ಬೇಸಿಗೆಯ ಗೆಳೆಯ ಎಳನೀರು

– ಶ್ಯಾಮಲಶ್ರೀ.ಕೆ.ಎಸ್.

ಎಳನೀರಿನ ಬಗ್ಗೆ ಸಾಕಶ್ಟು ಕೇಳಿರುತ್ತೇವೆ, ಓದಿರುತ್ತೇವೆ. ಕಲ್ಪವ್ರುಕ್ಶದ ಈ ಪಲವನ್ನು ಬೇಸಿಗೆಯ ಆಪ್ತಮಿತ್ರ ಎಂದರೆ ತಪ್ಪಿಲ್ಲ. ಈಗ ಎಲ್ಲೆಡೆ ತಾಜಾ ತಾಜಾ ಎಳನೀರಿನ ಹವಾ. ಎಳನೀರು ಕಲ್ಪವ್ರುಕ್ಶದಲ್ಲಿ ಬಿಡುವ ಪಲವಾದ್ದರಿಂದ ಇದರ ಶ್ರೇಶ್ಟತೆ, ಪ್ರಾಮುಕ್ಯತೆಯನ್ನು ಎಶ್ಟು ಹೊಗಳಿದರೂ ತೀರದು. ಎಳನೀರು ಇದ್ದಲ್ಲಿ ಬೇಸಿಗೆಯ ದಣಿವು, ದಾವರಗಳೆಲ್ಲವೂ ದೂರವಾಗುತ್ತದೆ. ಇಂತಹ ದಾಹ ತಣಿಸುವ ಎಳನೀರಿಗೆ ಇರುವ ಪರ‍್ಯಾಯ ಹೆಸರು ಸೀಯಾಳ. ವರ‍್ಶಪೂರ‍್ತಿ ಸಿಗುವ ಪಲ ಎಂದರೆ ಅದು ಎಳನೀರು. ಆದರೆ ಬೇಸಿಗೆಯಲ್ಲಿ ಇದಕ್ಕೆ ಬೇಡಿಕೆ ಹೆಚ್ಚಾಗಿರುತ್ತದೆ. ಎಳನೀರು ಅಂದರೆ ತೆಂಗಿನಕಾಯಿ ಬಲಿಯುವ ಮುನ್ನ ಬರೀ ನೀರಿನಾಂಶದಿಂದ ಕೂಡಿರುವ ಪಲ. ಬೇಸಿಗೆ ಶುರುವಾದ ಕೂಡಲೇ ಎಳನೀರು ವ್ಯಾಪಾರಿಗಳಿಗೆ ಸುವರ‍್ಣಾವಕಾಶ ಒದಗಿಸಿಕೊಡುತ್ತದೆ. ಎಳನೀರು ವ್ಯಾಪಾರಿಗಳ ಬಳಿ ಹೋದಾಗ ಬಹಳಶ್ಟು ಮಂದಿಯನ್ನು ಗಮನಿಸರಬಹುದು. ಬರೀ ನೀರು , ಪೇಪರ್ ಗಂಜಿ ಅತವಾ ದೋಸೆ ಗಂಜಿ, ‌ಇಲ್ಲವೇ ಬರೀ ಗಂಜಿ ಬೇಕು , ಹೀಗೆಲ್ಲಾ ಕೇಳುವರು.

ಬರೀ ನೀರು ಇರುವ ಎಳನೀರು ಕೇವಲ ನೀರಿನಿಂದ ಕೂಡಿದ್ದು ರುಚಿ ಸ್ವಲ್ಪ ಸಪ್ಪೆ ಮತ್ತು ಒಗರಾಗಿರುತ್ತದೆ. ಪೇಪರ್ ಗಂಜಿಯು ಕೆನೆರೂಪದಲ್ಲಿರುವ ತೆಳುವಾದ ಬಿಳಿ ಪದರದೊಂದಿಗೆ ನವಿರಾದ ಸಿಹಿಯಾದ ನೀರಿನಿಂದ ಕೂಡಿರುತ್ತದೆ. ಅದು ಆಗ ತಾನೆ ಬಲಿಯಲು ಆರಂಬಿಸಿರುತ್ತದೆ. ಈ ಬಿಳಿ ಪದರ ಸವಿಯಲು ಸೊಗಸು. ಮಕ್ಕಳಿಗೂ ಬಹಳ ಪ್ರಿಯ. ದೋಸೆಗಂಜಿಗೆ ಸದಾ ಎಲ್ಲಿಲ್ಲದ ಬೇಡಿಕೆ. ಇನ್ನೂ ಬರೀ ಗಂಜಿ ಇರುವ ನೀರು ಸ್ವಲ್ಪ ಹುಳಿಯಾಗಿದ್ದು, ತುಸು ದಪ್ಪಗಿನ ಬಿಳಿ ಪದರದಿಂದ ಕೂಡಿರುತ್ತದೆ. ಇದು ಅರ‍್ದಂಬರ‍್ದ ಬಲಿತಿರುವ ಕಾಯಿಯೆಂದೇ ಹೇಳಬಹುದು. ಸಾಮಾನ್ಯವಾಗಿ ಎಳನೀರು ಅಂದರೆ ಅದರ ಹೊರಗಿನ ಕವಚ ಹಸಿರಾಗಿರುತ್ತದೆ. ಈಗೀಗ ಕೆಂದೆಳನೀರಿನ ತಳಿಗೆ ಜನ ಹೆಚ್ಚೆಚ್ಚು ಮೊರೆ ಹೋಗುವುದು. ಈ ತಳಿಯ ಮೇಲ್ಮೈ ನೋಡಲು ನಸುಗೆಂಪಾಗಿರುತ್ತದೆ. ಇದರ ನೀರು ಸಿಹಿ, ಗಂಜಿಯೂ ರುಚಿಯಾಗಿರುವುದು ಇದರ ವಿಶೇಶ.

ಇನ್ನೂ ನೀರು ತುಂಬಿರುವ ಎಳನೀರನ್ನು ಗುರುತಿಸಬೇಕಾದರೆ ಎರಡು ಕೈಗಳಿಂದ ಹಿಡಿದು ಅಲುಗಾಡಿಸಿದಾಗ ನೀರಿನ ಸದ್ದು ಕೇಳಿಬರುವುದಿಲ್ಲ. ಕೆಲವರಂತು ನೀರು ತುಂಬಿರುತ್ತದೆಯೆಂಬ ನಂಬಿಕೆಯಿಂದ ದುಂಡಾಗಿರುವ ಕಾಯಿಗಳನ್ನು ಇಶ್ಟ ಪಡುತ್ತಾರೆ. ಎಳನೀರು ಕೇವಲ ಬೇಸಿಗೆಗೆ ಮಾತ್ರ ಸೀಮಿತವಾಗಿಲ್ಲ. ವರ‍್ಶ ಪೂರ‍್ತಿ ಎಲ್ಲಾ ಹವಾಮಾನಗಳಲ್ಲೂ ತೆಂಗಿನ ಮರದ ರಂಬೆಗಳಲ್ಲಿ, ಗೊಂಚಲು ಗೊಂಚಲುಗಳಲ್ಲಿ ದೊರೆಯುವ ಪಲ. ಆಯಾ ಸೀಸನ್ ಗಳಿಗೆ ತಕ್ಕಂತೆ ತನ್ನ ಕಾರ‍್ಯನಿರ‍್ವಹಿಸುತ್ತದೆ. ಆದರೂ ಉರಿವ ಬಿಸಿಲಿಗೆ ತಂಪೆರೆಯುವ ಎಳನೀರು ಇದ್ದರಲ್ಲವೇ ಬೇಸಿಗೆಗೆ ಒಂದು ಕಳೆ. ಸಕ್ಕರೆ ಮಿಶ್ರಿತ, ಐಸ್‌ಕ್ರೀಂ, ತಂಪು ಪಾನೀಯಗಳಿಗೆ ಮುಗಿ ಬೀಳುವುದಕ್ಕಿಂತ ನೈಸರ‍್ಗಿಕ ಪೇಯ ಎಳನೀರಿನ ಸೇವನೆ ಮನಸ್ಸಿಗೂ ಹಿತ ನೀಡುವುದಲ್ಲದೇ, ಈ ಶುಶ್ಕ ವಾತಾವರಣದಲ್ಲಿ ಶರೀರವನ್ನು ಹದವಾಗಿಡುತ್ತದೆ.

ಎಳನೀರು ಇದರ ಹೆಸರಲ್ಲೇ ನೀರು ಇದೆ. ನೀರು ನಮಗೆಲ್ಲಾ ಬಹುಮುಕ್ಯವಾದುದು. ನೀರಿನಂತೆಯೇ ಎಳನೀರಿನ ಸೇವನೆ ಬಾಯಾರಿಕೆ, ಆಯಾಸ, ಚಯಾಪಚ ಕ್ರಿಯೆ, ಅಸಿಡಿಟಿ, ಪಿತ್ತ, ನಿರ‍್ಜಲೀಕರಣ, ಮೂತ್ರ ಕೋಶದ ಕಲ್ಲು ಕರಗುವಿಕೆ, ದೇಹದ ತೂಕ ಸಮತೋಲನ ಹೀಗೆ ಒಂದೇ ಎರಡೇ ನಾನಾ ಬಗೆಯಲ್ಲಿ ಇದರ ಪ್ರಯೋಜನಗಳುಂಟು. ಕೇರಳದಲ್ಲಿ ಎಳನೀರಿಗೆ ಬಹಳ ಪ್ರಾಮುಕ್ಯತೆ ನೀಡಲಾಗುತ್ತದೆ. ಅಲ್ಲಿ ಕಣ್ಣಿನ ಅನೇಕ ಸಮಸ್ಯೆಗಳಿಗೆ ‘ಎಳನೀರ್ ಕುಜಂಬು’ ಎಂಬ ಆಯುರ‍್ವೇದಿಕ್ ಔಶದವನ್ನು ಎಳನೀರಿಂದ ತಯಾರಿಸುತ್ತಾರೆ. ಈಗೀಗ ನಮ್ಮಲ್ಲಿ ಎಳನೀರಿನ ಸಿಹಿ ಪಾಯಸ ಮಾಡಿ ಕೂಡ ಹಲವು ಸಮಾರಂಬಗಳಲ್ಲಿ ಊಟದಲ್ಲಿ ಬಡಿಸುವುದನ್ನು ಕಾಣುತ್ತೇವೆ.  ಕರಾವಳಿ ತೀರ ಪ್ರದೇಶಗಳು, ಕರ‍್ನಾಟಕದ ಎಲ್ಲಾ ಬಾಗಗಳಲ್ಲಿ ತೆಂಗು ಬೆಳೆಯಲ್ಪಡುತ್ತದೆ. ಜೀವಜಲ ಜೀವಾಮ್ರುತ ಎಳನೀರು ಎಲ್ಲಕಡೆ ದೊರೆಯುತ್ತದೆ. ಹಾಗಾಗಿ ಎಲ್ಲರೂ ಈ ಬೇಸಿಗೆಯಲ್ಲಿ ಎಳನೀರಿನ ಸದ್ವಿನಿಯೋಗ ಮಾಡಿಕೊಳ್ಳುವುದು ಒಳಿತು.

( ಚಿತ್ರಸೆಲೆ:  bing.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications