ಕನ್ನಡತನದ ಕನ್ನಡಿಯಾಗಿರಲಿ ಮಯ್ಸೂರು ದಸರಾ

ರತೀಶ ರತ್ನಾಕರ.

dollu

ಸ್ಪೇನಿನಲ್ಲಿ ಆಚರಿಸುವ ‘ಲಾ ಟೊಮಾಟೀನ’ ಮತ್ತು ‘ಪ್ಯಾಂಪ್ಲೋನ ಬುಲ್ ರನ್’ (Pamplona Bull Run) ಎರಡು ಹಬ್ಬಗಳು ಮಂದಿ ಮೆಚ್ಚುಗೆಯನ್ನು ಪಡೆದು ವಿಶ್ವ ವಿಕ್ಯಾತಿ ಹೊಂದಿರುವ ಹಬ್ಬಗಳು. ‘ಲಾ ಟೊಮಾಟೀನ’ ಹಬ್ಬದಲ್ಲಿ ರಾಶಿ ರಾಶಿ ಟೊಮೇಟೋ ಹಣ್ಣುಗಳ ಮೇಲೆ ಬಿದ್ದು, ಕಿವುಚಿದ ಕೆಂಪಾದ ಹಣ್ಣುಗಳನ್ನು ಎದುರಿಗಿದ್ದವರಿಗೆ ಹೊಡೆಯುತ್ತ ಬೀದಿ ಬೀದಿಯಲ್ಲಿ ಸಾಗುತ್ತಾರೆ. ಹಾಗೆಯೇ, ‘ಪ್ಯಾಂಪ್ಲೋನ ಬುಲ್ ರನ್’ ಹಬ್ಬದಲ್ಲಿ ಕಟ್ಟುಮಸ್ತಾದ ಗೂಳಿಗಳನ್ನು ಬೀದಿಯಲ್ಲಿ ಓಡಿಸಿ, ಅವನ್ನು ಹಿಡಿಯುವ ಪ್ರಯತ್ನವನ್ನು ಮಂದಿಯಿಂದ ಮಾಡಿಸುತ್ತಾರೆ. ಈ ಹಬ್ಬಗಳು ಒಂದು ಆಟದ ಬಗೆಯಿಂದ ಕೂಡಿರುವುದಲ್ಲದೇ ಇಡೀ ಸ್ಪೇನಿನ ತನ್ನತನವನ್ನು ಮತ್ತು ತಮ್ಮ ಹೆಸರುಗಳ ಮೂಲಕ ಸ್ಪೇನ್ ನುಡಿಯ ಸೊಬಗನ್ನು ಎತ್ತಿಹಿಡಿದು, ಜಗತ್ತಿನಲ್ಲೇ ಸರಿಸಾಟಿಯಿಲ್ಲದ ಹಬ್ಬದ ಆಚರಣೆಗಳಾಗಿ ಕಾಣುತ್ತಿವೆ.

ವಿಶ್ವವಿಕ್ಯಾತವಾಗಿರುವ ನಮ್ಮ ಹಬ್ಬಗಳ ಕುರಿತು ನೋಡಿದಾಗ ನಾಡಹಬ್ಬ ದಸರಾ ನಮ್ಮೆದುರಿಗೆ ಬರುತ್ತದೆ. ವಿಶ್ವವಿಕ್ಯಾತವಾಗಿರುವ ದಸರಾ ಹಬ್ಬದ ಆಚರಣೆ ನಿಜವಾಗಿಯೂ ತನ್ನತನ ಮತ್ತು ನುಡಿಯ ಸೊಬಗನ್ನು ಎತ್ತಿಹಿಡಿದು ಸರಿಸಾಟಿಯಿಲ್ಲದ ಹಬ್ಬಗಳ ಸಾಲಲ್ಲಿ ನಿಲ್ಲುವುದರಲ್ಲಿ ಸೋತಿದೆ. ದಸರಾ ಹಬ್ಬವು ಕರ್‍ನಾಟಕದ ನಾಡಹಬ್ಬ, ಅದರ ಆಚರಣೆಯಲ್ಲಿ ಕನ್ನಡತನ ಮತ್ತು ಕನ್ನಡ ನುಡಿಯ ಸೊಬಗು ಎದ್ದು ಕಾಣಬೇಕು.

ಎತ್ತುಗೆಗೆ, ಸ್ಪೇನಿನಲ್ಲಿ ನಡೆಯುವ ಗೂಳಿಕಾಳಗವನ್ನು ನೋಡಲು ಅಮೇರಿಕಾದಿಂದ ಬರುವ ಪ್ರವಾಸಿಗನಿಗೆ, ಸ್ಪೇನಿನ ಹಬ್ಬದ ವಾತವರಣದಲ್ಲಿ ಸ್ಪೇನ್ತನ ಮತ್ತು ಸ್ಪೇನ್ ನುಡಿಯ ಸೊಗಡನ್ನು ಸವಿಯುವ ಬಯಕೆ ಇರುತ್ತದೆ. ಇಂತಹ ನೀರೀಕ್ಶೆ ಇಟ್ಟುಕೊಂಡು ಬರುವ ಪ್ರವಾಸಿಗನಿಗೆ ಅಮೇರಿಕಾದ ಸಂಗೀತವನ್ನೋ, ಅಮೇರಿಕಾದ ಊಟವನ್ನೋ ಇಲ್ಲವೇ ಇನ್ನಾವುದೇ ಸ್ಪೇನಿನದಲ್ಲದ ಆಚರಣೆಯನ್ನು ಸ್ಪೇನಿನಲ್ಲಿ ಎತ್ತಿ ತೋರಿಸಿದರೆ ಅದು ಸ್ಪೇನ್ತನವನ್ನು ತೋರಿಸಿದಂತಾಗುವುದಿಲ್ಲ. ಅಮೇರಿಕಾದ ಊಟ ಇಲ್ಲವೇ ಸಂಗೀತವನ್ನು ಸ್ಪೇನಿಗಿಂತ ಚೆನ್ನಾಗಿ ಅಮೇರಿಕಾದಲ್ಲೇ ಆತ ಪಡೆಯುತ್ತಾನೆ. ಅದಕ್ಕಾಗಿ ಸ್ಪೇನ್ ವರೆಗೂ ಬರುವ ಅವಶ್ಯಕತೆ ಇರುವುದಿಲ್ಲ. ಮತ್ತು ಇದನ್ನೆಲ್ಲಾ ಮಾಡುವುದರಿಂದ ಸ್ಪೇನಿನ ಹಬ್ಬ ಸರಿಸಾಟಿಯಿಲ್ಲದ ಹಬ್ಬವೆಂದು ಎನಿಸಿಕೊಳ್ಳುವುದಿಲ್ಲ.

ಹಾಗೆಯೇ, ದಸರಾ ಹಬ್ಬದ ಆಚರಣೆಯಲ್ಲಿ ಬಾಲಿವುಡ್ಡಿನ ಸಂಗೀತವನ್ನೋ, ಬಂಗಾಳಿ ಊಟವನ್ನೋ, ಪಂಜಾಬಿ ಕುಣಿತವನ್ನೋ ಇಲ್ಲವೇ ಇನ್ನಾವುದೇ ಕನ್ನಡದ್ದಲ್ಲದ ಕಾರ್‍ಯಕ್ರಮಗಳನ್ನು ನೀಡಿದಲ್ಲಿ ಅದು ಕನ್ನಡತನದಿಂದ ಕೂಡಿದ ಹಬ್ಬದ ಆಚರಣೆ ಆಗುವುದಿಲ್ಲ. ಇಂತಹ ದೊಡ್ಡ ಹಬ್ಬಗಳಲ್ಲಿ ಕನ್ನಡತನ ಮತ್ತು ಕನ್ನಡವನ್ನು ತೋರ್‍ಪಡಿಸ ಬೇಕಿದ್ದಲ್ಲಿ ಹಲವಾರು ಸೂಕ್ಶ ವಿಚಾರಗಳನ್ನು ಗಮನಿಸಬೇಕಾಗುತ್ತದೆ. ಎತ್ತುಗೆಗೆ, ಚೀನಾದ ದೊಡ್ಡಗೋಡೆಯನ್ನು ನೋಡಲು ಹೋಗುವವರು ಅಲ್ಲಿ ಹೋಗಿ ಇಳಿದ ಕೂಡಲೆ ಅದು ಅವರನ್ನು ಚೀನಿ ವಾತವರಣಕ್ಕೆ ಕರೆದುಕೊಂಡು ಹೋಗುತ್ತದೆ. ಅಲ್ಲಿನ, ಚೀನಾ ಇತಿಹಾಸವನ್ನು ತಿಳಿಸುವ ಚೀನಿ ಚಿತ್ರಗಳಾಗಿರಬಹುದು, ಇನ್ನಿತರ ಚೀನಿ ಕಲೆಗಳಾಗಿರಬಹುದು, ಪ್ರವಾಸದ ಏರ್‍ಪಾಡುಗಳಿರಬಹುದು ಹಾಗೂ ಎಲ್ಲೆಲ್ಲೂ ಕಾಣಸಿಗುವ ಚೀನಿ ನುಡಿಯಾಗಿರಬಹುದು, ಇವೆಲ್ಲವೂ ಮೇಳಯ್ಸಿ ಅಲ್ಲೊಂದು ಚೀನಿತನವನ್ನು ಎತ್ತಿ ತೋರಿಸುತ್ತವೆ. ಮತ್ತು ಈ ಚೀನಿತನವನ್ನು ನೋಡಲೆಂದೇ ಸವಿಯಲೆಂದೇ ಪ್ರವಾಸಿಗರು ಬರುವುದು.

ಇದೇ ರೀತಿ, ದಸರಾ ಹಬ್ಬದಲ್ಲಿಯೂ ಕನ್ನಡತನವೆಂಬುದು ಕಾಣಬೇಕಾದರೆ ಇಂತಹ ಎಲ್ಲಾ ವಿಚಾರಗಳತ್ತ ಬಹಳ ನಿಗಾವಹಿಸ ಬೇಕಿದೆ. ಅಂಬಾರಿಯ ಮೆರವಣಿಗೆ ಒಂದು ಒಳ್ಳೆಯ ಹಳಮೆಯನ್ನು ದಸರಾ ಹಬ್ಬಕ್ಕೆ ನೀಡಿದೆ, ಇದನ್ನು ನೋಡಲು ಬರುವ ಪ್ರವಾಸಿಗರಿಗೆ ಕನ್ನಡದ ವಾತವರಣವನ್ನು ನೀಡಬೇಕಿದೆ. ದಸರಾ ಹಬ್ಬಕ್ಕೆಂದು ಬಿಟ್ಟ ವಿಶೇಶ ಸಾರಿಗೆಯ ಹೆಸರನ್ನು ‘ಹಾಪ್ ಆನ್ ಹಾಪ್ ಆಪ್’ ಎಂದು ಇಂಗ್ಲೀಶಿನಲ್ಲಿ ನೀಡುವುದರಿಂದ, ಇಲ್ಲವೇ ಇನ್ನಿತರ ಹೆರನಾಡಿನ ಕಾರ್‍ಯಕ್ರಮಗಳಿಂದ ದಸರಾ ಹಬ್ಬಕ್ಕೆ ಕನ್ನಡತನದ ಲೇಪನ ಕೊಡಲಾಗುವುದಿಲ್ಲ.

ದಸರಾ ಎಂದರೆ ಕನ್ನಡದ ಹಬ್ಬ, ಅದು ಕನ್ನಡತನದ ಸೊಗಡು ಮತ್ತು ಕನ್ನಡ ನುಡಿಯ ಸೊಬಗಿನಿಂದ ಕೂಡಿದಾಗ ಮಾತ್ರ ಒಂದು ಸರಿಸಾಟಿಯಿಲ್ಲದ (unique) ಹಬ್ಬವಾಗಿ ನಿಲ್ಲುತ್ತದೆ. ಕನ್ನಡ ಹಾಗೂ ಕನ್ನಡತನವನ್ನು ಕರ್‍ನಾಟಕದಲ್ಲಿ ಮಾತ್ರ ಸಾಟಿಯಿಲ್ಲದಂತೆ ನೀಡಲು ಸಾದ್ಯ. ರಾಜಸ್ತಾನಿತನವನ್ನೋ ಇಲ್ಲವೇ ಜಪಾನಿತನವನ್ನೋ ಕರ್‍ನಾಟಕದಲ್ಲಿ ರಾಜಸ್ತಾನ ಇಲ್ಲವೇ ಜಪಾನಿಗೆ ಮೀರಿಸುವಂತೆ ನೀಡಲು ಸಾದ್ಯವಿಲ್ಲ. ರಾಜಸ್ತಾನಿತನವನ್ನು ಸವಿಯಲು ಬಯಸುವ ಪ್ರವಾಸಿಗರು ರಾಜಸ್ತಾನಕ್ಕೆ ಹೋಗುವರೇ ಹೊರತು ಕರ್‍ನಾಟಕ್ಕೆ ಬರುವುದಿಲ್ಲ. ಹೇಗೆ ಸ್ಪೇನಿನ ಹಬ್ಬಗಳು ಸ್ಪೆನ್ತನವನ್ನು ಮೆರೆಸುತ್ತಾ ಸರಿಸಾಟಿಯಿಲ್ಲದ ಹಬ್ಬಗಳಾಗಿವೆಯೋ ಹಾಗೆಯೇ ದಸರಾ ಕೂಡ ಕನ್ನಡತನವನ್ನು ಮೆರೆಸುತ್ತ ಸರಿಸಾಟಿಯಿಲ್ಲದ ಹಬ್ಬವಾದಗ ಮಾತ್ರ ಮತ್ತಶ್ಟು ಎತ್ತರಕ್ಕೆ ಇದು ಬೆಳೆಯುವುದು. ಕನ್ನಡತನವನ್ನು ಸವಿಯಲೋಸುಗ ಮಯ್ಸೂರಿಗೆ ಬರುವ ಪ್ರವಾಸಿಗರಿಗೆ, ಕನ್ನಡತನವನ್ನೇ ಉಣಬಡಿಸೋಣ. ರಾಜಸ್ತಾನಿತನವನ್ನೋ, ಬಂಗಾಳಿತನವನ್ನೋ, ಪಂಜಾಬಿತನವನ್ನೋ ಉಣಬಡಿಸಿದರೆ, ಪ್ರವಾಸಿಗರು ದಂಡಿಯಾಗಿ ಬರುವುದು ಮುಂಬರುವ ವರುಶಗಳಲ್ಲಿ ನಿಂತು ಹೋಗುತ್ತದೆ.

(ಚಿತ್ರ ಸೆಲೆ: dnaindia.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *