ಮರೆವು – ವರವು ಹೌದು, ಶಾಪವು ಹೌದು

ಬರತ್ ಜಿ.

ಮರೆವು ಮನುಶ್ಯನಿಗೆ ದೇವರು ಕೊಟ್ಟಿರುವ ವರವು ಹೌದು ಶಾಪವು ಹೌದು. ನಾವು ಏನನ್ನು ಮರೆಯುತ್ತೇವೆ, ಯಾವುದನ್ನು ನೆನಪಿಡುತ್ತೇವೆ ಎಂಬುದು ನಮ್ಮ ಜೀವನಕ್ಕೆ, ಬುದ್ದಿಗೆ, ಮನಸ್ಸಿಗೆ ಎಶ್ಟು ಮುಕ್ಯ ಎಂಬುದರ ಮೇಲೆ ಅವಲಂಬಿತವಾಗಿರುತ್ತವೆ. ನಾವು ಸಾಮಾನ್ಯವಾಗಿ ಏನನ್ನು ಮರೆಯುತ್ತೇವೆ? ನಮ್ಮ ಆಪ್ತರ ಜನ್ಮದಿನಗಳು, ಮದುವೆ ವಾರ‍್ಶಿಕೋತ್ಸವಗಳು, ಯಾರನ್ನಾದರೂ ಬೇಟಿಯಾಗಿ ಪರಿಚಯ ಮಾಡಿಕೊಂಡಿದ್ದರೂ ಅವರ ಹೆಸರು, ಉದ್ಯೋಗ… ಇವೆ ಮುಂತಾದ ವಿವರಗಳನ್ನೆಲ್ಲಾ ಮರೆತಿರುತ್ತೇವೆ.

ವರ‍್ಶಕ್ಕೊಮ್ಮೆ ಬರುವ ದಿನವನ್ನು ವರ‍್ಶಪೂರ‍್ತಿ ನೆನಪಿಡುವುದು, ಅಪರೂಪಕ್ಕೆ ಎಂದೋ ಬೇಟಿಯಾದವರ ಸಂಪೂರ‍್ಣ ವಿವರಗಳನ್ನು ಮರೆಯದಿರುವುದು ಯಾರಿಗಾದರೂ ಕಶ್ಟದ ಕೆಲಸವೇ? ನಾವು ಮರೆಯಲೇಬಾರದು ಎಂದು ಪಣ ತೊಟ್ಟಂತೆ ಪದೇ ಪದೇ ನಮಗೆ ನಾವೇ ನೆನಪಿಸಿಕೊಳ್ಳುವ ಕೆಲವು ಸಂಗತಿಗಳು, ಕರ‍್ಣನಿಗೆ ಯುದ್ದದ ಸಮಯದಲ್ಲಿ ಮಂತ್ರಗಳು ಮರೆತುಹೋದಂತೆ ಪ್ರಮುಕ ಸಂದರ‍್ಬಗಳಲ್ಲಿ ಮರೆತು ಹೋಗಿ ‘ಮರೆಗುಳಿ’ ಎಂದು ಅನ್ನಿಸಿಕೊಳ್ಳುತ್ತೇವೆ.

ಆದರೆ ಕೆಲವೊಮ್ಮೆ ಮರೆಯಲೇಬೇಕು ಎಂದು ಅಂದುಕೊಳ್ಳುವ ಕೆಲವು ವಿಶಯಗಳು ಪದೇ ಪದೇ ನೆನಪಾಗಿ ಮನಸ್ಸನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತವೆ. ನಾವು ಸಾಮಾನ್ಯವಾಗಿ ಯಾವುದನ್ನು ಮರೆಯುವುದಿಲ್ಲ? ನಮಗೆ ಚಿಕ್ಕ ವಯಸ್ಸಿನಲ್ಲಿ ಯಾರಾದರೂ ಬೈದಿದ್ದರೆ, ಆ ಮಾತು ಮರ‍್ಮಕ್ಕೆ ತಾಗುವಂತಿದ್ದರೆ ಸಾಯುವವರೆಗೂ ಆ ಮಾತು ಕೇಳಿದ ಕಿವಿಯಲ್ಲಿ ಹಾಗೆ ಕೂತಿರುತ್ತದೆ. ಮನುಶ್ಯ ತನ್ನ ಸಂತೋಶದ ಕ್ಶಣಗಳನ್ನು, ನಕ್ಕು ನಲಿದ ಗಳಿಗೆಗಳನ್ನು ತುಂಬಾ ಕಾಲ ನೆನಪಿಡುವುದಿಲ್ಲ, ಆದರೆ ತನಗಾದ ಅವಮಾನ, ಹತಾಶೆ, ನೋವು, ಸಂಕಟಗಳ ನೆನಪು ಅವನ ನೆನಪಿನ ಪದರಗಳಲ್ಲಿ ಶಾಶ್ವತವಾಗಿ ಕೂತಿರುತ್ತದೆ.

ಮನುಶ್ಯನಿಗೆ ಮೊದಲ ಪ್ರೀತಿಯನ್ನು ಮರೆಯುವುದು ಕಶ್ಟ ಎಂಬ ಮಾತಿದೆ. ನಾವು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವವರು ದೂರವಾದರೆ ಅವರನ್ನು ಮರೆಯಲಾಗದೆ ಮಂಕಾಗಿಬಿಡುತ್ತೇವೆ. ಬಹಳ ಕಾಲ ಜೊತೆಯಿದ್ದವರು ಅನಿವಾರ‍್ಯ ಕಾರಣಗಳಿಂದ ಬೇರೆ ಊರುಗಳಿಗೆ ಹೋಗಬೇಕಾಗಿ ಬಂದಾಗ, ನಮ್ಮ ಬಂದುಗಳೋ, ಸ್ನೇಹಿತರೋ ವಿದಿವಶರಾದಾಗ, ಪ್ರೀತಿ ಮುರಿದು ಬಿದ್ದಾಗ ಇಂತಹ ಇನ್ನು ಹಲವು ಕಾರಣಗಳಿಗೆ ನಾವು ಮತ್ತೊಬ್ಬರ ನನಪಿನಿಂದ ಬಳಲುತ್ತೇವೆ.

ಇಂತಹ ಸಂದರ‍್ಬಗಳಲ್ಲಿ ಇದರಿಂದ ಹೊರಬರಬೇಕಾರೆ ಇರುವ ದಾರಿ ಎಂದರೆ ನಾವು ನಮ್ಮ ಕೆಲಸದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವುದು. ಕೆಲಸದ ಬದುಕು ಯಾವುದನ್ನು ಕೇಳುವುದಿಲ್ಲ. ಈ ಕೆಲಸ ಆಗಬೇಕು ಎಂದರೆ ನಿರ‍್ದಿಶ್ಟ ಸಮಯದಲ್ಲಿ ಅದು ಆಗಬೇಕು ಅಶ್ಟೆ. ಅದಕ್ಕೆ ನಿಮ್ಮ ಸುಕ, ದುಕ್ಕ, ನೋವು, ನಲಿವು ಯಾವುದು ಬೇಕಿಲ್ಲ. ನಿಮ್ಮ ಕೆಲಸದಲ್ಲಿ ನೀವು ಆ ಪರಿ ತೊಡಗಿಸಿಕೊಂಡರೆ ನಿಮಗೆ ಯಾವ ನೆನಪು ಕಾಡುವುದಿಲ್ಲ, ಯಾಕೆಂದರೆ ನಿಮಗೆ ಯಾರು ನೆನಪೇ ಆಗುವುದಿಲ್ಲ. ನಿಮಗೆ ಮಾಡುವ ಕೆಲಸದಲ್ಲಿ ಸಂತ್ರುಪ್ತಿ ಇದ್ದರೆ ನೀವು ಆ ರೀತಿ ತೊಡಗಿಸಿಕೊಳ್ಳಬಹುದು ಇಲ್ಲ ಎಂದರೆ ನೆನಪುಗಳು ನಿಮ್ಮನ್ನು ಬಿಡುವುದಿಲ್ಲ, ಕೆಲಸದ ತ್ರುಪ್ತಿಯು ಸಿಗುವುದಿಲ್ಲ.

(ಚಿತ್ರ ಸೆಲೆ: healthtap.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *