ಚಾಕೊಲೇಟ್ ವಾಲ್ನಟ್ ಕೇಕ್

– ಸುಹಾಸಿನಿ ಎಸ್.

 

ಸಿಹಿ/ಕೇಕ್ ಪ್ರಿಯರು ಮನೆಯಲ್ಲೇ ಸುಳುವಾಗಿ ಮಾಡಿ ಸವಿಯಬಹುದಾದಂತ ತಿನಿಸು ಚಾಕೊಲೇಟ್ ವಾಲ್ನಟ್ ಕೇಕ್. ಚಿಣ್ಣರಿಗೂ ಇಶ್ಟವಾಗಬಹುದಾದಂತ ತಿನಿಸಿದು. ಇದನ್ನು ಮಾಡುವ ಬಗೆಯನ್ನು ಮುಂದೆ ನೋಡಬಹುದು.

ಏನೇನು ಬೇಕು

ಒಣ ಪದಾರ‍್ತಗಳು:

  • ಗೋದಿ ಹಿಟ್ಟು/ಮೈದಾ ಹಿಟ್ಟು (ಇಲ್ಲಿ ಬಳಸಿದ್ದು ಗೋದಿ ಹಿಟ್ಟು) – 1 1/4 ಕಪ್
  • ಕೊಕೊ ಪೌಡರ್ – 1/4 ಕಪ್
  • ಕಾಪಿ ಪೌಡರ್ – 1 ಚಮಚ
  • ಬೇಕಿಂಗ್ ಪೌಡರ್ – 1 ಚಮಚ

ಹಸಿ ಪದಾರ‍್ತಗಳು:

  • ಸಕ್ಕರೆ – 3/4 ಕಪ್
  • ಮೊಸರು – 1 ಕಪ್
  • ಅಡುಗೆ ಎಣ್ಣೆ – 1/2 ಕಪ್
  • ಹಾಲು – 1/2 ಕಪ್
  • ವೆನಿಲಾ ಎಸೆನ್ಸ್ – 1 ಚಮಚ

ಇತರೆ:

  • ಬೇಕಿಂಗ್ ಸೋಡಾ – 1/2 ಚಮಚ
  • ವಾಲ್ನಟ್ – 1/2 ಕಪ್
  • ಚೊಕೊ ಚಿಪ್ಸ್ – ಸ್ವಲ್ಪ
  • ಕೇಕ್ ಮೌಲ್ಡ್ / ಪಾತ್ರೆ
  • ಬಟರ್ ಪೇಪರ್

ಮಾಡುವ ಬಗೆ

1. ಒಂದು ಬಟ್ಟಲಿನಲ್ಲಿ 1 ಕಪ್ ಮೊಸರು ಮತ್ತು 1/2 ಚಮಚ ಬೇಕಿಂಗ್ ಸೋಡಾ ಹಾಕಿ ಕಲಸಿ, ಬದಿಗೆ ಇಡಬೇಕು.
2. ಮೇಲೆ ಪಟ್ಟಿ ಮಾಡಿರುವ ಒಣ ಪದಾರ‍್ತಗಳನ್ನು ಸಾಣಿಸಿ ಒಂದು ಪಾತ್ರೆಯಲ್ಲಿ ಕಲಸಿ ಬದಿಗೆ ಇಡಬೇಕು.
3. ಮಿಕ್ಸಿ ಜಾರ್ ನಲ್ಲಿ 3/4 ಕಪ್ ಸಕ್ಕರೆ, 1/2 ಕಪ್ ಅಡುಗೆ ಎಣ್ಣೆ, 1 ಚಮಚ ವೆನಿಲಾ ಎಸೆನ್ಸ್, ಮೊಸರು ಹಾಗು ಬೇಕಿಂಗ್ ಸೋಡಾ ಕಲಸಿದ ಮಿಶ್ರಣ ಹಾಕಿ ನುಣ್ಣಗೆ ರುಬ್ಬಬೇಕು.
4. ಒಲೆಯ ಮೇಲೆ 10 ನಿಮಿಶಗಳ ಕಾಲ ಬಾಣಲೆಯನ್ನು ಬಿಸಿಯಾಗಲು ಇಡಬೇಕು (ಮೈಕ್ರೊ ಓವನ್ ಇದ್ದರೆ ಅದನ್ನು ಪ್ರಿ-ಹೀಟ್ ಮಾಡುವಂತೆ).
5. ಒಣ ಪದಾರ‍್ತಗಳನ್ನು ಕಲಸಿದ ಪಾತ್ರೆಯಲ್ಲಿ, ಮೇಲೆ ತಿಳಿಸಿದ ಮಿಕ್ಸಿಯಲ್ಲಿ ಮಾಡಿದ ಮಿಶ್ರಣವನ್ನು ಹಾಕಿ.
6. ಈ ಮಿಶ್ರಣವನ್ನು ಒಂದೇ ದಿಕ್ಕಿನಲ್ಲಿ ಒಂದೂ ಗಂಟು ಇರದಹಾಗೆ ಚೆನ್ನಾಗಿ ತಿರುಗಿಸಿ / ಬೀಟ್ ಮಾಡಿ. ಬಳಿಕ ಕತ್ತರಿಸಿದ ವಾಲ್ನಟ್ / ವಾಲ್ನಟ್ ಚೂರುಗಳನ್ನು ಹಾಕಿ ಮತ್ತೆ ಕಲೆಸಬೇಕು (ಕೇಕ್ ಮಿಶ್ರಣ ಗಟ್ಟಿ ಅನಿಸಿದರೆ ಸ್ವಲ್ಪ ಉಗುರು ಬೆಚ್ಚಗಿನ ಹಾಲು ಹಾಕಿ ಮತ್ತೆ ಬೀಟ್ ಮಾಡಬೇಕು. ಆದರೆ ಕೇಕ್ ಮಿಶ್ರಣದ ಹದ ಗಟ್ಟಿಯಾಗದಂತೆ, ತೀರಾ ನೀರಾಗದಂತೆ ನೋಡಿಕೊಳ್ಳಬೇಕು).
7. ಕೇಕ್ ಮೌಲ್ಡ್ / ಪಾತ್ರೆಗೆ ಎಣ್ಣೆಯಿಂದ ಸವರಿ, ಪಾತ್ರೆಗೆ ಸ್ವಲ್ಪ ಮೈದಾ ಹಿಟ್ಟಿನ ಪುಡಿ ಉದುರಿಸಿ, ಪಾತ್ರೆಯು ಮೈದಾಹಿಟ್ಟಿನ ಪುಡಿಯಿಂದ ಅಂಟುವಂತೆ ಮಾಡಬೇಕು. ಅಂಟದಿರುವ ಹೆಚ್ಚಿನ ಪುಡಿಯನ್ನು ಹೊರಗೆ ಹಾಕಬೇಕು. ಈಗ ಈ ಪಾತ್ರೆಗೆ ಕೇಕ್ ಮಿಶ್ರಣ ಹಾಕಿ, ಮೇಲೆ ವಾಲ್ನಟ್ ಮತ್ತು ಚೊಕೊ ಚಿಪ್ಸ್ ಹಾಕಬೇಕು.
8. ಕೇಕ್ ಮಿಶ್ರಣ ಹಾಕಿದ ಪಾತ್ರೆಯನ್ನು, ಬಿಸಿಯಾಗಲು ಇಟ್ಟ ಬಾಣಲೆಯಲ್ಲಿ ಇಟ್ಟು ಒಂದು ಮುಚ್ಚಳದಿಂದ ಮುಚ್ಚಬೇಕು. 40-45 ನಿಮಿಶ ಬೇಯಲು (bake) ಬಿಡಬೇಕು.
9. 40 ನಿಮಿಶ ಆದ ಮೇಲೆ ಬಾಣಲೆಗೆ ಮುಚ್ಚಿದ ಮುಚ್ಚಳ ತೆಗೆದು, ಒಂದು ಚಾಕುವನ್ನು ಕೇಕ್ ನಲ್ಲಿ ಹಾಕಿ ತೆಗೆಯಬೇಕು. ಚಾಕುಗೆ ಕೇಕ್ ಸ್ವಲ್ಪ ಅಂಟಿದರೆ ಅದು ಇನ್ನು ಸ್ವಲ್ಪ ಬೇಯಬೇಕು ಎಂದರ‍್ತ. ಹಾಗಿದ್ದಾಗ ಮತ್ತೆ 5-10 ನಿಮಿಶ ಬೇಯಲು ಬಿಟ್ಟು, ಚಾಕುವನ್ನು ಬಳಸಿ ಮೇಲೆ ತಿಳಿಸಿದಂತೆ ಕೇಕ್ ಸರಿಯಾಗಿ ಆಗಿದೆಯೋ ಇಲ್ಲವೆಂದು ನೋಡುತ್ತಿರಬೇಕು. ಚಾಕುಗೆ ಏನೂ ಅಂಟದಿದ್ದರೆ ಕೇಕ್ ಸರಿಯಾಗಿ ಅಗಿದೆ ಎಂದರ‍್ತ.

ಸ್ವಲ್ಪ ಹೊತ್ತು ಆರಲು ಬಿಟ್ಟರೆ ರುಚಿಯಾದ ಚಾಕೊಲೇಟ್ ವಾಲ್ನಟ್ ಕೇಕ್ ಮೆಲ್ಲಲು ತಯಾರು.

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *