ಬ್ರೆಕ್ಟ್ ಕವನಗಳ ಓದು – 15 ನೆಯ ಕಂತು

ಸಿ.ಪಿ.ನಾಗರಾಜ.

*** ಊರುಗೋಲುಗಳು ***

(ಕನ್ನಡ ಅನುವಾದ: ಅಂಕುರ್ ಬೆಟಗೇರಿ)

ಏಳು ವರ್ಷ ನಾನೊಂದೂ ಹೆಜ್ಜೆಯನ್ನು ನಡೆಯಲಿಲ್ಲ
ವೈದ್ಯ ಮಹಾಶಯನ ಬಳಿ ಬಂದಾಗ
ಅವ ಕೇಳಿದ: ಏಕೆ, ಈ ಊರುಗೋಲುಗಳು?
ನಾನೆಂದೆ: ನಾನು ಹೆಳವ.

ಅವನು ಉತ್ತರಿಸಿದ: ಅದರಲ್ಲೇನೂ ಆಶ್ಚರ್ಯವಿಲ್ಲ
ಇನ್ನೊಂದು ಬಾರಿ
ಪ್ರಯತ್ನವನ್ನಾದರೂ ಮಾಡುವಂಥವನಾಗು
ನೀನೇನಾದರೂ ಹೆಳವನಾಗಿದ್ದರೆ
ಅದು ಈ ಊರುಗೋಲುಗಳಿಂದ
ಆದ್ದರಿಂದ ಬೀಳು…ನೆಲದ ಮೇಲೆ ತೆವಳು.

ಅವನು ನನ್ನ ಪ್ರೀತಿಯ ಊರುಗೋಲುಗಳನ್ನು
ತೆಗೆದುಕೊಂಡು… ನಗುತ್ತಾ
ದೈತ್ಯನಂತೆ ಮುಖ ಕಿವುಚುತ್ತಾ
ಅವುಗಳನ್ನು ನನ್ನ ಬೆನ್ನ ಹಿಂದೆ ಹಿಡಿದು ಮುರಿದ
ಬೆಂಕಿ ಒಲೆಯೊಳಗೆ ಎಸೆದ.

ಈಗ ನಾನು ಸರಿಹೋಗಿದ್ದೇನೆ
ನಾನು ನಡೆಯಬಲ್ಲೆ
ಬರೀ ನಗುವಿನಿಂದಲೇ ನಾನು ವಾಸಿಯಾಗಿದ್ದೇನೆ
ಆದರೆ… ಕೆಲವೊಮ್ಮೆ
ಊರುಗೋಲುಗಳನ್ನು ನೋಡಿದಾಗ
ನನ್ನ ನಡಿಗೆ
ಕೆಲವು ಗಂಟೆಗಳ ತನಕ ಕಷ್ಟಕರವಾಗುತ್ತದೆ.

ವ್ಯಕ್ತಿಯು ತನ್ನ ಮಯ್ ಮನವನ್ನು ಆವರಿಸಿಕೊಂಡಿರುವ ಪರಾವಲಂಬಿತನವನ್ನು ತೊಡೆದುಕೊಂಡು, ತನ್ನಲ್ಲಿ ತಾನು ನಂಬಿಕೆಯನ್ನು ತಳೆದು, ಸ್ವಾವಲಂಬಿಯಾಗಿ ಬಾಳಬೇಕಾದ ಅಗತ್ಯವನ್ನು ಈ ಕವನದಲ್ಲಿ ನಾಟಕೀಯ ಪ್ರಸಂಗವೊಂದರ ಮೂಲಕ ಚಿತ್ರಿಸಲಾಗಿದೆ.

ಪರಾವಲಂಬಿತನ=ವ್ಯಕ್ತಿಯು ಇತರರನ್ನು ಆಶ್ರಯಿಸಿ, ಜೀವನದ ಉದ್ದಕ್ಕೂ ಬೇರೆಯವರ ನೆರವಿನಿಂದಲೇ ತನ್ನ ಬದುಕನ್ನು ನಡೆಸುವುದು;

ಸ್ವಾವಲಂಬಿತನ=ವ್ಯಕ್ತಿಯು ಜೀವನದ ಉದ್ದಕ್ಕೂ ಪ್ರಯತ್ನಶೀಲತೆ ಮತ್ತು ದಿಟ್ಟತನದ ನಡೆನುಡಿಯಿಂದ ತನ್ನ ಬದುಕನ್ನು ರೂಪಿಸಿಕೊಂಡು ಬಾಳುವುದು;

ಊರುಗೋಲುಗಳನ್ನು ಆಶ್ರಯಿಸಿ ನಡೆದಾಡುವ ವ್ಯಕ್ತಿ ಮತ್ತು ರೋಗಗಳನ್ನು ಗುಣಪಡಿಸುವ ಡಾಕ್ಟರ್ ನಡುವಣ ಮಾತುಕತೆಯಿಂದ ಕವನ ಮೊದಲುಗೊಳ್ಳುತ್ತದೆ;

ಊರು+ಕೋಲು=ಊರುಗೋಲು; ಊರು=ಗಟ್ಟಿಯಾಗಿ ನಿಲ್ಲು/ನೆಲೆಯಾಗಿ ನಿಲ್ಲು; ಕೋಲು=ದೊಣ್ಣೆ/ಬಡಿಗೆ/ಮರದ ಉದ್ದನೆಯ ತುಂಡು;

ಊರುಗೋಲು=ವ್ಯಕ್ತಿಯು ನಡೆಯುವಾಗ ಬೀಳುವುದನ್ನು ತಡೆಗಟ್ಟಲೆಂದು ಕಯ್ಯಲ್ಲಿ ಹಿಡಿಯುವ ಕೋಲು ಇಲ್ಲವೇ ಕಂಕುಳಿನಲ್ಲಿ ಇಟ್ಟುಕೊಳ್ಳುವ ಕೋಲು / ಕುಂಟನಾದ ಅಂದರೆ ಎರಡು ಕಾಲುಗಳಲ್ಲಿ ಯಾವುದಾದರೂ ಒಂದು ಕಾಲನ್ನು ನೆಲದ ಮೇಲೆ ಊರಿ ನಡೆಯಲಾಗದ ವ್ಯಕ್ತಿಯು ಕಾಲಿಗೆ ಬದಲು ಆಸರೆಯಾಗಿ ಬಳಸುವ ಕೋಲು;

ಮಹಾಶಯ=ಗಂಡಸಿಗೆ ಹೆಚ್ಚಿನ ಮನ್ನಣೆಯನ್ನು ನೀಡುವಾಗ ಬಳಸುವ ಪದ/ದೊಡ್ಡ ವ್ಯಕ್ತಿ; ಹೆಳವ=ಕುಂಟ/ಕಾಲಿಲ್ಲದವನು;

ಏಳು ವರ್ಷ ನಾನೊಂದೂ ಹೆಜ್ಜೆಯನ್ನು ನಡೆಯಲಿಲ್ಲ. ವೈದ್ಯ ಮಹಾಶಯನ ಬಳಿ ಬಂದಾಗ, ಅವ ಕೇಳಿದ: ಏಕೆ, ಈ ಊರುಗೋಲುಗಳು…? ನಾನೆಂದೆ: ನಾನು ಹೆಳವ=ಕಳೆದ ಏಳು ವರುಶಗಳಿಂದ ಊರುಗೋಲನ್ನು ಬಿಟ್ಟು ಒಂದು ಹೆಜ್ಜೆಯನ್ನು ಇಟ್ಟಿಲ್ಲದ ವ್ಯಕ್ತಿಯೊಬ್ಬ ತನ್ನ ತೊಂದರೆಯನ್ನು ಡಾಕ್ಟರ್ ಬಳಿ ಹೇಳಿಕೊಂಡು ಚಿಕಿತ್ಸೆಯನ್ನು ಪಡೆಯಲು ಬರುತ್ತಾನೆ. ತನ್ನ ಅಂಗವಿಕಲತೆಯನ್ನು ಹೋಗಲಾಡಿಸಿಕೊಳ್ಳಬೇಕೆಂಬ ಮನಸ್ಸು ಈಗ ಈ ವ್ಯಕ್ತಿಗೆ ಬಂದಿದೆ. ಇಂತಹ ಆಲೋಚನೆಯು ಒಂದು ಆರೋಗ್ಯಕರವಾದ ಬೆಳವಣಿಗೆಯಾಗಿದೆ. ಏಕೆಂದರೆ ಯಾವುದೇ ಒಬ್ಬ ವ್ಯಕ್ತಿಯು ತನ್ನ ಮಯ್ ಮನದ ಅರೆಕೊರೆಯನ್ನು ತಾನೇ ಅರಿತುಕೊಂಡು, ಅದನ್ನು ಸರಿಪಡಿಸಿಕೊಳ್ಳಬೇಕೆಂದು ಮನಸ್ಸು ಮಾಡುವುದು ಮೊದಲ ಹಂತವಾಗಿದ್ದರೆ, ತಿಳಿದವರನ್ನು ಸಂಪರ್‍ಕಿಸಿ, ಅವರಿಂದ ಪರಿಹಾರದ ರೀತಿಯನ್ನು ಅರಿತುಕೊಂಡು ಅದರಂತೆ ನಡೆದುಕೊಳ್ಳುವುದು ಎರಡನೆಯ ಹಂತವಾಗಿರುತ್ತದೆ;

ತನ್ನ ಮುಂದೆ ಬಂದು ನಿಂತ ವ್ಯಕ್ತಿಯನ್ನು ಡಾಕ್ಟರ್ ಅಡಿಯಿಂದ ಮುಡಿಯವರೆಗೆ ನೋಡನೋಡುತ್ತಿದ್ದಂತೆಯೇ ಡಾಕ್ಟರಿಗೆ ಒಂದು ವಾಸ್ತವದ ಸಂಗತಿಯು ಮನದಟ್ಟಾಗುತ್ತದೆ. ಅದೇನೆಂದರೆ “ತನ್ನ ಮುಂದೆ ಬಂದು ನಿಂತಿರುವ ವ್ಯಕ್ತಿಯು ನಡೆದಾಡಲು ಊರುಗೋಲುಗಳ ಅಗತ್ಯವಿಲ್ಲ. ತಾನು ಅಂಗವಿಕಲನೆಂಬ ತಪ್ಪುಗ್ರಹಿಕೆಗೆ ಮತ್ತು ಮಾನಸಿಕ ಹಿಂಜರಿಕೆಗೆ ವ್ಯಕ್ತಿಯು ಒಳಗಾಗಿದ್ದಾನೆ. ಆದ್ದರಿಂದ ಈಗ ಈತನಿಗೆ ಬೇಕಾಗಿರುವುದು ಅಂಗಚಿಕಿತ್ಸೆಯಲ್ಲ; ಮಾನಸಿಕ ಚಿಕಿತ್ಸೆ” ಎಂಬ ನಿಲುವನ್ನು ತಳೆದ ಡಾಕ್ಟರ್ ವ್ಯಕ್ತಿಯನ್ನು ಪ್ರಶ್ನಿಸುತ್ತಾನೆ.

“ಏಕೆ…ಈ ಊರುಗೋಲುಗಳು?”. ಆ ವ್ಯಕ್ತಿಯು ಮರುಗಳಿಗೆಯಲ್ಲಿಯೇ “ನಾನು ಹೆಳವ” ಎಂದು ಉತ್ತರಿಸುತ್ತಾನೆ. ತಾನು ಹೆಳವನೆಂಬ ಗ್ರಹಿಕೆಯು ಆತನ ಮನದಲ್ಲಿ ಅಚ್ಚೊತ್ತಿದಂತಿದೆ. ಆದ್ದರಿಂದಲೇ ಆತ ಊರುಗೋಲುಗಳನ್ನು ಆಸರೆಯಾಗಿ ಅವಲಂಬಿಸಿದ್ದಾನೆ.

ತೆವಳು=ಪಾದಗಳ ಸಹಾಯವಿಲ್ಲದೆ ಇಡೀ ದೇಹವನ್ನು ಮುಂದೆ ಮುಂದೆ ಚಲಿಸುವಂತೆ ಮಾಡುವುದು/ದೇಕು;

“ಇನ್ನೊಂದು ಬಾರಿ ಪ್ರಯತ್ನವನ್ನಾದರೂ ಮಾಡುವಂಥವನಾಗು… ನೀನೇನಾದರೂ ಹೆಳವನಾಗಿದ್ದರೆ ಅದು ಈ ಊರುಗೋಲುಗಳಿಂದ… ಆದ್ದರಿಂದ ಬೀಳು… ನೆಲದ ಮೇಲೆ ತೆವಳು”=ಈಗ ಡಾಕ್ಟರ್ ಆ ವ್ಯಕ್ತಿಗೆ ಮಾನಸಿಕ ಚಿಕಿತ್ಸೆಯನ್ನು ನೀಡಲು ಮುಂದಾಗಿ ನೀನು ಕುಂಟನಾಗಿರುವುದಕ್ಕೆ ಈ ಊರುಗೋಲುಗಳು ಇಲ್ಲದೆ ನಡೆಯಲಾರೆನು ಎಂಬ ನಿನ್ನ ಮನದ ಹಿಂಜರಿಕೆ ಕಾರಣವಾಗಿದೆಯೇ ಹೊರತು ನಿನ್ನ ಕಾಲುಗಳಲ್ಲಿ ಯಾವ ಊನತೆಯು ಕಂಡುಬರುತ್ತಿಲ್ಲ ಎಂದು ಹೇಳುತ್ತಾರೆ.

ಡಾಕ್ಟರ್ ತನ್ನ ಬಳಿಬಂದ ವ್ಯಕ್ತಿಯ ಹೆಳವತನ ಎಲ್ಲಿದೆ ಎಂದು ಗುರುತಿಸಿದ್ದು ಮಾತ್ರವಲ್ಲದೆ, ಅದನ್ನು ಸರಿಪಡಿಸಿಕೊಳ್ಳುವ ಜವಾಬ್ದಾರಿಯನ್ನು ಆತನ ಪಾಲಿಗೆ ವಹಿಸುತ್ತಾರೆ. ಯಾವುದೇ ವ್ಯಕ್ತಿಯಾಗಲಿ ತನ್ನ ಮಯ್ ಮನದ ತಪ್ಪುಗ್ರಹಿಕೆಗಳನ್ನು ತಾನೇ ಸರಿಪಡಿಸಿಕೊಳ್ಳಬೇಕೆ ಹೊರತು, ಅವನ್ನು ಮತ್ತೊಬ್ಬರ ಹೇಳಿಕೆಯಿಂದ ಸರಿಪಡಿಸಲು ಆಗುವುದಿಲ್ಲವೆಂಬ ವಾಸ್ತವವನ್ನು ಡಾಕ್ಟರ್ ಅರಿತಿದ್ದಾರೆ. ವ್ಯಕ್ತಿಯ ತಪ್ಪುಗ್ರಹಿಕೆಯನ್ನು ಹೋಗಲಾಡಿಕೊಳ್ಳಲೆಂದು ಅವನಿಗೆ ಸೂಚನೆಯನ್ನು ನೀಡುತ್ತಾರೆ, “ಊರುಗೋಲುಗಳನ್ನು ಅತ್ತ ಬಿಸಾಡು. ಆಗ ನೀನು ನಡೆಯಲಾಗದಿದ್ದರೆ, ಹೆದರಬೇಡ. ಕೆಳಕ್ಕೆ ಬೀಳು. ಬಿದ್ದ ಎಡೆಯಿಂದ ಮತ್ತೊಂದು ಎಡೆಗೆ ತೆವಳುತ್ತಾ ಸಾಗಿ, ಮತ್ತೆ ಮೇಲೆದ್ದು ನಿಲ್ಲಲು ದಿಟ್ಟತನದಿಂದ ಪ್ರಯತ್ನಿಸು”.

ಡಾಕ್ಟರ್ ನೀಡುತ್ತಿರುವ ಸಲಹೆಯ ನುಡಿಗಳು “ಬಿದ್ದ ಕಡೆಯಲ್ಲಿಯೇ ಬಿದ್ದಿರಬಾರದು, ಎಂತಾದರೂ ಮಾಡಿ ಮುಂದೆ ಮುಂದೆ ಸಾಗುತ್ತಿರಬೇಕು. ಹತಾಶೆಗಾಗಲಿ ಇಲ್ಲವೇ ನನ್ನಿಂದಾಗುವುದಿಲ್ಲವೆಂಬ ಹಿಂಜರಿಕೆಗಾಗಲಿ ಒಳಗಾಗದೆ, ವ್ಯಕ್ತಿಯು ತನ್ನ ಶಕ್ತಿಯನ್ನೆಲ್ಲ ಬಳಸಿಕೊಂಡು ಮುನ್ನಡೆಯಲು ಪ್ರಯತ್ನಿಸುತ್ತಲೇ ಇರಬೇಕು” ಎಂಬ ಆತ್ಮವಿಶ್ವಾಸದ ಮತ್ತು ಸ್ವಾವಲಂಬಿತನದ ವ್ಯಕ್ತಿತ್ವವನ್ನು ವ್ಯಕ್ತಿಯ ಮನದಲ್ಲಿ ಮೂಡಿಸುತ್ತಿವೆ;

ದೈತ್ಯ=ರಕ್ಕಸ; ಕಿವುಚು=ಹಿಸುಕು/ಹಿಂಡು; ಮುಖ ಕಿವುಚು=ಇದೊಂದು ನುಡಿಗಟ್ಟು. ಕೋಪ/ತಿರಸ್ಕಾರ/ಅಣಕ ಮುಂತಾದ ಒಳಮಿಡಿತಗಳು ಮನದಲ್ಲಿ ಮೂಡಿದಾಗ, ಮೊಗದ ತೊಗಲಿನ ಸುಕ್ಕುಗಟ್ಟಿದಂತಾಗುತ್ತದೆ; ದೈತ್ಯನಂತೆ ಮುಖ ಕಿವುಚುತ್ತಾ=ರಕ್ಕಸನಂತೆ ಕೋಪೋದ್ರೇಕ ಮತ್ತು ತಿರಸ್ಕಾರವನ್ನು ವ್ಯಕ್ತಪಡಿಸುತ್ತಾ;

ಅವನು ನನ್ನ ಪ್ರೀತಿಯ ಊರುಗೋಲುಗಳನ್ನು ತೆಗೆದುಕೊಂಡು… ನಗುತ್ತಾ… ದೈತ್ಯನಂತೆ ಮುಖ ಕಿವುಚುತ್ತಾ, ಅವುಗಳನ್ನು ನನ್ನ ಬೆನ್ನ ಹಿಂದೆ ಹಿಡಿದು ಮುರಿದ ಬೆಂಕಿ ಒಲೆಯೊಳಗೆ ಎಸೆದ=ಹೆಳವನಾಗಿದ್ದೇನೆಂದು ತೊಳಲಾಡುತ್ತಿದ್ದ ನನಗೆ ಡಾಕ್ಟರ್ ಕೇವಲ ಸಲಹೆಯನ್ನು ಮಾತ್ರ ನೀಡಿ ಸುಮ್ಮನಾಗಲಿಲ್ಲ. ನನ್ನನ್ನು ನೋಡಿ ಅಣಕ ಮಾಡುವಂತೆ ನಗುತ್ತ, ಮರುಗಳಿಗೆಯಲ್ಲಿಯೇ ಕೋಪೋದ್ರೇಕ ಮತ್ತು ತಿರಸ್ಕಾರದ ಒಳಮಿಡಿತಗಳನ್ನು ತೀವ್ರವಾಗಿ ಹೊರಹಾಕುತ್ತ, ನನ್ನ ಕಂಕುಳುಗಳಲ್ಲಿದ್ದ ಎರಡು ಊರುಗೋಲುಗಳನ್ನು ಜಡಿದು ಕಿತ್ತುಕೊಂಡು, ಅವನ್ನು ನನ್ನ ಬೆನ್ನ ಹಿಂದೆ ಹಿಡಿದು ಮುರಿದು ಒಲೆಯೊಳಗೆ ಉರಿಯುತ್ತಿರುವ ಬೆಂಕಿಗೆ ಎಸೆದು, ನನ್ನ ಊರುಗೋಲುಗಳನ್ನೇ ಸುಟ್ಟು ಬೂದಿ ಮಾಡಿದ;

ಊರುಗೋಲುಗಳನ್ನು ಬೆಂಕಿಗೆ ಹಾಕಿದ ಡಾಕ್ಟರ್ ಅವರ ಕ್ರಿಯೆಯು ಒಳ್ಳೆಯ ಉದ್ದೇಶದಿಂದ ಕೂಡಿದೆ. ವ್ಯಕ್ತಿಯ ತಪ್ಪುಗ್ರಹಿಕೆಯಿಂದ ಇದುವರೆಗೂ ಆಸರೆಯಾಗಿದ್ದ ಊರುಗೋಲುಗಳೇ ಇಲ್ಲದಂತಾದಾಗ, ವ್ಯಕ್ತಿಯು ನಡೆದಾಡಲು ಅನಿವಾರ್‍ಯವಾಗಿ ಸ್ವಾವಲಂಬಿಯಾಗಬೇಕಾಗುತ್ತದೆ. ವ್ಯಕ್ತಿಯು ತನ್ನ ಜೀವನದಲ್ಲಿ ಯಾವುದೇ ಬಗೆಯ ಅರೆಕೊರೆಯನ್ನು ಹೋಗಲಾಡಿಸಿಕೊಳ್ಳಬೇಕಾದರೆ ಇಲ್ಲವೇ ಅಡೆತಡೆಯನ್ನು ನಿವಾರಿಸಿಕೊಳ್ಳಬೇಕಾದರೆ, ಇತರರನ್ನು ಅವಲಂಬಿಸುವ ಬದಲು ತನ್ನಲ್ಲಿ ತಾನು ನಂಬಿಕೆಯನ್ನಿಟ್ಟುಕೊಂಡು, ಅದರ ಪರಿಹಾರಕ್ಕಾಗಿ ಪ್ರಯತ್ನಶೀಲನಾಗಿ ಪರಿಶ್ರಮಪಡಬೇಕು ಎಂಬ ಸಂದೇಶವನ್ನು ಊರುಗೋಲುಗಳ ಸುಡುವಿಕೆಯು ಸೂಚಿಸುತ್ತಿದೆ;

ಈಗ ನಾನು ಸರಿಹೋಗಿದ್ದೇನೆ… ನಾನು ನಡೆಯಬಲ್ಲೆ=ನನ್ನ ಮಯ್ ಮನದಲ್ಲಿದ್ದ ಹಿಂಜರಿಕೆ ಮತ್ತು ಪರಾವಲಂಬಿತನ ಈಗ ಇಲ್ಲವಾಗಿದೆ. ಡಾಕ್ಟರ್ ಅವರ ಸಲಹೆಯನ್ನು ನಾನು ಒಪ್ಪಿಕೊಂಡು, ಅದರಂತೆ ದಿಟ್ಟತನದಿಂದ ಪ್ರಯತ್ನಗಳನ್ನು ನಡೆಸಿದ್ದರಿಂದ ಈಗ ನನಗೆ ಊರುಗೋಲುಗಳು ಬೇಕಾಗಿಲ್ಲ. ಸ್ವತಂತ್ರವಾಗಿ ನಡೆಯಬಲ್ಲೆ;

ನಗು=ಉತ್ಸಾಹ, ಚಟುವಟಿಕೆ ಮತ್ತು ಆನಂದದ ಸಂಕೇತ; ವಾಸಿ=ವ್ಯಕ್ತಿಗೆ ಬಂದಿರುವ ರೋಗವು ಇಲ್ಲವಾಗುವುದು;

ಬರೀ ನಗುವಿನಿಂದಲೇ ನಾನು ವಾಸಿಯಾಗಿದ್ದೇನೆ=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ. ಜೀವನದಲ್ಲಿನ ಅಡೆತಡೆಗಳನ್ನು ಎದುರಿಸುವಾಗ ನಾನು ತಳೆದ ದಿಟ್ಟತನ ಮತ್ತು ಸ್ವಾವಲಂಬಿಯಾಗಿ ನಾನು ಮಾಡಿದ ಪ್ರಯತ್ನಗಳು “ನಾನು ನಡೆಯಲಾರೆ. ನಾನು ಹೆಳವ“ ಎಂಬ ತಪ್ಪುಗ್ರಹಿಕೆ ಮತ್ತು ಕೀಳರಿಮೆಯನ್ನು ತೊಡೆದುಹಾಕಿವೆ. ಈಗ ನಾನು ಜೀವನದಲ್ಲಿ ಉತ್ಸಾಹ, ಚಟುವಟಿಕೆ ಮತ್ತು ಆನಂದದಿಂದ ನಗುನಗುತ್ತಾ ಬಾಳುತ್ತಿದ್ದೇನೆ. ನನ್ನ ಮಯ್ ಮನದಲ್ಲಿದ್ದ ತಪ್ಪುಗ್ರಹಿಕೆಯು ತೊಲಗಿದೆ;

ಆದರೆ… ಕೆಲವೊಮ್ಮೆ ಊರುಗೋಲುಗಳನ್ನು ನೋಡಿದಾಗ ನನ್ನ ನಡಿಗೆ ಕೆಲವು ಗಂಟೆಗಳ ತನಕ ಕಷ್ಟಕರವಾಗುತ್ತದೆ=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ. ಊರುಗೋಲುಗಳನ್ನಿಟ್ಟುಕೊಂಡು ನಡೆಯುವವರನ್ನು ಕಂಡಾಗ ಕೆಲವೊಮ್ಮೆ ನನಗೆ ಹಿಂದಿನ ನೆನಪು ಬಂದು ನನ್ನ ನಡಿಗೆ ಕೆಲಕಾಲ ಕುಂಟಿತಗೊಂಡು ನಡೆಯುವುದಕ್ಕೆ ತೊಂದರೆಯಾಗುತ್ತದೆ. ಅಂದರೆ ಈ ಮೊದಲು ಹಿಂಜರಿಕೆ ಮತ್ತು ಪರಾವಲಂಬಿತನದಿಂದ ನನ್ನ ಮಯ್ ಮನಸ್ಸು ಹೇಗೆ ಬಲಹೀನಗೊಂಡಿದ್ದವೋ ಅಂತೆಯೇ ಆಗುತ್ತದೆ.

ಈ ನುಡಿಗಳು ಒಂದು ಕಟು ವಾಸ್ತವವನ್ನು ಹೇಳುತ್ತವೆ. ಅದೇನೆಂದರೆ ಪ್ರತಿಯೊಬ್ಬ ವ್ಯಕ್ತಿಯ ಮಯ್ ಮನದಲ್ಲಿಯೂ ಒಂದಲ್ಲ ಒಂದು ಬಗೆಯ ತಪ್ಪುಗ್ರಹಿಕೆಯು ನೆಲೆಗೊಂಡಿರುತ್ತದೆ. ಅದನ್ನು ಪ್ರಯತ್ನಪೂರ್ವಕವಾಗಿ ತೊಡೆದು ಹಾಕಲು ವ್ಯಕ್ತಿಯು ಪ್ರಯತ್ನಿಸಿದರೂ ಸಂಪೂರ್‍ಣವಾಗಿ ನಾಶವಾಗದೆ, ಮನದಲ್ಲಿ ಸುಪ್ತವಾಗಿ ಅಡಗಿರುತ್ತದೆ. ಆದ್ದರಿಂದ ವ್ಯಕ್ತಿಯು ಜೀವನದಲ್ಲಿ ಮತ್ತೆ ಅಂತಹ ತಪ್ಪುಗ್ರಹಿಕೆಯು ಮರುಕಳಿಸದಂತೆ ನೋಡಿಕೊಳ್ಳುವ ಎಚ್ಚರವನ್ನು ಹೊಂದಿರಬೇಕು ಮತ್ತು ಮಾನಸಿಕವಾಗಿ ಕುಗ್ಗಬಾರದು.

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications