ಕಪ್ಪು ಹಣದ ಜಾಡು ಹಿಡಿದು …..

– ಅನ್ನದಾನೇಶ ಶಿ. ಸಂಕದಾಳ.

blackmoney

‘ಕಪ್ಪು ಹಣ, ಕಪ್ಪು ಹಣ’ (black money) ಎಂಬ ಕೂಗು ಇತ್ತೀಚಿಗೆ ತುಂಬಾ ಕೇಳಿ ಬರುತ್ತಿದೆ. ‘ಕಪ್ಪು ಹಣ’ ಅಂದಾಗಲೆಲ್ಲಾ ಅದರ ಜೊತೆ ‘ಸ್ವಿಜರ್ ಲ್ಯಾಂಡ್‘ ಎಂಬ ನಾಡಿನ ಹೆಸರನ್ನು ತಳುಕು ಹಾಕಲಾಗುತ್ತದೆ. ಆ ನಾಡಿನ ಹಣಮನೆಗಳಲ್ಲಿ (bank) ಲೆಕ್ಕವಿಲ್ಲದಶ್ಟು ಕಪ್ಪು ಹಣದ ಸೇರ‍್ಪಡೆಯಾಗಿದೆ ಎಂಬ ಸುದ್ದಿಗಳು ಕೇಳಿಬರುತ್ತಲೇ ಇವೆ. ಇದನ್ನೆಲ್ಲಾ ನೋಡಿದಾಗ, “ಈ ಕಪ್ಪು ಹಣ ಎಂದರೇನು ? ಕಪ್ಪು ಹಣಕ್ಕೂ ಆ ನಾಡಿಗೂ ಇರುವ ನಂಟಾದರೂ ಏನು?” ಎಂಬ ಕುತೂಹಲ ಹುಟ್ಟುವುದಂತೂ ನಿಜ.

ಒಂದು ನಾಡಿನ ಸರಕಾರ ತನ್ನ ಮಂದಿಯ ಬದುಕನ್ನು ಮೇಲೇರಿಸುವ, ನಾಡಿನ ಮತ್ತು ಮಂದಿಯ ಏಳಿಗೆಗೆ ಹಲವಾರು ಹಮ್ಮುಗೆಗಳನ್ನು ಹಮ್ಮಿಕೊಳ್ಳುವ ಹೊಣೆಗಾರಿಕೆಯನ್ನು ಹೊಂದಿರುತ್ತದೆ. ಅದಕ್ಕಾಗಿ ಸರಕಾರ ತನ್ನ ಆದಾಯವನ್ನು ಹೊಂದಿರಬೇಕಾಗುತ್ತದೆ. ನಾಡಿನ ಮಂದಿ ಗಳಿಸುವ ಆದಾಯದ ಮೇಲೆ ಸರಕಾರ ಹಾಕುವ ತೆರಿಗೆ, ಸರಕಾರವು ತನ್ನ ಹಮ್ಮುಗೆಗಳಿಗೆ ದುಡ್ಡು ಹೊಂದಿಸುವ ದಾರಿಯಲ್ಲೊಂದು. ಮಂದಿಯು, ತಾವು ಗಳಿಸಿದ ಆದಾಯದ ಮೇಲೆ ಸರಕಾರ ತೀರ‍್ಮಾನಿಸಿರುವ ತೆರಿಗೆ ಕಟ್ಟದಿದ್ದರೆ ಆ ಆದಾಯವು ‘ಕಪ್ಪು ಹಣ’ ಎಂದೆನಿಸಿಕೊಳ್ಳುತ್ತದೆ. ಸರಕಾರಕ್ಕೆ ಮರೆ ಮಾಚಿದ ಆದಾಯ, ಕಾನೂನು ಬಾಹಿರವಾದ ದಾರಿಯಲ್ಲಿ ಗಳಿಸಿದ ಹಣವೂ ಕೂಡ ಕಪ್ಪುಹಣವೇ ಆಗಿದೆ. ಇಂತ ಹಣವನ್ನು ಮಂದಿಯು, ತಮ್ಮ ನಾಡಿನ ಹಣಮನೆಗಳಲ್ಲಿಟ್ಟರೆ ಸರಕಾರಕ್ಕೆ ತಿಳಿಯುವುದೆಂದು ಬಗೆದು, ಬೇರೆ ನಾಡಿನ ಹಣಮನೆಗಳಲ್ಲಿನ ತಮ್ಮ ಕಾತೆಗಳಲ್ಲಿ ಕೂಡಿಡುವುದು ಬಹಳ ವರುಶಗಳಿಂದಲೂ ನಡೆಯುತ್ತಾ ಬಂದಿದೆ. ‘ಕಪ್ಪುಹಣ’ ವನ್ನು ಜೋಪಾನವಾಗಿ ಕೂಡಿಟ್ಟುಕೊಳ್ಳಬೇಕೆಂಬ ಮಂದಿಗೆ ನೆಮ್ಮದಿಯ ತಾಣವಾಗಿ ಕೆಲವು ನಾಡುಗಳ ಹಣಮನೆಗಳು ಕಂಡು ಬಂದಿದ್ದು, ಸ್ವಿಜರ್ ಲ್ಯಾಂಡ್ ನ ಹಣಮನೆಗಳು ಅವುಗಳಲ್ಲಿ ಮುಕ್ಯವಾದವು.

ಯು ಬಿ ಎಸ್ – ಸ್ವಿಜರ್ ಲ್ಯಾಂಡ್ ನ ಬಹು ದೊಡ್ಡ ಹಣಮನೆ:

‘ಯೂನಿಯನ್ ಬ್ಯಾಂಕ್ ಆಪ್ ಸ್ವಿಜರ್ ಲ್ಯಾಂಡ್’ ಎಂದು ಕರೆಸಿಕೊಳ್ಳುತ್ತಿದ್ದ ‘ಯು ಬಿ ಎಸ್’ ಎಂಬ ಹಣಮನೆ ಸ್ವಿಜರ್ ಲ್ಯಾಂಡ್ ನಲ್ಲಿ ಬಹು ದೊಡ್ಡ ಹಣಮನೆ. ಜಾಗತಿಕ ಮಟ್ಟದಲ್ಲಿ ಹಣಕಾಸಿನ ಸೇವೆಗಳನ್ನು, ಹೂಡಿಕೆ ಸೇವೆಗಳನ್ನು, ಸಂಪತ್ತು ನೋಡಿಕೊಳ್ಳುವ ಸೇವೆಗಳನ್ನು (wealth management services) ದೊಡ್ಡ ದೊಡ್ಡ ಸಂಸ್ತೆಗಳಿಗೆ ಮತ್ತು ತನ್ನ ಸೇವೆಯ ಕೊಳ್ಳುಗರಿಗೆ ಒದಗಿಸುವ ಹೆಸರಾಂತ ಹಣಮನೆ. ಮೇಲೆ ತಿಳಿಸಿದ ಸೇವೆಗಳನ್ನು ನೀಡುವುದರಲ್ಲಿ ಜಗತ್ತಿನಲ್ಲೇ ಯು ಬಿ ಎಸ್ ಮೊದಲಿಗನಾಗಿದೆ ಎಂದು ಹೇಳಲಾಗುತ್ತದೆ.

ಸ್ವಿಜರ್ ಲ್ಯಾಂಡ್ (ಸ್ವಿಸ್) ನ ಬಗ್ಗೆ ತಿಳಿದಿದ್ದು ಹೀಗೆ:

ಯು ಬಿ ಎಸ್ ಸಂಸ್ತೆಯು ತನ್ನ ಅಮೇರಿಕಾ ಗ್ರಾಹಕರಿಗಾಗಿ ಅಂತ ಒಂದು ಹಮ್ಮುಗೆಯನ್ನು ರೂಪಿಸುತ್ತದೆ. ಅಮೇರಿಕನ್ನರು ಅಮೇರಿಕಾಗೆ ಕಟ್ಟುವ ತೆರಿಗೆಯನ್ನು ತಪ್ಪಿಸಿ, ಆ ತೆರಿಗೆ ಹಣವನ್ನು ಸ್ವಿಜರ್ ಲ್ಯಾಂಡ್’ ನ ಹಣಮನೆಯಲ್ಲಿ ತಮ್ಮದೇ ಆದ ಮತ್ತೊಂದು ಕಾತೆಗಳಲ್ಲಿ ಕೂಡಿಸಿಡುವ ಹಮ್ಮುಗೆಯದು. ಇದರ ಮೂಲಕ ಅಮೇರಿಕಾದ ಹೆಚ್ಚು ತೆರಿಗೆದಾರರನ್ನು ಸೆಳೆಯುವುದು ಅದರ ಉದ್ದೇಶವಾಗಿರುತ್ತದೆ. ಮುಂದೊಮ್ಮೆ ಇದು ಅಮೇರಿಕಾ ಸರಕಾರಕ್ಕೆ ಗೊತ್ತಾದರೂ, ಅದರಲ್ಲಿ ತನ್ನ ಕೈವಾಡವಿಲ್ಲದೇ, ಅದರ ಅಪವಾದವೆಲ್ಲ ಅಮೆರಿಕಾದಲ್ಲಿ ದುಡಿಯುವ ತನ್ನದೇ ಸಿಬ್ಬಂದಿ ಮೇಲೆ ಬರುವಂತೆ ಮಾಡುವ ಒಳಹುನ್ನಾರವೂ ಆ ಹಮ್ಮುಗೆಯಲ್ಲಿರುತ್ತದೆ. ಈ ಸೂಕ್ಶ್ಮತೆಯನ್ನು ಅರಿತ ಯು ಬಿ ಎಸ್ ನ ಕೆಲಸಗಾರ ಬ್ರಾಡ್ಲೆ ಬರ‍್ಕೆನ್ಪೆಲ್ಡ್ ಎಂಬುವವರು 2005 ರಲ್ಲಿ ಇದನ್ನು ಆ ಸಂಸ್ತೆಯ ಮುಕ್ಯಸ್ತರಿಗೆ ತಿಳಿಸಿ, ಅಮೇರಿಕಾದಲ್ಲಿನ ತೆರಿಗೆಯ ಕಾನೂನುಗಳನ್ನು ಈ ಹಮ್ಮುಗೆ ಮೀರುತ್ತದೆ ಎಂಬುದನ್ನು ತಿಳಿಸಲು ಮುಂದಾಗುತ್ತಾರೆ. ಆದರೆ ಯು ಬಿ ಎಸ್ ನವರು ಇವರ ಮಾತಿಗೆ ಕಿವಿಗೊಡುವುದಿಲ್ಲ. 2007 ರಲ್ಲಿ ಬ್ರಾಡ್ಲೆ, ಅಮೇರಿಕಾದ ‘ಡಿಪಾರ‍್ಟ್ಮೆಂಟ್ ಆಪ್ ಜಸ್ಟಿಸ್‘ ಎಂಬ ಸರಕಾರೀ ಇಲಾಕೆ ಎದುರು ಯು ಬಿ ಎಸ್ ನ ವಹಿವಾಟುಗಳನ್ನೆಲ್ಲ ಬಯಲು ಮಾಡುತ್ತಾರೆ ಮತ್ತು ಈ ತಪ್ಪಿನಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನೂ ಒಪ್ಪಿಕೊಳ್ಳುತ್ತಾರೆ. ಹೀಗೆ ಯು ಬಿ ಎಸ್ ಎಂಬ ಸ್ವಿಸ್ ಬ್ಯಾಂಕ್ ವಿವಾದಕ್ಕೆ ಒಳಗಾಗುತ್ತದೆ. ಆ ಸಮಯದಲ್ಲಿ ಅಮೇರಿಕಾದ 20 ಸಾವಿರ ನಾಗರೀಕರು ಸ್ವಿಸ್ ಕಾತೆ ಹೊಂದಿದ್ದರು ಎಂದು ಹೇಳಲಾಗುತ್ತದೆ.

ಇದನ್ನೇ ಎಳೆಯಾಗಿಟ್ಟುಕೊಂಡು ಅಮೇರಿಕಾದ ವಿಚಾರಣೆ ಸಂಸ್ತೆಯಾದ ಎಪ್ ಬಿ ಐ ತನಿಕೆ ನಡೆಸುತ್ತದೆ. ಹಾಗೆ ಈ ಕುರಿತು ವಿವರವಾದ ತನಿಕೆ ನಡೆಸುವಂತೆ 2008 ರಲ್ಲಿ ಸ್ವಿಸ್ ನಾಡಿಗೂ ಹೇಳುತ್ತದೆ. 2009 ರಲ್ಲಿ ಯು ಬಿ ಎಸ್ ಸಂಸ್ತೆ ತಾನೆಸಗಿದ ತಪ್ಪಿಗೆ ದಂಡವಾಗಿ 780 ಮಿಲಿಯನ್ ಡಾಲರುಗಳನ್ನು ಅಮೇರಿಕಾ ಸರಕಾರಕ್ಕೆ ಕೊಡುವಂತೆ ಮಾಡುವುದರಲ್ಲಿ ಮತ್ತು ಯು ಬಿ ಎಸ್ ಅಮೇರಿಕ ಗ್ರಾಹಕರಿಗೆ ತಾನು ನೀಡುತ್ತಿದ್ದ ಹೊರನಾಡಿನ ಕಾಸಗಿ ಬ್ಯಾಂಕ್ ಸೇವೆಯನ್ನು ನಿಲ್ಲಿಸುವಂತೆ ಮಾಡುವುದರಲ್ಲಿ ಅಮೇರಿಕಾ ಯಶಸ್ವಿಯಾಗುತ್ತದೆ. ಅಶ್ಟೇ ಅಲ್ಲದೆ ಸ್ವಿಸ್ ಕಾತೆಯಲ್ಲಿ ಹಣ ಹೊಂದಿದ್ದ ಹಲವಾರು ಮಂದಿಯ ವಿವರವನ್ನು ಪಡೆಯುವಲ್ಲೂ ಕೂಡ ಅಮೇರಿಕಾ ಗೆಲುವನ್ನು ಕಾಣುತ್ತದೆ. ಅಮೇರಿಕಾಗೆ ಹೇಗೆ ಈ ವಿಶಯದಲ್ಲಿ ಸ್ವಿಸ್ ಆಡಳಿತವನ್ನು ಮಣಿಸಿತು, ಹೇಗೆ ಯು ಬಿ ಎಸ್ ಸಂಸ್ತೆಯವರನ್ನು ಬಗ್ಗಿಸಿತು ಎಂಬುದು ವಿವರವಾಗಿ ತಿಳಿದಿಲ್ಲವಾದರೂ, ತಾನಂದುಕೊಂಡಿದ್ದನ್ನು ಸಾದಿಸಿದ ಬಗೆಯನ್ನು ಮೆಚ್ಚಲೇಬೇಕು!

ಸ್ವಿಜರ್ ಲ್ಯಾಂಡ್ ಹಣಮನೆಗಳೇ ಯಾಕೆ?

ಒಳ್ಳೆ ಆಳ್ವಿಕೆ ಏರ‍್ಪಾಟು ಇದ್ದು ಉತ್ತಮ ಆಡಳಿತ ಹೊಂದಿರುವ ಚಿಕ್ಕ ನಾಡುಗಳು ತೆರಿಗೆ ಹಣ ಕಟ್ಟುವುದನ್ನು ತಪ್ಪಿಸುವವರಿಗೆ ಆಶ್ರಯದಾಣಗಳಾಗುವ (tax havens) ಸಾದ್ಯತೆ ಹೆಚ್ಚು ಎಂದು ಅಮೇರಿಕಾದ ‘ನ್ಯಾಶನಲ್ ಬ್ಯುರೋ ಆಪ್ ಎಕನಾಮಿಕ್ ರಿಸರ‍್ಚ್’ ಸಂಸ್ತೆಯು ಗಮನಿಸಿರುವ ಅಂಶ. ಸ್ವಿಜರ್ ಲ್ಯಾಂಡ್ ನಾಡಿನಲ್ಲಿನ ಆಡಳಿತ ಚೆನ್ನಾಗಿದೆ. ಆದರೆ ಕಪ್ಪು ಹಣವನ್ನು ಕೂಡಿಡಲು ಮಂದಿಯು ಸ್ವಿಸ್ ಹಣಮನೆಗಳ ಬಾಗಿಲು ತಟ್ಟುವುದಕ್ಕೆ ಬೇರೆ ಕಾರಣಗಳೂ ಇವೆ. ಅವೇನೆಂದರೆ, ಸ್ವಿಸ್ ನ ಹಣಮನೆಗಳು ತಮ್ಮಲ್ಲಿ ಕಾತೆಯನ್ನು ಹೊಂದುವವರ ವಿವರಗಳನ್ನು ಗುಟ್ಟಾಗಿಡುವುದು ಮತ್ತು ಈ ವಿವರಗಳನ್ನು ಹೊರಗಿನವರು ಪಡೆಯುವದಕ್ಕೆ ತಡೆಯೊಡ್ದುವುದು. ಸ್ವಿಸ್ ನ 1934 ರ ಬ್ಯಾಂಕಿಂಗ್ ಕಾನೂನಿನ ಪ್ರಕಾರ, ಸ್ವಿಸ್ ಹಣಮನೆಗಳಲ್ಲಿ ಕಾತೆ ಹೊಂದಿದವರ ಹೆಸರು ಬಯಲುಗೊಳಿಸುವುದು ಕ್ರಿಮಿನಲ್ ಅಪರಾದ. ಗುಟ್ಟುತನ ಎಂಬುದೂ ಮೂಲಬೂತ ಹಕ್ಕಾಗಿದ್ದು, ಕಾತೆ ಹೊಂದುವವರ ಆ ಹಕ್ಕನ್ನು ಕಾಯಬೇಕು ಎಂಬುದು ಸ್ವಿಸ್ ಸರಕಾರದ ನಿಲುವು. ಸ್ವಿಸ್ ಹಣಮನೆಗಳ ಗ್ರಾಹಕರ ಗುಟ್ಟುತನ ಕಾಯುವುದು ಇಂದು ನಿನ್ನೆಯದಲ್ಲ್ಲ.ಅದಕ್ಕೆ ಹಿನ್ನಡವಳಿಯೇ (history) ಇದೆ.

1700 ರ ಸಮಯದಲ್ಲಿ ಪ್ರೆಂಚ್ ಅರಸರು ತಮಗೆ ಬೇಕಾದಾಗ ದುಡ್ಡನ್ನು ಹಣಮನೆಗಳಿಂದ ಸಾಲವೆಂಬಂತೆ ಪಡೆದುಕೊಳ್ಳುತ್ತಿದ್ದರು. ಸಾಲವನ್ನು ಅವರು ಮರು ಪಾವತಿಸುತ್ತಿದ್ದರೂ, ಅರಸರಾಗಿ ತಾವೇ ಸಾಲವನ್ನು ಪಡೆಯುವ ವಿಶಯ ಮಂದಿಗೆ ತಿಳಿಯಬಾರದೆಂಬ ಆಲೋಚನೆ ಅವರದಾಗಿತ್ತು ಎಂದು ಹೇಳಲಾಗುತ್ತದೆ. ಹಾಗೇ, ಜಗತ್ತಿನ ಎರಡನೇ ಮಹಾ ಕಾಳಗದ ಸಮಯದಲ್ಲಿ ಜರ‍್ಮನಿಯಲ್ಲಿ ಹಿಟ್ಲರ್ ಎಂಬ ಸರ‍್ವಾದಿಕಾರಿಯ ಮುಂದಾಳ್ತನದಲ್ಲಿ ನಾಜಿಗಳ ಆಡಳಿತವಿತ್ತು. ಹೊರ ನಾಡಿನ ಬ್ಯಾಂಕುಗಳಲ್ಲಿ ಸಂಪತ್ತನ್ನು ಕೂಡಿಡುತ್ತಿದ್ದ ಜರ‍್ಮನ್ನರನ್ನು ನಾಜಿಗಳು ಕೊಲ್ಲುತ್ತಿದ್ದರು. ಹಾಗೆಯೇ, ಯಹೂದಿಗಳು ಸ್ವಿಸ್ ಬ್ಯಾಂಕುಗಳಲ್ಲಿ ಇಟ್ಟಿರುತ್ತಿದ್ದ ಚಿನ್ನವನ್ನು ಮುಟ್ಟುಗೋಲು ಹಾಕಿಕೊಂಡು, ಅದರಿಂದಲೇ ಎರಡನೇ ಮಹಾಕಾಳಗಕ್ಕೆ ದುಡ್ಡನ್ನು ಹೊಂದಿಸಿದ್ದರು ನಾಜಿಗಳು ಎಂದು ಹೇಳಲಾಗುತ್ತದೆ. ಇವೆಲ್ಲವೂ ಸ್ವಿಸ್ ಹಣಮನೆಗಳು ಗ್ರಾಹಕರ ವಿವರಗಳನ್ನು ಗುಟ್ಟಾಗಿರುವಂತೆ ನೋಡಿಕೊಳ್ಳುವ ಹಿಂದಿನ ಕಾರಣಗಳೆಂದು ತಿಳಿದುಬಂದಿದೆ.

( ಮಾಹಿತಿ ಸೆಲೆ: wiki-Switzerland, wiki-BankinginginSwiss, wiki-UBS, howstuffworks.comnationonlineng.net, just1world.orgwashingtonpost.com, nytimes.comwiki-UBS_tax_evasion_controversy)

( ಚಿತ್ರ ಸೆಲೆ: static-ubs.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *