ಹೊರಬಾನು ಅಚ್ಚರಿಗಳ ತೊಟ್ಟಿಲು

– ನಿತಿನ್ ಗೌಡ.

human brain

ಈ ಜಗತ್ತು, ಹೊರಬಾನು ಅಚ್ಚರಿಗಳ ತೊಟ್ಟಿಲು ಎಂಬುದರಲ್ಲಿ ಸೋಜಿಗವೇನಿಲ್ಲ. ಇಂತಹ ಇರುವಿಕೆಯಲ್ಲಿ; ನಮ್ಮ ಲೋಕದಲ್ಲಿ ನಾವೇ ಕಟ್ಟುಪಾಡುಗಳನ್ನು, ಗಡಿಗಳನ್ನು ಹಾಕಿಕೊಂಡು, ಕಳೆದುಹೋಗಿರುತ್ತೇವೆ. ನಾಡು, ಗಡಿ, ಬಾಶೆ, ಸಂಸ್ಕ್ರುತಿ, ಆಚರಣೆ, ದರ್‍ಮ ಹೀಗೆ ಲೆಕ್ಕವಿಲ್ಲದಶ್ಟು ಗುರುತುಗಳನ್ನು ಕಟ್ಟಿಕೊಂಡು ಬಾಳುತ್ತೇವೆ. ಇಲ್ಲಿ ನಿಂತು ನೋಡಿದಾಗ; ನಮ್ಮ ನಮ್ಮ ನಡುವೆ ಬಹಳಶ್ಟು ವ್ಯತ್ಯಾಸಗಳು ಕಾಣಬಹುದು. ಇದೊಂದು ದ್ರುಶ್ಟಿಕೋನ ಅಶ್ಟೆ.

ಬೂಮಿ, ಹಾಲ್ಗಡಲು ಅರಿಲ್ವಳಿಯಲ್ಲಿ( Milky way galaxy) ಇರುವ ಒಂದು ಸಾದಾರಣ ಗಾತ್ರದ ಅರಿಲ್ ಆದ, ನೇಸರನ ಬಳಗದಲ್ಲಿ ಇರುವ ಒಂದು ಪುಟ್ಟ ಸುತ್ತುಗವಶ್ಟೇ!(Planet). ಜಗತ್ತಿನಲ್ಲಿ ಇಂತಹ ಕೋಟ್ಯಾಂತರ ಅರಿಲ್ವಳಿಗಳಿವೆ, ನೋಟ ಬೀರಿದಶ್ಟು, ಊಹೆಗೆ ನಿಲುಕದಶ್ಟು ನೇಸರಗಳಿವೆ. ಇನ್ನೂ ಸುತ್ತುಗಗಳಿಗೆ ಲೆಕ್ಕವಿಲ್ಲ! ಹಾಗೆ ಇಶ್ಟೆಲ್ಲ ಇದ್ದರೂ ಎಲ್ಲಾ ಕಡೆ ಜೀವಸಂಕುಲವಿದೆಯೆಂದೇನಿಲ್ಲ! ಆದರೆ ನಮ್ಮ ಬೂಮಿಯಲ್ಲಿ ಜೀವಸಂಕುಲವಿದೆ! ಈ ಹೊರಬಾನಿನಲ್ಲಿ ನಡೆಯುವ ನಿರಂತರ ದಾಳಿ, ಚಟುವಟಿಕೆಗಳ ನಡುವೆಯೂ ನಮ್ಮಲ್ಲಿ ಜೀವಸಂಕುಲ ಇನ್ನೂ ಉಸಿರಾಡುತ್ತಿದೆ.

ನಾವು ಒಂದು ಬಾರಿ ನಮ್ಮ ಇಳೆಯನ್ನು ಹೊರಬಾನಿನಿಂದ ನೋಡಿದಾಗ, ಈ ಅನಂತ ಬ್ರಹ್ಮಾಂಡದಲ್ಲಿ ನಾವೊಂದು ಪುಟ್ಟ ಸಂಗತಿಯಶ್ಟೆ ಎನ್ನುವುದು ತಿಳಿಯುತ್ತದೆ. ಮತ್ತು ಈ ಮೇಲಿನ ಸಂಗತಿಗಳನ್ನು ಗಮನಿಸಿದಾಗ; ಇಳೆಯನ್ನು ನಮ್ಮ ಮನೆ ಅಂದುಕೊಂಡಾಗ; “ನಾವೆಲ್ಲರೂ ಬಿನ್ನವಾಗಿರುವುದಕ್ಕಿಂತ, ಒಂದೇ ಆಗಿದ್ದೇವೇನೋ” ಎನ್ನುವ ಬಾವ ಮನದೊಳಗೆ ಮೂಡಿ, ಸುಪ್ತ ಮನಸ್ಸಿನ್ನೊಳಗೊಂದು ಪ್ರಜ್ನೆ ಜಾಗ್ರುತವಾದಂತೆ ಅನ್ನಿಸುವುದಿಲ್ಲವೇ! ಮುಂದುವರಿದು, ನಾವು ಇಳೆಯಲ್ಲಿ ನಡೆಸುವ ರಾಜಕೀಯ, ಕಚ್ಚಾಟ ನಾವೆಶ್ಟು ನಮ್ಮಿಂದ ದೂರವಾಗಿದ್ದೇವೆ ಎನ್ನುವುದನ್ನು ತೋರುವುದಿಲ್ಲವೇ!

ಇಂತಹ ಅನಂತ ಬ್ರಹ್ಮಾಂಡದ ಹಿರಿತನದ ಅತವಾ ಅದರ ಕೆಲವು ಅಚ್ಚರಿಗಳನ್ನು ತಿಳಿಯುತ್ತಾ, ಅದನ್ನು ನಮ್ಮ ಇಳೆಗೆ ತಳುಕು ಹಾಕಿಕೊಂಡು ತುಲನಾತ್ಮಕವಾಗಿ ನೋಡುತ್ತಾ; ಆ ಮೂಲಕ ಇಲ್ಲಿನ ನಮ್ಮ ಜೀವಯಾನವನ್ನು ಅದರೊಟ್ಟಿಗಿನ ಸಾರ್‍ತಕತೆಯನ್ನು ಕಾಣುವ ಮೊಗಸನ್ನು ಮುಂದಿನ ಕಂತಿನಲ್ಲಿ ನೋಡೋಣ.

( ಚಿತ್ರಸೆಲೆ: generativeai )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks