮಾಡಿ
ಬ್ರಾಹ್ಮಣರಿಗೆ ಬಡಕಲು ಗೋವುಗಳ ದಾನಗೈದ
ಪಿತನೀ ಕಾರ‍್ಯದಿ ಮನನೊಂದು ನಚಿಕೇತನು
ತನ್ನನ್ನು ಯಾರಿಗೆ ದಾನಗೈಯುವೆ ಎಂದು ಪ್ರಶ್ನಿಸಿದ

ಯಮನಿಗೆ ನಿನ್ನ ದಾನಗೈಯುವೆ ಎಂದೊಡನೆ
ನಚಿಕೇತ ತಪೋಬಲದಿ ಯಮಲೋಕ ತಲುಪಿದ
ಸಂಯಮಿನೀ ಪುರದಲಿ ಜವರಾಯನಿರದಿರಲು
ಯಮ ಬರುವತನಕ ಮೂರುದಿನ ಕಾದು ಕುಳಿತ‌

ತನಗಾಗಿ ಕಾದ ನಚಿಕೇತನ ಶ್ರದ್ದಾ ಬಕ್ತಿಗೆ ಮೆಚ್ಚಿ
ಮೂರು ವರಗಳನು ಯಮದರ‍್ಮ ಕರುಣಿಸಿದ
ತಾನು ಪಡೆದ ಮೊದಲ ವರದಿಂದ ಪಿತನ ಕೋಪ
ಅಳಿದು ಹೋಗಲೆಂದು ಯಮನಲಿ ಪ್ರಾರ‍್ತಿಸಿದ

ಎರಡನೇ ವರದಿಂದ ಜನನ ಮರಣವರಿಯುವ
ಅಗ್ನಿ ವಿದ್ಯೆಯ ತನಗೆ ಬೋದಿಸಿರೆಂದು ಕೋರಿದ
ಮೂರನೇ ವರದಿಂದ ಜೀವ ಚೇತನವೆನಿಸಿರುವ
ಆತ್ಮ ವಿದ್ಯೆಯ ತನಗೆ ಅನುಗ್ರಹಿಸಿರೆಂದು ಬೇಡಿದ‌.

ನಚಿಕೇತನ ಕತೆಯ ನೀತಿಯ ಕಿರಿದಾಗಿ ಹೇಳುವೆ
ಕಿವಿಗೊಟ್ಟು ಕೇಳಿರಿ ನನ್ನ ಮುದ್ದು ಮಕ್ಕಳೆ
ಕಲಿಯುವ ಶ್ರದ್ದೆ, ಆತ್ಮ ವಿಶ್ವಾಸ ಮನದೊಳಗಿದ್ದರೆ
ಸಾದನೆಯ ಶಿಕರವೇರಬಹುದು ಮುದ್ದು ಮಕ್ಕಳೆ.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: