ಸ್ಯಾಮ್ಸಂಗ್‍ ಎಸ್8 ಮತ್ತು ಎಸ್8 ಪ್ಲಸ್‍ನಲ್ಲಿ ಹೊಸತೇನಿದೆ?

– ರತೀಶ ರತ್ನಾಕರ.

ಚೂಟಿಯುಲಿ(smartphone) ಮಾರುಕಟ್ಟೆಯ ದೊಡ್ಡಣ್ಣಂದಿರಲ್ಲಿ ಒಬ್ಬ ಎಂದು ಕರೆಸಿಕೊಳ್ಳುವ ಕೊರಿಯಾದ ಸ್ಯಾಮ್ಸಂಗ್ ಕಂಪನಿಯು ಗ್ಯಾಲಕ್ಸಿ ಎಸ್8(S8) ಮತ್ತು ಎಸ್8 ಪ್ಲಸ್(S8 Plus) ಚೂಟಿಯೂಲಿಗಳನ್ನು ಹೊರತಂದಿದೆ. ವರುಶಕ್ಕೆ ಒಂದು ಇಲ್ಲವೇ ಎರಡು ಚೂಟಿಯುಲಿಗಳನ್ನು ಹೊರತರುವ ದೊಡ್ಡ ಕಂಪನಿಗಳು ಬಿಡುಗಡೆಯಾಗುವ ಹೆಚ್ಚಿನ ಚೂಟಿಯುಲಿಗಳಲ್ಲಿ ಹೇಳಿಕೊಳ್ಳುವಂತಹ ಹೊಸತನ್ನು ಕೊಟ್ಟಿರುವುದಿಲ್ಲ. ಹೊಸ ನಡೆಸೇರ‍್ಪಾಟು, ಕೆಲವಾರು ಹೊಸ ಬಳಕಗಳು, ಹೆಚ್ಚಿನ ಪಿಕ್ಸೆಲ್ ಹೊಂದಿರುವ ಕ್ಯಾಮೆರಾ, ತುಸು ದೊಡ್ಡಳತೆಯ ರ‍್ಯಾಮ್(RAM), ಹೀಗೆ ಕೆಲವು ಮಾರ‍್ಪಾಟುಗಳನ್ನು ಬಿಟ್ಟರೆ ಹಿಂದಿನ ವರುಶ ಬಿಡುಗಡೆಯಾದ ಅದೇ ಕಂಪನಿಯ ಚೂಟಿಯುಲಿಗೆ ಹೋಲಿಸಿದರೆ ಅಂತಹ ದೊಡ್ಡ ಬೇರ‍್ಮೆ ಹೆಚ್ಚಾಗಿ ಕಂಡುಬರುವುದಿಲ್ಲ. ಆದರೆ ಸ್ಯಾಮ್ಸಂಗ್ ನ ಹೊಸ ಚೂಟಿಯುಲಿಗಳು ಮಾರುಕಟ್ಟೆಯಲ್ಲಿ ಗುಲ್ಲೆಬ್ಬಿಸಿರುವುದು ಅವುಗಳ ಹೊಸಬಗೆಯ ತೆರೆ, ಬಿಕ್ಸ್ ಬಿ ನೆರವಿಗ(assistant) ಹಾಗೂ ಡೆಕ್ಸ್(Dex) ಎಂಬ ಆಯ್ಕೆಯಿಂದ.

ಹೊಸಬಗೆಯ ತೆರೆ

ಚೂಟಿಯುಲಿ ಮಾರುಕಟ್ಟೆಯ ನಾಳೆಗಳನ್ನು ‘ಬಳುಕುವ ಚೂಟಿಯುಲಿ‘ಗಳು ಆಳಲಿವೆ ಎಂಬ ಮಾತು ಈಗಾಗಲೇ ಕೇಳಿಬರುತ್ತಿದೆ. ಇದನ್ನು ದಿಟಗೊಳಿಸಲು ಸ್ಯಾಮ್ಸಂಗ್ ಹಾಗೂ ಎಲ್‍ಜಿಯಂತಹ ದೊಡ್ಡ ಕಂಪನಿಗಳು ಕೆಲಸಮಾಡುತ್ತಿವೆ. ಬಳುಕುವ ಚೂಟಿಯುಲಿಗಳನ್ನು ಮಾಡಲು ಮೊದಲು ಬಳುಕುವ ತೆರೆಯನ್ನು ಮಾಡಬೇಕು, ಬಳುಕುವ ತೆರೆಯನ್ನು ಮಾಡುವ ಹಂತದಲ್ಲಿ ಬಾಗಿದ ತೆರೆಗಳನ್ನು ಮಾಡುವುದು ಮೊದಲನೆಯ ಹೆಜ್ಜೆ. ಸ್ಯಾಮ್ಸಂಗ್ ತನ್ನ ಎಸ್8 ಹಾಗೂ ಎಸ್8 ಪ್ಲಸ್ ಚೂಟಿಯುಲಿಗಳ ಮೂಲಕ ಈ ಮೊದಲನೆಯ ಹೆಜ್ಜೆಯನ್ನು ಇಟ್ಟಿದೆ.

ಎಸ್8 ಮಾದರಿಯು 5.8 ಇಂಚಿನ ತೆರೆ ಹಾಗೂ ಎಸ್8 ಪ್ಲಸ್ 6.2 ಇಂಚಿನ ತೆರೆಯನ್ನು ಹೊಂದಿದ್ದು, ಇವುಗಳ ತೆರೆಯ ಉದ್ದಬದಿಗಳು ಬಾಗಿಕೊಂಡಿವೆ(curved). ಇದರಿಂದ ಚೂಟಿಯುಲಿಯ ಉದ್ದಬದಿಗಳಲ್ಲೂ ತೆರೆಯು ಹರಡಿಕೊಂಡು, ತೆರೆಯ ನೋಟದ ಹರವನ್ನು ಹೆಚ್ಚಿಸಿದೆ. ಇನ್ನೊಂದು ಗಮನಿಸಬೇಕಾಗಿರುವ ಅರಿದಾದ ಕೆಲಸವೆಂದರೆ ತೆರೆಯ ನಾಲ್ಕೂ ಮೂಲೆಯ ಅಂಚುಗಳು ದುಂಡಗಿರುವುದು (rounded corners)! ಈಗಿನ ಚೂಟಿಯುಲಿಗಳ ತೆರೆಯ ಮೂಲೆಯ ಅಂಚುಗಳು ಚೌಕದ ಮೂಲೆಗಳಿಂತಿರುತ್ತವೆ, ಆದರೆ ಇವುಗಳಲ್ಲಿ ದುಂಡಾಗಿದೆ. ಇದಲ್ಲದೇ ತೆರೆಯ ಚುಕ್ಕಿದಟ್ಟಣೆ 2960×1440 ಪಿಕ್ಸೆಲ್ ಇದ್ದು 18.5:9 ಅಸ್ಪೆಕ್ಟ್ ರೇಶಿಯೋ(aspect ratio) ಹೊಂದಿದೆ. ಚೂಟಿಯುಲಿಯ ಹೆಚ್ಚಿನ ಪಾಲನ್ನು ತೆರೆಯು ಹರಡಿಕೊಂಡಿದೆ, ಈ ಎಲ್ಲಾ ಮಾರ‍್ಪಾಟುಗಳು ಎಸ್8 ಮತ್ತು ಎಸ್8 ಪ್ಲಸ್ ಅನ್ನು ಸಾಮಾನ್ಯ ಚೂಟಿಯುಲಿಗಳಿಗಿಂತ ತುಂಬಾ ಬೇರಾಗಿಸಿದೆ, ಅಲ್ಲದೇ ಇವುಗಳು ಕಣ್ಸೆಳೆಯುವಂತಿವೆ.

ಬಿಕ್ಸ್ ಬಿ ನೆರವಿಗ

ಆಪಲ್ ನವರು ಬಳಸುವ ಸಿರಿ, ಗೂಗಲ್ಲಿನ ಗೂಗಲ್ ಅಸಿಸ್ಟೆಂಟ್, ವಿಂಡೋಸ್ ಅವರ ಕೊರ‍್ಟಾನ ನೆರವಿಗ ಬಳಕಗಳು(apps) ಹೆಚ್ಚಿನವರಿಗೆ ತಿಳಿದಿರಬಹುದು. ಅದರಂತೆ ಸ್ಯಾಮ್ಸಂಗ್‍ನವರು ಕೂಡ ತಮ್ಮ ಚೂಟಿಯುಲಿಗಳಲ್ಲಿ ಒಂದೊಳ್ಳೆ ನೆರವಿಗನನ್ನು ಕೊಡಬೇಕೆಂಬ ಬಯಕೆ ಹೊಂದಿದ್ದರು. ಇಲ್ಲಿಯವರೆಗೆ ಅವರು ಗೂಗಲ್ ನೆರವಿಗನನ್ನು ತಮ್ಮ ಚೂಟಿಯುಲಿಗಳಲ್ಲಿ ಕೊಡುತ್ತಿದ್ದರು. ಈಗ ಅವರು ತಮ್ಮದೇ ಆದ ನೆರವಿಗನನ್ನು ಹೊರತಂದಿದ್ದಾರೆ. ಅದೇ ಬಿಕ್ಸ್ ಬಿ (Bixby).

ಬಿಕ್ಸ್ ಬಿ ಏನೆಲ್ಲಾ ಕೆಲಸ ಮಾಡುವುದು?

– ಬಿಕ್ಸ್ ಬಿ ಯೊಂದಿಗೆ ಮಾತನಾಡಬಹುದು. ಯಾರಿಗಾದರು ಕರೆ ಮಾಡಲು, ಮಿಂದಾಣದಲ್ಲಿ ಏನಾದರು ಹುಡುಕಲು, ಚೂಟಿಯುಲಿಯಲ್ಲಿರುವ ಬಳಕವನ್ನು ತೆರೆಯಲು, ಇಲ್ಲವೇ ಕ್ಯಾಮೆರಾದ ಮೂಲಕ ತಿಟ್ಟವನ್ನು ತೆಗೆಯಲೂ ನೀವು ಬಿಕ್ಸ್ ಬಿ ಗೆ ಹೇಳಬಹುದು. ಬರಿ ಮಾತಿನಲ್ಲೇ ಚೂಟಿಯುಲಿಯನ್ನು ಬಳಸಲು ಇದು ನೆರವಾಗುವುದು.

– ನಿಮಗೇನು ಬೇಕು ಎಂದು ಅರಿತು ಅದರ ಮಾಹಿತಿ ನೀಡುವುದು. ಎತ್ತುಗೆಗೆ ನೀವು ದೂರದ ಊರಿಗೆ ಗಾಡಿ ಓಡಿಸಿಕೊಂಡು ಹೋಗುತ್ತಿದ್ದರೆ ಅದಕ್ಕಾಗಿ ನೀವು ಚೂಟಿಯುಲಿಯಲ್ಲಿರುವ ದಾರಿತಿಟ್ಟವನ್ನು ಬಳಸುತ್ತಿದ್ದರೆ, ಆಗ ಬಿಕ್ಸ್ ಬಿ ನಿಮಗೆ ಆ ಊರಿನ ಸುತ್ತಾಟದ ಜಾಗ, ಊಟದ ಜಾಗ, ಮಳೆ ಬರುವ ಮುನ್ಸೂಚನೆ ಹಾಗೂ ಇತರೆ ಬೇಕಾಗುವ ಮಾಹಿತಿಗಳನ್ನು ಹೆಕ್ಕಿಕೊಡುವುದು.

– ನಿಮ್ಮ ದೈನಂದಿನ ಓಡಾಟ, ಕೆಲಸಗಳು, ಬಳಕಗಳ ಬಳಕೆಯನ್ನು ಅರಿತುಕೊಂಡು ನೆನಪೋಲೆಗಳನ್ನು(reminders) ಕಳಿಸುತ್ತದೆ. ಎತ್ತುಗೆಗೆ ಬೆಳಗ್ಗೆ ಕೆಲಸಕ್ಕೆ ಹೊರಡುವಾಗ ಯಾವಾಗಲು ಊಬರ್ ಇಲ್ಲವೇ ಓಲಾದಂತಹ ಬಳಕಗಳನ್ನು ಬಳಸುತ್ತಿದ್ದರೆ, ಯಾವುದಾದರೊಂದು ದಿನ ನೀವು ತಡವಾಗಿ ಹೊರಡುತ್ತಿದ್ದರೆ ಆಗ ಬಿಕ್ಸ್ ಬಿ ತಡವಾಗುತ್ತಿರುವುದನ್ನು ನೆನಪಿಸುತ್ತದೆ. ಯಾವುದಾದರು ಮದುವೆ ಕಾರ‍್ಯಕ್ರಮಗಳು ನಿಮ್ಮ ನಾಳ್ಪಟ್ಟಿಯಲ್ಲಿ(calendar) ಇದ್ದರೆ ಅದರ ಹಿಂದಿನ ದಿನ ನಿಮಗದನ್ನು ನೆನಪಿಸುತ್ತದೆ.

– ನಿಮ್ಮ ಚೂಟಿಯುಲಿಯ ಬಳಕೆಯ ಮೇಲೆ ನಿಮಗೆಂದೇ ಒಂದು ತೆರೆಯನ್ನು ಅದು ತೋರಿಸುತ್ತದೆ. ಅದರಲ್ಲಿ ನೀವು ಹೆಚ್ಚು ಬಳಸುವ ಬಳಕಗಳು, ಆಸಕ್ತಿಯ ವಿಶಯಗಳು ಹಾಗೂ ನಿಮಗೆ ಬೇಕಾದ ನೆರವುಗಳನ್ನು ತೋರಿಸುತ್ತದೆ.

ಸದ್ಯಕ್ಕೆ ಈ ಬಿಕ್ಸ್ ಬಿಯನ್ನು ಸ್ಯಾಮ್ಸಂಗ್ ಕಂಪನಿ ತನ್ನ ತಾಯ್ನಾಡು ಕೊರಿಯಾದಲ್ಲಿ ಬಿಡುಗಡೆಯಾದ ಎಸ್8 ಹಾಗೂ ಎಸ್8 ಪ್ಲಸ್ ಚೂಟಿಯುಲಿಗಳಲ್ಲಿ ಮಾತ್ರ ಕೊಟ್ಟಿದೆ. ಉಳಿದ ನಾಡುಗಳು ಇನ್ನೂ ಕಾಯಬೇಕಿದೆ.

ಡೆಕ್ಸ್ (DeX)

ಡೆಕ್ಸ್ (DeX)

ಚೂಟಿಯುಲಿಗಳನ್ನು ಎಣ್ಣುಕದ ತೆರೆಗೆ ಜೋಡಿಸಿಕೊಂಡು ಬಳಸುವಂತಿದ್ದರೆ ಹೇಗಿರುತ್ತೆ? ದೊಡ್ಡ ಮಿಂಚೆಯನ್ನು ಬರೆಯಲು, ಚೂಟಿಯುಲಿಯಲ್ಲಿರುವ ಯಾವುದೋ ಆಟವನ್ನು ದೊಡ್ಡ ತೆರೆಯಲ್ಲಿ ಆಡಲು, ಸಿನೆಮಾವನ್ನು ನೋಡಲು ಇಲ್ಲವೇ ಕಡತಗಳ ಕೆಲಸವನ್ನು ಮಾಡಲು ದೊಡ್ಡ ತೆರೆಯಿದ್ದರೆ ಚೆನ್ನ. ಅದಕ್ಕೆಂದೇ ಸ್ಯಾಮ್ಸಂಗ್ ಅವರು ಡೆಕ್ಸ್ ಅನ್ನು ಹೊರತಂದಿದ್ದಾರೆ. ಡೆಕ್ಸ್ ಎಂಬುದು ಒಂದು ಪುಟ್ಟ ಎಣಿ(device), ಇದು ಚೂಟಿಯುಲಿಯನ್ನು ದೊಡ್ಡ ತೆರೆಗೆ ಜೋಡಿಸಿ, ಎಣ್ಣುಕದ ಕೀಲಿಮಣೆ ಹಾಗೂ ಮೌಸ್ ಮೂಲಕ ಆ ದೊಡ್ಡತೆರೆಯನ್ನು ಬಳಸಲು ನೆರವಾಗುತ್ತದೆ. ಎಸ್8 ಹಾಗೂ ಎಸ್8 ಪ್ಲಸ್ ಅನ್ನು ಈ ಡೆಕ್ಸ್ ಮೂಲಕ ದೊಡ್ಡ ತೆರೆಗೆ ಜೋಡಿಸಿ ಬಳಸಬಹುದಾಗಿದೆ.

ಕೆಲಸದ ಸಲುವಾಗಿ ಬೇರೆ ಬೇರೆ ಊರಿಗೆ ಹೋಗುವವರು ತಮ್ಮ ಕೆಲಸದ ಕಡತಗಳನ್ನು ಮಡಿಲೆಣ್ಣುಕ(laptop) ಇಲ್ಲವೇ ಗಟ್ಟಿನೆಪ್ಪುಗಳಲ್ಲಿ(hard disk) ಕೊಂಡೊಯ್ದು ಅಲ್ಲಿ ಬಳಸಬೇಕು. ಅಂತವರು ಈಗ ಚೂಟಿಯುಲಿಯಲ್ಲಿಯೇ ಕಡತಗಳನ್ನು ಒಯ್ದು ಅಲ್ಲಿ ದೊಡ್ಡ ತೆರೆಯೊಂದನ್ನು ಪಡೆದು ಕಡತಗಳನ್ನು ಬಳಸಬಹುದಾಗಿದೆ. ಅದಲ್ಲದೇ ದೊಡ್ಡ ತೆರೆಯಲ್ಲಿ ಚೂಟಿಯುಲಿಯನ್ನು ಬಳಸುವುದು ಒಂದು ಚೆಂದದ ಅನುಬವ ಅಲ್ಲವೇ? ಡೆಕ್ಸ್ ನಲ್ಲಿ ನಿಮ್ಮ ಚೂಟಿಯುಲಿ ಇದ್ದಾಗ ಯಾವುದಾದರು ಕರೆ ಬಂದರೂ ಉತ್ತರಿಸಬಹುದು. ಒಟ್ಟಾರೆಯಾಗಿ ಡೆಕ್ಸ್ ನಿಂದಾಗಿ ಚೂಟಿಯುಲಿ ಒಂದು ಎಣ್ಣುಕದ ಹಾಗೂ ಕೆಲಸಮಾಡಬಲ್ಲದು.

ಇವುಗಳಲ್ಲದೇ ಈಗಿನ ಮಾರುಕಟ್ಟೆಗೆ ದೊಡ್ಡ ಪೈಪೋಟಿಯನ್ನು ನೀಡಬಲ್ಲ ಆಯ್ಕೆಗಳನ್ನು ಎಸ್8 ಹಾಗೂ ಎಸ್8 ಪ್ಲಸ್ ಹೊಂದಿವೆ.

ಗ್ಯಾಲಕ್ಸಿ ಎಸ್8 ಗ್ಯಾಲಕ್ಸಿ ಎಸ್8 ಪ್ಲಸ್
ಬಣ್ಣಗಳು ಮಿಡ್‍ನೈಟ್ ಬ್ಲಾಕ್, ಆರ‍್ಕಿಡ್ ಗ್ರೇ, ಕೋರಲ್ ಬ್ಲೂ, ಆರ‍್ಟಿಕ್ ಸಿಲ್ವರ್, ಮೇಪಲ್ ಗೋಲ್ಡ್
ನಡೆಸೇರ‍್ಪಾಟು (OS) ಆಂಡ್ರಾಯ್ಡ್ ಎನ್(7.0)
ರಾಮ್ (RAM) 4 ಜಿಬಿ((LPDDR4)
ನಡು ಬಗೆವ ಬಿಡಿ (CPU) ಆಕ್ಟಾ ಕೋರ್(2.3GHz Quad + 1.7GHz Quad), 64 ಬಿಟ್, 10nm ಪ್ರೊಸೆಸರ್
ಕ್ವಾಲ್‍ಕಾಮ್ MSM8998 ಸ್ನಾಪ್‍ಡ್ರಾಗನ್ 835
ನೆನಪು 64 ಜಿಬಿ
ಅಳತೆ ಮತ್ತು ತೂಕ 148.9 x 68.1 x 8.0 ಮಿ.ಮೀ
155 ಗ್ರಾಂ
159.5 x 73.4 x 8.1 ಮಿ.ಮೀ
173 ಗ್ರಾಂ
ತೆರೆ 5.8 ಇಂಚು Quad HD+ Super AMOLED 2960×1440 ಚುಕ್ಕಿದಟ್ಟಣೆ
ಕಾರ‍್ನಿಂಗ್ ಗೊರಿಲ್ಲಾ ಗ್ಲಾಸ್ 5
ಪಿಕ್ಸೆಲ್ 570 ಪಿಪಿಐ
6.2 ಇಂಚು Quad HD+ Super AMOLED 2960×1440 ಚುಕ್ಕಿದಟ್ಟಣೆ
ಕಾರ‍್ನಿಂಗ್ ಗೊರಿಲ್ಲಾ ಗ್ಲಾಸ್ 5
ಪಿಕ್ಸೆಲ್ 529 ಪಿಪಿಐ
ಮಿಂಕಟ್ಟು (Battery) 3000mAH 3500mAH
ಕ್ಯಾಮೆರಾ ಹಿಂಬದಿ – 12 MP AF, 1.4um, F1.7, OIS (Optical Image Stabilization)
ಮುಂಬದಿ – 8 MP AF, 1.22um, F1.7
ಅರಿವುಕಗಳು ಉರುಬೇರಿಕೆಯಳಕ(Accelerometer), ಸುತ್ತಣ ಬೆಳಕರಿವುಕ (ambient light sensor), ಹಾಲ್ (Hall) ಅರಿವುಕ, ಬೆರಳಚ್ಚು ಅರಿವುಕ(Fingerprint sensor), ಸುತ್ತಳೆಕ (gyroscope), ಬದಿ ಅರಿವುಕ (Proximity sensor), ಒತ್ತಡದಳಕ, ಕಣ್ಪೊರೆ ಅರಿವುಕ, ಗಾಳಿಯೊತ್ತಡದಳಕ
ಮಿಂಬಲೆ ಚಳಕ (Network Technology) GSM
HSPA
LTE Cat.16
ಹೊಂದಾಣಿಕೆ (Connectivity ) ಯು ಎಸ್ ಬಿ Type-C, ಯು ಎಸ್ ಬಿ 3.1, ವೈಪೈ, ಬ್ಲೂಟೂತ್ 5.0
ಬೆಲೆ ಅಂದಾಜು 57,000 ರೂಪಾಯಿಗಳು ಅಂದಾಜು 65,000 ರೂಪಾಯಿಗಳು

(ಮಾಹಿತಿ ಹಾಗೂ ಚಿತ್ರ ಸೆಲೆ: samsung.com, gsmarena.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *